ಪುಸ್ತಕದ ಶೀರ್ಷಿಕೆ: ಸಂಧ್ಯಾರಾಗ
ಪುಸ್ತಕದ ಲೇಖಕರು: ಅ.ನ.ಕೃ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಗುರುಬಸವರಾಜ ಮತ್ತಿಹಳ್ಳಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಕನ್ನಡದ ಕಟ್ಟಾಳು, ಕನ್ನಡ ಕಾದಂಬರಿ ಸಾರ್ವಭೌಮ, ಕನ್ನಡ ಸಾಹಿತ್ಯ ಲೋಕದ ಅನಭಿಷಿಕ್ತ ದೊರೆ ಅ.ನ.ಕೃ ಅವರು. ಈ ಪುಸ್ತಕವನ್ನು ಓದುತ್ತಾ ಹೋದಂತೆ ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತದೆ. ಇದು ಅ.ನ.ಕೃ ಅವರ ಬರವಣಿಗೆಯ ಶೈಲಿಗೆ ಸಾಕ್ಷಿ. ಶ್ರೀನಿವಾಸ್ ರಾಯರು ಮತ್ತು ಮೀನಾಕ್ಷಮ್ಮನವರು ಹೊಸಹಳ್ಳಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗಳು. ರಾಯರು ಉದತ್ತವಾದಿಗಳು, ಧಾರಾಳ ಮನಸ್ಸಿನವರು ಯಾರು ಏನೇ ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಇದೇ ರೀತಿಯೂ ಸಹ ಮೀನಾಕ್ಷಮ್ಮನವರು ಗಂಡನಿಗೆ ತಕ್ಕ ಹೆಂಡತಿಯಾಗಿದ್ದರು. ಶಾಮಣ್ಣ ಎಂಬುವರು ಕೃಷ್ಣರಾಜಪೇಟೆಯಿಂದ ಹೊಸಹಳ್ಳಿಗೆ ಬಂದವರು. ಕುಮಾರವ್ಯಾಸ ಭಾರತ ಓದುವ ಹವ್ಯಾಸ ಇದ್ದ ಇವರಿಗೆ ರಾಯರು ತಮ್ಮ ಮನೆಯಲ್ಲೇ ಉಳಿಸಿಕೊಂಡು, ತಮ್ಮ ಮನೆಯ ಲೆಕ್ಕ ನೋಡಿಕೊಂಡು ಹಾಗೂ ತಮಗೆ ಬೇಕೆನಿಸಿದಾಗ ಕುಮಾರವ್ಯಾಸ ಭಾರತ ಓದುವಂತೆ ತಿಳಿಸುತ್ತಿದ್ದರು. ರಾಯರಿಗೆ ಮಕ್ಕಳಿಲ್ಲದ ಕೊರಗು ಕಾಡುತ್ತಿತ್ತು. ತಮ್ಮಿಂದ ರಾಯರ ಮನೆಗೆ ಉತ್ತರಾಧಿಕಾರಿ ಇಲ್ಲ ಎಂಬ ಕೊರಗು ಮೀನಾಕ್ಷಮ್ಮನಿಗೆ ಹೆಚ್ಚಾಯಿತು. ಹಾಗಾಗಿ ಮೀನಾಕ್ಷಮ್ಮ ತನ್ನ ಅತ್ತೆ ಗೌರಮ್ಮನಿಗೆ "ರಾಯರಿಗೆ ಇನ್ನೊಂದು ಮದುವೆ ಮಾಡಿಸುವ ವಿಚಾರ" ಹೇಳಿದಳು. ಈ ವಿಚಾರವನ್ನು ರಾಯರಿಗೆ ಹೇಳಿದಾಗ ಮೊದಲಿಗೆ ಒಪ್ಪಲಿಲ್ಲ. ನಂತರ ದೂರದ ಸಂಬಂಧಿ ಸಾವಿತ್ರಿಮ್ಮನವರನ್ನು ರಾಯರು ವಿವಾಹ ಆದರು. ಕೆಲವು ದಿನಗಳ ಬಳಿಕ ಇಬ್ಬರಿಗೂ ಮಕ್ಕಳಾದವು. ಸಾವಿತ್ರಿಯ ಮಗನಿಗೆ ರಾಮನೆಂದು, ಮೀನಾಕ್ಷಮ್ಮನ ಮಗನಿಗೆ ಲಕ್ಷ್ಮಣನೆಂದು ನಾಮಕರಣ ಮಾಡಲಾಯಿತು. ಮುಂದೆ ಮೀನಾಕ್ಷಮ್ಮನಿಗೆ ಹೆಣ್ಣು ಮಗು ಆಯಿತು. ಅವಳಿಗೆ ಶಾಂತ ಎಂದು, ಸಾವಿತ್ರಮ್ಮನಿಗೆ ಗಂಡು ಮಗುವಾಯಿತು. ಅವನಿಗೆ ಗೋಪಾಲನೆಂದು ನಾಮಕರಣ ಮಾಡಲಾಯಿತು. ಸ್ವಲ್ಪ ದಿನಗಳ ಬಳಿಕ ಗೌರಮ್ಮನವರು ಮಲೇರಿಯಾದದಿಂದ ತೀರಿ ಹೋದರು. ಆಗ ಐದು ತಿಂಗಳು ಮನೆ ಬಿಡಬೇಕಾಗಿದ್ದರಿಂದ ಎಲ್ಲರೂ ಬೆಂಗಳೂರಿಗೆ ಪಯಣ ಮಾಡಿದರು. ರಾಮ ಮತ್ತು ಲಕ್ಷ್ಮಣ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ರಾಮ ಎಲ್ಲದರಲ್ಲೂ ಮುಂದೆ ಇದ್ದ. ವಿದ್ಯೆಯಲ್ಲಿ ರಾಮ ಆಸಕ್ತಿ ತೋರುತ್ತಿದ್ದ. ಜೊತೆಗೆ ತನ್ನಲ್ಲಿ ಅಹಂಕಾರ, ದರ್ಪ ತುಂಬಿಕೊಳ್ಳುತ್ತಾ ಬಂದ. ಆದರೆ ಲಕ್ಷ್ಮಣನಿಗೆ ವಿದ್ಯೆ ತಲೆಗೆ ಹೋಗಲಿಲ್ಲ. ಲಕ್ಷ್ಮಣ ಪದ್ಯ ಹೇಳುವುದು, ಕಥೆ ಹೇಳುವುದು, ಸಂಗೀತ ಕಲಿಯುವುದರ ಕಡೆ ಆಸಕ್ತಿ ತೋರಿಸಿದ. ಇಲ್ಲಿಂದಲೇ ಲಕ್ಷ್ಮಣನ ಮನಸ್ಸನ್ನು ಸಂಗೀತ ಆಕ್ರಮಿಸಿತು. ಒಂದು ದಿನ ಆ ಊರಿನ ಗುಡಿಯೊಂದರಲ್ಲಿ ಗಾಯನ ಇದ್ದಾಗ ಲಕ್ಷ್ಮಣ ಅಲ್ಲಿ ಹಾಡಿದ್ದನ್ನು ಕಂಡು ಚೆನ್ನಪ್ಪ ಆಚಾರ್ಯರು ಅವನಿಗೆ ತುಂಬು ಹರಸಿದರು. ಈ ಸಮಯದಲ್ಲಿ ರಾಯರ ಸ್ನೇಹಿತರಿಂದ ಒಬ್ಬ ಓದುವ ಹುಡುಗ ವೆಂಕಟೇಶ ಮನೆಗೆ ಬಂದ. ರಾಯರ ಮನೇಲಿ ಇದ್ದು ತನ್ನ ವಿದ್ಯಾಭ್ಯಾಸ ಮುಂದುವರೆಸಿದ. ಇವನಿಗೂ ಲಕ್ಷ್ಮಣನಿಗೂ ಸ್ನೇಹ ಹೆಚ್ಚಿತು. ಬಹುದಿನಗಳ ಬಳಿಕ ವೆಂಕಟೇಶ್ ಮತ್ತು ಶಾಂತನಿಗೂ ಮದುವೆ ನಿಶ್ಚಯವಾಯಿತು. ಈ ದಿನಗಳಲ್ಲಿ ರಾಮನು ಎಲ್ಲರ ಮೇಲು ದರ್ಪ ತೋರಿಸುತ್ತ ಬಂದ. ಇವರಿಬ್ಬರ ಮದುವೆಯಲ್ಲಿ ಲಕ್ಷ್ಮಣನ ಸಂಗೀತಾ ಕಛೇರಿಯೇ ಮುಂದು. ಮದುವೆಗೆ ಬಂದವರೆಲ್ಲ ಲಕ್ಷ್ಮಣನನ್ನು ಪ್ರಶಂಸಿಸಿದರು. ಲಕ್ಷ್ಮಣನಿಗೆ ಜಯ ಎಂಬುವಳೊಡನೆ ಹಾಗೂ ರಾಮನಿಗೆ ಪದ್ಮ ಎಂಬುವಳೊಡನೆ ಮದುವೆ ಆಯಿತು. ರಾಮು ಎಲ್‌ಎಲ್‌ಬಿ ಪಾಸ್ ಮಾಡಿ ಬಂದು ವಕೀಲರ ಜೊತೆ ಕೆಲಸಕ್ಕೆ ಸೇರಿದ. ರಾಮಚಂದ್ರ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರದ ಕಾರಣ ತಾನೇ ಸ್ವಂತ ಕಛೇರಿ ತೆಗೆದ. ಈ ಕಡೆ ಮೀನಕ್ಷಮ್ಮನವರಿಗೂ ಆರೋಗ್ಯ ಹದಗೆಟ್ಟಿತ್ತು. ಲಕ್ಷ್ಮಣನ ಸ್ವಭಾವವನ್ನು ಜಯನಿಗೆ ಹೇಳಿದಳು. ಮೀನಾಕ್ಷಮ್ಮನವರು ಕುಂಕುಮಾರ್ಚನೆ ಹೂವಿನ ಪೂಜೆ ಮುಗಿಸಿ ಊಟದ ಶಾಸ್ತ್ರ ಮಾಡಿ ಮಲಗಿದಾಗ, ಪುನಃ ಮೇಲೆ ಏಳಲೇ ಇಲ್ಲ. ಮೀನಾಕ್ಷಮ್ಮನವರು ತಮ್ಮನ್ನು ಬಿಟ್ಟು ಹೊರಟು ಹೋದರೆಂಬುದು ರಾಯರ ಮನಸಿಗೆ ಬರಲೊಲ್ಲದು. ಇವರ ಈ ಸ್ಥಿತಿ ಮನೆಯ ಎಲ್ಲರಿಗೂ ಆತಂಕಕ್ಕೆ ಕಾರಣವಾಯಿತು. ಸಾವಿತ್ರಮ್ಮನಿಗೆ ತನ್ನ ಅಕ್ಕನನ್ನು ಬಿಟ್ಟು ಬಾಳಲಾಗದು. ರಾಯರ ಸ್ಥಿತಿ ತೀರಾ ಹದಗೆಟ್ಟಿತು. ಜನರ ನೆನಪೇ ಮರೆಯುತ್ತಾ ಬಂದರು. ಶಾಮಣ್ಣನವರು ಕುಮಾರವ್ಯಾಸ ಭಾರತದ ದ್ರೌಪದಿ ಶ್ರೀ ಕೃಷ್ಣನನ್ನು ಪ್ರಾರ್ಥಿಸುವ ಕಥೆ ಹೇಳುತ್ತಿದ್ದರು. ರಾಯರು ನಿದ್ರೆ ಹೋದವರು ಪುನಃ ಮೇಲೆ ಹೇಳಲೇ ಇಲ್ಲ. ರಾಮಚಂದ್ರನ ವರ್ತನೆ ತಿಳಿದಿದ್ದ ಶಾಮಣ್ಣನವರು ಮನೆ ಬಿಟ್ಟು ಹೊರಟು ಹೋದರು. ರಾಮಚಂದ್ರನಿಗೆ ಕೆಲಸ ಸಿಕ್ಕಿತು. ಬ್ಯಾಂಕ್, ಸಹಕಾರ ಸಂಘ, ಪ್ರಜಾಪ್ರತಿನಿಧಿ ಸಭೆಗಳನ್ನು ಬಿಟ್ಟನು. ಮನೆಯ ಯಜಮಾನಿಕೆ ಪೂರ್ತಿಯಾಗಿ ರಾಮಚಂದ್ರನ ಕೈ ಸೇರಿತು. ಈ ಸಮಯದಲ್ಲಿ ರಾಮಚಂದ್ರನಿಗೆ ತನ್ನದೇ ಆಟವನ್ನು ಹಾಗೂ ಎಲ್ಲರ ಮೇಲೆ ತನ್ನ ಹತೋಟಿ ಸಾಧಿಸುತ್ತಾ ಬಂದ. ಇದು ಸಾವಿತ್ರಮ್ಮನಿಗೆ ಸ್ವಲ್ಪವೂ ಇಷ್ಟ ಆಗಲಿಲ್ಲ. ಇವನ ದರ್ಪದಿಂದ ವೆಂಕಟೇಶ ಮತ್ತು ಶಾಂತ ಮನೆ ಬಿಟ್ಟರು. ಆದರೆ ಜಯ ಲಕ್ಷ್ಮಣ ಅಲ್ಲೆ ಇದ್ದರು. ಜಯಳಿಗೆ ಅಡುಗೆ ಜವಾಬ್ದಾರಿ ಬಿತ್ತು. ಎಷ್ಟು ಕೆಲಸ ಮಾಡಿದರು ಅದರಲ್ಲಿ ರಾಮಚಂದ್ರ ತಪ್ಪು ಹುಡುಕುತ್ತಿದ್ದ. ಗರ್ಭವತಿಯಾಗಿದ್ದ ಜಯ ಒಂದು ದಿನ ತಲೆ ತಿರುಗಿ ಬಿದ್ದಳು. ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಶಸ್ತ್ರಚಿಕಿತ್ಸೆಗೆ ಸಿದ್ದ ಮಾಡಿದರು. ವೈದ್ಯರ ಪ್ರಯತ್ನ ಸಫಲವಾಗಲಿಲ್ಲ. ಲಕ್ಷ್ಮಣನ ಬುದ್ಧಿಗೆ ಮಂಕು ಕವಿಯಿತು. ನಿಂತಲ್ಲೆ ನಿಲ್ಲುತ್ತಿದ್ದ, ಕುಳಿತಲ್ಲೇ ಕೂಡುತಿದ್ದ. ಮನೆಯಲ್ಲಿದ್ದ ತಂಬೂರಿಯನ್ನು ಶ್ರುತಿ ಮಾಡಿ ಅದರ ತಂತಿಗಳನ್ನು ಕಿತ್ತು ಹಾಕಿದ. ಅಲ್ಲಿಂದ ಎದ್ದು ಹೊರಟು ಹೋದ. ರಾಮಚಂದ್ರನಿಗೆ "ಸದ್ಯ ಶನಿ ತೊಲಗಿತು" ಎಂದು ಭಾವಿಸಿಕೊಂಡ. ಲಕ್ಷ್ಮಣನ ಅಲೆದಾಟ ಅವನನ್ನು ಮದ್ರಾಸ್ ಗೆ ಕರೆದುಕೊಂಡು ಬಂದಿತು. ಒಂದು ಮದುವೆಯ ಮನೆಗೆ ಬಂದನು. ಅಲ್ಲಿನ ಸಂಗೀತ ಕಚೇರಿಯನ್ನು ನೋಡಿ ಸ್ಮೃತಿ ತಪ್ಪಿ ನೆಲಕ್ಕೆ ಬಿದ್ದ. ಕೂಡಲೇ ಮದುವೆ ಮನೆಯವರು ಆಸ್ಪತ್ರೆಗೆ ಸೇರಿಸಿದರು. ನಂತರ ಅವನಿಗೆ ನಿಧಾನವಾಗಿ ಎಲ್ಲವೂ ಜ್ಞಾಪಕಕ್ಕೆ ಬರಲಾರಂಭಿಸಿತು. ತನ್ನ ಸಂಗೀತದ ಬಗ್ಗೆ ಹೇಳಿ ತನ್ನನ್ನು ತಂಜಾವೂರಿಗೆ ಕಳುಹಿಸಿಕೊಡಿ ಎಂದು ಡಾಕ್ಟರ್ ಅನ್ನು ಕೇಳಿದನು. ಸಂಗೀತ ಪ್ರೇಮಿ ಆಗಿದ್ದ ಡಾಕ್ಟರ್ ತಮ್ಮ ಮನೆಯಲ್ಲಿ ಸ್ವಲ್ಪ ದಿನ ಹಾಡು, ನಂತರ ಊರಿಗೆ ಕಳುಹಿಸುವೆ ಎಂದರು. ಲಕ್ಷ್ಮಣ ಚೇತರಿಸಿಕೊಂಡ ಮೇಲೆ ತಂಜಾವೂರಿನ ಕೃಷ್ಣಯ್ಯರ ಬಳಿ ಹೋದನು. ಇಲ್ಲಿ ನಡೆಯುವ ಪ್ರತಿ ಸಂಭಾಷಣೆಯು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಅವರನ್ನೇ ಗುರುಗಳು ಎಂದು ಸ್ವೀಕರಿಸಿ ಅಲ್ಲೇ ಕೆಲಸ ಮಾಡುತ್ತಾ ಸಂಗೀತ ಕಲಿಯುತ್ತಿದ್ದ. "ವಿದ್ಯೆಯೆಂಬುದು ಹೃದಯದಿಂದ ಬರಬೇಕು-ಹೃದಯಕ್ಕೆ ಸೇರಬೇಕು" ಎಂದು ಲಕ್ಷ್ಮಣನಿಗೆ ಹೇಳಿದರು. ಮಹಾಭಾಗವತರು ಆದ ಕೃಷ್ಣಯ್ಯರವರು ನಿತ್ಯವೂ ಶಿಷ್ಯನಿಗೋಸ್ಕರ ಹಾಡುತ್ತಿದ್ದರು. ಜೊತೆಗೆ ಲಕ್ಷ್ಮಣನನ್ನು ಹಾಡಿಸುತ್ತಿದ್ದರು. ತಮ್ಮ ಕಲೆಯ ಅಪರೂಪ ಪಲ್ಲವಿಗಳನ್ನು ಶಿಷ್ಯನಿಗೆ ಅರೆದು ಕುಡಿಸಿ ಬಿಟ್ಟರು. ಆ ಊರಿನ ಸಂಗೀತ ಕಚೇರಿಗಳಿಗೆ ಭೇಟಿ ಮಾಡಿ, ಲಕ್ಷ್ಮಣನಿಗೆ ಹಾಡಲು ಹೇಳುತ್ತಿದ್ದರು. ಒಂದು ದಿನ ಭಾಗವತರು ಹಾಡುತ್ತಾ ಪೂರ್ವಿ ರಾಗವನ್ನು ಮುಗಿಸಿ, ಲಕ್ಷ್ಮಣನಿಗೆ "ಇದು ಪೂರ್ವಿ ಆದರೆ ಸಂಧ್ಯಾರಾಗ ಪೂರ್ವಿ ಅಲ್ಲ ಎಂದು ಹೇಳಿದರು. ಆ ರಾಗವನ್ನು ಹಾಡಬೇಕಾದರೆ ಅದು ಭೂಮಿಯನ್ನು ಭೇದಿಸಿಕೊಂಡು ಬರಬೇಕು. ನಿನಗೆ ಪೂರ್ವಿಯ ದತ್ತಿಯನ್ನು ಕೊಟ್ಟಿದ್ದೇನೆ. ನೀನು ಗುರುದಕ್ಷಿಣೆಯಾಗಿ ಕೊಡುವುದಾದರೆ ಸಂಧ್ಯಾರಾಗ ಪೂರ್ವಿಯನ್ನು ಹಾಡು ಎಂದು ತಿಳಿಸಿದರು". ಈ ಭಾಗವನ್ನು ಓದುವಾಗ ಮನಸ್ಸಿನಲ್ಲಿ ಒಂದು ರೀತಿಯ ಆಹ್ಲಾದಕರ ಭಾವನೆಗಳು ಮೂಡಿದವು. ಗುರು ಶಿಷ್ಯರ ಸಂಬಂಧ ಬಿಡಿಸಲಾಗದ ಅನುಬಂಧ. ನಂತರ ಲಕ್ಷ್ಮಣ ಮದರಾಸಿಗೆ ಬಂದು, ಅನೇಕ ಸಂಗೀತ ಕಚೇರಿಗಳನ್ನು ಮುಗಿಸಿ, ಮೈಸೂರಿಗೆ ಪಯಣ ಮಾಡಿದ. ಮೈಸೂರಿನ ವೈಣಿಕರಾದ ಶೇಷಣ್ಣನವರನ್ನು ಭೇಟಿ ಮಾಡಿದ. ಅವರ ಮೂಲಕ ಮೈಸೂರು ಮಹಾರಾಜರ ಬಳಿ ಲಕ್ಷ್ಮಣ ಹಾಡಿದನು. ನಂತರ ಬೆಂಗಳೂರಿಗೆ ತನ್ನ ತಂಗಿ ಶಾಂತನ ಮನೆಗೆ ಬಂದನು. ವೆಂಕಟೇಶ ಮತ್ತು ಶಾಂತ ತುಂಬಾ ಸಂತಸಗೊಂಡರು. ಶಾಂತ ಲಕ್ಷ್ಮಣನ ತಂಬೂರಿಯನ್ನು ತಂದು ಅವನ ಮುಂದೆ ಇಟ್ಟಳು. ಅದನ್ನು ಶ್ರುತಿ ಮಾಡಿ ಹಾಡಿದ. ಎಲ್ಲಾ ರಾಗಗಳನ್ನು ಹಾಡುತ್ತಿದ್ದ ಪೂರ್ವಿ ರಾಗವೊಂದನ್ನು ಬಿಟ್ಟು. ಮುಂದೆ ಅನೇಕ ಸಭೆಗಳಲ್ಲಿ ಲಕ್ಷ್ಮಣ ಹಾಡುತ್ತಾ, ಬಂದ ಉಡುಗೊರೆಗಳನ್ನು, ವಜ್ರದ ಉಂಗುರವನ್ನು ತನ್ನ ಗುರುಗಳಿಗೆ ಕಳುಹಿಸಿದ. ನಗರ ಸಭೆಯ ಒಂದು ಉತ್ಸವದಲ್ಲಿ ಲಕ್ಷ್ಮಣನ ಸಂಗೀತ ಕಾರ್ಯಕ್ರಮ ಇತ್ತು. ಎಲ್ಲರೂ ಅಲ್ಲಿ ಸೇರಿದ್ದರು. ಲಕ್ಷ್ಮಣ ಹಾಡಲು ಶುರು ಮಾಡಿದ. ವಚನಗಳನ್ನು ಶಂಕರಾಭರಣ, ಸರಸ್ವತಿ, ಕಲ್ಯಾಣಿ, ಆನಂದ ಭೈರವಿ, ಹೀಗೆ ಅನೇಕ ವಿವಿಧ ರಾಗಗಳಲ್ಲಿ, ಸ್ವರಗಳಲ್ಲಿ ಹಾಡತೊಡಗಿದ. ಕಣ್ಣುಗಳಲ್ಲಿ ಅಶ್ರು ಧಾರೆ ಹರಿಯಿತು. ಮುಂದೆ ಲಕ್ಷ್ಮಣ ಪೂರ್ವಿ ರಾಗವನ್ನು ಹಾಡಿದನೇ? ಸಭೆಯಲ್ಲಿ ಏನಾಯಿತು ಎಂದು ತಿಳಿಯಬೇಕಾದರೆ ಕನ್ನಡ ಸಾಹಿತ್ಯದಲ್ಲಿ ಓದಲೇಬೇಕಾದ ಈ ಕೃತಿಯನ್ನು ಒಮ್ಮೆ ಓದಿ. ಕಾದಂಬರಿಯನ್ನು ಪೂರ್ತಿ ಓದಿ ಮುಗಿಸಿದಾಗ ಸಂಗೀತ ಎನ್ನುವುದು ಎಷ್ಟು ಆಳದಲ್ಲಿ ಇದೆ ಎಂಬುದು ತಿಳಿಯಿತು. ೧೫೦ ಪುಟಗಳ ಈ ಕಾದಂಬರಿ ೧೫೦ ವರ್ಷಗಳ ಬದುಕಿನ ಜೀವನವನ್ನು ಒಳಗೊಂಡಿದೆ. ಅಂದರೆ ದೀರ್ಘ ಕಾಲದ ಕಥೆ ಇದಾಗಿದೆ. ಕೊನೆಯ ಅಧ್ಯಾಯಗಳು ಕೈಯಲ್ಲಿನ ರೋಮಗಳು ಎದ್ದು ನಿಲ್ಲುವಂತೆ ಮಾಡಿದವು. ಜೀವನದಲ್ಲಿ ಬಾಲ್ಯದಿಂದ ಬೆಳೆದ ಅಭ್ಯಾಸದ ಚಿಗುರು ಮುಂದೆ ದೊಡ್ದ ಆಲದ ಮರವಾಗಿ ಹೇಗೆ ಬೆಳೆಯುತ್ತದೆ ಎಂಬುವುದನ್ನು ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಬಾಲ್ಯದಲ್ಲಿ ವ್ಯಕ್ತಿಗಳ ವ್ಯಕ್ತಿತ್ವ ಮಕ್ಕಳಲ್ಲಿ ಹೇಗೆ ಪ್ರಭಾವ ಬೀರುತ್ತೆ ಎನ್ನುವುದಕ್ಕೆ ಈ ಕಾದಂಬರಿಯೇ ಸಾಕ್ಷಿ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕನ್ನಡ ಸಾಹಿತ್ಯ ಮತ್ತು ಸಂಗೀತ ಆಸಕ್ತಿ ಉಳ್ಳವರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.