Submission 2033

ಪುಸ್ತಕದ ಶೀರ್ಷಿಕೆ: ಪದ್ಮಪಾಣಿ

ಪುಸ್ತಕದ ಲೇಖಕರು: ಕೆ ಎನ್ ಗಣೇಶಯ್ಯ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪರಿಮಳ ರಾವ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

*"ಪುಸ್ತಕಗಳು ಆತ್ಮಕ್ಕೆ ಆಹಾರ...."* *"ಓದುವಿಕೆ ಮನಸ್ಸಿಗೆ ಪೋಷಣೆ......."* *ಈ ಮೇಲಿನ ಹೇಳಿಕೆಯಲ್ಲಿ ಸತ್ಯ ಇದೆ ಎಂದು ಅನಿಸಿದ್ದೇ ಓದುವಿಕೆಯಲ್ಲಿ ತೊಡಗಿಸಿಕೊಂಡವಳು, ಒಂದಲ್ಲೊಂದು ಪುಸ್ತಕ ಓದುತ್ತಲೇ ಬಂದಿದ್ದೇನೆ. ಅದಕ್ಕೊಂದು ಉನ್ನತಿಯನ್ನು ಮತ್ತೊಮ್ಮೆ ನೀಡುವ ಅವಕಾಶ ಬಂದದ್ದು ಕೆ ಎನ್‌ ಗಣೇಶಯ್ಯರಿಂದ. ನಾನು ಓದಿದ ಅವರ ಮೊದಲ ರಚನೆ "ರಕ್ತ ಸಿಕ್ತ ರತ್ನ". ಬರ್ಮಾ ಮತ್ತು ರತ್ನಗಿರಿಯ ರಹಸ್ಯ ವಿಷಯಗಳ ಸುತ್ತ ಹೆಣೆದ ಈ ಕಾದಂಬರಿ ಓದಿದಂತೆಯೇ ಚರಿತ್ರೆಯನ್ನು ಈ ರೀತಿಯಾಗಿ ತಿಳಿಸಿ ಹೇಳುವವರಿದ್ದರೆ ಅದನ್ನು ಮರೆಯುವ ಪ್ರಮೇಯವೇ ಬಾರದು ಎನಿಸಿದ್ದೇ ಮತ್ತೆ ಮತ್ತೆ ಇಂತಹುದೇ ಪುಸ್ತಕಗಳಿಗೆ ಮನಸ್ಸು ಹುಡುಕಾಡಿತು. ಅಂತಹುದೇ ಭಾವನೆಯನ್ನು ತುಂಬಿದ ಮತ್ತೊಂದು ಪುಸ್ತಕ ಪದ್ಮಪಾಣಿ. ಎಲ್ಲರೂ ಓದಿ ತಿಳಿದಂತೆ ಇದೊಂದು ಎಂಟು ಕಥೆಗಳ ಕಥಾಸಂಕಲನ. ಕಥೆಯೆಂದರೆ ಇದು ಕಲ್ಪನಾ ಲೋಕವಲ್ಲ. ಎಂದೋ ನಡೆದ ಘಟನೆಗಳಿಗೊಂದು ವಾಸ್ತವ್ಯದ ಬೆಳಕು, ಸಂದುಹೋದ ಕಾಲಗಳಲ್ಲಿ ಅರೆ ಮರೆಯಾಗಿ ಮರೆವಿನೊಳಗೆ ಸೆರೆಯಾದ ವಾಸ್ತವಿಕತೆಗೆ ಬೆಳಕು ತೋರುವ ಸಾಧನೆ. ಈ ಎಂಟು ಕಥೆಯ ಮೂಲಕ ಲೇಖಕರು ನಮಗೆ ನೀಡಿದ್ದು ಎಂಟು ಚಾರಿತ್ರಿಕ ಘಟನೆಗಳಿಗೆ ನನ್ನನ್ನು ನಾವೇ ಕಾಡಿಸಿಕೊಳ್ಳುವ ಆಲೋಚನೆಗಳನ್ನು, ಹೊಸ ಹೊಳಹುಗಳನ್ನು. ರಚನಾಕಾರ ಕೆ ಎನ್‌ ಗಣೇಶಯ್ಯನವರು ಅದೆಷ್ಟು ಆಪ್ತರಾಗಿ ವ್ಯವಹರಿಸುತ್ತಾರೆಂದರೆ, ಖಂಡಿತವಾಗಿಯೂ ಕಾಲದೊಳಗೆ ಕೀಲು ಮುರಿದ ಸತ್ಯಗಳನ್ನು ಅದ್ಯಾರೋ ಒಬ್ಬರು ಇಬ್ಬರು ಹಿರಿಯರಿರುವ ಸ್ಥಳದಿಂದ ಹೆಕ್ಕಿತೆಗೆಯುವುದಕ್ಕೆ ಸಾಧ್ಯವಾಗುವುದು ಅವರ ಈ ಆಪ್ತತೆಯಿಂದಲೇ. ತಾನು ಹೇಳುವುದನ್ನು ಪರರಿಗೆ ತಲುಪಿಸುವಲ್ಲಿ ಆವರಗಿರುವ ಆಸಕ್ತಿ ಎಷ್ಟರದೋ ಅದಕ್ಕಿಂತ ದುಪ್ಪಟ್ಟು ಅವರಿಗೆ ಪರರನ್ನು ಕೇಳುವ ತಾಳ್ಮೆಯಿದೆ. ಇನ್ನೀಗ ಪದ್ಮಪಾಣಿಯೊಳಗೆ ಹೋಗುವುದಾದರೆ,.... ೧). ಪದ್ಮಪಾಣಿ ನಿರ್ವಾಣಕ್ಕೆ ದಾರಿದೀಪವಾಗಿ ಕತ್ತಲು ಎನ್ನುವ ಹೇಳಿಕೆಯು, ಅಜ್ಞಾನವಿದ್ದಾಗಲಷ್ಟೇ ಮನ ಜ್ಞಾನದ (ಬೆಳಕಿನ) ಹುಡುಕಾಟ ನಡೆಸುತ್ತದೆ ಎನ್ನುವುದನ್ನು ತಿಳಿಯಬಹುದಾಗಿದೆ. ನಾನು ಶಾಶ್ವತವಾಗಬೇಕು ಎಂದು ಅಂದುಕೊಂಡ ಮನಸ್ಸಿಗೆ, ಅದು ತಾತ್ಕಾಲಿಕವಾಗಿ, ಅದನ್ನು ಮೀರಿದ ಶಾಶ್ವತ ಸತ್ಯ ಏನೆಂಬುದನ್ನು ಅರಿವಿಗೆ ಬರುವಂತೆ ಇಲ್ಲಿ ಕಮಲಾಂಬಿಕೆಯ ಬದುಕನ್ನು ತೆಗೆದುಕೊಳ್ಳಲಾಗಿದೆ. ತಾನು ಗೆದ್ದೆನೆಂದು ಬೀಗುವ ಕಮಲಾಂಬಿಕೆಗೆ ತನ್ನ ಬಾಹ್ಯ ಸೌಂದರ್ಯದ ಅಹಂ ಆದರೆ, ಅದಕ್ಕೂ ಮೀರಿದ ಆಂತರಿಕ ಸೌಂದರ್ಯವೇ ಮೇಲ್ಸ್ಥರದಲ್ಲಿ ನಿಲ್ಲುತ್ತದೆ ಅನ್ನುವುದನ್ನು ಇಲ್ಲಿ ದಿನ್ನಗರಿಂದ ತೋರಿಸಲಾಗಿದೆ. ಕಥೆಯ ಕೊನೆಯಲ್ಲಿ ಕಮಲಾಂಬಿಕೆಯ ಮಗ ನಿಂತಿದ್ದ ಸ್ಥಳದಲ್ಲೇ ತನ್ನ ಮಗಳು ನಿಂತಿದ್ದಳು ಎನ್ನುವಲ್ಲಿ ಕತ್ತಲೆಯೊಳಗಿಂದ ಸತ್ಯದ ಪ್ರಕಾಶಕ್ಕೆ ಹಾತೊರೆದ ಮನಸ್ಸು, ಎಲ್ಲವೂ ಇದ್ದು ತ್ಯಜಿಸುವುದಕ್ಕೂ, ತ್ಯಜಿಸಿದಾಗ ಪಡೆಯಲೇ ಬೇಕೆಂದು ಉಂಟಾಗುವ ಮೋಹಕ್ಕೂ ನಡುವೆ ಪರದೆಯನ್ನು ಸರಿಸಿನೋಡುತ್ತದೆ. ಕೊನೆಗೆ ಗಿಲ್‌ ಅಲ್ಲಿ ಇರಲೇ ಇಲ್ಲ ಎಂದು ಅರಿವಾಗುವ ಸಮಯಕ್ಕೆ ಲೇಖಕರು ಅಷ್ಟೂ ಆಳವಾದ, ತನ್ನನ್ನೇ ತಾನು ಕಳೆದುಕೊಳ್ಳುವ, ಅಧ್ಯಯನಕ್ಕೆ ತಮ್ಮನ್ನು ತಾವು ಹೊಂದಿಸಿಕೊಂಡಿದ್ದರು ಅಥವಾ ಕೇಳಿ ತಿಳಿದ ವಿಚಾರವನ್ನು ಸತ್ಯದ ಚೌಕಟ್ಟಿಗೆ ಹೊಂದಿಸಿಕೊಳ್ಳುವ ಹುಡುಕಾಟದಲ್ಲಿ ತೊಡಗಿದ್ದರು ಎನ್ನಬಹುದು. ೨). ಕೆರಳಿದ ಕರುಳು ಪಾಲುಕ್ಕಮ್ಮನ ಕಥೆ- ಅದರ ಹಿಂದಿನ ವಾಸ್ತವ ಇದೆಲ್ಲವೂ ಒಪ್ಪುವ ಹೊತ್ತಿಗೆ ʼಕಥೆ ಹೇಳಿದವನ ಸಾವುʼ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ. ಆದರೆ " ಪವಾಡದಲ್ಲಿ ನಂಬಿಕೆಯಿರುವ ಜನರಿಗೆ ಈ ಕಥೆ ಹಿಡಿಸುವುದಿಲ್ಲ" ಎನ್ನುವ ಒಂದು ಸಾಲಿನಿಂದ ಪವಾಡಕ್ಕೆಂದು ಬಾಯಿಮಾತಿನ ವದಂತಿಗಳು ನಾಲಗೆಯಿಂದ ನಾಲಗೆಗೆ ಹರಿದಾಡಿದರೂ ಸತ್ಯ ಶೋಧಕರು ಮತ್ತೆ ಮತ್ತೆ ಹುಟ್ಟಿ ಬರುತ್ತಿರಲಿ. ಸತ್ಯದ ಅರಸುವಿಕೆಯ ಜೊತೆಯಲ್ಲಿ ಅದನ್ನು ನಾಲ್ಕು ಜನರೊಳಗೆ ಹರಡುವ ಕೆಲಸವೂ ಸಾಗಲಿ ಎನ್ನುವ ಸೂಕ್ಷ್ಮತೆ ಒಂದೆಡೆಯಾದರೆ, ಪವಾಡದ ಕಥೆಗಳಿಂದಾದರೂ ಈ ವಿಷಯ ಮುಂದಿನ ಪೀಳಿಗೆಗೆ ಉಳಿದುಬಿಡಲಿ ಎನ್ನುವ ವಿಚಾರವೂ ಇಲ್ಲಿ ಲೇಖಕರಲ್ಲಿ ಇದ್ದಿರಬಹುದು. ಇದರಂತೆ ಮರಳ ತೆರೆಗಳೊಳಗೆ" ಯಲ್ಲಿ ಚಿನ್ನದ ರಕ್ಷಣೆಯೋ ಅಥವಾ ನಿಜವನ್ನು ಮರೆಯಾಗಿಸುವ ಪ್ರಯತ್ನವೋ ಎನ್ನುವ ಅಲಮೇಲಮ್ಮನ ಶಾಪದ ಘಟನೆ......... ಮಾಳವ ರುದ್ರ ಗೌಡನ ಬದುಕಿನಲ್ಲಿ ನಡೆದದ್ದೇನು ಎನ್ನುವ ಕಿತ್ತೂರ ನಿರಂಜನಿ...... ಕಲೆಯ ಬಲೆಯಲ್ಲಿ ಹುಡುಕಾಡ ನಡೆಸುವ ಶಾಂತಲೆ.... ಜೀವವಿಕಾಸದ ನಗ್ನ ಸತ್ಯ ತೋರಿಸುವ ಪ್ರಯತ್ನದಲ್ಲಿ ವಿಕಾಸವಾದ ಮಾನವ ಪ್ರಭೇದ ಹೀಗೆ ಎಲ್ಲವನ್ನೂ ಎಡತಾಕುವ 'ಉಗ್ರಬಂಧ' ಮಲಬಾರ್-೦೭ ಹೀಗೆ ಪ್ರತಿಯೊಂದು ಕಥೆಯೂ ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತದೆ. ಲೇಖಕರಿಲ್ಲಿ ತಾನು ನೀಡುವ ಪ್ರತಿಯೊಂದು ಪಾತ್ರಕ್ಕೂ ಕಾಲಕ್ಕೂ ಘಟನೆಗೂ ಆಕರವನ್ನು ಕೊಡುವುದರಿಂದ, ನಮ್ಮಲ್ಲಿ ಅಧ್ಯಯನಶೀಲತೆಗೆ ಪ್ರೋತ್ಸಾಹಿಸುವುದರ ಜೊತೆ ಜೊತೆಗೆ ಒಪ್ಪಿ ಅಪ್ಪಬಹುದಾದಂತಹ, ನಿಜಾಂಶವನ್ನು ಇಲ್ಲಿ ತಿಳಿಯಬಹುದಾದುದರಿಂದ ಅವರು ನಿರೂಪಿಸಿದ ಕಥೆಯು ನಮ್ಮ ಸ್ಮೃತಿಪಠಲದಲ್ಲಿ ಶಾಶ್ವತವಾಗುತ್ತದೆ. ಅವರ "ನನ್ನ ಮಾತು" ನಲ್ಲಿಯೇ ಹೇಳಿರುವಂತೆ, ಇದು ಯಾವುದೋ ವಿಷಯ ತಿಳಿದುಕೊಳ್ಳಲು ಇರುವ ಕುತೂಹಲದ ಅಧ್ಯಯನ ಅವರಿಂದ ನಡೆಯುವುದರಿಂದ ಕಥೆಯು ಸತ್ಯಾನ್ವೇ಼ಣೆಯಾಗಿ ಅವರ ಸುತ್ತಲೇ ಸುತ್ತಿಕೊಂಡು ಸಾಗುವುದರಿಂದ ಓದುಗಕೂಡಾ ಈ ರಚನೆಯನ್ನು ಓದುವಾಗ, ಕಥೆಗಾರರ ಮನಸ್ಸಿನ ಜೊತೆಗೇ ಹೆಜ್ಜೆಹಾಕಿದ ಅನುಭವವಾಗುತ್ತದೆ. ನನಗೆ ಅನ್ನಿಸಿದಂತೆ ಇಲ್ಲಿ ಲೇಖಕರ ಪ್ರತೀ ಕಥೆಗಳಲ್ಲೂ ಓದುಗನಿಗೆ ಒಂದೊಂದು ನೀತಿಯಿದೆ ಮೊದಲಿಗೆ ಅವರ "ನನ್ನ ಮಾತು" ಗಳಲ್ಲೇ ನೋಡುವುದಾದರೆ ನನಗೊಬ್ಬ ಅಜ್ಜಿಯಿದ್ದರು ಎಂದು ಆರಂಭಿಸಿ, ಅವರು ಹೇಳಿದ ಕಥೆಯಿಂದ ಕಥೆಯೊಂದು ಉದಯಿಸಿತು ಎನ್ನುತ್ತಾ ಒಂದೊಡೆ, "ಅವರ ಕಥಾಪುಂಜಗಳಲ್ಲಿನ ರಹಸ್ಯಗಳ ಒಡಲಾಳದಲ್ಲಿ ಸಾವಿರಾರು ಸತ್ಯರತ್ನಗಳು ಹುದುಗಿ ಕುಳಿತಿರುವ ಸಾಧ್ಯತೆಗಳಿವೆ" ಎನ್ನುತ್ತಾ ನಮಗೊಂದು ಎಚ್ಚರಿಕೆಯನ್ನೂ ನೀಡುತ್ತಾರೆ. ನನಗೊಬ್ಬ ಅಜ್ಜಿಯಿದ್ದಾರೆ ಅನ್ನುವಾಗ, ನಮಗೆ ಕಾಡುವ ಪ್ರಶ್ನೆ ಅಜ್ಜಿ ನಮಗೂ ಇದ್ದಾಳಲ್ಲ..... ಹಾಗಾಗದೆ ಅವರಲ್ಲೂ ಇಂತಹ ಕಥಗಳು ಇರಲೇ ಬೇಕಲ್ಲ.... ನಾವಾದರೂ ಕೇಳಿದ್ದೇವೆಯೇ ಅವರಲ್ಲಿ?!..... ಅಜ್ಜಿಯನ್ನು ಮಾತನಾಡಿಸಲೂ ಸಮಯವಿಲ್ಲ ಎನ್ನುವ ಕಾರಣ ನೀಡುವ ನಮಗೆ ಆ ಸಮಯ ನೀಡಿದಲ್ಲಿ ನಿಮಗೂ ಪುಸ್ತಕ ಓದು ಸಿಗುವ ಜ್ಞಾನ ಅಲ್ಲೇ ಸಿಗುವುದಲ್ಲಾ..... ಅಲ್ಲದೇ ಅಜ್ಜಿಯೊಡನೆ ಬೆರೆಯುವ ಅವಕಾಶವೂ ಇದು ಎನ್ನುವ ನೀತಿಯೊಂದು ಅಲ್ಲಿ ಕಂಡರೆ, ಪದ್ಮಪಾಣಿಯಲ್ಲಿ ಸೌಂದರ್ಯದ ಆರಾಧಕನೆಯನ್ನು ಮೀರಿ ನಿಲ್ಲುವುದೋ ಅಥವಾ ಬಂಧಿಯಾಗುವುದೋ ಎನ್ನುವ ತುಲನೆಯನ್ನು , ರಾಜ್ಯಪಟ್ಟಕ್ಕೆ ಪಡುವ ಪಾಡಿನಲ್ಲಿ ದಕ್ಕುವುದೇನು ಎನ್ನುವ ವಿಚಾರ ಇದೆಲ್ಲವೂ ನಮ್ಮ ಜೀವನಕ್ಕೊಂದು ಹೊಸ ದಾರಿಯನು ತೋರಿಸುತ್ತದೆ. ಇಲ್ಲಿ ಎಲ್ಲಾ ಕಥೆಗಳೂ ಒಂದು ಆಶ್ಷರ್ಯದ ಸವಾಲಿನಿಂದ ಅಥವಾ ಹೇಳಿಕೆಯಿಂದ ಆರಂಭವಾಗುವುದನ್ನು ಗಮನಿಸಬಹುದು. ಅದು ಕಥೆಗಾರರು ಓದುಗರನ್ನು ಹಿಡಿದಿಡುವುದಕ್ಕೇ ತೋರಿರುವ ಜಾಣ್ಮೆ. ಅದರೊಂದಿಗೆ ಅವರ ನಿರೂಪಣಾ ಶೈಲಿ ಎಲ್ಲಿಯೂ ಅವರು ಹೇಳುವ ಚಾರಿತ್ರಿಕ ವಿಷಯವನ್ನು ನೀರಸವಾಗಲು ಬಿಡುವುದಿಲ್ಲ. *ಹೇಳುತ್ತಾ ಸಾಗಿದರೆ ಪ್ರತಿಯೊಂದು ಕಥೆಗಳಿಗೂ ಅಷ್ಟೇ ಪುಟದ ಅನಿಸಿಕೆಗಳೂ ಬರೆಯಬಹುದು.. ಎಲ್ಲವನ್ನೂ ಗ್ರಹಿಸಿ ಅನುಭವಿಸಬೇಕಾದರೆ ಎಲ್ಲರೂ ಓದಿ ನೋಡಿ "ಪದ್ಮಪಾಣಿ".* *_ಜೀವಪರಿ_*

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಧರ್ಮಸ್ಥಂಭದ ಪರಮಜಿತ್ ಪಾತ್ರ ಮತ್ರು ಮಾದ್ರಿಯ ಪಾತ್ರ ತುಂಬಾ ಕಾಡತ್ತದೆ. ಧಾರ್ಮಿಕತೆ ಮತ್ರು ನೈತಿಕತೆಯೊಳಗೆ ಆಗುವ ತಿಕ್ಕಾಟದಲ್ಲಿ ಯಾವುದನ್ನು ಹೇಗೆ ಗೆಲ್ಲಿಸಬೇಕೆಂಬುದು ಇಲ್ಲಿ ಅಲೋಚನೆಗೆ ದೂಡುವ ಪಾತ್ರ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಚಾರಿತ್ರಿಕ ಸತ್ಯವನ್ನು ಹುಡುಕಿ ಹೊರಟವರಿಗೆ...

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
87
Views
3 Months
Since posted

Voting Closed!

Scroll to Top