Submission 2015

ಪುಸ್ತಕದ ಶೀರ್ಷಿಕೆ: ವಂಶವೃಕ್ಷ

ಪುಸ್ತಕದ ಲೇಖಕರು: ಎಸ್.ಎಲ್. ಭೈರಪ್ಪ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚೈತಾಲಿ ಯು ಎಂ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕಾದಂಬರಿ ಓದಲು ಹಲವಾರು ಕಾರಣಗಳು ಇರುತ್ತದೆ. ಕೆಲವೊಂದು ಕಾದಂಬರಿ ಮನಸ್ಸಿಗೆ ಮುದ ನೀಡಿದರೆ ಕೆಲವು ಕಾದಂಬರಿಗಳು ಕೇವಲ ಕಥೆ ಹೇಳುವುದಿಲ್ಲ, ಅವು ಜೀವನದ ಆಳವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಆದರೆ ಕಾದಂಬರಿಯು ಭಿನ್ನವಾದುದು. ಅದು ಕಾಲ್ಪನಿಕವಾದರೂ ವಾಸ್ತವಕ್ಕೆ ಬಹಳ ಹತ್ತಿರವಾದದ್ದು. ಎಸ್.ಎಲ್. ಭೈರಪ್ಪ ಅವರ 'ವಂಶವೃಕ್ಷ' ಇಂತಹ ಒಂದು ಮಹತ್ವದ ಕೃತಿ. ಇದು ಕೇವಲ ಒಂದು ಕುಟುಂಬದ ಕಥೆಯಲ್ಲ, ಬದಲಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಅನಿವಾರ್ಯ ಸಂಘರ್ಷವನ್ನು ಎತ್ತಿ ಹಿಡಿಯುತ್ತದೆ. ಈ ಕಾದಂಬರಿಯ ವಿಶಿಷ್ಟತೆ ಎಂದರೆ, ಇದು ಕಾಲ್ಪನಿಕವಾಗಿದ್ದರೂ, ಪ್ರತಿಯೊಂದು ಘಟನೆಯೂ ವಾಸ್ತವಕ್ಕೆ ತೀರ ಹತ್ತಿರವಾಗಿದೆ. 'ವಂಶವೃಕ್ಷ' ಕಾದಂಬರಿಯು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವುದಲ್ಲದೆ, ಅದೇ ಹೆಸರಿನ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಕ್ಕೂ ಆಧಾರವಾಗಿದೆ. ಈ ಕಾದಂಬರಿಯು ಪ್ರಮುಖವಾಗಿ ಶ್ರೀನಿವಾಸ ಶ್ರೋತ್ರಿ ಹಾಗೂ ಅವರ ಸೊಸೆ ಕಾತ್ಯಾಯಿನಿ, ಡಾ.ಸದಾಶಿವರಾಯ, ನಾಗಲಕ್ಷ್ಮಿ, ಕರುಣಾರತ್ನೆ, ರಾಜರಾಯರ ಕುರಿತಿದೆ. ಕಥೆಯು ಪ್ರಾರಂಭದಲ್ಲಿಯೇ ಮುಕ್ತಾಯವಾಗಬಹುದಿತ್ತು. ಶ್ರೀನಿವಾಸ ಶ್ರೋತ್ರಿಯರು ಒಪ್ಪುತ್ತಿದ್ದರೆ ಕಥೆಯೇ ಬೇರೆ ತಿರುವನ್ನು ಪಡೆಯುತ್ತಿತ್ತು. ಆದರೆ ಶ್ರೋತ್ರಿ ಅವರ ಕುಟುಂಬದ ವಿಧಿಲಿಖಿತ ಬೇರೆಯೇ ಆಗಿತ್ತು. ಶ್ರೀನಿವಾಸ ಶ್ರೋತ್ರಿಯರು ಬಹಳ ಜ್ಞಾನಿಯಾಗಿದ್ದರು. ಅವರು ಊರಿನಲ್ಲಿ ಪಾಂಡಿತ್ಯ, ಜ್ಞಾನ ಮತ್ತು ಗೌರವಾನ್ವಿತ ವ್ಯಕ್ತಿತ್ವದ ಪ್ರತಿರೂಪ ಆಗಿದ್ದರು. ಅವರ ಜೀವನ ಶೈಲಿಯೇ ವೇದಗಳ ಕಾಲದ ಸಾಂಪ್ರದಾಯಿಕ ಮೌಲ್ಯಗಳಿಗೆ ಬದ್ಧವಾಗಿದೆ. ಅವರಿಗೆ ವಂಶದ ಶುದ್ಧತೆ ಮತ್ತು ಮುಂದುವರಿಕೆ ಅತಿ ಮುಖ್ಯ. ಶ್ರೀನಿವಾಸ ಶ್ರೋತ್ರಿ ಅವರ ಪಾತ್ರವೂ ಒಂದು ವಿಶಿಷ್ಟವಾದದು. ಅವರದ್ದು ವಿಶಾಲ ಸಮುದ್ರದಂತಹ ವ್ಯಕ್ತಿತ್ವ, ಆದರೆ ಸಂಪ್ರದಾಯದ ಪ್ರಶ್ನೆ ಬಂದಾಗ, ಅವರ ನಿಲುವುಗಳು ಅಷ್ಟೇ ಕಠಿಣವಾಗುತ್ತವೆ. ಈ ಕಾದಂಬರಿಯ ಇನ್ನೊಂದು ಪ್ರಮುಖ ಪಾತ್ರ ಅವರ ಸೊಸೆ ಕಾತ್ಯಾಯನಿ. ಅವಳು ಬಹಳ ಪುಣ್ಯವಂತೆ ಆಗಿದ್ದಳು. ಅವಳ ಅತ್ತೆ ಮಾವ ಎಂದೂ ಅವಳನ್ನು ದೂರಲಿಲ್ಲ ಹಾಗೂ ಅವಳೊಂದಿಗೆ ಕೀಳಾಗಿ ವರ್ತಿಸಲಿಲ್ಲ. ಬದಲಾಗಿ ಕಾತ್ಯಾಯನಿಯು ಶ್ರೋತ್ರಿಯವರಿಗೆ ಸ್ವಂತ ಮಗಳಂತೆ ಪ್ರೀತಿ ಪಾತ್ರಳಾಗಿದ್ದಳು. ಹೀಗೊಂದು ದಿನ ಕಪಿಲೆಯ ಅನಿರೀಕ್ಷಿತ ಪ್ರಭಾವದಿಂದ ಶ್ರೋತ್ರಿ ಕುಟುಂಬವು ದಿಕ್ಕುತೋಚದಂತಾಯಿತು. ಆದರೆ ಪತಿ ಅಕಾಲಿಕ ಮರಣ ಹೊಂದಿದಾಗ, ಆಕೆಯ ಜೀವನದಲ್ಲಿ ಒಂದು ದೊಡ್ಡ ನಿರ್ಧಾರದ ಪ್ರಶ್ನೆ ಎದುರಾಗುತ್ತದೆ. ಅವಳ ಪತಿಯೇನೋ ಸ್ವಭಾವಿತನಾಗಿದ್ದ, ಆದರೆ ಆಕೆಗೆ ಮರುಮದುವೆಯಾಗುವ ಆಸೆ ಇರುತ್ತದೆ. ಶ್ರೋತ್ರಿಯವರು ಆಕೆಯ ವೈಯಕ್ತಿಕ ನೋವಿಗೆ ಸ್ಪಂದಿಸಿದರೂ, ತಮ್ಮ ವಂಶದ ನಿಯಮಗಳ ಮುಂದೆ ಮರುಮದುವೆಯನ್ನು ಒಪ್ಪುವುದಿಲ್ಲ. ಕಾತ್ಯಾಯಿನಿಯ ಈ ನಿರ್ಧಾರವು ವೈಯಕ್ತಿಕ ನೆಮ್ಮದಿ ಮತ್ತು ಸಾಂಪ್ರದಾಯಿಕ ನಿಷ್ಠೆಯ ನಡುವಿನ ಕಗ್ಗಂಟನ್ನು ಸೃಷ್ಟಿಸುತ್ತದೆ. ಅವಳ ಮನಸ್ಸಿನ ತುಮುಲ ಮತ್ತು ಆ ನಿರ್ಧಾರದ ದೂರಗಾಮಿ ಪರಿಣಾಮಗಳನ್ನು ಲೇಖಕರು ಎಳೆಎಳೆಯಾಗಿ ವಿವರಿಸಿದ್ದಾರೆ. ಕಾದಂಬರಿಯ ಮತ್ತೊಂದು ಪ್ರಮುಖ ಮತ್ತು ವಿಶ್ಲೇಷಣೆಗೆ ಒಳಪಡುವ ಪಾತ್ರವೆಂದರೆ ಡಾ. ಸದಾಶಿವರಾಯ ಅವರದು. ಅವರೂ ಒಬ್ಬ ಮೇಧಾವಿ ಆಗಿದ್ದರು ಹಾಗೂ ತುಂಬ ಅಧ್ಯಯನ ಮಾಡುತ್ತಿದ್ದರು. ಸದಾಶಿವರಾಯರು ಶ್ರೋತ್ರಿಯವರ ಬೌದ್ಧಿಕ ಮತ್ತು ಮಾನಸಿಕ ಕೊಂಡಿಯಾಗಿದ್ದರು. ತಮ್ಮ ಹಲವು ಸಂಶಯಗಳನ್ನು, ಅದರಲ್ಲೂ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು, ಶ್ರೋತ್ರಿಯವರೊಂದಿಗೆ ಚರ್ಚಿಸುತ್ತಿದ್ದರು. ಸದಾಶಿವರಾಯರಿಗೆ ಒಬ್ಬ ಅನುಜನಿದ್ದನು ರಾಜರಾಯ. ಶ್ರೀನಿವಾಸ ಶ್ರೋತ್ರಿ ಹಾಗೂ ಸದಾಶಿವರಾಯರ ಅವರ ಕುಟುಂಬವನ್ನು ಬೆಸೆಯುವ ಪ್ರಮುಖ ಕೊಂಡಿ ಈ ರಾಜರಾಯರು. ಸದಾಶಿವರಾಯರ ವೈಯಕ್ತಿಕ ಜೀವನ ಸಂಪೂರ್ಣ ಭಿನ್ನ. ಸದಾಶಿರಾಯರ ಜೀವನದಲ್ಲಿ ‘ರತ್ನೆಯ’ ಕರುಣೆ ಇದ್ದು, ‘ಲಕ್ಷ್ಮಿಯ’ ಅನುಗ್ರಹ ಇದ್ದರೂ ಪಡೆಯದಂತಾದರು. ಮನೆಯಲ್ಲಿ ಧನ ಲಕ್ಷ್ಮಿ ಇದ್ದರೂ ಅವಳು ಮನಸ್ಸನ್ನು ಸದಾಶಿವರಾಯರು ಸಂತೃಪ್ತಗಳಿಸಲಿಲ್ಲ.ಇಂತಹ ಒಂದು ಜೀವನ ಚರಿತ್ರೆ ಇರಬಹುದೇ ಎಂಬ ಪ್ರಶ್ನೆಯು ಸದಾಶಿವರಾಯರ ಕಥೆಯನ್ನು ಓದುವಾಗ ಮೂಡುತ್ತದೆ. ಡಾ.ಸದಾಶಿವರಾಯರು ಕೈಗೊಂಡ ನಿರ್ಧಾರ ಸರಿಯೋ ತಪ್ಪೋ ಎಂದು ಹೇಳುವುದು ಅಸಾಧ್ಯ. ಬುದ್ಧಿವಂತಿಕೆಯ ನಿರ್ಧಾರಗಳು ಮತ್ತು ಭಾವನಾತ್ಮಕ ನೆಮ್ಮದಿ ಎರಡೂ ಪರಸ್ಪರ ವಿರುದ್ಧವಾಗಿ ನಿಲ್ಲುವ ಸಾಧ್ಯತೆಯನ್ನು ಈ ಪಾತ್ರವು ಬಿಂಬಿಸುತ್ತದೆ. ಭೈರಪ್ಪನವರ ನಿರೂಪಣಾ ಶೈಲಿ ನಿಜಕ್ಕೂ ಪ್ರಶಂಸನೀಯ. ಕಾದಂಬರಿಯು ಕೇವಲ ಒಂದು ಕಥೆಯಾಗದೆ, ಅದು ನಿಜ ಜೀವನದಲ್ಲಿ ಘಟಿಸಿದರೆ ಯಾವ ರೀತಿಯ ನೈತಿಕ ಮತ್ತು ಸಾಮಾಜಿಕ ಪರಿಣಾಮ ಬೀರಬಹುದು ಎಂಬುದನ್ನು ಲೇಖಕರು ಅತ್ಯುತ್ತಮವಾಗಿ ವಿಶ್ಲೇಷಿಸಿದ್ದಾರೆ. ಇಂತಹ ಸೂಕ್ಷ್ಮ ಸನ್ನಿವೇಶಗಳನ್ನು ಲಿಖಿತ ರೂಪದಲ್ಲಿ ತರುವುದು ಸುಲಭವಲ್ಲ, ಆದರೆ ಭೈರಪ್ಪನವರ ಬರಹವು ಓದುಗರನ್ನು ಕಥೆಯ ಭಾಗವಾಗಿ ಕಲ್ಪಿಸಿಕೊಳ್ಳಲು ಪ್ರೇರೇಪಿಸುತ್ತದೆ. ಈ ಕಾದಂಬರಿಯ ಪ್ರತಿಯೊಂದು ಪಾತ್ರವೂ ಮಹತ್ವಪೂರ್ಣವಾದದ್ದು ಹಾಗೂ ಒಂದೊಂದು ಪಾತ್ರಕ್ಕೂ ಅದರದ್ದೇ ಆದ ಸ್ವಾರಸ್ಯವೂ ಇದೆ. ಕಥೆ ಕೊನೆಯವರೆಗೂ ಮುಂದೇನಾಗಬಹುದು ಎಂಬ ಕುತೂಹಲ ಉಳಿಸಿಕೊಳ್ಳುತ್ತದೆ.ಈ ಕಾದಂಬರಿಯಲ್ಲಿ ಭಾರತದ ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಓದುಗರು ಕಾದಂಬರಿ ಓದುವ ವೇಳೆ ಕಲ್ಪಿಸುತ್ತಾ ಓದಿದರೆ ಕಥೆಯೂ ಬಹಳ ಸ್ವಾರಸ್ಯಕರವೆನಿಸುತ್ತದೆ. ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ ಅನುಭವ. ಒಟ್ಟಿನಲ್ಲಿ, ಈ ಕಾದಂಬರಿಯು ಜೀವನದಲ್ಲಿ ಒಮ್ಮೆಯಾದರೂ ಓದಲೇಬೇಕಾದ ಮಹತ್ವದ ಕೃತಿಯಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಎಸ್.ಎಲ್. ಭೈರಪ್ಪ ಅವರ ವಂಶವೃಕ್ಷ ಕಾದಂಬರಿಯಲ್ಲಿ ಬಹುವಾಗಿ ಕಾಡುವ ಪಾತ್ರ ನಾಗಲಕ್ಷ್ಮಿ ಹಾಗೂ ಶ್ರೀನಿವಾಸ ಶ್ರೋತ್ರಿ. ಅವರಿಬ್ಬರೂ ಸಂಪ್ರದಾಯ ಮತ್ತು ಕರ್ತವ್ಯದ ಹಾದಿಯಲ್ಲಿ ಅಚಲವಾಗಿ ನಿಂತವರು. ಇಬ್ಬರಿಗೂ ಆಸರೆ ಆಗುವವರೇ ನಡುದಾರಿಯಲ್ಲಿ ತಮ್ಮ ಪಯಣದ ಪಥವನ್ನು ಬದಲಿಸಿದರು. ಶ್ರೀನಿವಾಸ ಶ್ರೋತ್ರಿಯ ಏಕಮಾತ್ರ ಸಂತಾನ ನಂಜುಂಡ ಶ್ರೋತ್ರಿ ಕಪಿಲೆಯ ಪ್ರವಾಹದ ಆರ್ಭಟಕ್ಕೆ ಉಸಿರುಚೆಲ್ಲಿದನು. ನಂಜುಂಡ ಶ್ರೋತ್ರಿಯ ಮಡದಿ ಹಾಗೂ ಶ್ರೀನಿವಾಸ ಶ್ರೋತ್ರಿಯ ಸೊಸೆ ಕಾತ್ಯಾಯನಿ ಕೂಡ ತನ್ನ ಜೀವನದ ಸಂತೋಷವನ್ನು ಅರಸಿ ಹೋದಳು. ಕಾತ್ಯಾಯನಿ ತನ್ನ ಹೆತ್ತ ಕರುಳನ್ನು ತೊರೆದು ಹೋಗಿ, ಪಶ್ಚಾತಾಪದಲ್ಲಿ ಬೆಂದು ಹೋದಳು. ಮುಂದೆ ಅವಳ ಯಾವ ಸಂತಾನವೂ ಬದುಕುಳಿಯಲಿಲ್ಲ. ಅವಳ ಮೊದಲ ಮಗ ಚೀನಿ ಹೆತ್ತವರ ಆಶ್ರಯದಲ್ಲಿ ಬೆಳೆಯದಿದ್ದರೂ, ಶ್ರೀನಿವಾಸ ಶ್ರೋತ್ರಿ ದಂಪತಿಗಳು ಅವನನ್ನು ಬಹಳ ಅಕ್ಕರೆಯಿಂದ ಬೆಳೆಸಿ, ವಿದ್ಯಾವಂತನಾದನು. ಇನ್ನೊಂದು ಪ್ರಮುಖ ಪಾತ್ರ ನಾಗಲಕ್ಷ್ಮಿ. ಇವಳು, ಸದಾಶಿವರಾಯರ ಧರ್ಮಪತ್ನಿ. ಇವರಿಬ್ಬರ ಕರುಳ ಕುಡಿ ಪೃಥ್ವಿ. ಸದಾಶಿವರಾಯರು ಬಹುವಾಗಿ ತಮ್ಮ ಸಮಯವನ್ನು ಓದಿನತ್ತ ಮುಡಿಪಾಗಿಟ್ಟಿದ್ದರು. ಮನೆ, ಸದಾಶಿವರಾಯರು, ಪೃಥ್ವಿಯ ಬಗ್ಗೆ ನಾಗಲಕ್ಷ್ಮಿಯೇ ಸಂಭಾಳಿಸುತ್ತಿದ್ದರು. ನಾಗಲಕ್ಷ್ಮಿ ಬಹಳ ಪತಿವ್ರತೆ ಆಗಿದ್ದರು. ಅವರು ತಮ್ಮ ಜೀವನವನ್ನು ಸಂಸಾರಕ್ಕೆ ಮುಡಿಪಾಗಿಸಿದ್ದರು. ಹೀಗಿರುವಾಗ, ಸದಾಶಿವರಾಯರು, ಅವರ ಗ್ರಂಥದ ಪ್ರಕಾಶನಕ್ಕಾಗಿ ದೂರ ದೇಶದಿಂದ ಬಂದು,ಇವರ ಶಿಷ್ಯೆಯಾಗಿ ಸಹಕರಿಸುತ್ತಿದ್ದ ಕರುಣಾ ರತ್ನೆಯನ್ನು ಇವರು ವಿವಾಹವಾಗುತ್ತಾರೆ. ಇವರ ವಿವಾಹದ ಹಿನ್ನೆಲೆ ಕಾದಂಬರಿಯಲ್ಲಿ ವಿವರಿಸಿದ್ದರೂ, ನಾಗಲಕ್ಷ್ಮಿಯವರಿಗೆ ಕೇವಲ ತಮ್ಮ ನಿರ್ಧಾರವನ್ನು ರಾಜರಾಯರ ಮುಖಾಂತರ ತಿಳಿಸಿ ಹಿಮ್ಮೆಟ್ಟಿದರು. ಒಂದು ವೇಳೆ, ನಾಗಲಕ್ಷ್ಮಿ ವಿದ್ಯಾವಂತೆ ಆಗಿದ್ದರೆ, ಸದಾಶಿವರಾಯರು ಈ ನಿರ್ಧಾರವನ್ನು ತೆಗೊಳುತ್ತಿದ್ದಾರೆಯೇ? ಇಷ್ಟೆಲ್ಲಾ ಸನ್ನಿವೇಶಗಳು ಆದಮೇಲೆ, ಸದಾಶಿವರಾಯರು ಅವರ ಅಂತಿಮ ದಿನಗಳಲ್ಲಿ ನಾಗಲಕ್ಷ್ಮಿಯನ್ನು ಕರೆಸಿದ್ದರು. ಪತಿಯೇ ದೇವರು ಎಂದು ನಂಬಿದ್ದ ನಾಗಲಕ್ಷ್ಮಿಯು ಕೇವಲ ತಮ್ಮ ಪತಿಯು ಅನಾರೋಗ್ಯವಾಗಿದ್ದಾರೆ ಎಂದು ತಿಳಿದ ಕೂಡಲೇ ಅವರ ಶುಶ್ರೂಷೆಗೆ ಧಾವಿಸಿಬಂದರು. ಇಲ್ಲಿ ಸದಾಶಿವರಾಯರು ತಮ್ಮ ಪಶ್ಚಾತಾಪದಿಂದ ನಾಗಲಕ್ಷ್ಮಿಯ ಋಣವನ್ನು ತೀರಿಸಲು ಕರೆಸಿದರೇ? ಇಲ್ಲಿ ಯಾರನ್ನೂ ಸಹ ದೂಷಿಸಲು ಅಸಾಧ್ಯ. ಈ ಕಾದಂಬರಿಯ ಪ್ರತಿಯೊಂದು ಪಾತ್ರಕ್ಕೆ ಕಥೆಗಳಿವೆ ಹಾಗೂ ಕಾರಣಗಳಿವೆ. ಸಂದರ್ಭಕ್ಕೆ ತಕ್ಕನಾಗಿ ಪಾತ್ರಗಳು ಬದಲಾಗುತ್ತಾ ಹೋಗಿವೆ ಹಾಗೂ ಜೀವನವೂ ಅವರಿಗೆ ಪಾಠವನ್ನು ಸುಸಂದರ್ಭವಾಗಿ ಕಲಿಸಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಪುಸ್ತಕವು ಹದಿನೇಳು ವರ್ಷ ಮೇಲ್ಪಟ್ಟವರಿಗೆ ಓದಬಹುದು. ವಂಶವೃಕ್ಷ ಕಾದಂಬರಿಯು ಪ್ರತಿಬಾರಿ ಓದುವಾಗ ನಮ್ಮ ದೃಷ್ಟಿಕೋನ ಬದಲಾಗುತ್ತದೆ ಹಾಗೂ ಪಾತ್ರಗಳ ಬಗ್ಗೆ ಹೊಸ ಆಯಾಮದಲ್ಲಿ ಸರಿಯಾಗಿ ಅರ್ಥೈಸಲು ಸಾಧ್ಯವಾಗುತ್ತದೆ. ಈ ಕಾದಂಬರಿಯು ಬದುಕಿನ ಸೂಕ್ಷ್ಮ, ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಶೋಧಿಸುತ್ತದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

19
Votes
204
Views
6 Months
Since posted

Voting Closed!

Scroll to Top