ಪುಸ್ತಕದ ಶೀರ್ಷಿಕೆ: ಚೋಮನ ದುಡಿ
ಪುಸ್ತಕದ ಲೇಖಕರು: ಡಾ. ಕೆ. ಶಿವರಾಮ ಕಾರಂತ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ವೇತ. ವಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಚೋಮನ ದುಡಿ ಶಿವರಾಮ ಕಾರಂತರು ಬರೆದಿರುವ ಚೋಮನ ದುಡಿ ಕನ್ನಡ ಸಾಹಿತ್ಯದ ಅತ್ಯಂತ ಮಹತ್ವದ ಹಾಗೂ ಸಾಮಾಜಿಕವಾಗಿ ಒಳ ನೋಟವುಳ್ಳ ಪ್ರಬಲ ಕಾದಂಬರಿಗಳಲ್ಲಿ ಒಂದಾಗಿದೆ. 19 ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ನೈಜವಾಗಿ ಚಿತ್ರಿಸುವ ಈ ಕಾದಂಬರಿ, ದಲಿತರ ಮೇಲಿನ ಮೇಲ್ಜಾತಿಯವರ ಶೋಷಣೆ, ಅಸ್ಪೃಶ್ಯತೆ, ಭೂಮಿಯ ಮೇಲಿನ ಹಕ್ಕಿನ ನಿರಾಕರಣೆ, ಬಡತನ, ಸಾಲದ ಸುಳಿ, ಮಹಿಳಾ ಶೋಷಣೆ ಹಾಗೂ ಬಂಡವಾಳಶಾಹಿಗಳ ದೌರ್ಜನ್ಯವನ್ನು ಸ್ಪಷ್ಟವಾಗಿ ಅನಾವರಣಗೊಳಿಸುತ್ತದೆ. ಈ ಕಾದಂಬರಿಯ ಕೇಂದ್ರ ಪಾತ್ರ ಹಾಗೂ ಕಾದಂಬರಿಯ ಧ್ವನಿಯಾಗಿರುವವನು ಚೋಮ. ಸ್ವಾಭಿಮಾನದಿಂದ ಬದುಕಬೇಕು, ಒಂದು ತುಂಡು ಭೂಮಿಯಲ್ಲಿ ಸ್ವಂತವಾಗಿ ಬೇಸಾಯ ಮಾಡಬೇಕು ಎಂಬುದು ಅವನ ಮಹತ್ವಾಕಾಂಕ್ಷೆ. ಆದರೆ ಕಿತ್ತು ತಿನ್ನುವ ಬಡತನ ಮತ್ತು ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿರುವ ಬದುಕು ಅವನ ಕನಸುಗಳನ್ನು ನಿರಂತರವಾಗಿ ನುಚ್ಚು ನೂರಾಗಿಸುತ್ತಿರುತ್ತದೆ. ಚೋಮನ ಅಂತರಂಗದ ಭಾವನೆಗಳ ಪ್ರತಿರೂಪವೇ ದುಡಿ. ಅವನ ನೋವು, ಕೋಪ, ನಿರಾಶೆ, ಪ್ರತಿರೋಧ ಮತ್ತು ಮನಸ್ಸಿನ ತಾಳಮೇಳಗಳು ದುಡಿಯ ಲಯದಲ್ಲಿ ವ್ಯಕ್ತವಾಗುತ್ತವೆ. ಹೀಗಾಗಿ ದುಡಿ ಕೇವಲ ವಾದ್ಯವಲ್ಲ ಅದು ಚೋಮನ ಬದುಕಿನ ಪ್ರತಿನಿಧಿ ಹಾಗೂ ಅವನ ಹೃದಯದ ಬಡಿತವೇ ಆಗಿದೆ. ಚೋಮನಿಗೆ ಐದು ಮಕ್ಕಳು ನಾಲ್ಕು ಗಂಡು ಮಕ್ಕಳು ಚನಿಯ, ಗುರುವ, ನೀಲ, ಕಾಳ ಮತ್ತು ಒಬ್ಬಳು ಹೆಣ್ಣು ಮಗಳು ಬೆಳ್ಳಿ. ಮಡದಿ ಹೊಲತಿ ತೀರಿಕೊಂಡ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ಬೆಳ್ಳಿಯದ್ದಾಗಿರುತ್ತದೆ. ತಂದೆಯ ಸಾಲ ತೀರಿಸಬೇಕಾದ ಒತ್ತಡದಲ್ಲಿ ಅವಳು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ತೋಟದ ಗುಮಾಸ್ತ ಮನ್ವೇಲನ ಕಿರುಕುಳಕ್ಕೆ ಒಳಗಾಗಿ ಅವಳ ಬದುಕು ನಲುಗುತ್ತದೆ. ಬಡತನ ಮತ್ತು ಅಸಹಾಯಕತೆಯ ನಡುವೆ ಹೆಣ್ಣಿನ ಬದುಕು ಹೇಗೆ ಶೋಷಣೆಗೆ ಒಳಗಾಗುತ್ತದೆ ಎಂಬುದನ್ನು ಲೇಖಕರು ಬೆಳ್ಳಿಯ ಪಾತ್ರದ ಮೂಲಕ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಮನ್ವೇಲ ಬಂಡವಾಳಶಾಹಿ ಮನಸ್ಥಿತಿಯ ಪ್ರತಿನಿಧಿಯಾಗಿ ಬಡವರ ಮತ್ತು ಅಸಹಾಯಕರ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಬೆಳ್ಳಿಯ ಅಸಹಾಯಕತೆಯನ್ನು ತನ್ನ ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಂಡು ಚೋಮನ ಸಾಲವನ್ನು ಮನ್ನಾ ಮಾಡುತ್ತಾನೆ. ಉಳ್ಳವರ ದೌರ್ಜನ್ಯ ಮತ್ತು ಇಲ್ಲದವರ ಅಸಹಾಯಕತೆ ನಡುವಿನ ಸಂಘರ್ಷ ಮನ್ವೇಲನ ಪಾತ್ರದಲ್ಲಿ ಸ್ಪಷ್ಟವಾಗುತ್ತದೆ. ಸಂಕಪ್ಪಯ್ಯ ಊರಿನ ದಣಿ ಹಾಗೂ ಮೇಲ್ಜಾತಿಯ ಪ್ರತಿನಿಧಿ. ಭೂಮಾಲಿಕತ್ವ, ಜೀತ ಪದ್ಧತಿ ಮತ್ತು ಜಾತೀಯ ಶೋಷಣೆಯನ್ನು ಮುಂದುವರಿಸುವ ವ್ಯವಸ್ಥೆಯ ರೂಪವಾಗಿ ನಿಲ್ಲುತ್ತಾನೆ. ಚೋಮ ಸ್ವತಂತ್ರ ವ್ಯವಸಾಯಗಾರನಾಗುವ ಕನಸನ್ನು ಅವನು ನಿರಂತರವಾಗಿ ಕುಗ್ಗಿಸುತ್ತಾನೆ. ಚೋಮನ ಮಕ್ಕಳು ಬಡತನದ ಬೇಗೆಯಲ್ಲಿ ನಲುಗುತ್ತಾರೆ. ಚನಿಯ ಕಾಲರಾಕ್ಕೆ ಬಲಿಯಾಗುತ್ತಾನೆ. ಗುರುವ ಜಾತೀಯ ಶೋಷಣೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯಿಂದ ಬೇಸತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಾನೆ. ಮತ್ತೊಂದು ಕಡೆ ಕಾಳ ಈಜು ಬರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಮೇಲ್ಜಾತಿಯವರು ರಕ್ಷಿಸದೆ ಬಿಡುವ ಈ ಘಟನೆ ಜಾತೀಯ ನಿರ್ಲಕ್ಷ್ಯದ ಹೀನಾಯತೆಯನ್ನು ತೋರಿಸುತ್ತದೆ. ಇಡೀ ಕಾದಂಬರಿಯಲ್ಲಿ ಚೋಮನಷ್ಟೇ ಪ್ರಮುಖ ಪಾತ್ರ ವಹಿಸುವುದು ಅವನ ದುಡಿ. ಬದುಕಿನ ಲಯ ತಪ್ಪಿದಾಗಲೆಲ್ಲ ಚೋಮ ದುಡಿಯನ್ನು ಬಾರಿಸುತ್ತಾನೆ. ಇದು ಕಾದಂಬರಿಯ ಆತ್ಮ ಹಾಗೂ ಚೋಮನ ಅಂತರಂಗದ ಧ್ವನಿಯಾಗಿ ಆಗಾಗ ಹೊರ ಹೊಮ್ಮುತ್ತಿರುತ್ತದೆ. ಹೊಲೆಯ ಜಾತಿಯವನಾದ ಚೋಮನಿಗೆ ವ್ಯವಸಾಯಗಾರನಾಗುವ ಮೂಲಭೂತ ಹಕ್ಕನ್ನೇ ನಿರಾಕರಿಸಿರುವ ವ್ಯವಸ್ಥೆಯ ನೈಜ್ಯತೆ ಕಾದಂಬರಿಯ ಉದ್ದಕ್ಕೂ ಗೋಚರಿಸುತ್ತದೆ. ಒಂದು ಕಡೆ ಸಾಲ, ಮತ್ತೊಂದು ಕಡೆ ಜಮೀನ್ದಾರರ ದೌರ್ಜನ್ಯ ಈ ಎರಡರ ನಡುವೆ ಚೋಮನ ಕುಟುಂಬ ಸಂಪೂರ್ಣವಾಗಿ ನಾಶವಾಗುತ್ತದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಚೋಮ ತನ್ನ ನೈತಿಕ ಮೌಲ್ಯಗಳನ್ನು ಕೊನೆಯವರೆಗೂ ಬಿಟ್ಟುಕೊಡದೆ ಸವಾಲುಗಳನ್ನು ಎದುರಿಸುತ್ತಿರುತ್ತಾನೆ. ಭೂಮಿಯನ್ನು ತನ್ನ ಅಸ್ಮಿತೆಯ ಗುರುತಾಗಿ ಕಂಡ ಚೋಮನಿಗೆ ಸ್ವತಂತ್ರ ಬೇಸಾಯಗಾರನಾಗುವ ಆಸೆ ಈಡೇರದೆ ಉಳಿಯುವುದು ಕಾದಂಬರಿಯ ಅತ್ಯಂತ ದೊಡ್ಡ ದುರಂತ. ಅಂತಿಮವಾಗಿ ಬೆಳ್ಳಿಯ ದುರಂತವನ್ನು ಕಂಡು, ದುಡಿಯನ್ನು ಕೈಯಲ್ಲಿ ಹಿಡಿದು ಬಾರಿಸುತ್ತಿರುವಾಗ ದುಡಿಯ ಬಡಿತದೊಂದಿಗೆ ಅವನ ಎದೆಯ ಬಡಿತವೂ ಸ್ತಬ್ಧಗೊಳ್ಳುತ್ತದೆ. ಹೀಗಾಗಿ ಚೋಮನ ದುಡಿ ಜಾತೀಯ ಶೋಷಣೆಯ ವಿರುದ್ಧದ ಮೌನ ಪ್ರತಿಭಟನೆ, ದಲಿತರ ಅಸ್ಮಿತೆಯ ಸಂಕೇತ ಮತ್ತು ಮಾನವೀಯತೆಯ ಕರಾಳ ಸತ್ಯವನ್ನು ಅನಾವರಣಗೊಳಿಸುವ ಮಹತ್ವದ ಸಾಹಿತ್ಯಕೃತಿಯಾಗಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಚೋಮನ ದುಡಿ ಕಾದಂಬರಿಯಲ್ಲಿ ಬರುವ ಪಾತ್ರಗಳು ಪ್ರತಿದಿನ ನಮ್ಮ ಸುತ್ತಮುತ್ತಲಿನ ಸಾಮಾಜಿಕ ವಲಯದಲ್ಲಿ ಕಾಣಿಸುತ್ತಿರುತ್ತಾರೆ. ಈ ಕಾದಂಬರಿಯಲ್ಲಿ ಬರುವ ಚೋಮನ ಪಾತ್ರ ಮನಮುಟ್ಟುವಂತಿದೆ ಏಕೆಂದರೆ ಚೋಮನ ಹೃದಯದ ಬಡಿತ ಮತ್ತು ದುಡಿಯ ಬಡಿತ ಎರಡು ಏಕವಾಗುವ ಹಾಗೆ ಓದುಗರಿಗೆ ಕಟ್ಟಿಕೊಡುತ್ತದೆ. ಚೋಮನ ಮಗಳು ಬೆಳ್ಳಿ ವ್ಯವಸ್ಥೆಯ ಅಡಿಯಲ್ಲಿ ನಲುಗಿ ಹೋದ ಹೆಣ್ಣು ಯಾವುದನ್ನು ಅರ್ಥೈಸಿಕೊಳ್ಳಲಾಗದ ಮುಗ್ಧತೆ ಅಸಹಾಯಕತೆ ಬಡತನ ಜಾತಿಯ ದೌರ್ಜನ್ಯ ಮೇಲ್ವರ್ಗದವರ ಶೋಷಣೆ ತಂದೆಯ ಸಹಾಯಕತೆ ಹೀಗೆ ತನ್ನ ಸುತ್ತಲೂ ಇರುವ ಮುಳ್ಳಿನ ತಂತಿಯಲ್ಲಿ ಮಲಗಿ ಹೋದವಳು. ಇನ್ನು ಕಾದಂಬರಿಯಲ್ಲಿ ಕಾಣಸಿಗುವ ಮತ್ತೆರಡು ಬಲಿಷ್ಠ ಪಾತ್ರಗಳು ಸಂಕಪ್ಪಯ್ಯ ಮತ್ತು ಮನ್ವೇಲ ಒಬ್ಬರು ಜಮೀನ್ದಾರಿ ಪದ್ಧತಿಯನ್ನು ಪ್ರತಿನಿಧಿಸುವಂತಹ ಸಂಕಪ್ಪಯ್ಯ ದಣಿಯಾಗಿ ಒಕ್ಕಲು ಮಕ್ಕಳನ್ನು ನಡೆಸಿಕೊಳ್ಳುವಂತಹ ರೀತಿ ಸಮಾಜದ ಕೆಳವರ್ಗದವರ ಅಭದ್ರತೆಯನ್ನು ಸೂಚಿಸುತ್ತದೆ. ಮನ್ವೇಲನ ಪಾತ್ರದಲ್ಲಿ ಬಂಡವಾಳ ಶಾಹಿದಾರರ ದೌರ್ಜನ್ಯ ಮಾಡದ ಸಾಲಕ್ಕಾಗಿ ಇಬ್ಬರು ಮಕ್ಕಳ ಬಲಿಯಾಗುವುದು . ಚೋಮನ ಮಕ್ಕಳಾದ ಗುರುವ ಮೂಲಭೂತ ಹಕ್ಕುಗಳಿಗಾಗಿ ಮತಾಂತರ ಹೊಂದಿದರೆ ಚನಿಯ ಕಾಯಿಲೆಯಿಂದ ಸಾವನ್ನಪ್ಪುತ್ತಾನೆ. ಕಾದಂಬರಿಯುವುದಕ್ಕೂ ಮನಸ್ಸಿನ ತುಡಿತ ದುಡಿಯ ಬಡಿತ ಎರಡು ತಾಳಗಳು ಏಕವಾಗದೆ ಕೊನೆಗೆ ಚೋಮನ ಹೃದಯದ ಬಡಿತ ಸ್ತಬ್ಧ ಗೊಳ್ಳುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸಾಮಾಜಿಕ ಕಾಳಜಿ ಹೊಂದಿರುವ ಬದಲಾವಣೆಗಾಗಿ ಕಾತರಿಸುವಂತಹ ಯುವ ಮನಸುಗಳಿಗೆ ಚೋಮನ ದುಡಿ ಕಾದಂಬರಿಯು ಬಹಳ ಸೂಕ್ತವೆನಿಸುತ್ತದೆ.. ಇಂದು ಕಾಲ ದೇಶ ಸಂದರ್ಭ ಆಧುನಿಕತೆ ಹೀಗೆ ಎಲ್ಲವೂ ಬದಲಾಗಿದೆ. ಶೋಷಣೆಯ ರೂಪ ರೂಪಾಂತರಗೊಂಡಿದೆ ಸಂಪೂರ್ಣವಾಗಿ ತೊಡೆದು ಹಾಕಲು ಇಂದಿಗೂ ಸಾಧ್ಯವಾಗಿಲ್ಲ ಪರಿಸ್ಥಿತಿ ಮತ್ತು ಸನ್ನಿವೇಶಗಳು ಕಾಲಕ್ಕೆ ತಕ್ಕಂತೆ ಮೇಲ್ನೋಟಕ್ಕೆ ಬದಲಾದಂತೆ ಅನಿಸುತ್ತಿದೆ ಇಂದಿಗೂ ನಮ್ಮ ಭಾರತೀಯ ವ್ಯವಸ್ಥೆಯಲ್ಲಿ ಚೋಮನಂತಹ ಪಾತ್ರಗಳು ಅಸ್ಪೃಶ್ಯರು ಬಂಡವಾಳ ಶಾಹಿದಾರರು ಬೆಳ್ಳಿ ಅಂತಹ ಅಸಹಾಯಕ ಪಾತ್ರಗಳು ಜೀವಂತವಾಗಿರುವುದು ಕಾಣಸಿಗುತ್ತದೆ ಆದರೆ ಇಂದಿನ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಅವ್ಯವಸ್ಥೆ ತಣ್ಣನೆ ಮೌನವಹಿಸಿದೆ ಎಂದರೆ ಬಹುಶಃ ತಪ್ಪಾಗಲಾರದು.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.