ಪುಸ್ತಕದ ಶೀರ್ಷಿಕೆ: ದಿ ಲಾಸ್ಟ್ ಲೆಕ್ಚರ್
ಪುಸ್ತಕದ ಲೇಖಕರು: ರ್ಯಾಂಡಿ ಪಾಷ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಜಲೂರು ಎಸ್ ವಿಜಯ ಕುಮಾರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ದಿ ಲಾಸ್ಟ್ ಲೆಕ್ಚರ್:ಸಾವಿನ ಸಾಂಗತ್ಯದಲ್ಲಿ ಸಾರ್ಥಕ ಬದುಕು ಅಮೆರಿಕದ ಕಾರ್ಲಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಪ್ರೊ ರ್ಯಾಂಡಿ ಪಾಷ್ ರವರು ಸಾವಿನ ತೂಗುಗತ್ತಿಯನ್ನು ಕಣ್ಣಿಗೆ ಕಟ್ಟಿಕೊಂಡಿದ್ದರೂ ಸಹಿತ,ಸಾವು ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬಂತೆ ಸ್ಪೂರ್ತಿದಾಯಕವಾಗಿ ಬದುಕುವ ಕಲೆಯನ್ನು ತಮ್ಮ ಕೊನೆಯ ಉಪನ್ಯಾಸದಲ್ಲಿ ಪ್ರಸ್ತುತ ಪಡಿಸಿದ ನೈಜ ಚಿತ್ರಣವೇ ದಿ ಲಾಸ್ಟ್ ಲೆಕ್ಚರ್. ಅಪರೂಪದ ಲಂಗ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು ಸಾವಿನ ಬಗ್ಗೆ ಮಾತನಾಡುತ್ತ ಅನುಕಂಪ ಗಿಟ್ಟಿಸಿಕೊಳ್ಳಲು ಸುತಾರಾಂ ಒಪ್ಪದ ರ್ಯಾಂಡಿ, ಕನಸುಗಳನ್ನು ನನಸು ಮಾಡಿಕೊಳ್ಳುವ ಬಗೆ ಮತ್ತು ಸಮಯದ ಮೌಲ್ಯ ಹಾಗೂ ಜೀವನದ ಸ್ಪೂರ್ತಿದಾಯಕ ಬದುಕಿನ ಸಕರಾತ್ಮಕ ಅಂಶಗಳ ಬಗ್ಗೆ ಮನೋಜ್ಞವಾಗಿ ಉಪನ್ಯಾಸ ನೀಡಿದ್ದು, ಅಲ್ಲಿನ ವಿವಿಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ನೀಡಿದ ಒಂದು ಉತ್ತಮ ಶಾಶ್ವತ ಸಂದೇಶವಾಗಿದೆ. ತನ್ನ ಶಾಶ್ವತ ಅನುಪಸ್ಥಿತಿಯಲ್ಲಿ ತನ್ನ ಪ್ರೀತಿಯ ಮೂರು ಮಕ್ಕಳ ಭವಿಷ್ಯವನ್ನು ಬೆನ್ನೆಲುಬಾಗಿ ನಿಂತು, ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಬಗ್ಗೆ ಮಡದಿ ಜೈ ರವರಿಗೆ ನೀಡುವ ಧೈರ್ಯ ತುಂಬುವ ಚಿತ್ರಣವು ರ್ಯಾಂಡಿ ಮರಣಕ್ಕೂ ಮೊದಲೆ ಕಾಡುವಂತೆ ಭಾಸವಾಗುತ್ತ, ತನ್ನ ಗೈರು ಹಾಜರನ್ನು ಅನುಭವದಿಂದ ದೂರವಿಡುವ ಪ್ರಯತ್ನದ ನಿಜ ಕಥಾವಳಿಗಳು ಕಣ್ಣಿಗೆ ಕಟ್ಟುವಂತಿದೆ ." ಬದುಕಿನಲ್ಲಿ ಬರುವ ಪ್ರತಿಯೊಂದು ಕಷ್ಟಗಳು ನಮಗೆ ಸಿಕ್ಕ ಕಾರ್ಡುಗಳಂತೆ ಆಕಸ್ಮಿಕವಾದವುಗಳು,ನಾವು ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಅವುಗಳ ಮೇಲೆ ಕೈಯಾಡಿಸುವ ಕಲೆ ಮಾತ್ರ ನಮ್ಮ ಬದುಕನ್ನು ಸಕರಾತ್ಮಕಗೊಳಿಸಬಲ್ಲದು ಎಂಬ ರ್ಯಾಂಡಿ ಯವರ ನುಡಿಗಳು ಹತಾಶೆ ಮನದಲ್ಲಿ ಭರವಸೆಯ ಚೈತನ್ಯ ತುಂಬುವುದರಲ್ಲಿ ತುಟಿ ಎರಡು ಮಾಡಲು ಸಾಧ್ಯವಿಲ್ಲ. ಕಠಿಣವಾದ ಜೀವನದಲ್ಲಿ ನಡೆಯಬೇಕಾದ ಹಾದಿಯ ಬಗ್ಗೆ ತಂದೆಯಿಂದ ಮಾರ್ಗದರ್ಶನ ಪಡೆದಿದ್ದ ರ್ಯಾಂಡಿ,ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅನಗತ್ಯ ಆತುರ ಪಡಬಾರದು,ಪ್ರಭಾವಶಾಲಿ ಹುದ್ದೆಯಲ್ಲಿದ್ದಾಗಲೂ ಕೆಲಸ ಮತ್ತು ಸಂಬಂಧಗಳ ವಿಚಾರದಲ್ಲಿ ನ್ಯಾಯ ಸಮ್ಮತವಾಗಿ ವರ್ತಿಸಬೇಕು ಎಂಬ ತಂದೆಯ ಸಿದ್ದಾಂತಗಳ ಮೇಲೆ ರ್ಯಾಂಡಿ ಗೌರವನ್ನು ವ್ಯಕ್ತಪಡಿಸುತ್ತಾರೆ. ನನ್ನ ತಾಯಿ ಉದಾರ ಹೃದಯವಂತಿಕೆಯುಳ್ಳವಳು ಸಾಧಾರಣ ಬಟ್ಟೆ ತೊಟ್ಟು,ಮಿಕ್ಕೆಲ್ಲವೂ ಇತರರ ಏಳಿಗೆ ಮತ್ತು ಸಂತೋಷಕ್ಕಾಗಿ ವಿನಿಯೋಗಿಸುತ್ತಾ ಬದುಕಿದ ಸಂತೃಪ್ತ ಜೀವಿ ಎಂದು ತಮ್ಮ ತಾಯಿಯ ಗುನಗಾಣ ಮಾಡುತ್ತಾ, ಬೇರೆಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಮಕ್ಕಳನ್ನು ತಂದೆ ತಾಯಂದಿರು ಅಗಾಧವಾಗಿ ಪ್ರೀತಿಸುತ್ತಾರೆ ಎಂಬುದನ್ನು ಮಕ್ಕಳು ಅರಿಯಬೇಕು ಎಂದು ಹೇಳುವ ರ್ಯಾಂಡಿ ಪಾಷ್ ಮಕ್ಕಳ ಜವಾಬ್ದಾರಿಯನ್ನು ಮನಮುಟ್ಟುವಂತೆ ಹೇಳಿದ್ದಾರೆ. ಒಟ್ಟಾರೆಯಾಗಿ ಬದುಕನ್ನು ಪ್ರೀತಿಸುತ್ತಲೆ ಸಾವನ್ನು ಒಪ್ಪಿಕೊಂಡು, ಸಾರ್ಥಕ ಬದುಕಿನ ಸಂಪುಟವನ್ನು ಬರೆದಿಟ್ಟು ಹೋದ ರ್ಯಾಂಡಿ ಪಾಷ್ ಜೀವನ ಸರ್ವಕಾಲಕ್ಕೂ ಸ್ಪೂರ್ತಿದಾಯಕ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಬದುಕನ್ನು ಪ್ರೀತಿಸುತ್ತಲೆ,ಸಾವನ್ನು ಒಪ್ಪಿಕೊಂಡು ಬದುಕುವುದು ಗಟ್ಟಿಗುಂಡಿಗೆ ಇರುವವರಿಗೆ ಮಾತ್ರ ಸಾಧ್ಯ.ಸಾವಿನಂಚಿನಲ್ಲೂ ಸ್ಪೂರ್ತಿದಾಯಕ ಉಪನ್ಯಾಸ ನೀಡುವುದೆಂದರೆ ಅದು ರ್ಯಾಂಡಿ ಪಾಷ್ ಅವರಂತಹ ದಿಟ್ಟ ವಿರಳ ವ್ಯಕ್ತಿತ್ವದಲ್ಲಿ ಮಾತ್ರ ನೋಡಬಹುದು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಬದುಕಿನಲ್ಲಿ ಬರುವ ಅಡೆತಡೆಗಳನ್ನು ಹತಾಶೆ ಕಂಗಳಲಿ ನೋಡದೆ, ಸ್ಪೂರ್ತಿದಾಯಕವಾಗಿ ನೋಡುತ್ತಾ, ಬದುಕನ್ನು ಪ್ರೀತಿಸುವ ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.