Submission 1901

ಪುಸ್ತಕದ ಶೀರ್ಷಿಕೆ: ನೇಮ

ಪುಸ್ತಕದ ಲೇಖಕರು: ಮಧುಸೂದನ ಮದ್ದೂರು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರೀಧರಮೂರ್ತಿ ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕೃತಿಯಲ್ಲಿನ ಕಥೆಗಳು ಕುರಿತು.. ಕಥೆಗಾರ ಮಧುಸೂದನರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅಶಲ ಕೃತಿ 'ನೇಮ'ವನ್ನು ಎರಡೆರಡು ಬಾರಿ ಓದಿದೆ.ಗ್ರಾಮೀಣ ಸೊಗಡಿನ ಚಿತ್ತಾರವನ್ನು ಅರಿವಿನ ಸಂದೇಶಗಳೊಂದಿಗೆ ಸೊಗಸಾಗಿ ಚಿತ್ರಿಸಿರುವರು.. ಕೃತಿಯ ಬಗ್ಗೆ ನನ್ನ ಅಭಿಪ್ರಾಯವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಬಿಳಿಗಿರಿ ರಂಗಸ್ವಾಮಿಯ ಓದಿನ ಕನಸು ನನಸಾಗುವ ನಡುವೆ ಶಾಲೆ ಬಿಡುವ ಮಕ್ಕಳ ಸ್ಥಿತಿ, ಶಾಲಾ ಶಿಕ್ಷಣದ ಕ್ಷ-ಕಿರಣ ನೋಟ ಮನಸ್ಸಿಗೆ ಆಳವಾಗಿ ನಾಟುತ್ತದೆ. ಬಸಪ್ಪಗೌಡರ ಅಂತ್ಯವು ಸಂಬಂಧಗಳ ಔಚಿತ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಮಾನವತೆಯ ಪ್ರಶ್ನೆಯನ್ನು ಹುಟ್ಟು ಹಾಕುವ ದುಬ್ಬೀರನ ಸಾವು ಮಮ್ಮಲ ಮರುಗುವಂತೆ ಚಿತ್ರಿಸಲ್ಪಟ್ಟಿದೆ. ಕೋಳಿ ಪ್ರಕರಣದಲ್ಲಿ ದೊಡ್ಡೇಗೌಡರ ಆದರ್ಶ ಗುಣಗಳು ಓದುಗರ ಮನದಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ಯಶಸ್ಸು ಕಾಣುತ್ತವೆ. ಬದುಕಿನ ಪಾಠವನ್ನು ಈ ಕಥೆಯು ಬೋಧಿಸುತ್ತದೆ.ತನ್ನದಲ್ಲದ ತಪ್ಪಿಗೆ ಪಾಪಕೂಪದಲ್ಲಿ ನರಳಿದರೂ ಮಗಳು ಸಾಕಿಗೆ ನೆರಳಾಗಿ ಅವಳ ಸುಂದರ ಭವಿಷ್ಯಕ್ಕಾಗಿ ಪರಿತಪಿಸುವ ಹೆಣ್ಣಿನ ಮನದ ಭಾವಗಳಿಗೆ ರುಕ್ಕಿ ಪಾತ್ರದಲ್ಲಿ ಜೀವ ತುಂಬಿರುವಿರಿ. ಕಥೆಯ ಅಂತ್ಯದಲ್ಲಿ ಅವಳು ಗರಬಡಿದಂತಾಗಿ,ಅಳು ಒತ್ತರಿಸಿ ಕುಸಿದಿದ್ದು ಅವಳ ಆತಂಕದೊಂದಿಗೆ ಬೂಟಾಟಿಕೆಯ ಸಮಾಜದ ಸತ್ಯ ದರ್ಶನ ಮಾಡಿಸುತ್ತದೆ. ಪುಟ್ಟಸ್ವಾಮಿಗೌಡರ ಸಾವಿನ ಸಂದರ್ಭದಲ್ಲಿ ಚಂದ್ರುವಿನ ಜೀವನಾನುಭವವು ಜೀವನದ ನಾಟಕವನ್ನು ಬಿಚ್ಚಿಡುತ್ತದೆ. ಗೌಡರ ಮತ್ತು ಭಿಕ್ಷುಕನ ಅಂತಿಮ ಸಂಸ್ಕಾರಗಳ ಚಿತ್ರಣವು ಸಮಾಜದಲ್ಲಿ ಹಾಸುಹೊಕ್ಕಾಗಿರುವ ಭೇದಭಾವಗಳನ್ನು ಧ್ವನಿಸುತ್ತದೆ. ಕೊನೆಗೆ ಪತಿಯ ಅಂತಿಮ ಸಂಸ್ಕಾರದ ಬಳಿಕ ಉಂಟಾಗುವ ಲಕ್ಷ್ಮವ್ವನ ಸಾವು ಮಮ್ಮಲ ಮರುಗುವಂತೆ ಚಿತ್ರಿಸಲ್ಪಟ್ಟಿದೆ. ಅಂಟ್ ರಾಮಯ್ಯ ಮೇಷ್ಟ್ರ ಸರಳತೆ, ಉಳಿತಾಯದ ಗುಣವನ್ನು ಅರ್ಥೈಸಿಕೊಳ್ಳಲಾಗದೆ ದುಶ್ಚಟಗಳ ಮಾಯಾಲೋಕದ ಆಕರ್ಷಣೆಗೆ ಒಳಗಾಗಿ ತನ್ನ ಕುಟುಂಬದ ನಾಶಕ್ಕೆ ಕಾರಣವಾಗುವ ಕೇಶವನ ಪಾತ್ರವು ಇಂದಿನ ಯುವ ಪೀಳಿಗೆಗೆ ನೀತಿಪಾಠವೇ ಸರಿ. ಅರ್ಥವಿಲ್ಲದ ನಂಬಿಕೆಗಳು ಅನರ್ಥಗಳಲ್ಲಿ ಕೊಚ್ಚಿಕೊಂಡು ಹೋಗುವ ಸಮಾಜದ ಸಾಮೂಹಿಕ ಧಾರ್ಮಿಕ ಸನ್ನಿಯು ಗದ್ದುಗೆಯಲ್ಲಿ ಮಿಡಿದ ಹೃದಯದಲ್ಲಿ ಹೃದಯಂಗಮವಾಗಿ ಮೇಳೈಸಿದೆ. ಒಟ್ಟಾರೆ ಪ್ರತಿ ಕಥೆಯು ಅತ್ಯಂತ ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಚಿತ್ರಿಸಲ್ಪಟ್ಟಿದೆ. ಇದೊಂದು ಅಪರೂಪದ ಮೌಲಿಕ ಕೃತಿ. ಕಥೆಗಳನ್ನು ಓದುತ್ತಾ ಇದ್ದರೆ ಓದುಗರು ಸಹ ಆ ಸನ್ನಿವೇಶದ ಒಂದು ಭಾಗವೆಂಬಂತೆ ಭಾಸವಾಗುತ್ತದೆ. ಕಥೆಯ ಸಂದರ್ಭಗಳಿಗೆ ಸಾಕ್ಷಿಯಾಗಿ ಓದುಗರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಜೀವಂತಿಕೆಯನ್ನು ಮೆರೆಸುತ್ತದೆ. ಪ್ರತಿ ಕಥೆಯ ವಿಮರ್ಶೆಗೆ ಪುಟಗಳು ಸಾಲವು! ಪ್ರತಿ ಕಥೆಯು ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಬದುಕಿನ ಒಳಹೊರಗು ಬಿಚ್ಚಿಟ್ಟು ಸತ್ಯ ದರ್ಶನ ಮಾಡಿಸುತ್ತದೆ. ಕಥೆ ಓದಿದ ಓದುಗರು ಸ್ವಯಂ ಜಿಜ್ಞಾಸೆಗೆ ಒಳಗಾಗುತ್ತಾರೆ. ತಾವು ಬಳಸಿರುವ ಭಾಷೆ, ಸಹಜತೆಯ ಪ್ರಸಂಗಗಳು ಅನನ್ಯ ಮತ್ತು ಅನುಪಮ. ಒಂದು ಉತ್ಕೃಷ್ಟ ಕೃತಿಯನ್ನು ಓದಿ ಸವಿಯಲು ಅವಕಾಶ ದೊರಕಿಸಿಕೊಟ್ಟ ಅವರಿಗೆ ನೇಹದಕ್ಕರೆಯ ಸವಿ ನೆನಕೆಗಳು. ತಮ್ಮಿಂದ ಮತ್ತಷ್ಟು ಕೃತಿಗಳು ಹುಲುಸಾಗಿ ಹೊರಹೊಮ್ಮಲಿ. ಶುಭ ಹಾರೈಕೆಗಳೊಂದಿಗೆ., ಸಾಹಿತ್ಯಾಭಿಮಾನಿ., ಎಸ್ ಶ್ರೀಧರಮೂರ್ತಿ ಶಿವಜಯಸುತ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಹಲವು ಕಥೆಗಳಿರುವುದರಿಂದ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಆದರೆ ನನ್ನ ಮನಸ್ಸಿಗೆ ಬಿಳಿಗಿರಿ ರಂಗಸ್ವಾಮಿಯ ಪಾತ್ರ ಮನದ ಕದವನ್ನು ತಟ್ಟಿ ಏಳಿಸುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಗ್ರಾಮೀಣ ಪ್ರದೇಶದ ಸಹಜ ಚಿತ್ರಣ, ಭಾಷಾ ಸೊಗಡನ್ನು ಸವಿಯಲು ಬಯಸುವವರಿಗೆ ಅತ್ಯುತ್ತಮ ಪುಸ್ತಕ ಎಂಬುದು ನನ್ನ ಭಾವನೆಯಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
167
Views
7 Months
Since posted

Voting Closed!

Scroll to Top