ಪುಸ್ತಕದ ಶೀರ್ಷಿಕೆ: ಸಾರ್ಥಕ ಜೀವನಕ್ಕೆ ಕಗ್ಗೊಪದೇಶ
ಪುಸ್ತಕದ ಲೇಖಕರು: ಪ್ರಭಾಕರ ಶೆಟ್ಟಿ ಕೊಂಡಳ್ಳಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರೀಮತಿ ಕುಸುಮವತಿ ಸಿ ಶೆಟ್ಟಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಆಧುನಿಕ ಭಗವದ್ಗೀತೆ ಎನಿಸಿಕೊಂಡ ಡಿ.ವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗಗಳನ್ನು ಈಗಿನ ಜೀವನಶೈಲಿಯೊಂದಿಗೆ ತಾಳೆ ಹಾಕುತ್ತಾ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುವ ಕಗ್ಗದೊಳಗಿನ ಕಬ್ಬಿನ ರಸವನ್ನು ಹೀರಿ ಕುಡಿಸುವ ಲೇಖಕರ ಪ್ರಯತ್ನವೇ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ. ಲೇಖಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಒಬ್ಬ ಸಾಹಿತಿ, ಅಧ್ಯಾಪಕ, ಅದ್ಭುತ ವಾಗ್ಮಿ,ಚಿಂತಕರು ಮಾತ್ರವಲ್ಲದೆ ಮಂಕುತಿಮ್ಮನ ಕಗ್ಗಗಳನ್ನು ಕಂಠಸ್ಥ ಮಾಡಿಕೊಂಡಿರುವ ಹಾಗೂ ಅದನ್ನು ಅದ್ಭುತವಾಗಿ ವ್ಯಾಖ್ಯಾನಿಸಬಲ್ಲ ಲೇಖಕರಾಗಿದ್ದಾರೆ.ಈ ಕೃತಿಯೊಳಗೆ ನಾವು ಹೊಕ್ಕಂತಲ್ಲ ನಮಗೆ ಅಲ್ಲಿ ಭಗವದ್ಗೀತೆಯ ಸಾರ ಸರ್ವಸ್ವದೊಂದಿಗೆ, ಡಿವಿಜಿಯವರ ಮುಕ್ತಕಗಳೊಂದಿಗೆ ಈ ಕೃತಿಯ ನಿರೂಪಣೆ ತುಳುಕು ಹಾಕಿಕೊಂಡಿರುವುದನ್ನು ಕಾಣಬಹುದು.ಹಾಗಾಗಿ ಇದೊಂದು ಮೇರು ಕೃತಿಯಾಗಿ ಹೊರಹೊಮ್ಮಿದೆ. ಜೊತೆಗೆ ಶಿವಪ್ಪನವರ, ನಿಜಗುಣಕವಿಗಳ, ಬಸವಣ್ಣ, ಕುವೆಂಪು ಮುಂತಾದ ಕವಿ ಶ್ರೇಷ್ಠರ ವಚನಾಮೃತ ಗಳನ್ನು ಸವಿಯುವ ಅವಕಾಶ ಇಲ್ಲಿ ನಮಗೆ ಲಭ್ಯವಾಗುತ್ತದೆ. ನಿನ್ನ ಜೀವಿತವೆಲ್ಲ ನಿನ್ನ ಕೈ ಮಾಲ್ಕೆಯೇಂ l ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ l ಅನ್ನವಿಡುವವರು ತಿಳಿವನೀವರ್ ಒಡನಾಡುವರು ನಿನ್ನ ಬಾಳ್ಗವರಿರರೇ ಮಂಕುತಿಮ್ಮ l ಎಂಬ ಡಿವಿಜಿಯವರ ಸಾಲುಗಳನ್ನು ವಿಶ್ಲೇಷಿಸುತ್ತಾ ನಮ್ಮ ಜೀವನದಲ್ಲಿ ಗುರುಗಳ ಮಾತಾ ಪಿತೃಗಳ,ಬಂಧು ಬಾಂಧವರ, ಸ್ನೇಹಿತರ, ಸಮಾಜದ ಋಣವಿದೆ ಎಂಬುದನ್ನು ಕವಿ ಸೊಗಸಾಗಿ ನಿರೂಪಿಸಿದ್ದಾರೆ. ಮತ್ಸರಕ್ಕೆ ಮಹಾಭಾರತವನ್ನು ಉದಾಹರಿಸುವ ಕೃತಿಕರ್ತರು ವಿವೇಕದಿಂದ ಅಸೂಯೆಯನ್ನು ಗೆಲ್ಲಬಹುದು ಎನ್ನುತ್ತಾರೆ. ಜೀವನ ಸಾರ್ಥಕತೆಯ ಅನೇಕ ಮಜಲುಗಳನ್ನು ನಮ್ಮ ಮುಂದೆ ತೆರೆದಿಡುವ ಕೃತಿ ನಮ್ಮ ಜೀವನದಲ್ಲಿ ಅಭಿನಯಿಸಲು ಮತ್ತು ಅನುಭವಿಸಲು ಹೀಗೆ ಎರಡು ಅವಕಾಶಗಳನ್ನು ತೋರಿಸುತ್ತದೆ. ಅಭಿನಯಿಸುವವರಿಗೆ ಅನುಭವ ಸಿಗಲಾರದು ಎಂಬುದನ್ನು ತಿಳಿಸಿಕೊಡುತ್ತದೆ. ಆತ್ಮ ಜ್ಯೋತಿಯನ್ನು ಪ್ರೀತಿ ಎಂಬ ತೈಲದೊಂದಿಗೆ ನಂಬಿಕೆಯ ಬತ್ತಿ ಹಾಕಿ ಸದಾ ಬೆಳಗುತ್ತಿರಬೇಕು ಎಂದು ಮಾರ್ಮಿಕವಾಗಿ ಬರೆಯುತ್ತಾರೆ ಲೇಖಕರು. ಸೃಷ್ಟಿಯ ಸಕಲ ಜೀವರಾಶಿಯನ್ನು ಪ್ರೀತಿಸುವುದು ಹುಟ್ಟಿನೊಂದಿಗೆ ಬಂದಿರುವ ಚಟ.ಉಳಿದ ಚಟಗಳಿಂದಾಗಿ ಪ್ರೀತಿಸುವ ಚಟ ದೂರವಾಗುತ್ತಿರುವುದಕ್ಕೆ ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ. ಅನಾಶ್ರಿತಃ ಕರ್ಮ ಫಲಂ ಕಾರ್ಯಂ ಕರ್ಮ ಕರೋತಿ ಯಃ l ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾ ಕ್ರಿಯಃ l ಕರ್ಮಫಲಗಳನ್ನು ಆಶ್ರಯಿಸದೆ ಮಾಡಬೇಕಾದ ಕರ್ತವ್ಯಗಳನ್ನು ಮಾಡುತ್ತಲೇ ಇರುವವನು, ನಿಜವಾದ ಸನ್ಯಾಸಿ ಮತ್ತು ಯೋಗಿ. ಅಗ್ನಿಯನ್ನು ತ್ಯಜಿಸಿದವನು, ಕರ್ಮ ಮಾಡದವನು ಮಾತ್ರ ಯೋಗಿಯಲ್ಲ ಎಂಬುದು ಇದರ ಅರ್ಥ. ಅಂದಿಗಂದಿನ ಕೆಲಸ ಸಂದಿನಿತರಲಿ ತೃಪ್ತಿ ಕುಂದದುಬ್ಬದ ಮನಸು ಬಂದುದೇನಿರಲಿ ಬಂಧುಮತಿ ಲೋಕದಲಿ ಮುಂದೃಷ್ಟಿ ಪರಮದಲಿ ಹೊಂದಿರಲು ಅದು ಪುಣ್ಯ ಮಂಕುತಿಮ್ಮ l ಇದನ್ನೇ ಈ ಕೃತಿಯಲ್ಲಿ ಲೇಖಕರು 'ಶರೀರ ಮಾಧ್ಯಂ ಖಲು ಧರ್ಮ ಸಾಧನಂ' ಎನ್ನುತ್ತಾ ಧರ್ಮದ ಬಗ್ಗೆ ಎಚ್ಚರವಿರಬೇಕು ಎಂದು ಸೊಗಸಾಗಿ ವಿವರಿಸುತ್ತಾರೆ. ಸಮುದ್ರ ಮಥನದಂತೆ ಮನಸ್ಸನ್ನು ಮಥಿಸಿದರೂ ಅಲ್ಲಿ ವಿಷ ಅಮೃತ ಎರಡೂ ಬರುತ್ತದೆ. ಸಚ್ಚಾರಿತ್ರ್ಯವೆಂಬ ಅಮೃತವನ್ನಷ್ಟೇ ನಾವು ಸ್ವೀಕರಿಸಬೇಕು ಎನ್ನುತ್ತಾರೆ. ಅರ್ಥಾತ್ ಅಂದು ಕೃಷ್ಣನ ಮುಖವಾಣಿಯಿಂದ ಹೊರಟ ಭಗವದ್ಗೀತೆ ಎಂಬ ಮಹಾಪ್ರಸಾದವನ್ನು ವ್ಯಾಸಮುನಿಗಳು ಆಗಿನ ಕಾಲಮಾನಕ್ಕನುಗುಣವಾಗಿ ಕೃತಿಗೆ ಇಳಿಸಿ ಜಗತ್ತಿಗೆ ಹಂಚಿದರು. ಕಾಲಾಂತರದಲ್ಲಿ ಡಿವಿಜಿಯವರು ಅದೇ ವ್ಯಾಸ ಪ್ರಸಾದವನ್ನು ಮಂಕುತಿಮ್ಮನ ಕಗ್ಗದ ರೂಪದಲ್ಲಿ ಅಂದಿನ ಜನಮಾನಸಕ್ಕೆ ಹಂಚಿರಬಹುದು ಎನಿಸುತ್ತದೆ. ಇವತ್ತಿನ ಆಧುನಿಕ ಜನ ಜೀವನಕ್ಕೆ ಹೊಂದುವಂತೆ ಲೇಖಕರು ಡಿವಿಜಿಯವರ ಕಗ್ಗದ ಪ್ರಸಾದವನ್ನು ಹಂಚುತ್ತಿರುವರೇನೋ ಎಂಬಂತೆ ಭಾಸವಾಗುತ್ತದೆ. ಕೃತಿಯ ಒಳಹೊಕ್ಕು ನೋಡಿದಾಗ ಅಲ್ಲಿ ಪಾರಮಾರ್ಥಿಕತೆ, ತತ್ತ್ವಜ್ಞಾನ,ವಿಜ್ಞಾನ ಇವುಗಳ ಮೇಳಯಿಸುವಿಕೆ ನಮಗೆ ಕಾಣಿಸುತ್ತದೆ.ಕರ್ಮ ಸಿದ್ದಾಂತದ ಆಧಾರದಲ್ಲಿ ವಾಸ್ತವಿಕತೆಗೆ ಹೊಂದಿಕೊಂಡು ಹೇಗೆ ಬದುಕಬಹುದು ಎಂಬುದನ್ನು ಇಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ . ದೇಹ ಶೃಂಗಾರಕ್ಕೆ ಮಹತ್ವ ಕೊಡುವಂತೆ ಒಳ್ಳೆಯ ಸಂಸ್ಕಾರದಿಂದ ನಮ್ಮೊಳಗನ್ನು ಸಂಗ್ರಹಿಸಿಕೊಳ್ಳಬೇಕು ಎಂಬುದನ್ನು ನಯವಾಗಿ ತಿಳಿಸುತ್ತಾರೆ. ಸಾಮಾಜಿಕ ಜೀವನ ವ್ಯವಸ್ಥೆಯಲ್ಲಿ ಬದುಕುತ್ತಾ ಹೇಗೆ ಪರಮ ಪದವನ್ನೇ ಗುರಿಯಾಗಿಸಿಕೊಂಡು ಕರ್ಮ ಬಂಧನಕ್ಕೆ ಅಂಟಿಕೊಳ್ಳದೆ ಭಗವಂತನಲ್ಲಿ ಸಂಪೂರ್ಣ ಶರಣಾಗತನಾಗಿ ಜನ್ಮ ಸಾರ್ಥಕ ಗೊಳಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಮಾರ್ಮಿಕವಾಗಿ ವಿವರಿಸುತ್ತಾರೆ. ದೇಹ ಆತ್ಮಗಳ ಸಂಬಂಧವನ್ನು ಕಗ್ಗದ ವರ್ಣನೆಯೊಂದಿಗೆ ವಿವರಿಸುವ ಕೃತಿಕರ್ತರು "ದೇಹವೆಂಬುದು ಕುದುರೆ ಆತ್ಮನದರಾರೋಹಿ ವಾಹನವನುಪವಾಸವಿರಿಸೆ ನಡೆದೀತೇ" ಎಂಬ ಕಗ್ಗದ ನುಡಿಯಂತೆ ದೇಹ ಮತ್ತು ಆತ್ಮಗಳ ನಡುವೆ ಸಮರಸವನ್ನು ಸಾಧಿಸುತ್ತಾ ಆತ್ಮದ ನುಡಿಯನ್ನಾಲಿಸಿ ದೇಹವನ್ನು ಅದಕ್ಕೆ ಒಡ್ಡಿಕೊಂಡಾಗ ಜೀವನ ಪಾವನವಾಗುತ್ತದೆ ಎನ್ನುತ್ತಾರೆ. ಒಂದು ಕಡೆ "ಓರ್ವನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ" ಎಂಬ ಡಿವಿಜಿಯವರ ಮುಕ್ತ ಕವನ್ನು ವಿವರಿಸುತ್ತಾ ಇನ್ನೊಮ್ಮೆ "ಓರ್ವನೇ ನಿಲುವೇ ನೀ ಉತ್ಕಟ ಕ್ಷಣಗಳಲಿ ಧರ್ಮ ಸಂಕಟಗಳಲಿ ಜೀವ ಸಮರದಲಿ" ಎನ್ನುತ್ತಾ ಎಲ್ಲರೊಳಗೊಂದಾಗಿ ಇದ್ದೂ ಇಲ್ಲದಂತೆ ಬದುಕುವ ಕಲೆಯನ್ನು ನಮಗೆ ಕಲಿಸುತ್ತಾರೆ. ತಾತ್ಪರ್ಯವಾಗಿ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡು ಭಗವದಿಚ್ಛೆಗೆ ತಲೆಬಾಗುತ್ತಾ ಜೀವನ ಸಾಗಿಸಬೇಕು ಎಂಬ ಸಂದೇಶ ಗೀತೆಯ ಸಾರ ಸರ್ವಸ್ವದಂತೆ ಭಾಸವಾಗುತ್ತದೆ. ಜೀವನದಲ್ಲಿ ತೃಪ್ತಿ ಭಗವಂತನೆಡೆಗೆ ದೃಷ್ಟಿ ಎಂದೆಂದು ತಿಳಿಸುವ ಕೃತಿ 'ತನಗಾಗಿ ಬದುಕಿದ್ದರೆ ಬದುಕಿದ್ದು ಸತ್ತಂತೆ' ಎನ್ನುವ ನರಸಿಂಹಯ್ಯನವರ ನುಡಿಯನ್ನು ಜ್ಞಾಪಿಸುತ್ತಾ 'ಪರೋಪಕಾರಾರ್ಥಂ ಇದಂ ಶರೀರಂ 'ಎಂಬ ಧರ್ಮ ಸೂಕ್ಷ್ಮವನ್ನು ಅರಿವಿಗೆ ತರುತ್ತದೆ. ಒಟ್ಟಾರೆ ಇದೊಂದು ಎಲ್ಲ ಕವಿ ಶ್ರೇಷ್ಠರ ವಿಚಾರಧಾರೆಗಳ ಸಾರ ಸಂಗ್ರಹ ಎನ್ನಬಹುದು. "ಎದೆಯ ದನಿಗೆ ಕಿವಿಗೊಡುವುದೇ ಶ್ರೇಷ್ಠ ಧರ್ಮ" ಎಂಬ ಕುವೆಂಪು ವಾಣಿ ಒಂದೆಡೆ ಸಿಕ್ಕರೆ 'ಆತ್ಮಸಾಕ್ಷಿ ಗಿಂತ ಗುರು ಬೇರೆ ಇಲ್ಲ ಆತ್ಮಜ್ಞಾನಕ್ಕಿಂತ ಮಿಗಿಲಾದ ಜ್ಞಾನ ಇಲ್ಲ' ಎನ್ನುತ್ತಾ ಹೊರ ಜಗದಲೇನಿಹುದು ಒಳಗಿಳಿದು ನೋಡು ಎಂಬ ಧಾರ್ಮಿಕರ ನುಡಿಗೆ ಹಿಡಿದ ಕೈಗನ್ನಡಿಯಂತಿದೆ. ತತ್ಪರ್ಯವಾಗಿ ಹೇಳುವುದಾದರೆ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಎಂಬ ಆಧುನಿಕ ದಾರ್ಶನಿಕರ ಜ್ಞಾನ ಭಂಡಾರದಿಂದ ಹೊರಬಂದ ಶ್ರೇಷ್ಠ ಕೃತಿ "ಸಾರ್ಥಕ ಜೀವನಕ್ಕೆ ಕಗ್ಗೋಪದೇಶ "ಎಂದರೆ ತಪ್ಪಾಗಲಾರದು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
"ಧರ್ಮ ಎಂಬುದು ಧೃ ಎಂಬ ಧಾತುವಿನಿಂದ ಬಂದಿರುವುದು.ಧೃ ಎಂದರೆ ಧರಿಸುವದು, ಆಧಾರ ಕೊಡುವುದು ಎಂದರ್ಥ.ಯಾವುದು ಸಕಲ ಜೀವಿಗಳ ಉದ್ಧಾರಕ್ಕೆ ಆಧಾರವಾಗಿರುತ್ತದೆಯೋ, ಅದೇ ಧರ್ಮ."
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
"ಎಲ್ಲಾ ವಯೋಮಾನದವರಿಗೂ ಸೂಕ್ತ.ಹೆಚ್ಚಾಗಿ ವಿದ್ಯಾರ್ಥಿ ದೆಸೆಯಲ್ಲಿರುವವರು ಓದಿ ಅಳವಡಿಸಿಕೊಂಡರೆ ಉತ್ತಮ."
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.