Submission 1883

ಪುಸ್ತಕದ ಶೀರ್ಷಿಕೆ: ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು

ಪುಸ್ತಕದ ಲೇಖಕರು: ಕೋಟಿಗಾನಹಳ್ಳಿ ರಾಮಯ್ಯ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ನೀ. ಸುನೀತಾನಂದನ (ಪೃಥ್ವಿ)

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಈ ಕೃತಿಯ ಕುರಿತು ವಿಮರ್ಶೆ ಮಾಡುವ ಅರ್ಹ ಜ್ಞಾನ ನನಗಿದೆ ಎಂದರೆ ಅದು ನನ್ನ ಹುಸಿ ಪೋಷಾಕು ಎಂದೇ ಭಾವಿಸುವೆ. ಯಾಕೆಂದರೆ ಇನ್ನೂ ಎರೆಯನಾಗಿ ಈ ಕೃತಿಯನ್ನು, ಅದರಲ್ಲಿನ ಸಂಗತಿಗಳನ್ನು ವಿಮರ್ಶೆಗೆ ಒಳ ಪಡಿಸುವ ಪರಿಪಕ್ವತೆ ನನ್ನಲ್ಲಿ ಇನ್ನೂ ಇನನೋದಯವಾಗದ ಕಿರಣಗಳು. ಆದರೆ ಈ ಕೃತಿಯ ಬಗ್ಗೆ ನನ್ನದೇ ಒಂದು ಚೊಕ್ಕ, ಚಿಕ್ಕ ಒಳನೋಟ ಅಥವಾ ಅನಿಸಿಕೆ ಇದೆಂದು ನಾನೇ ನುಡಿದು ಸಮರ್ಥಿಸಿಕೊಳ್ಳುತ್ತೇನೆ. ಇದನ್ನು ಬರೆಯಲು ನನಗೆ ಬಹಳಾ ದಿನಗಳಿಂದ ಒಂದು ಎದೆಯಂಜಿಕೆಯಿತ್ತು. ಆ ತೆರೆಯ ಮುಸುಕನ್ನು ಕೊಂಚ ಮಟ್ಟಿಗೆ ತಿಳಿಗೊಳಿಸಿದ ಇನ್ನೊಂದು ಪುಸ್ತಕ ಭಗತ್ ಸಿಂಗರ ‘Why I am an atheist’ ಎಂಬ ಪ್ರಬಂಧ ಎಂದು ಹೇಳ ಬಯಸುತ್ತೇನೆ. ಇನ್ನು ತಡ ಮಾಡದೆ ನನ್ನ ಎದೆಯಾಳದ ನುಡಿಯಾಕ್ಷರಗಳನ್ನು ಹೇಳಲಾರಂಭಿಸುವೆ. “ದೈಹಿಕ ಕೊಲೆಗಿಂತ ಮಾನಸಿಕ ಹಿಂಸೆ ಅತ್ಯಂತ ಅಪಾಯಕಾರಿ ಮತ್ತು ಹೆಚ್ಚು ಅಗ್ಗದಿ ಕೈಗೆಟುಕುವ ವಸ್ತು”. ಏನಂತೀರಿ? . ಹೌದು ಅನ್ನೊದಾದ್ರೆ, ನಿಮಗೆ ನಿಮ್ಮದೇ ಉದಾಹರಣೆಗಳು ಅನುಭವಗಳು ಸಾಕಷ್ಟಿವೆ. ಅದೇ ರೀತಿ ನನ್ನ ಬಳಿ, ಉತ್ತಮ ಉದಾಹರಣೆ ಒಂದಿದೆ. ಅದು ಅನುಭವದ್ದಲ್ಲ, ಓದಿದ್ದು.! ಈ ಮಾತುಗಳು ಅದರಲ್ಲಿನ ಸನ್ನಿವೇಶಗಳು ಮತ್ತು ಒರ್ವ ಧೀಮಂತ ನಾಯಕರ ಮಾನಸಿಕ ಖಿನ್ನತೆಗೆ ಒಳಗಾಗಿ, ಒಂಟಿಯಾಗಿ ತನ್ನ ರೂಮಿನಲ್ಲ ಕಣ್ಣೀರಿಟ್ಟ ಕಥೆ. ನೈಜ ಘಟನೆಗಳ ಸಣ್ಣ ಗಂಟು ಮೂಟೆ. ಬರೆದವರ ಹೆಸರು ರತ್ತೂ. ಹಾಗೆ ಖಿನ್ನತೆಗೆ ಒಳಗಾದ ವ್ಯಕ್ತಿ ಯಾರೆಂದರೆ, ಅವರನ್ನು ಎಲ್ಲರೂ ಪ್ರೀತಿಯಿಂದ ‘ಬಾಬಾ ಸಾಬ್’ ಎಂದು ಕರೆಯುತ್ತಾರೆ. ಈ ಎಲ್ಲ ಸಂಗತಿಗಳು ಪದಗಳಾದದ್ದು ‘ರೆಮಿನ್ಸಸ್ ಅಂಡ್ ರಿಮೆಂಬರೆನ್ಸ್ ಆಫ್ ಡಾ|| ಬಿ. ಆರ್. ಅಂಬೇಡ್ಕರ್.’ ಎನ್ನುವ ಕೃತಿಯಲ್ಲಿ. ಲೇಖಕರ ಪೂರ್ತಿ ಹೆಸರು ‘ನಾನಾಕ್ ಚಂದ್ ರತ್ತೂ’. ಆದರೆ , ನಾನು ಈ ಮೂಲ ಕೃತಿಯನ್ನು ಓದಿಲ್ಲ ಅದರ ಅನುವಾದಿತ ಕೃತಿ ‘ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು’ ಎನ್ನುವ ಕೃತಿಯನ್ನು ಓದಿದ್ದೇನೆ, ಇದರ ಅನುವಾದಕರು 'ಕೋಟಿಗಾನಹಳ್ಳಿ ರಾಮಯ್ಯ’ ಸರ್. ಇಂದು ಅದನ್ನೇ ಮಾನದಂಡವಾಗಿರುಕೊಂಡು, ನನ್ನ ಎದೆಯಾಳವನ್ನು ಬಿಚ್ಚಿಡುತ್ತೇನೆ. ಇದು ಈ ಅನುವಾದಿತ ಕೃತಿಯ ಒಂದು ಸಣ್ಣ ಒಳನೋಟ. ನನ್ನ ಕಣ್ಣಂಚಿನ ದೃಷ್ಠಿಕೋನ ಅಷ್ಟೆ..! ಮೊದಲಿಗೆ ಈ ರತ್ತೂ ಯಾರು? ಅವನಿಗೂ, ಬಾಬಾ ಸಾಹೇಬರಿಗೂ ಇರುವ ಸಂಬಂಧ ಏನು ಅಂಥ ಹೇಳೋದಾದ್ರೆ. ಅಂಬೇಡ್ಕರ್ ಅವರು ತಮ್ಮ ಕಾನೂನು ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟು, ನಂ. 26 ಅಲಿಪುರ ಬಂಗಲೆಯಲ್ಲಿದ್ದಾಗ, ಅವರ ಬಳಿ ಕೆಲಸಕ್ಕೆ... ಅನ್ನೊದುಕ್ಕಿಂತ ಅವರ ಸೇವೆ ಮಾಡುವ ಆಸೆಯಿಂದ ಅವರ ಬರಹಗಳನ್ನು ಟೈಪ್ ಮಾಡವ ಕಾರ್ಯಕ್ಕೆ, ಬಾಬಾ ಸಾಹೇಬರಿಗೆ ಕೊನೆಯ ದಿನಗಳಲ್ಲಿ ಜೊತೆಗಿದ್ದ ವ್ಯಕ್ತಿ. ಆತ ಕಂಡ ಅಂಬೇಡ್ಕರರನ್ನು, ಬಹುಶಃ ಯಾರೂ ಕಂಡಿಲ್ಲವೇನೋ..?! ನನ್ನ ನಿಮ್ಮ ಊಹೆಗೂ ನಿಲುಕಲಿಲ್ಲವೇನೋ..?! ನಮಗೆಲ್ಲ ಬಾಬಾ ಸಾಬ್ ಅಂದ್ರೆ ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾ ನಾಯಕ... ಎಂದಷ್ಟೆ ತಿಳಿದ ವಿಚಾರ. ಇನ್ನೂ ಕೆಲವರಿಗೆ ಅಂಬೇಡ್ಕರ್ ಜಯಂತಿಯಂದು ತಮಟೆ ಝೆಂಕಾರ, ಮೆರವನಿಗೆ ದಿಬ್ಬಣಗಳಲ್ಲಿ ಒಂದು ಪೋಟೊವನ್ನಿಟ್ಟು ಅಲಂಕಾರ ಮಾಡಿ ಅದನ್ನು ಊರೆಲ್ಲಾ ಪ್ರದರ್ಶಿಸುವ ವಸ್ತು. ಆದ್ರೆ ಅವರು ಒಬ್ಬ ‘ಉತ್ತಮ ವಯಲಿನಿಸ್ಟ್’ ಅಂತ ಎಷ್ಟು ಜನರಿಗೆ ಗೊತ್ತು ಹೇಳಿ? ಇಂತಹ ಹಲವು ಸಂಗತಿಗಳು ಪ್ರಸಂಗಗಳನ್ನು ತೆರೆಡಿಡುತ್ತದೆ ಈ ಕೃತಿ. ರತ್ತೂ 1940 ರಲ್ಲಿ, ವೆಸ್ಟರ್ನ್ ಕೋಟ್ ಹೋಟಲಿನಲ್ಲಿ ಮೊದಲ ಬಾರಿ ಬಾಬಾ ಸಾಹೇಬರನ್ನು ಭೇಟಿ ಮಾಡಿದ್ದ. ಆದರೆ ಅದು ಕೇವಲ ಎರಡು ನಿಮಿಷಗಳಷ್ಟೆ. ಆ ಭೇಟಿ ರತ್ತೂವನ್ನು ಬಾರಿ ಬಾರಿ ಅವರನ್ನು ಭೇಟಿಯಾಗುವಂತೆ ಮಾಡಿತ್ತು. ಪ್ರತಿ ಬಾರಿ, ಅಂಬೇಡ್ಕರರು ವೆಸ್ಟರ್ನ್ ಕೋಟ್ ಹೋಟಲಿಗೆ ಬಂದಾದ ರತ್ತೂ ತಪ್ಪದೆ ಭೇಟಿ ಮಾಡುತ್ತಿದ್ದ. ಅಂಬೇಡ್ಕರ್ ಎನ್ನುವ ಮಹಾ ಶಿಖರ ರತ್ತೂವನ್ನು ಐಯಸ್ಕಾಂತದಂತೆ ಸೆಳೆದಿತ್ತು. ಆದರೆ ಆ ಭೇಟಿಗಳೇಲ್ಲ, ‘ಎ ಫನ್ ಬಾಯ್ ಮೊಮೆಂಟ್ಸ್’ ಹಾಗಿದ್ದವು. ಒಂದು ದಿನ, ಈ ಎಲ್ಲಾ ಭೇಟಿಗಳನ್ನು ಮೀರಿ ರತ್ತೂವಿಗೆ ಜೀವನದಲ್ಲಿ ಇನ್ನೊಂದು ಭೇಟಿಯಾಯಿತು. ಅದು 1951 ಸೆಪ್ಟೆಂಬರ್, 27. ಬಾಬಾ ಸಾಹೇಬರು ತಮ್ಮ ಕಾನೂನಿನ ಪದವಿಗೆ ರಾಜಿನಾಮೆ ಕೊಟ್ಟು, ತಮ್ಮ 22 ಆರ್ಡಿಂಜ್ ಅವೆನ್ಯೂ ಬಂಗಲೆಯ, ಹೊರಗೆ ಲಾನಿನಲ್ಲಿ ಕೂತಿದ್ದಾರೆ. ಆ ರಾಜಿನಾಮೆಗೆ ಸಿಡಿಲು ಬಡಿದದ್ದು ಅವರ ಎಲ್ಲಾ ಸ್ನೇಹಿತರಿಗೆ, ಅನುಯಾಯಿಗಳು, ಎಲ್ಲರೂ ಅದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅದೇ ಲಾನಿನಲ್ಲಿ. ಅದನ್ನು ದೂರದಿಂದಲೇ ನೋಡುತ್ತಾ ನಿಂತಿದ್ದ ರತ್ತೂ. ಬಾಬಾ ಸಹೇಬರ ಒಳ ನೋಟ ಅಲ್ಲಿದ್ದ ಯಾರಿಗೂ ಅರ್ಥವಾಗಿರಲಿಲ್ಲ. ಅದನ್ನು ಗಮನಿಸಿದ ರತ್ತೂ ಹತ್ತಿರ ಹೋಗಲು ಹಿಂಜರಿದ. ಕಾರಣ ‘ಅವರು ಬಾಬಾ ಸಾಹೇಬರಿಗೆ ಯಾರೂ ಆಗಿರಲಿಲ್ಲ, ಆದರೆ ಮುಂದೆ ರತ್ತೂ ಅವರಿಗೆ ಅಷ್ಟೇ ಮುಖ್ಯ ವ್ಯಕ್ತಿಯಾದ ಕಥೆಯೊಂದಿದೆಯಲ್ಲಾ ಅದು ಗಮನಾರ್ಹ ಸಂಗತಿ. ಅವತ್ತು ಬಾಬಾ ಸಾಹೇಬರು ರತ್ತೂವನ್ನು ಕರೆದು ಕೇಳಿದ ಆ ಸಂಗತಿ ಅವನ ಜೀವನವನ್ನೇ ಬದಲಾಯಿಸುವುದೆಂದು, ಅವನೂ ಸಹ ಊಹಿಸಿರಲಿಲ್ಲ. ಬಾಬಾ ಸಾಹೇಬರು ಬರೆದಿರುವ ಲೇಖನಗಳನ್ನು ಟೈಪ್ ಮಾಡಲು ರತ್ತೂವನ್ನು ಕೇಳುತ್ತಾರೆ, ಅದಕ್ಕೆ ಖುಷಿಯಿಂದ ಒಪ್ಪಿಕೊಂಡ ರತ್ತೂ. ಆದರೆ ಕೊನೆಯದಾಗಿ ಬಾಬಾ ಸಾಹೇಬರು ಒಂದು ಮಾತು ಹೇಳುತ್ತಾರೆ. “ನೋಡು ಅದು ನೀನಂದುಕೊಂಡಿರುವಷ್ಟು ಸುಲಭದ ಕೆಲಸವಲ್ಲ” ಎಂದು. ಅದು ಎಚ್ಚರಿಕೆಯ ಮಾತುಗಳಾಗಿದ್ದವು. ಅದಕ್ಕೆ ಕಾರಣನವೂ ಇದೆ. ಒಬ್ಬ ಸರಾಸರಿ ವ್ಯಕ್ತಿ ಒಂದು ರಾತ್ರಿಯಲ್ಲಿ ಎಷ್ಟು ಪುಟಗಳನ್ನು ಬರೆಯಬಹುದು, ಐದರಿಂದ ಆರು, ಇನ್ನೂ ಉತ್ತಮ ವೇಗದ ಬರಹಗಾರನಾದರೆ ಆರರಿಂದ ಹತ್ತು. ಆದರೆ ಬಾಬಾ ಸಾಹೇಬರು ಒಂದು ರಾತ್ರಿಯಲ್ಲಿ ನೂರಾರು ಪೇಜುಗಳನ್ನು ಬರೆಯುತ್ತಿದ್ದರು ಅಂತ ಹೇಳಿದರೆ ನಂಬುತ್ತೀರಾ? ಹೌದು ಅದನ್ನು ರತ್ತೂ ತನ್ನ ಕೃತಿಯಲ್ಲಿ ಬರೆದಿದ್ದಾರೆ. ತನ್ನ ಆಫೀಸಿನ ಕೆಲಸ ಮುಗಿಸಿ, ಸಂಜೆ ವೇಳೆಗೆ ಅಲೀಪುರ ಬಂಗಲೆಗೆ ಬಂದು, ನಡುರಾತ್ರಿವರೆಗೂ ಬಾಬಾ ಸಹೇಬರ ಲೇಖನಗಳನ್ನು ಟೈಪ್ ಮಾಡಿ ಹಿಡುವುದು ರತ್ತೂವಿನ ಕೆಲಸ. ಹಾಗೆಯೇ ಬಾಬಾ ಸಾಹೇಬರಿಗೆ ಬಂದ ಪೋಸ್ಟ್’ಗಳಿಗೆ ಉತ್ತರ ಬರೆಯುವ ಕೆಲಸವೂ ರತ್ತೂವಿನದ್ದೆ. ಇಂತಹ ಸರಣಿ ಘಟನೆಗಳು ಕಣ್ಣಿಗೆ ಕಟ್ಟಿದಹಾಗೆ ಮೂಲ ಕೃತಿಯಲ್ಲಿ ಇದೆಯೋ ಇಲ್ಲವೋ, ಆದ್ರೆ ಅನುವಾದಿದ ಕೃತಿಯಲ್ಲಿದೆ ಅದನ್ನು ಬರವಣಿಗೆಯಲ್ಲಿ ಕಾಣಬಹುದು, ನುಡಿಗಳ ಮೂಲಕ ಕಲ್ಪನಾ ದೃಶ್ಯಗಳನ್ನು ಕಣ್ಣಂಚಿನಲ್ಲಿ ಕಟ್ಟುವಂತೆ ಬಣ್ಣಿಸಿದ್ದಾರೆ ಅನುವಾದಕರು. 14 ಜುಲೈ, 1951ರಲ್ಲಿ. ರತ್ತೂ, ಕಂಡು, ಕೇಳಿದ ಆ ವೈಲಿನ್ ದೃಶ್ಯ ಓದುವಾಗಳೇ ಯಾರೊ ಹಿಂಬದಿಯಲ್ಲಿ ವೈಲಿನ್ ನುಡಿಸಿದಂತೆ ಬಾಸವಾಗುತ್ತೆ, ಓದುಗರನ್ನು ಆ ಮನಸ್ಥಿತಿಗೆ ಕರೆದೊಯ್ಯುವಲ್ಲಿ ಅನುವಾದಕರು ಗೆದ್ದಿದ್ದಾರೆ ನಂತರ ಬಾಬಾ ಸಾಹೇಬರ ಒಂಟಿತನ, ಕೋಣೆಯಲ್ಲಿ ನೆಡೆದ ಸಂಗತಿಗಳು, ಅವರ ಮಾನಸಿಕ ಖಿನ್ನತ, ಅನಾರೋಗ್ಯ ಘಟನೆಗಳು, ಇವೆಲ್ಲವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅಂಬೇಡ್ಕರರ ದೃಷ್ಠಿ ವೈಫಲ್ಯವು, ತೀವ್ರವಾಗಿ ಕಾಡುತ್ತಿದ್ದ ಕಾಯಿಲೆ ಆದರೆ ಅವರಿಗೆ ಅದಕ್ಕಿಂತ ಹೆಚ್ಚು ಕಾಡಿದ ಸಂಗತಿಯನ್ನು ಅವರು ಈಗೆ ಹೇಳಿದ್ದಾರೆ. ‘ನನ್ನ ಕಣ್ಣಿನ ದೃಷ್ಠಿ ಕಳೆದು ಹೋದರೆ ಬದುಕು ಪ್ರಯೋಜನವಿಲ್ಲ, ಓದಲು ಬರೆಯಲು ಆಗದಿಂದರೆ ನಾನು ಬರೆಯಬೇಕೆಂದಿರುವ ಕೃತಿಗಳ ಕಥೆ ಏನು?’. ಇದು ಅವರ ಮನದಾಳದ ಮಾತಾಗಿತ್ತು. ಒಟ್ಟಾರೆ ಈ ಕೃತಿ, ಬಾಬಾ ಸಾಹೇಬರ ಕಥೆ ಅನ್ನೊದಕ್ಕಿಂತ ‘ರತ್ತೂವಿನ ಹಸ್ತ ನುಡಿಗಳಲ್ಲಿ ಬರೆದ ಅಂಬೇಡ್ಕರರ ಆತ್ಮಕಥೆ’ ಎಂದೇ ಹೇಳ ಬಯಸಯವೆ. ಅದರಲ್ಲಿ ಇನ್ನೊಂದು ದೃಶ್ಯವಿದೆ, ಇದೇ ಈ ಕೃತಿಯ ಅಂತಿಮ ಘಟ್ಟ , ಅದನ್ನು ಕರಾಳ ಕಗ್ಗತ್ತಲ ರಾತ್ರಿ ಎನ್ನಲೇ ಇಲ್ಲಾ ಎದೆ ಜಾಡಿನ ಗುನುಗು ಎಂದು ಹೇಳಲೇ, ಎರಡೂ ಪದಗಳು ಸೂಕ್ತ ಎನಿಸುತ್ತೆ ನನಗೆ. ಪ್ರಸಂಗ ಅದೇನೆಂದರೆ ರತ್ತೂ ಮತ್ತು ಬಾಬಾ ಸಾಹೇಬರ ಮಧ್ಯೆ ಆ ರಾತ್ರಿ ನೆಡೆದ ಮಾತುಕಥೆ. ಒಬ್ಬ ಮಗ ತನ್ನ ತಂದೆಯ ಬಳಿ ಕೂತು ನಮ್ರತೆಯಿಂದ ತಂದೆಯ ಮನದಾಳದ ಮಾತುಗಳನ್ನು ತಿಳಿಯುವ ಸನ್ನಿವೇಶ, ರತ್ತೂವಿನ ಬಳಿ, ಬಾಬಾ ಸಾಹೇಬರು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ. “ತನ್ನವರೆಂದುಕೊಂಡವರೆಲ್ಲ ಸ್ವಾರ್ಥಿಗಳಾಗಿ, ತಮ್ಮ ತಮ್ಮ ವ್ಯಯಕ್ತಿಕ ಸಂಗತಿಗಳನ್ನೇ ನೋಡಿಕೊಂಡು, ಸಮಾಜಕ್ಕೆ, ಸಮುದಾಯಕ್ಕೆ ದ್ರೋಹಿಗಳಾಗುತ್ತಿದ್ದಾರೆ.” ಇದು ಅವರ ಖಿನ್ನತೆಗೆ ಮುಖ್ಯ ಕಾರಣವೆಂದು ವ್ಯಕ್ತಪಡಿಸುತ್ತಾರೆ. ಈಗೆ ಕಣ್ತುಂಬಿ ಬರುವ ವಾಕ್ಯಗಳು ಓದುಗನ ಮನಸ್ಸನ್ನು ಕಳಕುವಂತದ್ದು. ‘ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು’ ಕೃತಿಯು, ಅಂಬೇಡ್ಕರರನ್ನು ನನಗೆ ಮತ್ತೊಮ್ಮೆ ಹೊಸದಾಗಿ ಪರಿಚಯಿಸಿತು. ಈ ಬಾರಿ ಮತ್ತೊಂದು ದೃಷ್ಟಿಕೋನದಲ್ಲಿ. ಒಬ್ಬ ಒಂಟಿ ತಂದೆಯಂತೆ ಕಂಡರು..! ಇದನ್ನೆಲ್ಲಾ ಓದಿದ ಯಾರಿಗಾದರು, ಅವರ ಕೊನೆಯ ದಿನಗಳ ಮೇಲೆ ಅನುಕಂಪ ಮೂಡಿಸುವುದೂ ನಿಜ . ಆದರೆ ಅದನ್ನು ಮನದ ಪುಟದ ಕೊನೆಯಲ್ಲಿ ಉಳಿಸಿ, ಅವರ ದಿಟ್ಟ ಧೈರ್ಯ, ಜ್ಞಾನದ ಶಕ್ತಿಯನ್ನು ಮುನ್ನುಡಿಯಾಗಿಟ್ಟು ಮುಂದೆ ಸಾಗುವ, ಇಲ್ಲವಾದರೂ ಅನುವಾದಕರು ಬರೆದ ಕೊನೆಯ ಕವನದಂತೆ ‘ನನ್ನ ರಥವನ್ನು ಮುಂದೆಕ್ಕೊಯ್ಯಲಾಗದಿದ್ದಲ್ಲಿ ಅಲ್ಲೇ ಬಿಡಿ... ಇದ್ದಲ್ಲೇ..’ ಎಂದು ಅವರ ಆಶಯಗಳು ನಮಗೆ ಸದಾ ಹೆಮ್ಮರಗಳೇ ಅದನ್ನು ಹೊರಲು ಅಸಾಧ್ಯ ಆದರೆ ತುಂಡುಗಳನ್ನಾಗಿಸಿ ಹೆಗಲೇರಿಸಿ ಹಿನ್ನಡೆಯುವುದು ಶೋಭೆಯಲ್ಲ. ಇಂದಲ್ಲೇ ಇದ್ದರೆ ಹಲವರಿಗೆ ನೆರಳಾದರೂ ಆದೀತು ಎಂದು ಮನವರಿದು ಕೃತಿಯನ್ನು ಓದಿ ಮುಗಿಸಿದೆ. ಒಟ್ಟಾರೆ ಮೂಲ ಕೃತಿಯನ್ನು ಅಷ್ಟೇ ನೈಜವಾಗಿ, ಅನುವಾದಿಸಿರುವ, ಅನುವಾದಕರು ಕೋಟಿಗಾನಹಳ್ಳಿ ರಾಮಯ್ಯ ಸರ್, ಅವರ ಬರವಣಿಗೆ ಮೂಲ ಕೃತಿಯ ಕಲ್ಪನೆಯನ್ನೇ ಮರೆಸುವಂತಹದ್ದು. ಬಾಬಾ ಸಾಹೇಬರ ಕೊನೆಯ ದಿನಗಳು ಒಂದೆಡೆಯಾದರೆ, ಈ ಕನ್ನಡ ಅನುವಾದನೆಯದ್ದು ಒಂದು ವಿಶೇಷವಿದೆ. ಈ ಕೃತಿ ಐದು ಬಾರಿ ಮರು ಮುದ್ರಣವಾಗಿದೆ 2026, ಡಿಸೆಂಬರ್ 6ರಂದು ಇದರ ಐದನೇ ಮರುಮುದ್ರಣ ಬಿಡುಗಡೆಯಾಯಿತು. ಅಂದರೆ ಈ ಕೃತಿಯಲ್ಲಿ ಐದು ಮುನ್ನುಡಿಗಳಿವೆ. ಅದರಲ್ಲಿ ಗಮನ ಸೆಳೆದದ್ದು ಕೋಟಿಗಾನಹಳ್ಳಿ ರಾಮಯ್ಯ ಸಾಹೇಬರ ಮೊದಲನೆಯ ಮುನ್ನುಡಿಯಲ್ಲಿನ ಈ ಮಾತುಗಳು. “ಬುಡ್ಡಿದೀಪ ಪ್ರಕಾಶನದ ಅಡಿಯಲ್ಲಿ ನನ್ನದೇ ಕೃತಿಗಳನ್ನು, ಹೊರತರುವುದು ನನಗೆ ನಾಚಿಕೆಯಿದೆ. ಅದನ್ನು ತೇಳು ಮುಸುಕಿನಲ್ಲಿ ಮರೆಯಾಗಿಸಿಕೊಂಡಿದ್ದೇನೆ, ಹಾಗು ಸಮರ್ಥಿಸಿಕೊಂಡಿದ್ದೇನೆ” ಇದರ ಒಳಾರ್ಥ ಏನಿರಬಹುದು?! ಅದನ್ನು ಎಂದಾದರು ಅವರೇ ಸಿಕ್ಕಾಗ, ಕೇಳಿ ತಿಳಿಯುವ ಪ್ರಯತ್ನ ಮಾಡಬೇಕು ಮತ್ತು ಈ ಅನುವಾದವು “ಬೆಂಕಿಯಿಂದ ಎದ್ದು ಬಂದ ಫೀನಿಕ್ಸ ಪಕ್ಷಿ” ಎಂದೂ ಹೇಳಿದ್ದಾರೆ. ಲೇಖಕರು ಅದಕ್ಕೆ ವಿವರಣೆಯೂ ನೀಡಿದ್ದಾರೆ. ಎಂದಾದರು ಈ ಕೃತಿ ಓದುವ ಮನಸಾದರೆ ಮೊದಲಿಗೆ ಈ ಮುನ್ನುಡಿಗಳನ್ನ ಓದಿ. ಕೂಸು ಹುಟ್ಟಿವ ಮುನ್ನ ಪ್ರಸವವೇದನೆಯ ಕಥೆಯಿದೆ. ಈ ಕೃತಿ ಬಾಬಾ ಸಾಹೇಬರನ್ನು ಮತ್ತೊಮ್ಮೆ ಆಳವಾಗಿ ಅರ್ಥ ಮಾಡಿಕೊಳ್ಳುವ ಕೈಪಿಡಿಯೆಂದೇ ನಾನು ಭಾವಿಸುತ್ತೇನೆ. ಈಗೆ “ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು” ನನ್ನಲ್ಲಿ “ರತ್ತೂವಿನ ರತ್ನವಾಗಿ” ನನ್ನ ಪುಟ್ಟ ಲೈಬ್ರರಿಯಲ್ಲಿ ಅಡಕವಾಯಿತು. ಇದು ಈ ಕೃತಿಯ ಬಗ್ಗೆ ವಿಮರ್ಶೆ ಅನ್ನೊದಕ್ಕಿಂತ ನನ್ನ ಕಣ್ಣಂಚಿನ ದೃಷ್ಟಿಕೋನವಷ್ಟೆ. ಇದು ನನ್ನ ಮಾತುಗಳು. ಮೂಲ ಕೃತಿಯನ್ನೋ ಅಥವಾ ಅನುವಾದಿತ ಕೃತಿಯನ್ನೂ ಓದಿದ ನಂತರ ನೀವೇ ನಿಮ್ಮ ಮನದಾಳದ ಅಭಿಪ್ರಾಯಗಳನಾಲಿಸತಕ್ಕದ್ದು ಎಂದು ಹೇಳುತ್ತಾ ನನ್ನ ನಿಲುವನ್ನು ನಿಮಗೆ ಹಸ್ತಾಂತರಿಸುತ್ತೇನೆ. -ನೀ. ಸುನೀತಾನಂದನ (ಪೃಥ್ವಿ)

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕೃತಿಯಲ್ಲಿ ನನ್ನ ಮನದಾಳದಲ್ಲಿ ಉಳಿದ ಸಂಗತಿಯನ್ನೇ ವಿಮರ್ಶೆಯಾಗಿ ಬರೆದಿದ್ದೇನೆ ಎಂದು ಭಾವಿಸುತ್ತೇನೆ. ಆದರೂ ಹೇಳಲೇ ಬೇಕೆಂದರೆ ಅದು ಇಬ್ಬರೇ ಒಂದು ರತ್ತೂ ಮತ್ತು ಬಾಬಾ ಸಹೇಬರು. ಈ ಇಬ್ಬರ ಸಡುವೆ ನಡೆಯ ಆ ಕೋನೆಯ ಮಾತುಕಥೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲರಿಗೂ ಈ ಪುಸ್ತಕ ಸೂಕ್ತವೆಂದರೆ ತಪ್ಪಿಲ್ಲ, ಈ ಸಣ್ಣ ಕೃತಿ ಬಾಬಾ ಸಾಹೇಬರನ್ನು ಮತ್ತೊಂದು ಆಹಾಮದಲ್ಲಿ ಅರ್ಥ ಮಾಡಿಕೊಳ್ಳುವ ಕೈಪಿಡಿ ಎಂದು ನನ್ನ ಭಾವನೆ. ಬಹು ಮುಖ್ಯವಾಗಿ ಯುವ ಜನತೆ ಓದಲೇ ಬೇಕಾದ ಪುಸ್ತಕ..!

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

16
Votes
254
Views
4 Months
Since posted

Voting Closed!

Scroll to Top