Submission 1840

ಪುಸ್ತಕದ ಶೀರ್ಷಿಕೆ: ಅಳಿದ ಮೇಲೆ

ಪುಸ್ತಕದ ಲೇಖಕರು: ಡಾ.ಕೆ ಶಿವರಾಮ ಕಾರಂತ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ದೇವಿಕಾ ಟಿ.ಎಂ. ಚಿಕ್ಕಮಗಳೂರು

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಲೇಖಕ ಡಾ.ಕೆ ಶಿವರಾಮ ಕಾರಂತರು 'ಅಳಿದ ಮೇಲೆ ' ಕಾದಂಬರಿಯಲ್ಲಿ ಗತಿಸಿದ ಮೇಲೆಯೂ ಬದುಕಿರುವಂತಹ ವ್ಯಕ್ತಿತ್ವದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅಶರೀರಿಯಾಗಿಯೂ ತಮ್ಮ ಕಾರ್ಯಗಳಿಂದ ನಾಲ್ಕು ಜನಕ್ಕೆ ಉಪಯೋಗವಾಗುವಂತೆ ಬದುಕುವಂತಾಗುವುದು ಸಾಧನೆ ಎಂದು ಕಾದಂಬರಿಯ ಕಥಾನಾಯಕ ಯಶವಂತ ರಾಯರ ಮಾಗಿದ ವ್ಯಕ್ತಿತ್ವದ ಮೂಲಕ ತಿಳಿಸಿದ್ದಾರೆ. ಕಾರಂತರು,ಯಶವಂತರ ನಡುವೆ ಆಕಸ್ಮಿಕವಾಗಿ ರೈಲಿನಲ್ಲಾದ ಪರಿಚಯ ಸ್ನೇಹಕ್ಕೆ ತಿರುಗಿ, ಆಗೊಮ್ಮೆ-ಈಗೊಮ್ಮೆಯ ಭೇಟಿಯಿಂದ ತುಸು ಹೆಚ್ಚಿ, ಮುಂದಿನ ಐದಾರು ವರ್ಷಗಳಲ್ಲಿ ಇಬ್ಬರ ನಡುವೆ ಸ್ವಂತದವರಿಗಿಂತಲೂ ಹೆಚ್ಚಿನ ವಿಶ್ವಾಸ ಬೆಳೆಯುತ್ತದೆ. ಯಶವಂತರು ತಮ್ಮ ಜೀವಿತದ ಕೊನೆಯ ಹಂತದಲ್ಲಿ ಕಾರಂತರಿಗೆ ಬರೆದ ಪತ್ರದಲ್ಲಿ ಅಂತಿಮ ಇಚ್ಛೆಯನ್ನು ಅರುಹಿ, ನನ್ನ ಕಾಲಾನಂತರ ನಿಮಗೆ ತಿಳಿಸಲೆಂದೇ ಬರೆದಿಟ್ಟ ಕೆಲವು ಸಂಗತಿಗಳನ್ನು ಮರೆಯದೇ ನೋಡುವುದು ಎಂದು ಬರೆದದ್ದೇ ಈ ಕಾದಂಬರಿಯು ಬೆಳೆಯಲು ಮೂಲವಸ್ತು. ಕುಟುಂಬದವರಿಂದ ಅಂತರ ಕಾಯ್ದುಕೊಂಡಿದ್ದ ಯಶವಂತರೊಡನೆ ಬೆಸೆದುಕೊಂಡಿದ್ದ ಅನೇಕ ಕೊಂಡಿಗಳು, ಅವರ ಕೋಣೆಯಲ್ಲಿದ್ದ ಚಿತ್ರಪಟಗಳ ಭಾಷೆ, ಅವರ ಕೊನೆಯ ಪತ್ರದ ಒಕ್ಕಣೆ ಹೀಗೆ ಪ್ರತಿಯೊಂದು ಸಂಗತಿಗಳೂ ಯಶವಂತರ ಡೈರಿಯನ್ನು ಓದುತ್ತಾ ಹೋದಂತೆ ಅನಾವರಣಗೊಳ್ಳುತ್ತಾ ಕಾರಂತರಿಗೆ ಯಶವಂತರ ಜೀವನದ ಕುರಿತು ತಕ್ಕಮಟ್ಟಿನ ಸ್ಪಷ್ಟತೆ ದೊರೆಯುತ್ತಾ ಹೋಗುತ್ತದೆ. ಯಶವಂತರ ಉಳಿಕೆಯ ಹಣವನ್ನು ಅವರಿಚ್ಛೆಯಂತೆ ಸಲ್ಲಬೇಕಾದವರಿಗೆ ವಿತರಿಸಿ, ಸಾಯುವಾಗ ಸಮಾಜದಿಂದ ತಾನು ಪಡೆದುದಕ್ಕಿಂತಲೂ ಹೆಚ್ಚು ಋಣವನ್ನು ಸಂದಾಯ ಮಾಡಿದರೆ ಮನುಷ್ಯ ಹುಟ್ಟಿದ್ದಕ್ಕೆ ಒಂದು ಸಾರ್ಥಕ ಎಂಬ ಯಶವಂತರ ನಂಬಿಕೆಯನ್ನು ಸಾಕಾರಗೊಳಿಸಿ ಗೆಳೆತನವೆಂಬ ಪವಿತ್ರ ಬಂಧಕ್ಕೆ ನ್ಯಾಯ ಒದಗಿಸುತ್ತಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಕಾರಂತರು, ಯಶವಂತರ ಸಾಕು ತಾಯಿ ಪಾರ್ವತಮ್ಮನವರ ಅಪೇಕ್ಷೆಯಂತೆ ಬೆನಕನಹಳ್ಳಿಯ ಹಾಳುಬಿದ್ದಿದ್ದ ಕುಲದೇವರಾದ ಗುಡ್ಡೆ ಬೆನಕನ ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದ್ದು(ಸ್ವಭಾವತಃ ದೇವರು,ಪೂಜೆಗಳಲ್ಲಿ ಅಷ್ಟೇನೂ ವಿಶ್ವಾಸವಿಲ್ಲದವರಾದರೂ ಸ್ನೇಹಿತನ ಸ್ಥಾನದಲ್ಲಿ ನಿಂತು ಆಲೋಚಿಸಿ ಮಾಡಿದರು) ರಾಮ ಹೆಗ್ಗಡೆಯವರ ಹಂಗಿನಲ್ಲಿದ್ದ ಪಾರ್ವತಮ್ಮನವರನ್ನು ಸಾಕು ಮಗ ಯಶವಂತರ ಸ್ವಂತ ಸ್ಥಳದಲ್ಲಿ ತಂದು ನೆಲೆ ನಿಲ್ಲಿಸಿ ಸ್ವಾಭಿಮಾನಿ ಬದುಕು ನೀಡಿದ್ದು. ಸನ್ನಡತೆ,ಸದ್ಗುಣಗಳೇ ಮೇಳೈಸಿದ್ದಂತಹ ಯಶವಂತರ ಹಿರಿಯ ಮಗಳು ಜಲಜಾ ಳ ಕುಟುಂಬಕ್ಕೆ ಧನ ಸಹಾಯ ಮಾಡಿ ಬಡತನದಿಂದ ತುಸು ನಿರಾಳತೆಯನ್ನು ಕೊಟ್ಟಿದ್ದು. ಶಾಸ್ತ್ರೋಕ್ತವಾಗಿ ಕೈಹಿಡಿದವಳಲ್ಲವಾದರೂ ಯಶವಂತರ ಮನಸ್ಸಿಗೆ,ಹೃದಯಕ್ಕೆ ಹತ್ತಿರವಾದ ಸರಸಿಯ ಕುಟುಂಬವನ್ನು ಭೇಟಿ ಮಾಡಿ ಸರಸಿಯ ಮತ್ತು ಯಶವಂತರ ಭಾವಚಿತ್ರದ ಚಿತ್ರಪಟ ತಯಾರು ಮಾಡಿಸಿ ಅವರಿಬ್ಬರ ಸಂಬಂಧಕ್ಕೆ ನ್ಯಾಯ ಒದಗಿಸಿದ್ದು. ಅತ್ಯಂತ ಪ್ರಭಾವ ಬೀರಿದ ವಾಕ್ಯಗಳು: ದುಡ್ಡು ಎಂದರೆ ಶುದ್ಧ ಉಪ್ಪು . ತುಸುವೇ ನಾಲಿಗೆಯ ಮೇಲಿರಿಸಿದರೆ ರುಚಿ,ಹೆಚ್ಚಾಗಿ ತಿಂದರೆ ದಾಹ. ಸೋರೆಯ ಗಿಡದ ಒಂದು ಕಾಯಿ ಹೆಂಡ ಕುಡಿಯುತ್ತಿದ್ದರೆ ಮತ್ತೊಂದು ತಂಬೂರಿಯ ನಾದಕ್ಕೆ ಪ್ರೇರಕ(ಹುಟ್ಟಿದ ಕುಲಕ್ಕೂ, ವ್ಯಕ್ತಿಯ ಗುಣ ಸ್ವಭಾವಕ್ಕೂ ಸಂಬಂಧವಿಲ್ಲ ಎಂದು ಹೇಳುವಾಗ) ಸತ್ಯ ತನ್ನ ಶಕ್ತಿಯಿಂದ ಉಳಿದುಕೊಳ್ಳಬೇಕೇ ಹೊರತು ನಮ್ಮ ಅಧಿಕಾರದಿಂದ ಪ್ರತಿವಾದಿಯ ಬಾಯಿಯನ್ನು ಒತ್ತಿ ಹಿಡಿಯುವುದರಿಂದ, ಕುತರ್ಕದಿಂದ ಅಲ್ಲ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಸ್ನೇಹವೆಂಬ ಪವಿತ್ರ ಬಂಧಕ್ಕೆ ಮತ್ತು ವ್ಯಕ್ತಿತ್ವಕ್ಕೆ ಬೆಲೆ ಕೊಡುವ ಪ್ರತಿಯೊಬ್ಬರೂ ವಯಸ್ಸಿನ ಬೇಧವಿಲ್ಲದೇ ಓದಬಹುದು/ ಓದಬೇಕು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

44
Votes
185
Views
7 Months
Since posted

Voting Closed!

Scroll to Top