Submission 1676

ಪುಸ್ತಕದ ಶೀರ್ಷಿಕೆ: ಉದಯರಾಗ

ಪುಸ್ತಕದ ಲೇಖಕರು: ಅ. ನ. ಕೃಷ್ಣರಾಯ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರವೀಣ್ ಕುಮಾರ್ ಜಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕಾದಂಬರಿ ಸಾರ್ವಭೌಮ ಎಂದು ವಿಖ್ಯಾತರಾಗಿರುವ ಶ್ರೀ ಅ. ನ. ಕೃಷ್ಣರಾಯರ ಈ ಕಾದಂಬರಿಯಲ್ಲಿ ಎಂದಿನಂತೆ ಅವರ ನೆಚ್ಚಿನ ಕಲೆ ಕಲಾವಿದ ಹಾಗೂ ಸಮಾಜವೇ ಮುಖ್ಯ ಪಾತ್ರ. ಇಲ್ಲಿ ಕಲಾವಿದ ತನ್ನ ಕಲೆಯಲ್ಲಿ ಎಷ್ಟೇ ಸಾಮರ್ಥನಾಗಿದ್ದರೂ ತನ್ನ ಮನೋದೌರ್ಬಲ್ಯದಿಂದ ತನ್ನನ್ನು ತಾನೇ ನಾಶಪಡಿಸಿಕೊಳ್ಳಬಲ್ಲ ಎಂಬುದನ್ನು ಹಾಗೂ ಆ ದೌರ್ಬಲ್ಯವನ್ನು ತುಳಿದು ಮೆಟ್ಟಿ ನಿಂತರೆ ಪ್ರತೀ ಅಸ್ತಮದ ನಂತರ ಉದಯವಿದೆ ಎಂಬುದನ್ನು ಸುಲಭವಾದ ಸಾಹಿತ್ಯದಲ್ಲಿ ತಿಳಿಸಿದ್ದಾರೆ. ಇದೊಂದು ಸ್ಪೂರ್ತಿದಾಯಕ ಪುಸ್ತಕವಲ್ಲ ಆದರೂ ನಿಮಗೆ ಇಲ್ಲಿ ಸ್ಪೂರ್ತಿ ದೊರೆಯುತ್ತದೆ. ಇದೊಂದು ಆತ್ಮಕಥೆ ಅಲ್ಲ ಆದರೂ ನಿಮಗೆ ನಿಮ್ಮದೇ ಕಥೆ ಎನಿಸುತ್ತದೆ. ಇದೊಂದು ಕಾದಂಬರಿ ಮಾತ್ರವೇ ಅಲ್ಲ. ಇದೊಂದು ಮನೋವಿಜ್ಞಾನದ ಕಥೆ, ಮನೋವಿಕಾಸದ ಕಥೆ. ಇಲ್ಲಿ ಕಥಾ ಪ್ರಾರಂಭದಲ್ಲಿ ಕಥಾನಾಯಕನ ಮೇಲೆ ಓದುಗನಿಗೆ ಹುಟ್ಟುವ ಕರುಣೆ,ಪ್ರೀತಿ ಕಥೆ ಸಾಗುತ್ತಾ ಸಾಗುತ್ತಾ ಓದುಗನ ಮನಸ್ಥಿತಿಯನ್ನೇ ಬದಲಿಸುತ್ತದೆ. ಇಲ್ಲಿ ಸಹಪಾತ್ರಗಳು ಕಥಾನಾಯಕನ, ಕಲಾವಿದನ ಗೆಲುವಿಗೆ ಎಷ್ಟು ಬೆಂಬಲ ನೀಡುವವೋ, ಓದುಗನೂ ತನ್ನ ಮನಸ್ಸಿನಲ್ಲಿ ಕಲಾವಿದನ ಸಾಧನೆಗೆ ಮೆಟ್ಟಿಲು ಹಾಕುವುದಂತೂ ಅಷ್ಟೇ ನಿಜ. ಆದರೆ ಕಥೆ ಸಾಗಿದಂತೆಲ್ಲ ಮಧ್ಯದಲ್ಲಿ ಒಮ್ಮೆ ಕಥಾನಾಯಕನ ಕೆನ್ನೆಗೆ ಹೊಡೆಯಬೇಕೆನಿಸಿದ್ದು ಮಾತ್ರ ಅಕ್ಷರಶಃ ಸುಳ್ಳಲ್ಲ. ಇಲ್ಲಿ ಕಲಾವಿದನಿಗಿಂತ ಅವನಿಗೆ ದೊರಕುವ ಸಹಾಯ ಹಸ್ತಗಳು, ಸಂಬಂಧಗಳೇ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿವೆ. ಎಂತಹ ಕಷ್ಟದಲ್ಲೂ ಕೈ ಬಿಡದ ಕೈಗಳ ಸಂಬಂಧಗಳಿದ್ದರೆ ಹಾಗೂ ಆ ಕೈಗಳಿಗೆ ಬೆಲೆ ನೀಡಿ ಮತ್ತೆ ಪುಟಿದೇಳುವ ಮನೋ ಧೈರ್ಯವಿದ್ದರೆ ಪ್ರತಿ ಬಾಳಿನಲ್ಲೂ "ಉದಯರಾಗ" ಮೂಡುತ್ತದೆ. ನನಗೆ ವೈಯಕ್ತಿಕವಾಗಿ ಕಥಾನಾಯಕ ಮಾಣಿಗಿಂತ ರಾಯರು, ರಮೇಶ, ಮೂರ್ತಿ ಹಾಗೂ ನೀಲಾ ಪಾತ್ರಗಳು ತುಂಬಾ ಇಷ್ಟವಾದವು. ಕಥಾನಾಯಕನಿಗೆ ರೂಪದಾಸಿಯ ಮೇಲೆ ಎಂತಹದೇ ಪ್ರೇಮವಿದ್ದರೂ ನನಗೆ ಚಾರುಬಾಲಾಳ ಬಗ್ಗೆ ಕಥೆ ಓದುವಾಗ ಕಣ್ತುಂಬಿದವು. ಓದಲು ಶುರು ಮಾಡಿದರೆ ಮಾಣಿಯೊಡನೆ ಅವನ ಜೀವನದಲ್ಲಿ ನಿಂತು ಅವನ ಸಂಕಷ್ಟ, ನಿರಾಸೆ, ಬೆಳವಣಿಗೆ, ಗೆಲುವು, ದೌರ್ಬಲ್ಯ, ಚಟ, ವ್ಯಸನ, ಪ್ರೇಮ, ವಿರಹ, ದುಃಖ, ಮತ್ತೆ ಗೆಲುವು, ಮತ್ತೆ ಚಟ, ಮತ್ತೆ ಸೋಲು, ಮತ್ತೆ ಬೆಂಬಲ ಕೊನೆಗೆ "ಉದಯರಾಗ" ಎಲ್ಲವನ್ನು ಓದುಗನು ಕೂಡ ಅನುಭವಿಸುದಂತು ಸತ್ಯ. ಒಮ್ಮೆ ಓದಿ ನೋಡಿ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಇಲ್ಲಿ ನನಗೆ ಮನಸಿನಲ್ಲಿ ಉಳಿದ ಪಾತ್ರದ ಹೆಸರು ಚಾರುಬಾಲ. ಒಂದು ಕಡುಬಡತನದ, ಕಷ್ಟದ, ನಿರ್ಗತಿಕ ಹೆಣ್ಣು ಇಲ್ಲಿ ಕಲಾವಿದನ ಕೈಗೆ ಸಿಕ್ಕು ಮೊದಲು ಚಿತ್ರವಾಗುತ್ತಾಳೆ, ನಂತರ ಮನೆ ಕೆಲಸದವಳಾಗುತ್ತಾಳೆ,ನಂತರ ಅನಿವಾರ್ಯ ಕಾರಣಕ್ಕೆ ತೋಳ ಬಂಧಿಯಾಗುತ್ತಾಳೆ, ಪ್ರೇಯಸಿಯಾಗುತ್ತಾಳೆ, ಮನೆಯವಳಾಗುತ್ತಾಳೆ ಆದರೆ ಮನಸಿನವಳು ಆಗುವುದೇ ಇಲ್ಲ. ಅವಳು ಯಾವ ಕಾರಣಕ್ಕೆ ಅವನಿಗೆ ತನ್ನನ್ನು ಅರ್ಪಿಸುತ್ತಿರುವಳು ಎನ್ನುವುದನ್ನೇ ಅರಿಯದೆ ಹೋಗುತ್ತಾಳೆ. "ಭೋಗದ ಹೆಣ್ಣಿಗೆ ಯೋಗ್ಯ ಸ್ಥಾನವನ್ನು ಯಾರು ತಾನೇ ಕೊಡುತ್ತಾರೆ" ಎಂದು ಅವಳ ಪ್ರಾಣವನ್ನೇ ಅರ್ಪಿಸಿ ಹೊರಡುತ್ತಾಳೆ. ನಿಜಕ್ಕೂ ಇದು ಮನ ಕುಲುಕುವ ಪಾತ್ರ ಹಾಗೂ ಸನ್ನಿವೇಶ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಮನೋವೈಜ್ಞಾನಿಕ ಕಥೆ ಹಾಗೂ ಸಾಮಾಜಿಕ ಕಥೆಗಳನ್ನು ಇಷ್ಟ ಪಡುವ ಓದುಗರಿಗೆ ಇದು ಬಹಳ ಇಷ್ಟವಾಗುವ ಕಾದಂಬರಿ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

128
Votes
733
Views
7 Months
Since posted

Voting Closed!

Scroll to Top