ಪುಸ್ತಕದ ಶೀರ್ಷಿಕೆ: ಪರ್ವ
ಪುಸ್ತಕದ ಲೇಖಕರು: ಎಸ್ ಎಲ್ ಭೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರೀತಿಶ್ರೀ ಕೆ.ಬಿ.
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಇತ್ತೀಚಿಗೆ ಅತ್ಯಂತ ಜನಪ್ರಿಯವಾಗಿರುವ ಫ್ಯಾನ್ ಇಂಡಿಯಾ ಸಿನಿಮಾದಂತೆ ಫ್ಯಾನ್ ಇಂಡಿಯಾ ಲೇಖಕ ನಮ್ಮ ಎಸ್ ಎಲ್ ಭೈರಪ್ಪ. ಅಷ್ಟೊಂದು ಜನಪ್ರಿಯ ಲೇಖಕ.ಅವರು ಆಯ್ದುಕೊಳ್ಳುತ್ತಿದ್ದ ವಿಷಯಗಳು ಭಾರತದ ಎಲ್ಲಾ ಭಾಷೆಗಳು ಮತ್ತು ಗಡಿಯನ್ನು ದಾಟಿ ವಿಸ್ತಾರಗೊಂಡಿದ್ದವು.ಅವರ ಕಾದಂಬರಿಗಳಲ್ಲಿ ಗಟ್ಟಿಯಾದ ಕಥೆ,ಭಿನ್ನ ದೃಷ್ಟಿಕೋನ, ತರ್ಕ ಬದ್ದ ನಿಲುವುಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಚಿತ್ರಿಸುತ್ತಿದ್ದರು. ಅವರ ಕಾದಂಬರಿಗಳಲ್ಲಿ ಪರ್ವವು ಅತ್ಯಂತ ಜನಪ್ರಿಯ ಮತ್ತು ಅತ್ಯಂತ ವಿಮರ್ಶೆಗೆ ಒಳಪಟ್ಟ ಕಾದಂಬರಿ. ವ್ಯಾಸನ ಮಹಾಭಾರತವೇ ಮೂಲ ಆಧಾರವಾದರು, ಭೈರಪ್ಪನವರು ಪೌರಾಣಿಕ ಕಾದಂಬರಿಗಳಲ್ಲಿಯ ದೈವಂಶಿಕ ಮತ್ತು ಅತಿ ಮಾನುಷ ಶಕ್ತಿಗಳನ್ನು ವೈಭವಿಕರಿಸದೆ ಸಾಮಾನ್ಯ ಜನರಂತೆ ಚಿಂತಿಸುವಂತೆ ವಾಸ್ತವಿಕ ನೆಲೆಗಟ್ಟಿನಲ್ಲಿ ಬರೆದಿರುವರು. ಕಾದಂಬರಿಯನ್ನು ಓದುತ್ತಾ ಹೋದಂತೆ ಕಣ್ಣ ಮುಂದೆಯೇ ನಡೆಯುತ್ತಿದೆನೋ ಎಂಬಂತೆ ಭಾಸವಾಗುತ್ತದೆ. ಕಥೆಯನ್ನು ಪಾತ್ರಗಳ ಮೂಲಕ ವಿವರಿಸುತ್ತ ಅವರ ಅಂತರಂಗದ ಬೇಗುದಿಯನ್ನು ಹೊರಹಾಕುವಂತೆ ರಚಿಸಿದ್ದಾರೆ. ಕಥೆಯು ಶಲ್ಯನಿಂದ ಶುರುವಾಗಿ ಕುಂತಿ, ಬೀಷ್ಮ, ದ್ರೌಪದಿ, ಅರ್ಜುನ, ಕರ್ಣನ ಮುಖೇನ ಕಥೆಯು ಸಾಗುತ್ತದೆ.ಒಬ್ಬರದು ಓದುವಾಗ ಅವರ ಅಂತರಂಗವನ್ನು ಓರೆ ಹಚ್ಚಿದಂತೆ ತೋರುತ್ತದೆ. ಅತ್ಯಂತ ಆಪ್ತವಾಗುತ್ತಾರೆ. ದ್ರೌಪದಿಯು ಪೌರಾಣಿಕ ಕೇವಲ ದೈವಾಂಶಭೂತಿ ಹೆಣ್ಣಾಗಿಯೋ, ಅಗ್ನಿಯಲ್ಲಿ ಹುಟ್ಟಿದ ದೇವ ಪುತ್ರಿಯಂತೆ ತೋರದೆ, ಅನಿವಾರ್ಯ ಕಾರಣಗಳಿಂದ ಐದು ಗಂಡರ ಹೆಂಡತಿಯಾಗಿ ಬರುವ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುವ ಘನವೆತ್ತ ಮಹಿಳೆಯಾಗಿ ಚಿತ್ರಿಸಿದ್ದಾರೆ. ದ್ರೌಪದಿಯು ಹೆರುವ ಯಂತ್ರವಾಗಿ ಸೋತ ಹಸುವಂತೆ ದ್ರೌಪದಿಯ ಬದುಕು ತೀರಾ ಕರುಣಾಜನಕ.ದ್ರೌಪದಿಯ ಅತ್ಯಂತ ಪ್ರೀತಿಯ ಪತಿ ಅರ್ಜುನ ಸುಭದ್ರೆಯನ್ನು ರಾಜಾರೋಷವಾಗಿ ಮದುವೆಯಾಗಿ ಬಂದಾಗ ಅವಳಿಗಾಗುವ ತಳಮಳ, ಕ್ಷತ್ರಿಯರೆಂದರೆ ಜೂಜು, ಯುದ್ಧ, ಸ್ವಯಂವರವಷ್ಟೇ ಹೆಣ್ಣಿನ ಭಾವನೆಗಳಿಗೆ ಬೆಲೆಯಿಲ್ಲ ಎಂದುಕೊಳ್ಳುವ ಪರಿ ವಾಸ್ತವ ಚಿಂತನೆಗೆ ಹಚ್ಚುತ್ತದೆ. ಕುಂತಿ ಮಾದ್ರಿಯರ ದಾಂಪತ್ಯ ಅತೃಪ್ತಿ,ಆ ಹೆಣ್ಣು ಜೀವಗಳ ಕಳವಳ, ಪಾಂಡುವಿನ ಸಾವು ಭಿನ್ನವಾಗಿ ಚಿತ್ರಿಸಿದ್ದಾರೆ. ಕೆಳಸಮುದಾಯದ ಮತ್ತು ಶೋಷಿತ ವರ್ಗದ ಪ್ರತೀಕವೆಂಬಂತೆ ಕರ್ಣನನ್ನು ನಿರೂಪಿಸಿದ್ದಾರೆ.ಅವನ ಅಂತರಂಗದ ಬೇಗುದಿ, ದಾನಶೂರ ಗುಣ, ಅವನಲ್ಲಿ ತಾಕತ್ತಿದ್ದರು ಜಾತಿಯಿಂದ ಶೋಷಣೆಯಾಗುವ ಪರಿ, ಗೆಳೆತನಕ್ಕೆ ಅವನು ಕೊಡುವ ಬೆಲೆ ಚೆನ್ನಾಗಿ ನಿರೂಪಿಸಿದ್ದಾರೆ. ಯುದ್ಧದ ಮುನ್ನೊಟ ಮತ್ತು ಹಿನ್ನೋಟವನ್ನು ಚೆನ್ನಾಗಿ ಬರೆದಿರುವರು. ಯುದ್ಧದ ಸಮಯದಲ್ಲಿ ಊಟ, ನಿದ್ದೆಯಿಲ್ಲದೆ ಹೊರಡುವ ಸೈನಿಕರು, ಯುದ್ದದಿಂದಾಗುವ ವಿನಾಶ, ಎಲ್ಲೆಲ್ಲೂ ಬರೀ ರಕ್ತದೋಕುಳಿ ಸಾವು ನೋವು. ಕೊನೆಗೆ ಕುಂತಿಯು ದ್ರೌಪದಿಯಲ್ಲಿ ತನ್ನ ವಂಶ ಉಳಿಸಲು ಹೊಸ ಜೀವ ಬೇಕು ಎನ್ನುವ ಬಯಕೆ ಒಂದು ಕಡೆಯಾದರೆ ಯುದ್ಧದಿಂದಾಗಿ ಬಸುರಾದ ಕಂದಮ್ಮಗಳಿಗೆ ತಂದೆ ಯಾರು? ಪ್ರಶ್ನೆ ಚಿಂತನೆಗೆ ಹಚ್ಚುತ್ತದೆ. ಹುಟ್ಟುಸಾವುಗಳ ಪ್ರಶ್ನೆಯನ್ನು ಶೋಧಿಸಲು ಹೋರಾಟಂತಿದೆ, ನಾಶದಲ್ಲಿಯೇ ಮರುಸೃಷ್ಟಿ ಎಂಬಂತೆ ಜಿಜ್ಞಾಸೆ ಹುಟ್ಟಿಸುತ್ತದೆ. ಭೈರಪ್ಪ ಈ ಕಾದಂಬರಿ ಬರೆದು ಎಷ್ಟೋ ವರುಷಗಳಾದರು ಇಂದಿಗೂ ಅತ್ಯಂತ ಚರ್ಚೆಯಲ್ಲಿರುವ ಜನಪ್ರಿಯ ಕಾದಂಬರಿ ಪರ್ವ. ಎಷ್ಟು ಸಲ ಓದಿದರೂ ಬೇಸರವಾಗದ, ಓದಿದಷ್ಟು ನಮ್ಮನ್ನು ಕಥೆಯ ಆಳಕ್ಕೆ ಗಂಭೀರ ಚಿಂತನೆ ಒಳಪಡಿಸುತ್ತದೆ. ಪೌರಾಣಿಕ ಕಥೆಯ ತಳಹದಿಯ ಮೇಲೆ ಚಿತ್ರಿತವಾಗಿದ್ದರೂ, ಪರ್ವ ವಿಭಿನ್ನ ಸ್ಥಾನದಲ್ಲಿ ನಿತ್ಯ ನೂತನವಾಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಭೈರಪ್ಪನವರ ಬರವಣಿಗೆಯ ತಾಕತ್ತು ಕರಾಮತ್ತು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.