Submission 1941

ಪುಸ್ತಕದ ಶೀರ್ಷಿಕೆ: ಮತ್ತೆ ಮೇಲೇಳುತ್ತೇನೆ

ಪುಸ್ತಕದ ಲೇಖಕರು: ಎಂ.ಆರ್.ಕಮಲ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಭವ್ಯ ಟಿ.ಎಸ್.

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಇದು ಹಸಿರೇ ಉಸಿರಾದ ಬ್ರಿಟಿಷ್ ಕೇನ್ಯಾದ ಇಹಿತೆ ಎಂಬ ಹಳ್ಳಿಯಲ್ಲಿ ಜನಿಸಿದ ಮಣ್ಣಿನ ಮಗಳಾದ ವಂಗಾರಿ ಮಾಥಾಯ್ ಅವರ ಆತ್ಮಕಥನ.ಅವರ ಬದುಕಿನ ಪುಟಗಳನ್ನು ಅತ್ಯಂತ ಆಪ್ತವಾಗಿ,ಆಕೆಯ ಭಾವನೆಗಳನ್ನು ತನ್ನದೇ ಎಂಬಂತೆ,ಕಾವ್ಯಾತ್ಮಕ ಭಾಷೆಯಲ್ಲಿ ದಾಖಲಿಸಿಕೊಟ್ಟಿದ್ದಾರೆ ನನ್ನ ಅಚ್ಚುಮೆಚ್ಚಿನ ಲೇಖಕಿಯಾದ ಶ್ರೀಮತಿ ಎಂ.ಆರ್ ಕಮಲ ಮೇಡಂರವರು.ಅವರು ಅನುವಾದಿಸಿರುವ ಆಫ್ರಿಕನ್-ಅಮೆರಿಕನ್ ಸಾಹಿತ್ಯದ ಸರಣಿಯ ಮುಂದುವರಿಕೆಯೇ ಈ ಕೃತಿಯಾಗಿದೆ.. ವಂಗಾರಿ ಮಥಾಯ್ ಅವರು ಹಸಿರಿನ ನಡುವೆ ಬದುಕುತ್ತಾ,ಅದೇ ಬದುಕಾಗಿ ಕಂಡವರು.ಅಂತಹ ಹಸಿರು ಕಣ್ಮುಂದೆ ಅಳಿಯುವುದನ್ನು ಕಂಡಾಗ ಉಳಿಸಿ ಬೆಳೆಸುವ ಕಾರ್ಯಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟವರು.ಅವರ ಬಾಲ್ಯದ ನೆನಪುಗಳೊಂದಿಗೆ ಕೇನ್ಯಾದ ಕಿಕುಯು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಪರಿಸರವೂ ನಮಗೆ ಪರಿಚಯವಾಗುತ್ತದೆ.ಸಹಜ ಕಾಡುಗಳಲ್ಲಿ ವ್ಯಾವಹಾರಿಕ ಉದ್ದೇಶದಿಂದ ವೇಗವಾಗಿ, ಗಟ್ಟಿಯಾಗಿ ಬೆಳೆಯುತ್ತಿದ್ದ ಮರಗಳನ್ನು ಬೆಳೆಸಿದ್ದರಿಂದ ಸ್ಥಳೀಯ ಮರಗಿಡಗಳು ಮತ್ತು ಪ್ರಾಣಿಗಳನ್ನು ನಾಶ ಮಾಡಿದವು. ಇದರಿಂದ ಅಂತರ್ಜಲ ಮಟ್ಟವೂ ಕುಸಿಯಿತು.ಇಡೀ ಜಗತ್ತಿನಲ್ಲಿ ಪ್ರಕೃತಿಯ ಮೇಲೆ ಮನುಷ್ಯನ ಲೋಭತನ ಉಂಟುಮಾಡಿದ ದುಷ್ಪರಿಣಾಮಗಳು ವಂಗಾರಿಯವರನ್ನು ತೀವ್ರ ಘಾಸಿಗೊಳಿಸುತ್ತವೆ.ಕೃಷಿ ಜೀವನದ ಆನಂದವನ್ನು ವರ್ಣಿಸುತ್ತ "ನಾನು ಚಿಕ್ಕವಳಿದ್ದಾಗ ನನ್ನ ಸುತ್ತಲಿನ ಜಗತ್ತು ಕ್ರಿಯಾತ್ಮಕವಾಗಿತ್ತು,ಜೀವಂತವಾಗಿತ್ತು,ಸ್ಫೂರ್ತಿದಾಯಕವಾಗಿತ್ತು" ಎನ್ನುತ್ತಾರೆ. ಅದೃಷ್ಟವೋ ಎಂಬಂತೆ ಅಂದಿನ ಕಾಲದಲ್ಲಿ ವಂಗಾರಿಯವರಿಗೆ ಶಿಕ್ಷಣ ಪಡೆಯುವ ಅವಕಾಶ ಲಭಿಸುತ್ತದೆ.ಶಿಕ್ಷಣ ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗುತ್ತದೆ.ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಾರೆ. ಅಮೆರಿಕ ನನ್ನನ್ನು ಬದಲಾಯಿಸಿತು.ಇವತ್ತು ನಾನೇನಾಗಿದ್ದೀನೋ ಹಾಗೆ ಮಾಡಿದ್ದೆ ಅಮೆರಿಕಾ ಎಂದು ತಾವು ಪಡೆದ ಆತ್ಮವಿಶ್ವಾಸದ ಬಗ್ಗೆ ಹೇಳಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಮುಗಿದ ಕೂಡಲೇ ಕೇನ್ಯಾದಲ್ಲಿ ಸಿಕ್ಕ ಕೆಲಸ ಕೆಲವು ಭ್ರಷ್ಟರಿಂದ ಕೈ ತಪ್ಪುತ್ತದೆ.ಅಂದಿನ ಸಮಾಜದಲ್ಲಿ ಬೇರೂರಿದ್ದ ಭ್ರಷ್ಟಾಚಾರ, ಜನಾಂಗೀಯ ಮತ್ತು ಲಿಂಗ ತಾರತಮ್ಯಗಳು ಅವರನ್ನು ಕಂಗೆಡಿಸಿ ಏನಾದರೂ ಮಾಡಲೇಬೇಕು ಎಂಬ ಛಲ ತುಂಬುತ್ತವೆ. ಮಾಡಲಾಗುವುದಿಲ್ಲ ಎಂದು ಹಲುಬುವುದಕ್ಕಿಂತ ಏನು ಮಾಡಬಹುದೆಂದು ಯೋಚಿಸುವುದು ಮಾಥಾಯ್ ಅವರ ಗುಣವಾಗಿತ್ತು.ಗಿಡಮರಗಳನ್ನು ಬೆಳೆಸುವುದರಿಂದ ನೆಲದ ಗಾಯಗಳನ್ನು ಮಾಯಿಸಿ,ಎಲ್ಲೋ ಹಾರಿದ ಹಕ್ಕಿಗಳನ್ನು, ಚಿಕ್ಕಪುಟ್ಟ ಪ್ರಾಣಿಗಳನ್ನು ಮರಳಿ ತಂದು ನೆಲದ ಸತ್ವವನ್ನು ಪುನರುತ್ಪಾದಿಸಬಹುದೆಂಬ ಅವರ ಚಿಂತನೆಯ ಫಲವಾಗಿ ಜನ್ಮ ತಳೆದುದೇ ಹಸಿರು ಪಟ್ಟಿ ಚಳುವಳಿ. ಈ ನಡುವೆ ಮಾಥಾಯ್ ತಮ್ಮ ಪತಿಯಿಂದ ವಿಚ್ಛೇದನ ಪಡೆದು ದೂರವಾಗುತ್ತಾರೆ.ಇದರ ಬಗ್ಗೆ ಹೇಳುತ್ತಾ ಮದುವೆಯನ್ನು ಉಳಿಸಿಕೊಳ್ಳಬೇಕೆಂದರೆ ನಾನೊಬ್ಬಳು ಸೋತವಳು,ಯಾವ ಪ್ರತಿಭೆಯು ಇಲ್ಲದವಳು ಎಂದು ಬಿಂಬಿಸಿಕೊಳ್ಳಬೇಕಾಗುತ್ತದೆಂದು ತಿಳಿದಿರಲಿಲ್ಲ ಎಂಬ ಮಾತುಗಳು ಅಂದಿನ ಮಹಿಳೆಯರು ಎದುರಿಸಬೇಕಾಗಿದ್ದ ಸಾಮಾಜಿಕ ಸವಾಲುಗಳನ್ನು ಪ್ರತಿಬಿಂಬಿಸುತ್ತವೆ. ನಂತರ ಮಾಥಾಯ್ ಅವರು ಹಸಿರುಪಟ್ಟಿ ಚಳುವಳಿಯಲ್ಲಿ ಸಕ್ರಿಯರಾಗುತ್ತಾರೆ.ಕಠಿಣವಾದ ಸೆರೆಮನೆ ವಾಸ ಅನುಭವಿಸುತ್ತಾರೆ.ಪೆಟ್ಟುಗಳನ್ನು ತಿನ್ನುತ್ತಾರೆ.ಆಪ್ತರಿಂದ ದೂರವಾಗುತ್ತಾರೆ.ತಮ್ಮದೇ ಮನೆಯಲ್ಲಿ ಬಂಧಿಯಾಗುತ್ತಾರೆ. ಹೀಗೆ ಪ್ರತಿ ಹಂತದಲ್ಲಿ ಎದುರಾದ ಸಂಕಷ್ಟಗಳನ್ನು ದಿಟ್ಟೆದೆಯಿಂದ ಎದುರಿಸುತ್ತಾ ತಮ್ಮ ಗುರಿಯಿಂದ ವಿಮುಖರಾಗದೆ ಸಾಗುತ್ತಾರೆ.ತಮ್ಮ ಶಕ್ತಿಶಾಲಿ ವ್ಯಕ್ತಿತ್ವದಿಂದ ರಾಜಕೀಯಕ್ಕೆ ಪ್ರವೇಶಿಸುತ್ತಾರೆ. ಹಸಿರುಪಟ್ಟಿ ಚಳುವಳಿಯ ಸಂದರ್ಭದಲ್ಲಿ ಅವರಿಗೆ ಕೆಟ್ಟ ಆಡಳಿತ, ಸಂಪನ್ಮೂಲದ ತಪ್ಪು ನಿರ್ವಹಣೆ, ಬಡತನ,ಪರಿಸರ ನಾಶಕ್ಕೆ ಇರುವ ಸಂಬಂಧವೇನು ಎಂಬುದರ ಅರಿವಾಗಿತ್ತು.ಕೆಲವು ಕಾರಣಗಳಿಂದ ಮೊದಲಿಗೆ ಸೋಲಿನ ಕಹಿ ಸಿಕ್ಕಿತು.ಆದರೆ ಮಾಥಾಯ್ ಅವರು ಒಬ್ಬ ಕನಸುಗಾರ್ತಿಯಾಗಿದ್ದರು.ತಮ್ಮ ಹಸಿರಿನ ಹೋರಾಟವನ್ನು ಮುಂದುವರಿಸುತ್ತಲೇ ಸಾಗಿದರು.ಕೊನೆಗೂ ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಆಯ್ಕೆಯಾದರು.ಅವರು ಹೇಳುವ ಎದ್ದು ನಿಲ್ಲು ಮತ್ತು ನಡೆ ಎಂಬ ಘೋಷಣೆ ಎಂತಹ ಸೋಲಿಗೂ ಗೆಲುವಿನೆಡೆಗೆ ಸಾಗುವ ಸ್ಫೂರ್ತಿಯನ್ನು ತುಂಬುವಂತಹದ್ದು. ಹೆಜ್ಜೆಹೆಜ್ಜೆಗೂ ಮಥಾಯ್ ಅವರು ಎದುರಿಸಿದ ಸವಾಲುಗಳು, ಸಂಕಷ್ಟಗಳು ಮತ್ತು ಎದೆಗುಂದದೆ ಅವೆಲ್ಲವನ್ನೂ ಮೆಟ್ಟಿ ಮುಂದೆ ಹೋದ ದೃಢತೆ,ಇವೆಲ್ಲವೂ ಸಾರ್ಥಕಗೊಳ್ಳುವ ಕ್ಷಣವೊಂದು ಬಂತೆಂಬಂತೆ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗುತ್ತದೆ. ಮರಗಳು ನಮ್ಮ ನಿಮ್ಮಂತೆಯೇ ಭಾವನೆಗಳಿರುವ ಜೀವಗಳು ಎಂಬ ಭಾವವೊಂದು ಈ ಕೃತಿ ಓದಿದ ನಂತರ ಮನದಲ್ಲಿ ಅಚ್ಚೊತ್ತಿದೆ.ಶಾಂತಿ ಮತ್ತು ಭರವಸೆ ಎಂಬ ಪಾಠವನ್ನು ಮರಗಳಿಂದ ನಾವು ಕಲಿಯಬೇಕು.ಒಂದು ಮರ ತನ್ನ ಬೇರುಗಳನ್ನು ನೆಲಕ್ಕೆ ಇಳಿಸಿದ್ದರೂ ಆಕಾಶದತ್ತ ನೋಡುತ್ತದೆ.ನಾವೆಷ್ಟೇ ಮೇಲೆ ಹೋದರೂ ಜೀವಸತ್ವವನ್ನು ನೆಲದಿಂದಲೇ ಹೀರಿಕೊಳ್ಳಬೇಕು.ಗೆಲುವು ಪಡೆದ ನಂತರವೂ ನಮ್ಮ ಮೂಲನೆಲೆಯನ್ನು ಮರೆಯಬಾರದು.ಹೀಗೆ ಪ್ರಕೃತಿಯನ್ನು ಅದಮ್ಯವಾಗಿ ಪ್ರೀತಿಸುವ ಲೇಖಕಿಯ ಆತ್ಮಕಥನ ನಮ್ಮೊಳಗೆ ಆತ್ಮವಿಶ್ವಾಸದ ದೀಪವನ್ನು ಬೆಳಗಿ ಬದುಕಿನ ಕತ್ತಲನ್ನು ಭೇದಿಸಿ ಮುಂದಡಿಯಿಡುವ ಚೈತನ್ಯ ನೀಡುತ್ತದೆ.ಇಂತಹ ಅಮೂಲ್ಯ ಕೃತಿಯೊಂದನ್ನು ಕನ್ನಡದಲ್ಲಿ ಓದುವ ಅವಕಾಶ ಲಭಿಸಿದ್ದು ನನ್ನ ಪುಣ್ಯ.ಸಹಜ,ಸುಂದರವಾಗಿ ಅನುವಾದಿಸಿರುವ ಪ್ರೀತಿಯ ಎಂ.ಆರ್.ಕಮಲ ಮೇಡಂ ಅವರಿಗೆ ಹೃದಯಪೂರ್ವಕ ಧನ್ಯವಾದಗಳು🙏🙏 ಭವ್ಯ ಟಿ.ಎಸ್. ಶಿಕ್ಷಕರು. ಹೊಸನಗರ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಪುಸ್ತಕದಲ್ಲಿ ಬರುವ ವಂಗಾರಿಯವರ ಪಾತ್ರ ಅತ್ಯಂತ ಬಲಿಷ್ಠವಾದದ್ದಾಗಿದೆ. ಆಧುನಿಕ ಮಹಿಳೆಗೆ ಮಾದರಿಯಾದ ವ್ಯಕ್ತಿತ್ವ ಅವರದು. ಅವರು ಈ ಕೃತಿಯಲ್ಲಿ ಹೇಳುವ ಕೆಲವು ಮಾತುಗಳು ನನ್ನ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ‌. ಅದೇನೆಂದರೆ ಹಲವಾರು ವರ್ಷಗಳ ಅನುಭವದಲ್ಲಿ ಕಲಿತಿದ್ದೇನೆಂದರೆ,ಕೆಲಸದಲ್ಲಿ ತಾಳ್ಮೆಯೊಂದಿಗೆ ಭದ್ರತೆ ಮತ್ತು ನಿರಂತರತೆ ಇರಬೇಕು ಗಿಡ ಮರಗಳನ್ನು ನೆಡುವಾಗ ಕೆಲವೊಮ್ಮೆ ಜನರು ನನಗೆ ಈ ಗಿಡ ನೀಡಲು ಇಷ್ಟವಿಲ್ಲ ಇದು ಬೇಗ ಬೆಳೆಯುವುದಿಲ್ಲ ಎಂದು ಹೇಳುತ್ತಾರೆ‌. ನಾನಾಗ ಅವರಿಗೆ ನೀವು ಇಂದು ಕತ್ತರಿಸುತ್ತಿರುವ ಮರಗಳು ನೀವು ಹಾಕಿದ್ದಲ್ಲ ಹಿಂದಿನವರು ಹಾಕಿದ್ದು ನಾವು ಗಿಡವನ್ನು ನೆಡುವಾಗ ಭವಿಷ್ಯದ ಜನಾಂಗದ ಬಗ್ಗೆ ಯೋಚಿಸಬೇಕು. ಒಂದು ಸಸಿಗೆ ಒಳ್ಳೆಯ ಬೆಳಕು, ಮಣ್ಣು,ಸಾಕಷ್ಟು ಮಳೆ ಸಿಕ್ಕರೆ ತನ್ನನ್ನು ನೆಲದಲ್ಲಿ ಹೂತುಕೊಂಡು ಭರವಸೆಯ ಛಾವಣಿ ಒಂದನ್ನು ಆಕಾಶದಲ್ಲಿ ಮೂಡಿಸುತ್ತದೆ.ವಂಗಾರಿಯವರ ಈ ಮಾತುಗಳು ಈ ಕೃತಿಯಲ್ಲಿ ನನಗೆ ಅತ್ಯಂತ ಪ್ರಿಯವಾಗಿವೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಮಹಿಳಾ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿಯುಳ್ಳವರಿಗೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
192
Views
7 Months
Since posted

Voting Closed!

Scroll to Top