ಪುಸ್ತಕದ ಶೀರ್ಷಿಕೆ: ಮೌನರಾಗ
ಪುಸ್ತಕದ ಲೇಖಕರು: ವಿಜಯ ಮೂರ್ತಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಂಜುಳಾ ಬಿ ಎಸ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ವಿಜಯ ಮೂರ್ತಿ ಯವರು ಬರೆದಿರುವ "ಮೌನರಾಗ" ಪುಸ್ತಕವು ಮೌನವನ್ನೇ ಮೈ ತಳೆದು ನಿಂತ ಮಿಶ್ರ ಕವನ ಸಂಕಲನವಾಗಿದೆ. ಈ ಪುಸ್ತಕದಲ್ಲಿನ ಕವನಗಳ ಮೂಲಕ ಅವರು ತಮ್ಮ ಜೀವನದಲ್ಲಿನ ಅನುಭವಗಳನ್ನು ಕಣ್ಣ ಮುಂದೆಯೇ ಕಾಣುವಂತೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿನ ಕವನಗಳು ಹೆಚ್ಚಾಗಿ ಪ್ರಕೃತಿಯನ್ನು ಪ್ರತಿನಿಧಿಸಿದೆ. ಕವನಗಳಲ್ಲಿ ಇವರು ಹೆಣ್ಣನ್ನು ತಾಯಿಯಾಗಿ, ಹೆಣ್ಣಿಗೆ ಹೆಣ್ಣೇ ವೈರಿಯಾಗಿ, ಹೆಣ್ಣನ್ನು ಜಗದ ಕಣ್ಣಾಗಿ ಮತ್ತು ಮಹಿಳಾ ಸಬಲೀಕರಣವನ್ನು ನಿರೂಪಿಸಿದ್ದಾರೆ. ತಾಯಿಯನ್ನು ದೇವರಂತೆ ಪ್ರತಿನಿಧಿಸಿ ಬಾಳಿಗೆ ನೆಮ್ಮದಿಯನ್ನು ಹರಸುವವಳು ಎಂದಿದ್ದಾರೆ. ತಾಯಿಗೆ ಪ್ರಥಮ ಸ್ಥಾನ ದೇವರಾಗಿ, ಗುರುವಾಗಿ, "ಜನನಿ ತಾನೆ ಮೊದಲ ಗುರುವು" ತದನಂತರ ಮಗಳಾಗಿ, ಅಕ್ಕಾ, ತಂಗಿಯಾಗಿ , ಮೊಮ್ಮಗಳಾಗಿ, ಹೆಂಡತಿಯಾಗಿ, ಸೊಸೆಯಾಗಿ, ನಾದಿನಿ ,ಅತ್ತಿಗೆಯಾಗಿ, ದೊಡ್ಡಮ್ಮ , ಚಿಕ್ಕಮ್ಮನಾಗಿ, ಮನೆಯ ವಾತಾವರಣದಲ್ಲಿ ನಾನಾರೂಪದಲ್ಲಿದ್ದು ಸಹಕರಿಸುವ ರೀತಿ, ಸಮಾಜದಲ್ಲಿ ವೀರಶಿರೋಮಣಿಯಾಗಿ, ಪತಿವ್ರತೆಯಾಗಿ, ನಾಟ್ಯ ರಾಣಿಯಾಗಿ, ಸಂಗೀತ ಸರಸ್ವತಿಯಾಗಿ, ಜ್ಞಾನ ಜ್ಯೋತಿಯಾಗಿ, ಲೇಖಕಿಯಾಗಿ, ಅಮ್ಮ ಕಣ್ಣಮುಂದೆ ಬರುವ ರೀತಿಯಲ್ಲಿ ವರ್ಣಿಸಿದ್ದಾರೆ. ತಾಯಿಯ ಮನಸ್ಸು, ಮಮತೆಯ ಶ್ರೀರಕ್ಷೆ, ಅಮ್ಮ-ಮಕ್ಕಳ ಸಂಬಂಧವನ್ನು ಬಿಡಿಸಲಾರದ ನಂಟು ಮತ್ತು ಒಲವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಚಿನ್ನದಾಸೆ ತೊರೆದು, ಮಕ್ಕಳನ್ನೇ ಚಿನ್ನ, ರನ್ನ, ಮುತ್ತು, ಹವಳವನ್ನಾಗಿಸಿದ್ದಾರೆ. ಹಣ ಮತ್ತು ಲಾಟರಿ ಮನಸ್ಸಿನ ಲಾಲಸತೆಯಾಗಿ ಚಿತ್ರಿಸಿದ್ದಾರೆ. ಜೀವನದ ಹಲವಾರು ಮಜಲುಗಳಲ್ಲಿ ಮನುಷ್ಯರು ವರ್ತಿಸುವ ರೀತಿಯನ್ನು ಗುಲಾಬಿ ಗಿಡದ ಮುಳ್ಳು ಮತ್ತು ಹೂವಿಗೆ ಹೋಲಿಸಿ ಎಚ್ಚರಿಸಿದ್ದಾರೆ. ಕರೆಯದೆ ಬಂದು, ಹೇಳದೆ ಹೋಗುವ, ಶಾಶ್ವತವೆನ್ನಿಸಿದರೂ ಅಶಾಶ್ವತವಾದದ್ದೇ ಜೀವನ ಚಕ್ರ ಎಂದಿದ್ದಾರೆ. ನನ್ನವರು ಯಾರು ಎಂಬ ಭ್ರಮಾ ಲೋಕ ಮನೆ ತುಂಬಿ ಬಂದ ಹೆಣ್ಣಿಗೆ ಮನೆಯವರ ಮನತುಂಬದ ಜೀವಕ್ಕೆ ಮಿಡಿಯುವ ಜೀವವನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆರೆ-ಹಿರಿತನದ ಬಗ್ಗೆ ವರ್ಣನೆ ಮನಸ್ಸಿನಾಳಕ್ಕೆ ಇಳಿದು ಹಿರಿತನದ ಹಿರಿಮೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸಿರುವುದನ್ನು ಕಾಣಬಹುದು. ತಂದೆ ತಾಯಿಯ ಬಗ್ಗೆ ಬರೆದಿರುವ ಕವನ, ನಮ್ಮ ಬಾಲ್ಯದಲ್ಲಿ ತಂದೆ ತಾಯಿಯರೊಂದಿಗಿನ ಒಡನಾಟವನ್ನು ನೆನಪಿಸಿ ಮೈ ಜುಮ್ಮೆನ್ನುವಂತೆ ಮಾಡುತ್ತದೆ. ಪ್ರಕೃತಿ ಪುರುಷ ಪರಿಸರದ ಮೇಲೆ ಅವರು ಬರೆದಿರುವ ಕವನಗಳು ಅವರ ಪರಿಸರದ ಪ್ರೇಮ, ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಪರಿಸರವನ್ನು ಅಂತರಂಗಕ್ಕೆ ಹೋಲಿಸಿ ಅಂತರಂಗ ಶುದ್ಧಿಯಂತೆ ಹೊರಗಿನ ಪರಿಸರವನ್ನು ಕಾಪಾಡುವಂತೆ ತಿಳಿಸಿದ್ದಾರೆ. ಮಕ್ಕಳಿಗಾಗಿ ಬರೆದಿರುವ ಕವನಗಳು "ಪುಟಾಣಿ ಪುಟ್ಟನ ಆಟ", " ಪುಟಾಣಿ ಪುಟ್ಟನ ಜಾಣತನ", "ಪುಟಾಣಿ ಪುಟ್ಟನ ಶಾಲೆ", " ಪುಟಾಣಿ ಪುಟ್ಟನ ಬಾಲ" ಇವು ನಿಜಕ್ಕೂ ಮಕ್ಕಳನ್ನು ಮನರಂಜಿಸುವ ಕವನಗಳೆ ಸರಿ. ಸಂಕ್ರಾಂತಿಯಲ್ಲಿ ಒಳ್ಳೆ ಮಾತು ಎಳ್ಳು - ಬೆಲ್ಲದಂತೆ, ರೋಷ -ದ್ವೇಷ ಮರೆಸುವುದನ್ನು ಹೇಳಲು ಮರೆತಿಲ್ಲ. ವಿದ್ಯಾರ್ಥಿ ಜೀವನವನ್ನು ಚಿನ್ನಕ್ಕೆ ಹೋಲಿಸಿ ಕೀರ್ತಿ ಶಿಖರ ಏರುವ ಹಿರಿಮೆ ತೋರಿಸುವಂತೆ ಕೋರಿದ್ದಾರೆ. ಅಂತೆ ಕಂತೆ ಕವನದಲ್ಲಿ ಅದು ಸಂತೆಲಿ ಒಗೆಯುವ ಕಸವೆಂದಿದ್ದಾರೆ. ಭಯೋತ್ಪಾದನೆಯನ್ನು ಗೋಮುಖ ವ್ಯಾಘ್ರತೆ ಎಂದಿದ್ದಾರೆ. ಇರಬೇಕು ಇರಬೇಕು ಕವನದಲ್ಲಿ ಸಂಸಾರದಲ್ಲಿ ಹೇಗಿರಬೇಕೆಂದು ಸೂಚಿಸಿತ್ತ, "ಹಕ್ಕಿಯೊಂದು ಕೂತು ಹಾರಿ ಹೋದಂತೆ, ಗಗನದಲ್ಲಿ ಮಿಂಚು ಮಿಂಚಿ ಮರೆಯಾದಂತೆ, ಗುಡುಗು ಮಿಂಚಿನ ಮಧ್ಯೆಯೇ ಮಳೆ ಬಂದು ನಿಂತಂತೆ , ಆಗಸದಲ್ಲಿ ಕಾಮನ ಬಿಲ್ಲು ಕಂಡು ಮರೆಯಾದಂತೆ, ಬಂಡಿ ಹತ್ತಿ ಇಳಿಯುವಾ ಪಯಣಿಗನಂತೆ, ಜೇನು ಕಟ್ಟಿ ಜೇನು ಕುಡಿದು ಹಾರಿದಂತೆ, ಕೊನೆಯಲ್ಲಿ ತಾವರೆ ಎಲೆ ಮೇಲಿನ ಹನಿಯಂತೆ." ಎಂಬುದು ಬರಹಗಾರ್ತಿಯ ಜೀವನದಲ್ಲಿ ಸಾಧಿಸಿರುವ ಅಧ್ಯಾತ್ಮಿಕತೆಯ ಸ್ವರೂಪವನ್ನು ತೋರಿಸುತ್ತದೆ. ಕರ್ನಾಟಕದ ಹೆಮ್ಮೆಯ ರಾಷ್ಟ್ರಕವಿ ಕುವೆಂಪು, ಕರಾವಳಿಯ ಪಿತಾಮಹರಾದ ಕಾರಂತಜ್ಜ, ಜಿ ಪಿ ರಾಜರತ್ನಂ, ಗಾನಕೋಗಿಲೆ ಮೈಸೂರು ಅನಂತಸ್ವಾಮಿ ಹಾಗೂ ಕನ್ನಡ ಚಿತ್ರ ರಂಗದ ಬಾಲಣ್ಣ ನಮ್ಮನ್ನಗಲಿ ಬಾರದೂರಿಗೆ ನಡೆದಾಗ, ಇವರು ಬರೆದಿರುವ ಕವನಗಳು ಕಣ್ಣು ತೇವಗೊಳ್ಳುವಂತೆ ಮಾಡುತ್ತದೆ. "ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವಂತೆ ಎಲ್ಲಾ ರೀತಿಯ ಜೀವನದ ಅವಿಭಾಜ್ಯ ಅಂಗಗಳನ್ನು ಸ್ಪರ್ಶಿಸಿ ಕೊನೆಗೆ ಇದರಲ್ಲಿನ ಕೆಲವು ಕವನಗಳು ಧ್ವನಿ ಸುರುಳಿ (ಸಿ ಡಿ) ರೂಪದಲ್ಲಿ ಭಾವಗೀತೆಗಳಾಗಿ ಜನಮನ ರಂಜಿಸುತ್ತಿದೆ. ಇದು "ಮೌನ ರಾಗ "ಎಂಬ ಹೆಸರಿನಲ್ಲಿದ್ದು ಅದನ್ನು ಹಾಡಲು ಸಹಕರಿಸಿದ ಗಾಯಕರನ್ನು ನಾವು ಹೆಸರಿಸಲೇ ಬೇಕು ಎನ್ನಿಸುತ್ತದೆ . 1. ಹೆಚ್ ಕೆ ನಾರಾಯಣ (ರೆಡಿಯೋ ಆರ್ಟಿಸ್ಟ್) 2. ಪಲ್ಲವಿ ಎಂ ಡಿ 3. ಶಂಕರ ಶಾನ್ ಬೋಗ್ 4. ಕುಸುಮ ಇನ್ನು ಕೆಲವು ಕವನಗಳು ಮುಪ್ಪು , ಚುನಾವಣೆ , ಪುಸ್ತಕಗಳು, ಪುಸ್ತಕ ಭಂಡಾರ, ಕನ್ನಡಾಂಬೆ, ಇವುಗಳು ಮನುಷ್ಯರ ವಿವೇಚನಾ ಶಕ್ತಿಯನ್ನು ಅಳೆಯುತ್ತವೆ. ಜೊತೆಗೆ ನಾವು ಕನ್ನಡಿಗರೆಂಬ ಹೆಮ್ಮೆ ಮೂಡಿಸುತ್ತದೆ. ಅನ್ನ ಸಾಮಾನ್ಯ ಜನರ ದೈನಂದಿನ ಅವಶ್ಯಕತೆಯ ಸಹಜ ರೂಪ ತೋರಿಸುತ್ತದೆ. ತಾಯಿ ಕವನ ತಾಯಿಯ ಮನಸ್ಸು-ಮಮತೆಯ ಮುಖ ಕಾಣುತ್ತದೆ. ಭಯೋತ್ಪಾದನೆ, ರಾಕ್ಷಸ, ಭಯ ಇವುಗಳೂ ಸಹ ಸಹಜತೆಯ ಮೇರೆ ಮೀರಿದಂತಿಲ್ಲವೆನಿಸುತ್ತದೆ. ಮಕ್ಕಳಿಗೆ ಬೇಸಿಗೆ ಮತ್ತು ರಜಾ ದಿನ ಅಜ್ಜಿಯ ಮನೆ ವಾತಾವರಣ, ತೋಟಕ್ಕೆ ಸಂಚಕಾರದ ಭಾವನೆ ಮನದಂಗಳದಲ್ಲಿ ನಲಿಯುತ್ತದೆ. ತೆಂಗಿನ ಗರಿಯ ಗಿಣಿ ಕವನ ಸೊಗಸಾಗಿ ನೈಜವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸೊಗಸಾದ ಮಿಶ್ರ ಕವನ ಸಂಕಲನ. ನನ್ನ ಮನಸ್ಸಿಗೆ ತುಂಬಾ ಹಿಡಿಸಿದ ವಿಷಯವೆಂದರೆ ಹೆಣ್ಣು ಮಕ್ಕಳ ಜೀವನ ನೈಜ ಚಿತ್ರಣಗೊಂಡು ಮಹಿಳೆಯರ ಸಬಲತೆಯನ್ನು ಎತ್ತಿಹಿಡಿದಿದೆ. ಮಕ್ಕಳ ಮನರಂಜನಾ ಕವನಗಳು ಯುವಕರಿಗಾಗಿ ರಚಿಸಿರುವ ಕವನಗಳು, ವೃದ್ಧರಿಗಾಗಿ ಹಿರಿಮೆ ತೋರಿಸಿರುವ ಕವನಗಳು. ಈ ಕವನ ಸಂಕಲನ ಎಲ್ಲಾ ವಯಸ್ಸಿನರು ಓದುವ ಕವನ ಸಂಕಲನ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಮೌನರಾಗ ಭಾವಗೀತೆಯ ಧ್ವನಿ ಸುರುಳಿ. ಜುಳು ಜುಳು ಹರಿಯುವ ಜಲಧಾರೆಯೇ | ಮೌನವನು ನೀ ತೊರೆದು ಜೊತೆಯಾಗು | ಮಾತು ಮರೆತ ಸಂಗಾತಿ ಜೊತೆಯಾಗು ನೀ | ಸಮರಸವೇ ಜೀವನವು | ಅರಿತು ಬಾಳು ನೀ|
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಮಕ್ಕಳಿಗೆ, ಯುವಕರಿಗೆ, ವೃದ್ಧರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.