Submission 2029

ಪುಸ್ತಕದ ಶೀರ್ಷಿಕೆ: ಭಾವದ ಬೆಳಕಲ್ಲಿ

ಪುಸ್ತಕದ ಲೇಖಕರು: ಮೀನಾ ಹರೀಶ್ ಕೋಟ್ಯಾನ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ನಂದಿನಿ ಎನ್.ಡಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮೀನಾ ಹರೀಶ್ ಕೋಟ್ಯಾನ್ ರವರ "ಭಾವದ ಬೆಳಕಲ್ಲಿ" ನಮ್ಮ ಮನದೊಳಗಿನ ಭಾವಗಳು ಹೊರಗಿಣುಕುವಂತೆ ಮಾಡಿ ಬಿಡುತ್ತದೆ. ನಮ್ಮ ಸುತ್ತವೇ ನಡೆಯುತ್ತಿರುವ ಕತೆಯಂತೆ ಭಾಸವಾಗುತ್ತದೆ. ಓದುತ್ತಲಿದ್ದರೆ ಕತೆಯ ಭಾಗವಾಗಿ ಹೋಗಿ‌ ಸಮಯದ ಪರಿವೆಯೇ ಇಲ್ಲದಂತೆ ಮಾಡುವ ಅದ್ಭುತ ಕತೆ. 'ವೃಷ್ಟಿ' ಸತ್ಯಪ್ರಸಾದ್-ಅಮೃತಾ ದಂಪತಿಯ ಮುದ್ದಿನ ಮಗಳು. ಮಧ್ಯಮವರ್ಗದ ಕುಟುಂಬ. ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಬೇಕೆಂಬ ಆಸೆ ಇದ್ದರೂ ತನ್ನ ತಂದೆಯ ಆಸೆಯಂತೆ ಇಂಜಿನಿಯರಿಂಗ್ ಸೇರಿರುವ ವೃಷ್ಟಿ ಓದಿನಲ್ಲಿ ಮುಂದು. ಸದಾ ಲವಲವಿಕೆಯಿಂದಿರುವ ಅವಳು ಲಕ್ಷಣವಾಗಿದ್ದರೂ.... ಸಾಧಾರಣ ರೂಪ, ಕೊಂಚ ದಪ್ಪ ತಾನು ತನ್ನ ತಾಯಿಯಷ್ಟು ಬೆಳ್ಳಗೆ ಹಾಗೂ ಸುಂದರವಾಗಿಲ್ಲವೆಂಬ ಕೊರಗೊಂದು ಅವಳ ಮನಸಲ್ಲಿತ್ತು. ಓದು ಶಿಕ್ಷಣ ಎಂದು ತನ್ನ ಪಾಡಿಗೆ ತಾನಿದ್ದರೂ ಅವಳ ಹಿಂದೆ ಬರುವ ತೇಜ್ ಪಾಲ್ ಪ್ರೀತಿ ಪ್ರೇಮ ಎಂದು ಅವಳ ಮೆಚ್ಚಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಅವನ ರೂಪ, ಹಣ ಇದಕ್ಕೆ ಮರುಳಾಗದೆ ಬದುಕಿನ ಬಗ್ಗೆ, ಭವಿಷ್ಯದ ಬಗ್ಗೆ ಅವಳ ಆಲೋಚನೆಗಳು ಅವಳಿಗಿದ್ದ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಿಗದಿದ್ದಕ್ಕೆ ಆಸೆ ಪಡದೆ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬಂತೆ ಇರುವುದರಲ್ಲೇ ತೃಪ್ತಿಯಿಂದ ಸರಳವಾಗಿ ಬದುಕುವ ಅತಿಯಾದ ಆಡಂಬರವಿಲ್ಲದ ಕಥಾನಾಯಕಿ ವೃಷ್ಟಿಯ ಪಾತ್ರ ಓದುತ್ತಿದ್ದಂತೆ ನಮ್ಮ ನಡುವೆ ಇರುವಳೋ ಎನಿಸುತ್ತದೆ. ಹೀಗಿದ್ದ ವೃಷ್ಟಿಗೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿಸುವ ಪ್ರೇಮಕಥೆ ಇದಾಗಿದೆ. ಸ್ಪುರದ್ರೂಪಿ ತರುಣ ಬಿಪಿನ್ ನ ಮೊದಲಬಾರಿ ನೋಡಿದಾಗಲೆ ವೃಷ್ಟಿಗೆ ಅವನ ಮೇಲೆ ಉಂಟಾಗುವ ಪ್ರೀತಿ, ಅವನು ಯಾರೊಂದಿಗೂ ಮಾತನಾಡದೆ, ಇವಳ ಕಡೆ ಗಮನವೇ ಕೊಡದೆ ನಿರ್ಲಿಪ್ತವಾಗಿದ್ದರೂ ಅವಳ ಮನದಲ್ಲಿ ದಿನೇ ದಿನೇ ಹೆಚ್ಚುವ ಪ್ರೀತಿ, ಪ್ರೀತಿಯ ಸೆಳೆತ ಹೀಗೂ ಇರಬಹುದಾ ಎನಿಸುವಂತೆ ಮಾಡುತ್ತದೆ. ಮೊದಲ ಪ್ರೀತಿಯ ಕಹಿ ನೆನಪಿನಲ್ಲಿ ನಿರ್ಭಾವುಕನಾದ ಬಿಪಿನ್ ಗೆ ಎಳೆ ವಯಸ್ಸಿನಲ್ಲಿ ಹೆಗಲೇರಿರುವ ಜವಾಬ್ದಾರಿಯ ಭಾರ. ತನ್ನ ಗತ ಬದುಕಿನ ಛಾಯೆ ಮತ್ತೆಂದೂ ಬೀಳದಂತೆ ಮುನ್ನಚ್ಚೆರಿಕೆ ವಹಿಸುವ ರೀತಿ, ಮನದ ಭಾವಗಳ ಅಡಗಿಸಿಟ್ಟುಕೊಂಡು ಬದುಕುವ ಬಿಪಿನ್ ಪಾತ್ರ ಸೆಳೆಯುತ್ತದೆ. 'ದೇಹಕ್ಕೆ ಪೆಟ್ಟಾದ್ರೆ ಆ ನೋವು ಬೇಗ ಮರೆತುಹೋಗುತ್ತೆ. ಸ್ವಾಭಿಮಾನಕ್ಕೆ ಆತ್ಮಗೌರವಕ್ಕೆ ಪೆಟ್ಟಾದ್ರೆ ಬದುಕಿನುದ್ದಕ್ಕೂ ಅದು ಕಾಡ್ತಾನೆ ಇರುತ್ತೆ' ಎಂಬ ಮಾತುಗಳು ಮನಸ್ಸಿನಲ್ಲಿ ಆಳವಾಗಿ ಬೇರೂರುವ ನೋವಿನ ತೀವ್ರತೆಯನ್ನು ಸಾರುತ್ತದೆ. ಒಂದು ಸಲ ತಿಳಿದೋ ತಿಳಿಯದೋ ಆದ ತಪ್ಪಿಗಿಂತ ಹೆಚ್ಚು ಅನುಭವಿಸಿದ್ದ ಶಿಕ್ಷೆಯ ಪ್ರಮಾಣ ಕಲಿಸಿದ ಬದುಕಿನ ಪಾಠ, ಮತ್ತೆ ಆ ತಪ್ಪು ಮರುಕಳಿಸಿದಂತೆ ಪ್ರತಿ ಹೆಜ್ಜೆ ಇಡುವಾಗಲೂ ತೆಗೆದುಕೊಳ್ಳುವ ಮುನ್ನೆಚ್ಚರಿಕೆ, ಎಲ್ಲಾ ಆಯಾಮಗಳನ್ನೂ ಯೋಚಿಸಿ ನಿರ್ಧಾರ ಮಾಡುವ, ಅತಿಯಾಗಿ ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡುವ ಬಿಪಿನ್ ಪಾತ್ರ ಓದುಗರನ್ನು ಕತೆಯ ಭಾಗವಾಗುವಂತೆ ಮಾಡುತ್ತದೆ. ವೃಷ್ಟಿಯ ರೂಪ ಮೆಚ್ಚಿ, ಇಷ್ಟಪಟ್ಟು ಮದುವೆಯಾಗಲು ಬರುವ ಮಿಥುನ್ ಅಪಘಾತದಲ್ಲಿ ಅವಳ ಮುಖ ವಿರೂಪವಾದ ಮೇಲೆ ಪ್ರೀತಿಯನ್ನೇ ಮರೆತು ಅವಳಿಂದ ದೂರ ಉಳಿಯುವ, ಮದುವೆಯನ್ನೇ ಮುರಿದುಕೊಳ್ಳುವ ನಿರ್ಧಾರ ಮಾಡುತ್ತಾನೆ. ಒಂದೊಮ್ಮೆ ಅವಳ ಪ್ರೀತಿ ಸಿಗದೆ ಕೋಪಗೊಂಡು ಅವಳಿಗೆ ಒಂದಷ್ಟು ಕಿರಿಕಿರಿ, ಮಾನಸಿಕ ಹಿಂಸೆ ನೀಡಿದ್ದ, ಈಗವಳಿಂದ ದೂರಾಗಿದ್ದ, ಮೊದಲು ಒರಟ ಎನಿಸಿದರೂ ಅವಳು ಆಸ್ಪತ್ರೆ ಸೇರಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಅವಳ ತಂದೆತಾಯಿಯ ಜೊತೆ ನಿಂತು ಧೈರ್ಯ ತುಂಬಿ ಹಣ ಸಹಾಯ ಮಾಡುವ, ಪ್ರೀತಿ ಸಿಗದಿದ್ದರೂ ಪ್ರೀತಿಸಿದವಳ ನೋವಿಗೆ ಮಿಡಿಯುವ ತೇಜ್ ಪಾಲ್ ಓದುಗರ ಮನಸಲ್ಲಿ ಹೃದಯವಂತ ಎನಿಸಿಬಿಡುತ್ತಾನೆ. ಕಷ್ಟಕಾಲಗಳು ಬಂದಾಗಲೇ ತಮ್ಮವರಾರೆಂದು ತಿಳಿಯುವುದು, ಪ್ರತಿಯೊಬ್ಬರ ಅಸಲಿ ಮುಖ, ವ್ಯಕ್ತಿತ್ವದ ಪರಿಚಯವಾಗುವುದು ಎಂದೆನಿಸುತ್ತದೆ. ಅವಳ ರೂಪಕ್ಕಿಂತ ಗುಣ ಮೆಚ್ಚಿ, ಅವಳ ಮನಸ್ಸಿಗಾವರಿಸಿದ್ದ ಕತ್ತಲ ಸರಿಸಿ ಬೆಳಕು ಮೂಡಿಸುವ ಮತ್ತವಳ ಮುಖದಲ್ಲಿ ನಗುವಿಗೆ ಕಾರಣವಾಗುವ ಬಿಪಿನ್, ಓದುಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾನೆ. ಭಾವನೆಗಳ ಜೊತೆ ಸಾಗುವ ಈ ಕಾದಂಬರಿಯನ್ನು ಓದುತ್ತಿದ್ದರೆ ಕುತೂಹಲವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಾ ಒಮ್ಮೆಲೆ ಓದಿ ಮುಗಿಸಬಿಡಬೇಕೆಂಬ ಭಾವ ನಮ್ಮನ್ನಾವರಿಸುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

7
Votes
176
Views
6 Months
Since posted

Voting Closed!

Scroll to Top