Submission 1961

ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ

ಪುಸ್ತಕದ ಲೇಖಕರು: ರವಿ ಬೆಳಗೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರಶಾಂತ್ ಕೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಹೇಳಿ ಹೋಗು ಕಾರಣ: ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವರ ಈ ಪುಸ್ತಕ, ಹಿಮಾಲಯದಂಥ ವ್ಯಕ್ತಿತ್ವ ಹೊಂದಿದ ಹಿಮವಂತ, ಚಂಚಲ ಮನಸ್ಸಿನ ಪ್ರಾರ್ಥನಾ, ಪ್ರಜ್ಞಾವಂತ ಹೆಣ್ಣಿನ ಸಂಕೇತವಾಗಿರುವ ಊರ್ಮಿಳೆ ಮತ್ತು ಶ್ರೀಮಂತ ವಿಲಾಸಿ ದೇಬ್. ಎರಡು ವಿಭಿನ್ನ ಮನಸ್ಸಿನ ಹೆಣ್ಣುಗಳ, ಎರಡು ವಿಭಿನ್ನ ವ್ಯಕ್ತಿತ್ವ ಹೊಂದಿರುವ ಯುವಕರ ಸುತ್ತ ನಡೆಯುವ ತ್ರಿಕೋನ ಪ್ರೇಮ ಕಾದಂಬರಿಯಾಗಿದೆ. ಕಥೆಗೆ ಪೂರಕವಾಗಲು ರಸೂಲ್ ಜಮಾದಾರ್, ಶಾಂತಯ್ಯ, ಅಜ್ಜಯ್ಯ ಮತ್ತು ಕಾವೇರಮ್ಮನ ಸಹಕಾರ. ಪ್ರೀತಿಗೊಂದು ಶಕ್ತಿಯಿರುತ್ತೆ, ಅದನ್ನು ಪರೀಕ್ಷಿಸಿಕೊಳ್ಳುವ ಹುಚ್ಚು ಹಿಮವಂತ ಮತ್ತು ಪ್ರಾರ್ಥನಾಳಿಗೆ, ಚನ್ನರಾಯಪಟ್ಟಣದಿಂದ ಶಿವಮೊಗ್ಗದ ಶಿವಮೂರ್ತಿ ಸರ್ಕಲ್ ತನಕ ನಡೆದು ಪ್ರೇಮಿಗಳಿಬ್ಬರು ಗೂಡು ಸೇರುತ್ತಾರೆ. ದೇವರ ಮೊದಲ ಸೂಚನೆ, ಎಡಗಾಲು ಇಟ್ಟು ಹೊಸ್ತಿಲು ತುಳಿದ ಪ್ರಾರ್ಥನಾ. ತನ್ನ ಪ್ರೇಯಸಿ ಡಾಕ್ಟರ್ ಆಗುವ ಆಸೆ ನೆರವೇರಿಸಲು ತನ್ನ ಬದುಕಿನ ಗತಿ ಬದಲಿಸಿದ ಸಾಹಸಿ ಹಿಮವಂತ ...ಪ್ರಾರ್ಥನಾ ಸಲುವಾಗಿ ವೇಶ್ಯೆ ಕಾವೇರಮ್ಮ ಮನೆ ಕದ ತಟ್ಟಿ ದಾವಣಗೆರೆಯಲ್ಲಿ ಒಂದು ಮೆಡಿಕಲ್ ಸೀಟು... ಮನೆ ಮಾಲೀಕರಾದ ಶಾಂತಯ್ಯನವರ ಜೊತೆ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ - ಪ್ರಾರ್ಥನಾ ಲೇಔಟ್, ಆಸ್ಪತ್ರೆ, ಕಲ್ಲುಬಂಗಲೆ, ಹಿಮಾಂಶು ಅನ್ನೋ ಇನ್ನು ಹುಟ್ಟದಿರುವ ಮಗುವಿನ ಹೆಸರು....ಎಲ್ಲವೂ ಸಿದ್ಧವಾಗಿತ್ತು. ಪ್ರೀತಿ, ಜಗತ್ತಿನ ಪ್ರತಿ ಮನುಷ್ಯನಿಗೂ ಆಮ್ಲಜನಕದಷ್ಟೇ ಅನಿವಾರ್ಯ, ಹಾಗೆ ಕಥೆಯ ನಾಯಕ ಹಿಮವಂತನಿಗೆ ಅವನ ಪ್ರೀತಿಯೇ ಅವನ ಒಟ್ಟು ಜೀವನದ ಮೊತ್ತ. ಮಿಠಾಯಿ ಮಾರುತ್ತಿದ್ದಅತಿ ಸಾಧಾರಣ ವ್ಯಕ್ತಿ, ಅಸಾಧಾರಣವಾಗಿ ಬೆಳೆದುನಿಂತ ಪ್ರಾರ್ಥನಾ ದಾವಣಗೆರೆಗೆ ಬಂದ ಬಳಿಕ, ಊರ್ಮಿಳಾ-ಹಾಸ್ಟೆಲ್ ಜೊತೆಗಾತಿಯ ಪರಿಚಯ ಮತ್ತು ಸದಾ ಊರ್ಮಿಳೆಗಾಗಿ ಚಡಪಡಿಸುತ್ತಿದ್ದ ದೇಬ್ ಪರಿಚಯ, ಅವಳ ಹಿಮವಂತನ ಪ್ರೀತಿಗೆ ರೋಚಕ ತಿರುವು ನೀಡುತ್ತದೆ. ಒಮ್ಮೆ ಪ್ರೀತಿಯಲಿ ಮೋಸ ಹೋದ ಹೆಣ್ಣು ಊರ್ಮಿಳಾ ಅದೆಷ್ಟು ಗಟ್ಟಿಯೆಂದರೆ ಅವಳ ಚೆಲುವು, ನೇರ ಮಾತು, ಬುದ್ದಿವಂತಿಕೆ, ಧೈರ್ಯಶಾಲಿತನ ಎಂತವರನ್ನು ತನ್ನತ್ತ ಸೆಳೆಯುವ ಹೆಣ್ಣು ಆದರೆ ಯಾರ ಮೋಸಕ್ಕೂ ಆಹಾರವಾಗದೆ ಸಿಗರೇಟ್ ಕುಡಿತಕ್ಕೆ ಒಳಗಾಗಿ ಒಂದು ದಿನವಾದರೂ ವೇಶ್ಯಾಗೃಹದ ಒಳಹೊಕ್ಕು ಬರಬೇಕು ಅಲ್ಲಿ ಗಂಡಸನ್ನು ಸುಲಭವಾಗಿ ಮಣಿಸಬಹುದು ಎಂಬ ಪ್ರಭುದ್ದ ಹುಡುಗಿ- ಚೆಲುವ, ಶ್ರೀಮಂತ, ಬುದ್ದಿವಂತ ದೇಬ್ ಮೋಸದಾಟಕ್ಕೆ ಸೊಪ್ಪು ಹಾಕದೆ ಎಲ್ಲವನ್ನು ಮೆಟ್ಟಿನಿಂತ ಗಟ್ಟಿಗಿತ್ತಿ. ಇತ್ತ ಪ್ರಾರ್ಥನಾಳಂತಹ ಬಡ ಕುಟುಂಬದ ಹೆಣ್ಣು ಸಂಕಷ್ಟದ ಸರಮಾಲೆಯನ್ನು ಎದುರಿಸಲು ಸಾಧ್ಯವಾಗದೆ, ಮುಗ್ಧೆಯಾಗಿದ್ದ ಪ್ರಾರ್ಥನಾ ದೇಬ್ ಶ್ರೀಮಂತಿಕೆಗೆ ಸೋಲುತ್ತಾಳೆ. ಹಿಮವಂತನ ಕಾಲಿಗೆ ಹಣೆ ಮುಟ್ಟಿ ನಮಸ್ಕರಿಸುತ್ತಿದ್ದ ಪ್ರಾರ್ಥನಾ ಅವನ ದೈವಿಕ ಪ್ರೀತಿಗೆ ಮೋಸ ಮಾಡುತ್ತಾಳೆ. ತಾನು ಮಾಡಿದ ತಪ್ಪು ಸರಿಮಾಡಲು ದೇವರ ಜಾಗ ನೀಡಿ ಪೂಜಿಸುತ್ತಾಳೆ. ಬೇಕೆನ್ನಿಸಿದಾಗ ಕಾವೇರಮ್ಮನ ಮನೆಯಿಂದ ಹುಡುಗಿಯರನ್ನು ಕರೆಸಿಕೊಳ್ಳುತ್ತಿದ್ದ ದೇಬ್ ಆದರೆ ಪ್ರಾರ್ಥನಾಳ ಪ್ರೀತಿಗೆ ಸೋತು ನಿಷ್ಠಾವಂತ ಪ್ರೇಮಿಯಾಗಿ ಬದಲಾಗಿ ಪ್ರಾರ್ಥನಾ ಜೊತೆ ಮದುವೆಯಾಗುತ್ತಾನೆ. ಅಜ್ಜಯ್ಯನಂತ ಮೇಧಾವಿ, ಹಿಮವಂತನ ಭವಿಷ್ಯ ತಿಳಿದೇ, ಸಾಯುವ ಮುನ್ನ ವಾಮಾಚಾರದ ವಿದ್ಯೆ ಧಾರೆಯೆರೆದಿರುತ್ತಾರೆ. ಮುಂದೊಂದು ದಿನ ಇದರ ಉಪಯೋಗ. ಹಿಮವಂತನಂತಹ ಹಿಮಾಲಯ ಸದೃಶ ವ್ಯಕ್ತಿ, ರಾಕ್ಷಸನಾಗಿ, ಕ್ರೂರಿಯಾಗಿ ವಾಮಾಚಾರದ ಹಾದಿ ತುಳಿದು ರಸೂಲ್ ಜಮಾದಾರನ ಸಹಾಯದಿಂದ ದೇಬ್ ಕೊಲ್ಲಲು ನಿರ್ಧರಿಸುತ್ತಾನೆ. ಈ ಪರಿಯ ಬದಲಾವಣೆ ಓದುಗರ ಎದೆ ನಡುಗುವಂತೆ ಮಾಡುತ್ತದೆ. ದೇವರು ಕೂಡ ಕೊಲ್ಲುವುದನ್ನು ಒಂದು ಕೆಲಸದಂತೆ ಮಾಡಲು ನಿರ್ಧರಿಸುತ್ತಾನೆ ಆದರೆ ಎಷ್ಟೇ ಆದರೂ ಅವನು ದೇವರಲ್ಲವೇ, ಅದು ಅವನಿಂದ ಆಗದ ಕೆಲಸ. ಒಂದೆಡೆ ಊರ್ಮಿಳಾ ಹೃದಯ ಹಿಮವಂತನೆಡೆಗೆ ಮಿಡಿಯುತ್ತಿರುತ್ತದೆ. ಬಹುಶ್ಯ ಊರ್ಮಿಳಾ ಹೃದಯ ಯಾವ ವ್ಯಕ್ತಿತ್ವವನ್ನು ಬಯಸಿತ್ತೋ ಅಂತಹ ವ್ಯಕ್ತಿತ್ವ ಹಿಮವಂತನಲ್ಲಿ ಕಾಣುತ್ತಾಳೆ ಅದರ ಅರಿವು ಪ್ರಾರ್ಥನಾಳಿಗೆ ನಿಲುಕ್ಕದ್ದು. ಊರ್ಮಿಳೆಯು ತನ್ನ ವ್ಯಸನಗಳನ್ನು ತೊರೆದು, ಒಬ್ಬ ಒಳ್ಳೆ ಸನ್ನಡತೆಯ ಹೆಣ್ಣಿನ ಹಾಗೆ ಪರಿವರ್ತನೆಯಾಗುತ್ತಾಳೆ. ಪ್ರೀತಿಯಲ್ಲಿ ಕೇವಲ ಪ್ರೀತಿ ಹೊರೆತು ಏನನ್ನು ನಿರೀಕ್ಷಿಸಬಾರದು. ಪ್ರೇಮದಲ್ಲಿ ಕೊಡುವುದು ಹೊರೆತು ಮರಳಿ ಪಡೆಯುವುದು ಏನು ಇಲ್ಲ. ಹಿಮವಂತ ನಿರ್ಗತಿಕ ಹುಡುಗಿಯೊಬ್ಬಳ ಡಾಕ್ಟರ್ ಕನಸಿಗೆ ಹೆಗಲಾದ, ಸರ್ವಸ್ವವನ್ನು ಧಾರೆಯೆರೆದ. ಎಲ್ಲವನ್ನು ಪಡೆದ ಹುಡುಗಿ ದೇವರನ್ನು ಕಲ್ಲಾಗಿ ಮಾಡಿ ದ್ವೇಷಕ್ಕೆ ದಾರಿ ಮಾಡಿದಳು. ಅರ್ಧ ಪೂರೈಸಿದ ಕನಸು, ಅದೆಷ್ಟು ದಣಿದು ಬಿಟ್ಟನು, ಈ ಎಲ್ಲ ನೋವು ಸಂಕಟಗಳಿಂದ ಹೊರಬರಲು. ಪವಿತ್ರ ಮನಸ್ಸಿನ ಊರ್ಮಿಳೆ ದೇವರ ಜೊತೆ ನಿಲ್ಲಲು ಬರುತ್ತಾಳೆ. ಹೀಗೆ ಕಥೆ ಸುಖಾಂತ್ಯ ಕಾಣುತ್ತದೆ. ಪ್ರೇಮವೊಂದಕ್ಕೆ ಬದುಕನ್ನು ಅರ್ಥೈಸಿಕೊಳ್ಳುವುದು ಗೊತ್ತಿರುವುದು. ಅದು ಅವನ ಪಾಲಿನ ಅದೃಷ್ಟವೋ ಊರ್ಮಿಳಾ ಸಿಕ್ಕಿದ್ದು ಅಥವಾ ದುರಾದೃಷ್ಟವೋ ಪ್ರಾರ್ಥನಾ ಸಿಗದಿರುವುದು, ಎಲ್ಲಿಯ ಋಣಾನು ಬಂಧವೋ. ಬದುಕು ಎಂದರೆ ಇದೆ ಅಲ್ಲವೇ, ನಾವು ಬಯಸಿದಂತೆ ಏನು ನಡೆಯುವುದಿಲ್ಲ. ಭಾವನೆಗಳಿಗೆ ಪೆಟ್ಟು ಬಿದ್ದಾಗ ಮನುಷ್ಯ ಸತ್ತು ಹೋಗುತ್ತಾನೆ, ಕೇವಲ ನೆಪ ಮಾತ್ರಕ್ಕೆ ಉಸಿರಾಡುತ್ತಿರುತ್ತಾನೆ. ತೋರಿಕೆಯಲ್ಲಿ ಗಟ್ಟಿತನ ಕಂಡರೂ ಪ್ರೇಮಪಾಶದಲ್ಲಿ ನರಳುವುದು ತಪ್ಪಲ್ಲ. ಪ್ರೀತಿಯೆಂದರೆ ಎಲ್ಲರಿಗೂ ಸಿಹಿಯೆಷ್ಟೇಯಲ್ಲ, ಕಹಿ ಅನುಭವದ ಪರಮ ರುಚಿ ಇಂಥದೊಂದು ನೆನಪು ಇಲ್ಲದಿರುವ ಮನುಷ್ಯರಿಲ್ಲ ಜಗದಲಿ. ಕರ್ಮO ನಿರಂತರಂ ಪಾಪಂ ಪುಣ್ಯಂ ದೈವ ನಿರ್ಣಯ. ಕೊನೆಗೂ ಹಿಮವಂತ ದೇವರ ಸ್ವರೂಪವಾಗಿ ಉಳಿದ. ಹೇಳಿ ಹೋಗು ಕಾರಣ ಪುಸ್ತಕ ಓದಿದ ಮೇಲೆ, ಪ್ರೇಮಿಗಳ ಕೆಲವು ಗೊಂದಲದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗುತ್ತದೆ. ಇದು ಪುಸ್ತಕದ ಅತ್ಯಂತ ಸ್ಫರ್ಶಕಾರಿ ಅಂಶ. ರವಿಯವರ ಈ ಪುಸ್ತಕ ಓದಲು ಶುರು ಮಾಡಿದರೆ ಬಿಡದೆ ಓದಿಮುಗಿಸಲು ಪ್ರೇರೇಪಿಸುತ್ತದೆ. ಇದು ಈ ಕಾದಂಬರಿಯ ಸೆಳೆತ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ರವಿ ಸರ್ ಬರಹವೇ ಒಂದು ಶಕ್ತಿ, ಚೈತನ್ಯ ಸ್ಫೂರ್ತಿ ಓದುಗರಿಗೆ, ಕಾದಂಬರಿಯ ಪ್ರತಿ ಪುಟವೂ ಹೃದಯದಾಳಕ್ಕೆ ನಾಟಿ ಅಂತಃಕರಣವನ್ನು ಕಲಕದೇ ಇರದು. ತ್ಯಾಗಮಯಿ- ಹಿಮವಂತ, ಊರ್ಮಿಳೆಯ ಪ್ರಬುದ್ಧ ಮನಸ್ಸು, ಪ್ರಾರ್ಥನಾಳ ಮೋಸ, ದೇಬ್ ಐಷಾರಾಮಿ ಬದುಕು... ಎಲ್ಲದರ ಸಂಪೂರ್ಣ ಮಿಶ್ರಣ ಓದುಗರಿಗೆ ...ಒಂದು ಹದವಾದ ರಸದೌತಣವಾಗಿದೆ. ಮುಚ್ಚುಮರೆಯಿಲ್ಲದೆ ಹೆಣ್ಣಿನ ಭಾವನೆಗಳನ್ನು ಯತ್ತಾವತ್ತಾಗಿ ಓದುಗರ ಮುಂದಿಟ್ಟಿದ್ದಾರೆ. ಕಾದಂಬರಿಯ ಕೆಲ ಸಾಲುಗಳು ಓದುಗರಿಗಾಗಿ: ಅವಶ್ಯಕತೆಗಳಿಗೆ ಹುಟ್ಟಿಕೊಳ್ಳುವುದು ಪ್ರೀತಿಯಲ್ಲ, ಅದು ಹೊಂದಾಣಿಕೆ. ಪ್ರೀತಿ ಉದ್ಭವವಾಗಲಿಕ್ಕೆ ನೂರು ಜರೂರತ್ತುಗಳು ಸೃಷ್ಟಿಯಾಗಬೇಕು. ಕನಸುಗಳ ಫಸಲು ಎದ್ದು ನಿಲ್ಲಬೇಕು. ಪ್ರೀತಿಯೆಂದರೆ ಒಬ್ಬರನೊಬ್ಬರು ಕೇವಲ ಭರಿಸುವಂತದ್ದಲ್ಲ, ಜೀವನ ಪರ್ಯಂತ ಭರಿಸುತ್ತೇವೆಂಬ ನಂಬಿಕೆ. ಹಿಮವಂತನ ಪಾಲಿಗೆ ಪ್ರೀತಿ ಎಂಬುದು ಸದ್ದಿಲ್ಲದೇ ಸಂಭವಿಸುವ ಸಂಗತಿ. ಪ್ರೀತಿಯೆಂದರೆ ಜವಾಬ್ದಾರಿ, ದುಡಿಮೆ. ಹೆಂಗಸು ದೈವವನ್ನು ಪೂಜಿಸಬಲ್ಲಳು. ಪ್ರೀತಿಸಲಾರಳು. ಪ್ರೀತಿ ಕೂಡ ಋತುವಿನಂತಹುದು. ಇವತ್ತು ಮಳೆಯಾದರೆ, ನಾಳೆ ಬಿರುಬಿಸಿಲು. ಪ್ರಾರ್ಥನಾ ಕೇವಲ ಹೆಸರಲ್ಲ. ಕೇವಲ ಹುಡುಗಿಯಲ್ಲ. ಬರೀ ಪ್ರೇಯಸಿಯಲ್ಲ. ಸಹಸ್ರಾರು ಕನಸುಗಳ ಒಟ್ಟು ಮೊತ್ತ. ಒಬ್ಬಂಟ್ಟಿ ಬದುಕಿನ ಆಖೈರು ಕನಸು. ಶ್ರಾವಣದ ಮಳೆಗೆ ಅವಳು ರಣಚಂಡಿ: ಮನುಷ್ಯನ ಮನಸ್ಸು ಕೂಡ ಪ್ರವಾಹದಂತಹುದೇ. ಎಲ್ಲೋ ಮಳೆ ಬಿದ್ದರೆ ಇನ್ನೆಲ್ಲೋ ಉಬ್ಬರ. ಮನಸ್ಸು ಪ್ರಾಮಾಣಿಕವಾದ ಜವಾಬು ಬೇಡುತ್ತದೆ. ಉತ್ತರ ಕೊಡುವುದು ಕಷ್ಟ. ಮನಸ್ಸು ಅನ್ನೋದು ಸಾವಿರ ಅಂಗಡಿಲಿ ಶಾಪಿಂಗ್ ಮಾಡೋಕೆ ಹೊರಟ ಮಗು ಥರ. ಹಿಮೂ ದೇವರಂಥ ಮನುಷ್ಯ. ದೇವರಿಗೆ ದುಃಖವಾಗಲ್ಲ. ದೇವರು ಸಿಟ್ಟು ಮಾಡಿಕೊಳ್ಳಲ್ಲ. ದೇವರು ಸುಖವಾಗಿರುತ್ತಾನೆ. ಬದುಕೆಂಬುದು ರಾತ್ರೋ ರಾತ್ರಿ ರೂಪುಗೊಳ್ಳುವುದಿಲ್ಲ. ಅದ್ದಕ್ಕೆ ಎಷ್ಟೋ ವರ್ಷಗಳ ತಪಸ್ಸು ಬೇಕು. ನಿರೀಕ್ಷೆ ಬೇಕು ಶ್ರದ್ದೆ ಬೇಕು. ಒಂದು ಕಡೆಯಿಂದ ಕಟ್ಟಿಕೊಳ್ಳುತ್ತ ಬರಬೇಕು. ಅವಳು ಕಾರಣವೂ ಹೇಳದೆ ಹೊರಟು ಹೋಗಿದ್ದು ನಿಜ. ಮೋಸವಾಗಿದ್ದು ನಿಜ. ಅವಳಿಗೋಸ್ಕರ ಬದುಕಿನ ನಕಾಶೆಯನ್ನೇ ಬದಲಾಯಿಸಿಕೊಂಡಿದ್ದು ನಿಜ. ಲೇಔಟ್, ಆಸ್ಪತ್ರೆ, ಕಲ್ಲುಬಂಗಲೆ, ಹಿಮಾಂಶು ಅನ್ನೋ ಮಗುವಿನ ಹೆಸರು... ಎಲ್ಲ ನಿಜ ಆದರೆ ಪ್ರಾರ್ಥನಾ ಮಾತ್ರ ಸುಳ್ಳು. ಹಳ್ಳಿಯೊಂದರ ಮನೆಯ ಹುಡುಗಿ ಬೀದಿಯಲ್ಲಿ ನಿಂತು ಡಾಕ್ಟ್ರಗುವ ಕನಸು ಕಂಡರೆ, ದಾರಿ ಹುಡುಕಿಕೊಟ್ಟವನ್ನೊಬ್ಬ ಮಿಠಾಯಿ ಮಾರುವ ಹುಡುಗ. ಏನು ಮಾಡಲಿ ಡಾಕ್ಟ್ರೇ ..? ಮಿಠಾಯಿ ಮಾರುವವನ ಕನಸು ಅರ್ಧಕ್ಕೆ ಮುಗಿದುಹೋಯಿತು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಪ್ರೀತಿಯಲ್ಲಿ ಬೆಂದು ಹೋದ ಯುವ ಮನಸ್ಸುಗಳಿಗೆ ಮತ್ತು ಪ್ರಾಯಕ್ಕೆ ಕಾಲಿಟ್ಟ ಯುವಕ ಯುವತಿಯರಿಗೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

69
Votes
331
Views
6 Months
Since posted

Voting Closed!

Scroll to Top