ಪುಸ್ತಕದ ಶೀರ್ಷಿಕೆ: ಅರಬಿ ಮೇಷ್ಟ್ರು ಮತ್ತು ಗೋಬಿ ಮಂಚೂರಿ
ಪುಸ್ತಕದ ಲೇಖಕರು: ಬಾನು ಮುಷ್ತಾಕ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಡಾ.ಭವ್ಯ ಅಶೋಕ ಸಂಪಗಾರ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಬೂಕರ್ ಪ್ರಶಸ್ತಿ ಬಂದ ಮೇಲೆ ಬಾನು ಮುಷ್ತಾಕರ ಕೃತಿಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆಯಂತೆ. ಪರಕೀಯರು ಗುರುತಿಸಿದ ಮೇಲೆ ತಾನೇ ಭಾರತೀಯರಿಗೆ ತಮ್ಮ ವಸ್ತುಗಳ ಬೆಲೆ ತಿಳಿಯುವುದು! ಇರಲಿ, ಈಗಲಾದರೂ ಗೊತ್ತಾಯಿತಲ್ಲ !! ನಿಮಗೇನಾದರೂ ಬೂಕರ್ ಒಲಿದ ಆ ಪುಸ್ತಕ ದೊರೆತರೆ ತಡಮಾಡದೆ ಮೊದಲು ಪುಟಗಳನ್ನು ತಿರುವಿ “ಅರಬಿ ಮೇಷ್ಟ್ರು ಮತ್ತು ಗೋಬಿ ಮಂಚೂರಿ” ಕಥೆಗೆ ಬಂದುಬಿಡಿ. ದುಡಿಯುವ ಹೆಣ್ಣಿಗಾಗುವ ಸಂಕಷ್ಟಗಳ ಮಿಶ್ರಣಕ್ಕೆ, ಗಂಡಸಿನ ಅಹಂನ ಅಪರಾವತಾರಗಳನ್ನು ಬೆರೆಸಿ, ತೆಳು ಹಾಸ್ಯವನ್ನು ಹಗುರವಾಗಿ ಸಿಂಪಡಿಸಿ ಬಾನು ಮುಷ್ತಾಕರು ಅದ್ಭುತವಾದ ಗೋಬಿ ಮಂಚೂರಿಯನ್ನು ಸಿದ್ಧಪಡಿಸಿದ್ದಾರೆ. ಒಂದೇ ಓದಿಗೆ ಹೆಣ್ಣುಮಕ್ಕಳಿದ್ದು ಹೊರಗೆ ದುಡಿಯಲು ಹೋಗುವ ನನ್ನಂತಹ ತಾಯಂದಿರಿಗೆ ಇದು ನನ್ನದೇ ಕಥೆ ಎನಿಸಿಬಿಡುತ್ತದೆ. ಸಾಮಾನ್ಯ ವಸ್ತುವನ್ನಾಗಲೀ ವ್ಯಕ್ತಿಯನ್ನಾಗಲೀ ಅಥವಾ ವಿಷಯವನ್ನೇ ಆಗಲಿ, ತನ್ನ ಅದ್ಭುತ ಕಲೆಯಿಂದ ಅಸಾಮಾನ್ಯವಾಗಿಸುವ ಶಕ್ತಿ ಲೇಖಕಿಗೆ ಸಿದ್ಧಹಸ್ತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಲ್ಲದೆ ವಕೀಲರಾಗಿ, ಸಾಹಿತಿಯಾಗಿ ಜೊತೆಗೆ ಒಂದು ಸದೃಢ ಪರಿವಾರದ ಹಿನ್ನೆಲೆಯಿರುವ ಬಾನುರವರು ಮೊದಲಿನಿಂದಲೂ ತಮ್ಮ ಕಥೆಗಳ ಮೂಲಕ ತಮ್ಮ ಸಮುದಾಯದ ಉದ್ಧಾರಕ್ಕಾಗಿ ನಿಷ್ಟಾವಂತ ಪ್ರಯತ್ನ ಮಾಡುತ್ತಿರುವ ದಿಟ್ಟ ಲೇಖಕಿ. ಅವರ ಪ್ರತಿಯೊಂದು ಕಥೆಗಳಲ್ಲಿಯೂ ಮುಸ್ಲಿಂ ಕುಟುಂಬಗಳಿಂದ ಬರುವ ಎಲ್ಲ ವಯೋಮಾನದ ಹೆಣ್ಣುಮಕ್ಕಳ ಹೋರಾಟವಿದೆ, ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಗಟ್ಟಿಯಾದ ಧ್ವನಿಯಿದೆ. ಈ ಕಥೆಯಲ್ಲಿಯೂ ಅವರ ಪ್ರಯೋಗ ಮುಂದುವರೆದಿದೆ. ಇನ್ನು ನಮ್ಮ “ಅರಬಿ ಮೇಷ್ಟ್ರು ಮತ್ತು ಗೋಬಿ ಮಂಚೂರಿ” ಕಥೆಗೆ ಬರೋಣ. ಇಲ್ಲಿ ಕಥಾನಾಯಕಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿರುವ ವಕೀಲೆ, ಬಹಳಷ್ಟು ಜನ ಅವರ ಮಕ್ಕಳ ಮದುವೆ ಸಂಬಂಧ ಗೊತ್ತು ಮಾಡುವಾಗಲೂ ಆಕೆಯ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದೇ ಆಕೆಯ ಹಿರಿಮೆಗೆ ಸಾಕ್ಷಿ. ಕಿರಿಯ ವಕೀಲರಿಗೆ ತರಬೇತಿ ಕೊಡುತ್ತಲೇ ತಾನೂ ಕೂಡ ಪ್ರತಿಯೊಂದು ಕೇಸಿನ ಬಗ್ಗೆ ಮುತುವರ್ಜಿ ವಹಿಸುವಂತಹವಳು. ಇಷ್ಟೆಲ್ಲ ವೃತ್ತಿಜೀವನದ ಒತ್ತಡದಲ್ಲಿರುವವಳಿಗೆ ಎರಡು ಹದಿಹರೆಯದ ಹೆಣ್ಣುಮಕ್ಕಳ ಜವಾಬ್ದಾರಿ ಬೇರೆ. ಸೋ ಕಾಲ್ಡ್ ಗಂಡನೆನಿಸಿಕೊಂಡವನ ಬೇಜವಬ್ದಾರಿ ನಿಲುವು ಹಾಗೂ ಅವನ ಮನೆಯವರ ಅಸಹಕಾರ ಢಾಳಾಗಿ ಚಿತ್ರಿಸಿದ್ದಾರೆ. ಆಧುನಿಕತೆಯುಳ್ಳವಳಾದರೂ ವಕೀಲೆ ತನ್ನ ಹೆಣ್ಣುಮಕ್ಕಳು ಧಾರ್ಮಿಕ ಶಿಕ್ಷಣ ಪಡೆಯಲಿ ಎಂದು ಹಂಬಲಿಸುವುದು ಈಗಿನ ತಾಯಂದಿರ ಪಾಲಿಗೆ ಗಮನಾರ್ಹ. ನಾಯಕಿಯ ತಮ್ಮನ ಪಾತ್ರದ ಮೂಲಕ ಗಂಡಸು ಹೇಗೆ ಎಲ್ಲಾ ಪರಿಸ್ಥಿತಿಯಲ್ಲಿಯೂ ಮುಂದಾಲೋಚನೆಯಿಲ್ಲದೆ ಏಕಪಕ್ಷೀಯ ನಿರ್ಧಾರಗಳನ್ನು ಹೇರುತ್ತಾನೆ ಎಂಬುದನ್ನು ಮೊನಚಾಗಿ ವಿವರಿಸಲಾಗಿದೆ. “ನಿನ್ನ ಮಕ್ಕಳಲ್ಲವೇ, ನಿನ್ನ ಕರ್ತವ್ಯವಲ್ಲವೇ” ಎನ್ನುತ್ತ ಅಂತಹ ತಮ್ಮನಿಗೆ ಬಾಧ್ಯತೆಯನ್ನು ನೆನಪಿಸುವ ಅಕ್ಕನ ಜಾಣ್ಮೆಯನ್ನೂ ನಿರೂಪಿಸಲಾಗಿದೆ. ಅನಿವಾರ್ಯವಾಗಿ ಗುರುತು-ಪರಿಚಯವಿಲ್ಲದವರನ್ನು ಮನೆಯೊಳಗೆ ಬಿಟ್ಟುಕೊಳ್ಳುವಾಗಿನ ಸಂದಿಗ್ಧತೆ ಹಾಗೆಯೇ ಕೊನೆಗೆ ಯುವಕನೊಬ್ಬ ಗುರುವಾಗಿ ಸಿಕ್ಕಾಗ, ಮಕ್ಕಳಿಗೆ ಸಮಯ ಕೊಡಲಾಗದ ತಪ್ಪಿಗೆ ಕಾಣಿಕೆಯ ರೂಪದಲ್ಲೋ, ಸಂಬಳ ಹೆಚ್ಚು ಮಾಡುತ್ತಲೋ ಕೆಲಸದವರ ನಂಬಿಕೆ ಗಳಿಸಲು ಮಾಡುವ ನಾಯಕಿಯ ಪ್ರಯತ್ನ ಇಂದಿನ ಸಮಾಜಕ್ಕೆ ಹಿಡಿದ ಕೈಗನ್ನಡಿ. ಇಲ್ಲಿ ದುಡಿಯುವ ಹೆಂಗಸರ ತುಮುಲಗಳನ್ನು ಹೆಕ್ಕಿ ತೋರಿಸುವುದರಲ್ಲಿ ಬಾನು ಮುಷ್ತಾಕರು ಗೆದ್ದಿದ್ದಾರೆ. ಮಕ್ಕಳು ಸುಶ್ರಾವ್ಯವಾಗಿ ಕುರಾನ್ ಪಠಿಸಿದಾಗ ಸಿಕ್ಕ ಸಮಾಧಾನ ಒಂದು ದಿನ ಗುರುಗಳೊಡನೆ ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಏಕಾಂತದಲ್ಲಿ ಕಂಡಾಗ ಹಾರಿಹೋಗಿಬಿಡುತ್ತದೆ. ಇಂತಹ ಪರಿಸ್ಥಿತಿಗೆ ಕಾರಣ ಯಕಶ್ಚಿತ್ ಒಂದು ‘ಗೋಬಿ ಮಂಚೂರಿಯ’ ಮೇಲಣ ವ್ಯಾಮೋಹ ! ಅದು ಹೇಗೆ? ಏಕೆ? ಎಂಬ ಸಂದೇಹಗಳನ್ನು ಕಥೆಯನ್ನು ಓದಿಯೇ ಪರಿಹರಿಸಿಕೊಳ್ಳಬೇಕು. ಮುಂದುವರೆದು, ಮಕ್ಕಳ ಜೀವನದಿಂದ ಆ ಗುರುಗಳು ಹೊರಗೆ ಹೋದರೂ ಪದೇ ಪದೇ ಗಮನಕ್ಕೆ ಬರುವ ಆತನ ಮದುವೆ ವಿಷಯಕ್ಕೆ ಕಥಾನಾಯಕಿ ಬಿಕ್ಕಟ್ಟಿಗೆ ಸಿಗುತ್ತಿರುತ್ತಾಳೆ. ಹೆಣ್ಣುಮಕ್ಕಳ ವಿವಾಹ ನಿಶ್ಚಯಿಸುವ ಯಾವುದೇ ತಂದೆ ತಾಯಿಗಳಿಗೆದುರಾಗುವ ಸಂಶಯಗಳು ಮತ್ತವರ ಕಳಕಳಿಯನ್ನೂ ಲೇಖಕಿಯು ಕೆಲವು ಪ್ರಸಂಗಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಗೋಬಿ ಮಂಚೂರಿಯ ಹೆಸರು ‘ಸಲೀಮ ಜಾನ’ಳ ಬಾಯಲ್ಲಿ ಗುಬೆ ಮಂಚರಿ, ಗುಬೆ ಸಾರು, ಗೂಬೆ ಮಂಚಲಿಯಾಗಿಬಿಡುವುದಂತೂ ಗಂಭೀರವಾದ ಕಥೆಯ ಓಗದ ಮಧ್ಯೆ ನಗು ಉಕ್ಕಿಸಲು ಯಶಸ್ವಿಯಾಗಿದೆ. ಗೋಬಿ ಮಂಚೂರಿಯ ಆಸೆ ಒಬ್ಬನ ಗಂಡಸ್ತನದ ಬಗ್ಗೆಯೇ ಸಂಶಯ ತಂದಿದ್ದು ಮಾತ್ರ ವಿಪರ್ಯಾಸ. ಕಥೆಯ ಕೊನೆಯಲ್ಲಿ ಕಟ್ಟಿಕೊಂಡ ಹೆಂಡತಿಯನ್ನು ಕೇವಲ ಒಂದು ತಿನಿಸಿಗಾಗಿ ಹೊಡೆದು-ಬಡಿದು ಮಾಡುವವನ ಮಾನಸಿಕ ಸ್ವಾಸ್ಥ್ಯದ ಬಗ್ಗೆ ನಾಯಕಿ ಅನುಮಾನಗೊಂಡರೂ, ಸಿಕ್ಕಿಕೊಂಡ ತಕ್ಷಣ ಓಡಿಹೋಗುವ ಗಂಡಸಿಗಿಂತ ಸಂಸಾರದ ಕೂಪಕ್ಕೆ ಬಿದ್ದಿದ್ದ ಹೆಣ್ಣುಮಗಳನ್ನು ಉಳಿಸುವುದು ದೊಡ್ಡದೆಂದು ಭಾವಿಸಿ ಆಕೆಗಾಗಿ ಗೋಬಿ ಮಂಚೂರಿಯ ರೆಸಿಪಿ ಬರೆಯುವುದು ಹೆಣ್ಣಿನ ಅಸಹಾಯಕತೆಯ ವಿವಿಧ ಮಜಲುಗಳನ್ನು ಸಮರ್ಥವಾಗಿ ತೆರೆದಿಡುತ್ತದೆ. ಆದರೆ ಅದರೊಂದಿಗೆ ಒಡೆದು ಹೋಗಬಹುದಾದದ್ದನ್ನು ನಾಜೂಕಾಗಿ ಅಂಟಿಸಲು ಹೆಣಗಾಡುವ ಕಥಾನಾಯಕಿ ಸಂಸಾರಿಗಳ ಮೆಚ್ಚುಗೆಗಂತೂ ಪಾತ್ರಳಾಗುತ್ತಾಳೆ. ಸಮಕಾಲೀನ ಸ್ತ್ರೀವಾದಿಗಳು ಇದನ್ನು ಹೆಣ್ಣಿಗಾದ ಸೋಲೆಂದು ಬಣ್ಣಿಸಬಹುದೇನೋ ! ಆದರೆ ಕಥೆಯ ಆಶಯ ಅದಲ್ಲ ಎಂಬುದು ಸ್ಪಷ್ಟವಾಗಿದೆ. “ಮುಷ್ತಾಕ್” ಎನ್ನುವ ಪದ ಅರೇಬಿಕ್ ಭಾಷೆಯಿಂದ ಬಂದಿದ್ದು, ಕನ್ನಡದಲ್ಲಿ ಅದರರ್ಥ ‘ಬಯಸುವುದು’ ಅಥವಾ ‘ಹಾತೊರೆಯುವುದು’ ಎಂದಾಗುತ್ತದೆ. ಕಾಕತಾಳೀಯವೆಂಬಂತೆ ಇಲ್ಲಿಯವರೆಗಿನ ಅವರ ಕಥೆಗಳಲ್ಲಿ ಒಂದು ಪರಿಮಿತಿಯಲ್ಲಿಯೇ ಬದುಕಬೇಕಾದ ಹೆಣ್ಣೊಬ್ಬಳು ಅದರಿಂದ ಹೊರಬಂದು ತನ್ನ ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾತೊರೆಯುವಂತೆಯೇ ತೋರುತ್ತವೆ. ಬಂಧನಗಳಲ್ಲಿ ಸಿಲುಕಿದ ಹೆಂಗಸರು ತಮ್ಮವರ ಗೆಲುವಿಗಾಗಿ ಸೋಲೊಪ್ಪಿದರೂ ವ್ಯಕ್ತಿತ್ವದಲ್ಲಿ ದೊಡ್ಡವರಾಗಿಬಿಡುವ ಉದಾಹರಣೆಗಳೂ ಇವೆ. ಸದರಿ ಕಥೆಯಲ್ಲಿಯೂ ಇಂತಹದೇ ಪ್ರಯೋಗ ನಾಯಕಿಯ ರೂಪದಲ್ಲಿ ನಡೆಯುತ್ತದೆ. ಸರಳ ಭಾಷಾ ಪ್ರಯೋಗದೊಂದಿಗೆ ಯಶಸ್ವೀ ಕತೆ ಕಟ್ಟುವ ಪರಿಣತಿಯನ್ನು ಬಳಸಿಕೊಂಡು ಬಹಳ ರುಚಿಕಟ್ಟಾಗಿ ಬಾನು ಮುಷ್ತಾಕರ ಈ ಗೋಬಿ ಮಂಚೂರಿ ಸಿದ್ಧವಾಗಿದೆ.ರುಚಿ ನೋಡಬೇಕಾದ್ದು ಓದುಗರಾದ ನಾವು! ಒಬ್ಬೊಬ್ಬ ಮನುಷ್ಯನಿಗೆ ಒಂದೊಂದು ರೀತಿಯ ನಾಲಗೆ ಗುಣ!
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನನಗೆ ಕಥೆಯ ಕೊನೆಯಲ್ಲಿ ಪ್ರಸಿದ್ಧ ವಕೀಲೆಯಾದ ಕಥಾನಾಯಕಿ ಗೋಬಿಮಂಚೂರಿಯ ರೆಸಿಪಿ ಬರೆಯುವ ಕ್ಷಣ ಅತ್ಯಂತ ಪ್ರಭಾವ ಬೀರಿತು. ನಾಯಕಿ ಆಧುನಿಕಳು, ಓದಿದವಳು, ಸಮಾಜದಲ್ಲಿ ಹೆಸರು ಗಳಿಸಿದವಳು, ನ್ಯಾಯಾನ್ಯಾಯ ತೀರ್ಮಾನಿಸಬಹುದಾದ ಜವಬ್ದಾರಿಯುತ ಕರ್ತವ್ಯದಲ್ಲಿರುವವಳು. ಗುರುವಿನ ಗೋಬಿ ಮಂಚೂರಿ ಮೋಹವನ್ನು ಮಾನಸಿಕ ರೋಗವೆಂದು ಆಕೆ ಪರಿಗಣಿಸಿದರೂ ಕೂಡ ಆಕೆಗೆ ಅವನ ಪಲಾಯನವಾದ ನೆನಪಾಗುತ್ತದೆ. ಆತ ಹೆಂಡತಿಯನ್ನು ಒಂಟಿಯಾಗಿಸಿ ಓಡಿಹೋಗುತ್ತಾನೆ ಎಂಬ ಕಾರಣವನ್ನು ಜ್ಞಾಪಿಸಿಕೊಂಡು ಕಾನೂನಿನ ಬದಲು ಅವನ ಹೆಂಡತಿಗೆ ರೆಸಿಪಿ ಬರೆಯಲು ತೊಡಗುತ್ತಾಳೆ. ಇದು ಪ್ರಖರ ಸ್ತ್ರೀವಾದಿಗಳಿಗೆ ಸೋಲೆಂದು ಕಾಣಿಸುತ್ತದೆ. ಆದರೆ ಕುಟುಂಬ ವ್ಯವಸ್ಥೆಯನ್ನು ಗೌರವಿಸುವವರಿಗೆ ಒಂದು ಸಂಸಾರವನ್ನು ಕಾಪಾಡುವ ಕಟ್ಟಕಡೆಯ ಪ್ರಯತ್ನದಂತೆ ಕಂಡು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ಅದೇನೇ ಇರಲಿ, ಸ್ತ್ರೀ ಎಂದರೆ ಕರುಣಾಮಯಿ ಎಂಬ ವಿವರಣೆ ನಮಗೆಂದೂ ಬಲಹೀನತೆಯ ದ್ಯೋತಕವಲ್ಲ ಬದಲಾಗಿ ಗಂಡಸಿಗಿಂತಲೂ ಎತ್ತರದ ಸ್ಥಾನದಲ್ಲಿ ಹೆಂಗಸರನ್ನು ಇಡುವ ಮಾನದಂಡ ಎಂಬ ಸೂಕ್ಷ್ಮತೆ ಈ ಸನ್ನಿವೇಶದ ಮೂಲಕ ಬಹಳ ಮನೋಜ್ಞವಾಗಿ ಚಿತ್ರಿತವಾಗಿದೆ. ಬಾನು ಮುಷ್ತಾಕರ ಕತೆ ಕಟ್ಟುವಿಕೆ ವಿಭಿನ್ನತೆಯ ಮೂಲಕ ಮನಸ್ಸಿನಲ್ಲಿ ಉಳಿಯುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸ್ತ್ರೀ ಸಂವೇದನಾಶೀಲ ಓದುಗರಿಗೆ ಸೂಕ್ತ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.