ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳೆಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: Niranjan ಹೆಚ್ ಬಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ರವಿ ಬೆಳಗೆರೆಯವರ ಪ್ರೇಮ ಕಾವ್ಯ: 'ಹೇಳಿ ಹೋಗು ಕಾರಣ' ಜೀವನ ಮತ್ತು ಪ್ರೀತಿಯ ವ್ಯಾಖ್ಯಾನಕ್ಕೆ ಕನ್ನಡಿ ಕನ್ನಡ ಸಾಹಿತ್ಯ ಲೋಕದಲ್ಲಿ ರವಿ ಬೆಳಗೆರೆಯವರ 'ಹೇಳಿ ಹೋಗು ಕಾರಣ' ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಇದು ಕೇವಲ ಕಥೆಯಲ್ಲ, ಬದಲಿಗೆ ಪ್ರೀತಿ, ನೋವು, ಮತ್ತು ಮಾನವ ಸಂಬಂಧಗಳ ಜಟಿಲತೆಯನ್ನು ಬಿಚ್ಚಿಡುವ ಒಂದು ಅತ್ಯದ್ಭುತ ಪ್ರೇಮ ಕಾವ್ಯ. ಈ ಪುಸ್ತಕವನ್ನು ಓದಿದ ಹಲವು ಯುವಕರು ತಮ್ಮನ್ನು ಕಥಾನಾಯಕ ಹಿಮವಂತನಾಗಿ, ಹಾಗೆಯೇ ಯುವತಿಯರು ಪ್ರಾರ್ಥನಾ ಅಥವಾ ಊರ್ಮಿಳಾಳಾಗಿ ಹೋಲಿಸಿಕೊಂಡಿದ್ದಾರೆ ಎಂಬುದು ಲೇಖಕರ ನುಡಿಯಾಗಿದೆ. ಈ ಪಾತ್ರಗಳು ನಮ್ಮ ಸಮಾಜದ ಜೀವಂತ ಪ್ರತಿಬಿಂಬಗಳು; ಇಂತಹ ವ್ಯಕ್ತಿಗಳು ನಮ್ಮ ಸುತ್ತಲೂ ಇದ್ದೇ ಇರುತ್ತಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಪ್ರೀತಿ ಎಂಬ ಎರಡಕ್ಷರದ ಸಂಬಂಧದ ಬಹುಮುಖಿ ವ್ಯಾಖ್ಯಾನ ಈ ಕಥೆ ಪ್ರೀತಿಯ ಕುರಿತಾದ ಹಲವು ದೃಷ್ಟಿಕೋನಗಳನ್ನು ತೆರೆದಿಡುತ್ತದೆ. ಪ್ರೀತಿ ಎಂದರೆ ಎಲ್ಲರಿಗೂ ಒಂದೇ ಅಲ್ಲ. ಕೆಲವರಿಗೆ ಪ್ರೀತಿ ಎಂದರೆ ಪರಸ್ಪರ ನಂಬಿಕೆ ಮತ್ತು ಕಂಫರ್ಟೆನ್ಸಿ. ಅಂದರೆ, ನಮ್ಮ ಜೊತೆಗಿದ್ದರೆ ಸಾಕು, ಏನು ಬೇಕಾದರೂ ಮಾಡುವೆವು ಎಂಬ ವಿಶ್ವಾಸವೇ ಪ್ರೀತಿಯಾದರೆ; ಇನ್ನು ಕೆಲವರಿಗೆ ದೇಹದ ಆಸೆಗಳನ್ನು ಮತ್ತು ವಂಶಗಳನ್ನು ತೀರಿಸುವ ಸಂಬಂಧವೇ ಪ್ರೀತಿಯಾಗಿರುತ್ತದೆ. ಮತ್ತೆ ಕೆಲವರಿಗೆ, ತಾವು ಪ್ರೀತಿಸುವವರಿಗಾಗಿ ಏನು ಬೇಕಾದರೂ ಮಾಡಬಲ್ಲೆವು, ನಮ್ಮ ಪ್ರತಿಯೊಂದು ಕನಸು ನಮ್ಮ ಪ್ರೀತಿಗಾಗಿ ಮೀಸಲು ಎಂಬ ಶುದ್ಧ ಬದ್ಧತೆಯೇ ಪ್ರೀತಿ. ಕಥಾನಾಯಕ ಹಿಮವಂತನು ಪ್ರಾರ್ಥನಾಳಿಗೆ ಇಂತಹ ಒಂದು ಶುದ್ಧ ಪ್ರೀತಿಯನ್ನೇ ನೀಡುತ್ತಾನೆ. ಆದರೆ, ಪ್ರಾರ್ಥನಾ ತನ್ನ ಮನೆಯವರಿಂದ ಕಷ್ಟಗಳನ್ನು ಅನುಭವಿಸಿ ಮತ್ತೆ ಈ ಜಗತ್ತಿಗೆ ಕಾಲಿಟ್ಟಾಗ, ಅವಳ ಜೀವನದ ಮೇಲಿನ ದೃಷ್ಟಿಕೋನ ಮತ್ತು ನಂಬಿಕೆ ಎರಡೂ ಬದಲಾಗಿರುತ್ತದೆ. ಹೀಗಾಗಿ, ಹಿಮವಂತನಿಗೆ ಅವಳಿಂದ ಮರಳಿ ಸಿಕ್ಕಿದ್ದು ಪ್ರೀತಿನೋ ಅಥವಾ ಮೋಸನೋ ಎಂಬುದೇ ಈ ಪುಸ್ತಕದ ಮುಖ್ಯ ಕಥಾಹಂದರವಾಗಿದೆ. ಮತ್ತೆ ಈ ಕಾದಂಬರಿಯ ಇನ್ನೊಂದು ಅದ್ಭುತ ಪಾತ್ರ ಊರ್ಮಿಳಾ ಪಾತ್ರ ಈ ಕಾದಂಬರಿ ಓದಿದವರಿಗೆ ಹಿಮಾವಂತ ಇಷ್ಟ ಆಗಬಹುದು ಆದರೆ ನನಗೆ ಹಿಮವಂತನಿಗಿಂತಲೂ ಜಾಸ್ತಿ ಇಷ್ಟವಾಗುವ ಪಾತ್ರವೆಂದರೆ ಊರ್ಮಿಳಾ. ಆಕೆ ಕೇಳುವ ಒಂದು ತೀಕ್ಷ್ಣವಾದ ಮಾತು ಪ್ರೀತಿ ಮತ್ತು ಕರ್ತವ್ಯದ ನಡುವಿನ ಅಂತರವನ್ನು ಪ್ರಶ್ನಿಸುತ್ತದೆ: ಪತ್ನಿಯು ತನ್ನ ಗಂಡನ ಒಳ ಉಡುಪನ್ನು ಸಹ ಪ್ರೀತಿಯಿಂದ ಒಗೆದು ಒಣಹಾಕುತ್ತಾಳೆ. ಆದರೆ ಗಂಡ ಅದೇ ಉಡುಪನ್ನು ಧರಿಸಿ ಹಾದರ ಮಾಡಿ ಬರುತ್ತಾನೆ. ಹೆಂಡತಿಗೆ ಗಂಡನ ಮೇಲೆ ಇರುವುದು ಪ್ರೀತಿ. ಹಾಗಾದರೆ ಗಂಡನಿಗೆ ಹೆಂಡತಿ ಮೇಲೆ ಇರುವುದು ಪ್ರೀತಿನಾ, ಅಥವಾ ಅದು ಅವಳ ಕರ್ತವ್ಯ ಎಂಬ ಅಸಡ್ಡೆನಾ? ಈ ಪ್ರಶ್ನೆಗೆ ಉತ್ತರವನ್ನು ಓದುಗರಿಗೇ ಕಂಡುಕೊಳ್ಳಬೇಕು. ಈ ಪುಸ್ತಕ ಓದುವಾಗ ಮನಸ್ಸಿನಲ್ಲಿ ಒಂದು ದುಗುಡ ಹುಟ್ಟಿ, ಹಿಮವಂತನಿಗೆ ಮೋಸವಾಗಬಾರದು ಎಂದು ಪುಸ್ತಕವನ್ನು ಮಡಚಿಡಬೇಕು ಎನಿಸುವಷ್ಟು ಕಾಡುತ್ತದೆ. ಇದು ಕೇವಲ ಕಥೆಯಲ್ಲ, ಬದಲಿಗೆ ಜೀವನ, ಪ್ರೀತಿ, ಪ್ರೇಮ, ನೋವು, ನಲಿವು, ಕಾಮ ಹಾಗೂ ಜೀವನದ ಜವಾಬ್ದಾರಿಗಳನ್ನು ಹೇಳುತ್ತದೆ. ಕಥೆಯಲ್ಲಿ ಬರುವ ಕಸೂತಿ ಕಾವೇರಮ್ಮ, ಶಾಂತಕ್ಕ, ಕಾಂತಪ್ಪ, ನಂದಕ್ಕ, ರಸೂಲ್ ಸಾಹೇಬ್, ಮತ್ತು ದೇವ್ ಅವರಂತಹ ಪಾತ್ರಗಳು ಸಹ ಮರೆಯಲಾಗದಂತಹ ಛಾಪು ಮೂಡಿಸುತ್ತವೆ. ಅಂತಿಮವಾಗಿ, ಈ ಕಥೆಯ ಮೂಲಕ ತೆರೆದಿಟ್ಟ ನಾಲ್ಕು ವಿಭಿನ್ನ ಜೀವನ ವಿಧಾನಗಳಲ್ಲಿ ಯಾರು ಸರಿ ಎಂದು ಓದುಗರೆ ನಿರ್ಧರಿಸಬೇಕು. ಗುರಿ ಮುಟ್ಟುವ ತನಕ ದೈಹಿಕ ಸುಖಗಳು ವಿಚಲಿತವಾಗಬಾರದು ಎಂದು ಸುಮ್ಮನಿದ್ದ ಹೇಮವಂತ ಸರಿನಾ? ಅಥವಾ ಹೇಮವಂತನನ್ನು ದೇವರಾಗಿ ಕಂಡರೂ, ದೇವರಿಂದ ಕೇವಲ ಭಕ್ತಿಯನ್ನು ಮಾತ್ರ ಕೊಡಬೇಕು, ಪ್ರೀತಿಯನ್ನಲ್ಲ ಎಂದು ಭಾವಿಸಿ ದೂರ ಹೋದ ಪ್ರಾರ್ಥನಾ ಸರಿನಾ? ಇಲ್ಲವೇ, ಒಣ ಮಡಿವಂತಿಕೆಯನ್ನು ಬಿಟ್ಟು, ತನ್ನ ಆಸೆಗಳನ್ನು ನೇರವಾಗಿ ಹೇಳಿಕೊಳ್ಳುವ ಊರ್ಮಿಳಾ ಸರಿನಾ? ಅಥವಾ ಮದುವೆ ಎನ್ನುವುದು ಕೇವಲ ಸಮಾಜದಿಂದ ಸಿಗುವ ಒಂದು ಸರ್ಟಿಫಿಕೇಟ್, ಅದಕ್ಕಾಗಿ ಇವತ್ತು ಸಿಗುವ ಸುಖವನ್ನು ದೂರ ಮಾಡಬಾರದು ಎಂದು ವಾದ ಮಾಡುವ ದೇವ್ ಸರಿನಾ? ನಿಮ್ಮ ದೃಷ್ಟಿಯಲ್ಲಿ ಯಾರು ಸರಿ ಎಂದು ಕಂಡುಕೊಳ್ಳಲು, ನೀವೂ ಸಹ ಈ ಅದ್ಭುತ ಕಥೆಯನ್ನು ಓದಲೇಬೇಕು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಹಿಮಾವಂತ ಪ್ರೀತಿಗೆ ಅವನ ಜೀವನ ಅದೆ ಪ್ರಾರ್ಥನಾ. ಪ್ರಾರ್ಥನಾ ಗೊಂದಲಗಳ ಗೂಡು ಆಕೆಗೆ ಅದೆ ಮುಳ್ಳಯಿತು. ಉರ್ಮಿಳಾ ಒಣ ಮಡಿವಂತಿಗೆ ಇಲ್ಲದೆ ಜೀವನವನ್ನು ನೇರವಾಗಿ ನೋಡುತ್ತಾಳೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕಾದಂಬರಿ ಓದುಗರಿಗೆ ಅದರಲ್ಲೂ ಯುವಜನರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.