ಪುಸ್ತಕದ ಶೀರ್ಷಿಕೆ: ಅನಾಥ ಹಕ್ಕಿಯ ಕೂಗು
ಪುಸ್ತಕದ ಲೇಖಕರು: ಗಿರಿಮನೆ ಶ್ಯಾಮರಾವ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಉಷಾಪಾರ್ವತಿ ಎಂ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಜನಿಸಿದ ನಂತರ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದವರರು ಒಂದು ಕಡೆಯಾದರೆ ಎಲ್ಲರೂ ಇದ್ದು ಇಲ್ಲದಂತೆ ಬದುಕುವ ಪರಿಸ್ಥಿತಿ ಕೆಲವರದು.ಅಪ್ಪ ಅಮ್ಮ ಇದ್ದರೂ ಮಾನಸಿಕವಾಗಿ ಒಂಟಿಯಾದ ಅವರ ಪ್ರೀತಿಗಾಗಿ ಹಂಬಲಿಸಿದ ಹುಡುಗನೊಬ್ಬನ ಕಥೆಯೇ ‘ಅನಾಥ ಹಕ್ಕಿಯ ಕೂಗು’. ಒಂದು ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಹೆತ್ತವರ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಇಲ್ಲಿ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಿಳಿಸಿಕೊಟ್ಟಿದ್ದಾರೆ. ಇದೊಂದು ಮನೋವೈಜ್ಞಾನಿಕ ಕಾದಂಬರಿಯಾಗಿದ್ದು ಆರಂಭದಿಂದಲೂ ಬಾಲಕ ಆಕಾಶನ ಮನದ ಭಾವನೆಗಳನ್ನು ಅವನ ನಿರೂಪಣೆಯಲ್ಲಿಯೇ ಮನಮುಟ್ಟುವಂತೆ ಎಳೆ ಎಳೆಯಾಗಿ ನಮ್ಮ ಮುಂದಿರಿಸಿದ್ದಾರೆ. ಪ್ರತಾಪ್ ಮತ್ತು ಸುಚಲಾ ದಂಪತಿಯ ಮಗ ಆಕಾಶ್. ಇಬ್ಬರ ಪ್ರೀತಿಯ ಕಣ್ಮಣಿಯಾಗಿ ಬೆಳೆದ ಅವನಿಗೆ ಅಪ್ಪನೇ ಹೀರೊ ಅಮ್ಮನೇ ಪ್ರಿಯಸಖಿ. ಇಬ್ಬರೂ ಕಂಪನಿಗಳಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದಿಸುತ್ತಿದ್ದರು.ಮೊದಲ ಐದು ವರ್ಷಗಳು ಅವರಿಬ್ಬರ ಕೈಹಿಡಿದು ಸುತ್ತಾಡಿ ಆಟ ಆಡಿ ಬೆಳೆದ ಮಗುವಿನ ಬದುಕನ್ನೇ ಬದಲಿಸಿದ ಘಟನೆ ಎಂದರೆ ಹೆತ್ತವರ ವಿಚ್ಚೇದನ. ತಮ್ಮ ಅಹಂಕಾರ, ಸ್ವಪ್ರತಿಷ್ಠೆ, ಅನುಮಾನಗಳಿಂದಾಗಿ ಕುಳಿತು ಪರಿಹರಿಸಿಕೊಳ್ಳಬೇಕಾದ ವಿಷಯಗಳನ್ನು ದೊಡ್ಡದು ಮಾಡಿ ತಮ್ಮದೇ ಕುಡಿಯ ಭವಿಷ್ಯವನ್ನು ಆಲೋಚಿಸದೆ ದುಡುಕಿ ತೆಗೆದುಕೊಂಡ ಒಂದು ನಿರ್ಧಾರ ಅವನ ಬಾಲ್ಯವನ್ನೇ ಕಹಿಯಾಗಿಸಿತು. ಅದುವೇ ಒಂದು ದೊಡ್ಡ ಹೊಡೆತ ಆ ಪುಟ್ಟ ಮನಸಿಗೆ. ಅದರ ಜೊತೆಗೆ ಅಪ್ಪ ಅಮ್ಮ ಬೇರೆ ಬೇರೆ ಸಂಗಾತಿಗಳನ್ನು ಆರಿಸಿ ತಂದಾಗ ಇಬ್ಬರೂ ಮಾನಸಿಕವಾಗಿ ತುಂಬಾ ದೂರ ಹೋದ ಅನುಭವ. ಪ್ರೀತಿ ಕೊಡಬೇಕಾದ ಕ್ಷಣದಲ್ಲಿ ದುಡ್ಡು ಕೈಗಿಟ್ಟು ತನ್ನ ಜವಾಬ್ದಾರಿ ಇಷ್ಟೇ ಎಂದುಕೊಂಡ ತಂದೆ, ತನ್ನ ಜೊತೆಗೆ ಇರಿಸಿಕೊಂಡರೂ ಹೊಸ ಗಂಡನಿಂದಾಗಿ ಅಂತರ ಕಾಯ್ದುಕೊಂಡ ಅಮ್ಮ...ಇವರಿಬ್ಬರ ಬೆಚ್ಚಗಿನ ತೋಳಲ್ಲಿ ಹುದುಗಿಹೋಗುವ ಬಯಕೆ ಅವನಲ್ಲಿ. ಆ ಜಾಗದಲ್ಲಿ ಹೊಸ ತಂಗಿ, ತಮ್ಮನನ್ನು ಕಂಡಾಗ ಉದಯಿಸಿದ ಕೋಪ, ಹತಾಶೆ, ಅಸೂಯೆ.ಜೊತೆಗೆ ಮನಸಿಗೆ ವಿರುದ್ಧವಾಗಿ ಬೋರ್ಡಿಂಗ್ ಸ್ಕೂಲ್, ಹಾಸ್ಟೆಲ್ ವಾಸ.ಬದುಕಿನಲ್ಲಿ ಒಂಟಿಯಾಗಿ ಭದ್ರತೆ, ಸುರಕ್ಷತೆಯ ಭಾವ ಇಲ್ಲವಾದಾಗ ತಿಳುವಳಿಕೆ ಇಲ್ಲದೆ ಅಭ್ಯಾಸವಾದ ಡ್ರಗ್ಸ್ ಸೇವನೆ.. ಕೊನೆಗೂ ಅಮ್ಮನಿಗೆ ಜ್ಞಾನೋದಯವಾಗಿ ಮನೋರೋಗ ತಜ್ಞ ಡಾಕ್ಟರ್ ವೇದವ್ಯಾಸರಲ್ಲಿ ಆಕಾಶನನ್ನು ಕರೆದುಕೊಂಡು ಹೋಗುತ್ತಾಳೆ. ಅವರ ಸೂಕ್ತ ಮಾರ್ಗದರ್ಶನದಲ್ಲಿ ಆಕಾಶನ ಬದುಕಿನಲ್ಲೂ ಭರವಸೆಯ ಹೊಸ ಕಿರಣಗಳು ಬೆಳಕು ಮೂಡಿಸಿದವು. ಅವನೊಬ್ಬ ಸತ್ಪ್ರಜೆಯಾಗಿ ಬದಲಾದನು. ಓದುತ್ತಾ ಹೋಗುತ್ತಿದ್ದಂತೆ ಪ್ರತಿಯೊಂದು ಘಟನೆಗಳು, ಆಕಾಶನ ಅಸಹಾಯಕ ಸ್ಥಿತಿ ಕಣ್ಣಿಗೆ ಕಾಣಿಸುತ್ತಿದೆ ಅನ್ನುವಷ್ಟು ಸಹಜವಾಗಿದೆ. ಆಕಾಶನ ಜೀವನವೇ ಹಾಳಾಯಿತು ಎಂದು ದುಃಖಿಸುವಾಗ ಸುಖಾಂತ್ಯ ವಾದದ್ದು ಸಮಾಧಾನ ನೀಡಿತು. ಪಾತ್ರಗಳ ಹೆಸರುಗಳಿಗಿಂತ ಭಾವನೆ ಸಂಬಂಧಗಳಿಗೆ ಒತ್ತು ನೀಡಿದ ಕಾದಂಬರಿ.ಸುಮಧುರ ನೆನಪುಗಳನ್ನು ಭದ್ರವಾಗಿಡಬೇಕಾದ ಬಾಲ್ಯಕಾಲದಲ್ಲಿ ಬರಿ ಕಹಿ ಘಟನೆಗಳೇ ನಡೆದು ನೊಂದ ಅಮಾಯಕನಾದ ಬಾಲಕ ಆಕಾಶನ ಪಾತ್ರ, ಹಣಕ್ಕೆ ಆಗ್ರಹ ಪಡದೆ ಸಂಬಂಧವೇ ಇಲ್ಲದ ನೊಂದ ಮನಕ್ಕೆ ಆಸರೆಯಾಗಿ ಅವನನ್ನು ಹಿಡಿದೆತ್ತಿ ನಿಲ್ಲಿಸಿದ ಡಾಕ್ಟರ್ ವೇದವ್ಯಾಸರ ಪಾತ್ರ ತುಂಬಾ ಇಷ್ಟ ಆಯಿತು. ತಾನು ತೆಗೆದುಕೊಂಡ ನಿರ್ಧಾರ ತಪ್ಪು ಎಂದರಿತ ನಂತರ ಮಗನ ಖುಷಿಗಾಗಿ ಭವ್ಯ ಭವಿಷ್ಯಕ್ಕಾಗಿ ಅಮ್ಮ ಸಹಕರಿಸಿದ ರೀತಿ ಕೂಡ ಗಮನಾರ್ಹ. ಲೇಖಕರು ಮಗುವಿನ ಉತ್ತಮ ಭವಿಷ್ಯಕ್ಕೆ ಬೆಳವಣಿಗೆಗೆ ಮನೆಯ ವಾತಾವರಣ, ಸದಸ್ಯರು ಹೇಗೆ ಪೂರಕವಾಗಿರಬೇಕೆಂದು ತಿಳಿಸಿದ್ದಾರೆ.ಮಕ್ಕಳು ಸಣ್ಣವರೆಂದು ತಿಳಿದರೂ ಅವರ ಗಮನ ಹಿರಿಯರ ಮೇಲಿರುತ್ತದೆ.ಅವರ ಪ್ರತಿ ನಡೆನುಡಿ ಮಕ್ಕಳ ಮನಸಲ್ಲಿ ಅಚ್ಚಾಗಿರುತ್ತದೆ.ವ್ಯವಸ್ಥೆಯಲ್ಲಿ ಸಣ್ಣ ವ್ಯತ್ಯಾಸವಾದರೂ ಏಕೆ, ಹೇಗೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ..ಹಣವೊಂದೇ ಎಲ್ಲದಕ್ಕೂ ಪರಿಹಾರ ಅಲ್ಲ. ಮುಗ್ಧ ಮಗುವೊಂದು ಬಯಸುವುದು ಬೇಸರವಾದಾಗ ಸಾಂತ್ವನ ನೀಡುವ ಅಮ್ಮನ ಹೆಗಲು,ಸಾಧನೆಗೆಯ್ಯಲು ಪ್ರೋತ್ಸಾಹ ನೀಡುವ ಅಪ್ಪನ ಮಾತುಗಳು,ಪ್ರತಿ ಏಳು ಬೀಳುಗಳಲ್ಲಿ ನಿರೀಕ್ಷಿಸುವುದು ತನ್ನ ಹೆತ್ತವರ ಉಪಸ್ಥಿತಿ,ಸುಖ ದುಃಖಗಳಲ್ಲಿ ಸ್ಪಂದಿಸುವ ಮನಸುಳ್ಳ ತನ್ನ ಹೆತ್ತವರ ಮನೆಯವರ ಸಾಮಿಪ್ಯ ಎನ್ನುವುದನ್ನು ಸ್ಪಷ್ಟ ವಾಗಿ ತಿಳಿಸಿದ್ದಾರೆ. ಮದುವೆಯಾಗಿ ಒಂದಾಗಿ ಸಣ್ಣ ಸಣ್ಣ ವಿಷಯಕ್ಕೆ ಹೊಂದಾಣಿಕೆಯಾಗದೆ ಬಿಡುಗಡೆ ಬಯಸುವ ಮಕ್ಕಳಿರುವ ದಂಪತಿಗಳು, ಕೆಲಸಕ್ಕೆ ಪ್ರಾಮುಖ್ಯತೆ ನೀಡಿ ಮಕ್ಕಳಿಗೆ ಅಮೂಲ್ಯ ಸಮಯವನ್ನು ಮೀಸಲಿಡದವರು, ಒಂದು ಪುಟ್ಟ ಮನಸಿನಲ್ಲಿ ಏನೂ ತಿಳಿಯದ ವಯಸ್ಸಿನಲ್ಲಿ ಘಟನೆಗಳಿಗನುಗುಣವಾಗಿ ಉದಯಿಸುವ ಭಾವನೆಗಳನ್ನು ಅರಿಯಲು ಓದಲೇ ಬೇಕಾದ ಉತ್ತಮ ಕಾದಂಬರಿ ಇದಾಗಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.