Submission 1716

ಪುಸ್ತಕದ ಶೀರ್ಷಿಕೆ: ಅಕ್ಕಡಿ

ಪುಸ್ತಕದ ಲೇಖಕರು: ಅರಬಗಟ್ಟೆ ಅಣ್ಣಪ್ಪ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಮಾ ಆರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಾವು ಕಂಡ ಕಾಲದ ಬದುಕಿನ ಕನ್ನಡಿ ಅಣ್ಣಪ್ಪ ಮಾಸ್ತರರ ಈ ‘ ಅಕ್ಕಡಿ ‘. ಆದ್ದರಿಂದಲೇ ಇದರಲ್ಲಿ ನನಗೆ ಅಣ್ಣಪ್ಪ ಮಾಸ್ತರರಿಗಿಂತ, ನನ್ನ ಸುತ್ತಮುತ್ತಲಿನ ಅಂದಿನ ಜನರೇ ಕಾಣಿಸುತ್ತಿದ್ದರು. ಆದ್ದರಿಂದಲೇ ಅವರ ಬರೆಹಗಳೆಲ್ಲವೂ ನನಗೆ ಆಪ್ತವಾಗುವುದು. ಇಂತಹ ಬರೆಹಗಳನ್ನು ಬರೆಯಲು ಲೇಖಕನಿಗೆ ದಟ್ಟ ಅನುಭವಗಳ ಗಟ್ಟಿ ಅಡಿಪಾಯವಿರುವುದು ಎಷ್ಟು ಮುಖ್ಯವೋ, ಓದುಗನಿಗೆ ಆ ಅನುಭವಗಳ ಸ್ವಲ್ಪ ಮಟ್ಟಿಗಿನ ಅರಿವು ಇರಬೇಕಾದದ್ದು ಸಹ ಅಷ್ಟೇ ಮುಖ್ಯ. ಬದುಕು, ಬಡತನ, ಶಿಕ್ಷಣ, ಸ್ನೇಹ, ಜೀವನ ಮೌಲ್ಯಗಳು, ಸಾಹಿತ್ಯ, ವ್ಯಕ್ತಿತ್ವ ವಿಕಸನ, ನಿರಪೇಕ್ಷ ಪ್ರೀತಿ- ವಾತ್ಸಲ್ಯ, ಸಾಮಾಜಿಕ ಆರೋಗ್ಯ.... ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ 59 ಪುಟ್ಟ ಪುಟ್ಟ ಗಟ್ಟಿ (ಲಘು?) ಬರೆಹಗಳ ಸಂಗ್ರಹ ಈ ಅಕ್ಕಡಿ. ‘ಅಕ್ಕಡಿ’ ಓದುತ್ತಾ ಓದುತ್ತಾ ನಮ್ಮ ಕಾಲದ ಸುತ್ತಮುತ್ತಲಿನ ಹಲವರ ಬದುಕುಗಳು ಮನದಲ್ಲಿ ತಕ್ಕಡಿ ತೂಗತೊಡಗಿದವು. ಸಿಕ್ಕಿದ್ದೆಲ್ಲವನ್ನೂ ಸಂಭ್ರಮಿಸಲು, ಏನೂ ಸಿಕ್ಕಿರದ ಬದುಕನ್ನು ದಾಟಿ ಬಂದಿರಬೇಕು. ಉಕ್ಕಿ ಬರುವಷ್ಟಿದ್ದರೆ ಯಾವುದರಲ್ಲೂ ಸುಖ ದಕ್ಕದು. ಸಿಕ್ಕಿದ ಬದುಕಿನಲ್ಲಿ ಅಕ್ಕಡಿಗೊಂದು ಬೆಳೆ ಬೆಳೆದು ಬಾಳೆಲೆ ತುಂಬಾ ಬಡಿಸಿಕೊಂಡು ತಿಂದು ಸಂತೃಪ್ತಿಯ ತೇಗು ತೇಗುವುದು ಎಲ್ಲರಿಗೂ ಸುಲಭವೇನಲ್ಲ. ಶೂನ್ಯದಿಂದ ಬದುಕು ಆರಂಭಿಸಿದವರಿಗೆ ಮಾತ್ರ ಬದುಕಿನ ಇಂಚಿಂಚಿನ ಸುಖವನ್ನೂ ಅನುಭವಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ‘ಅಕ್ಕಡಿ ‘ ಯ ನಾಯಕರೇ ಸಾಕ್ಷಿ. ಲೇಖಕರು ಶಿಕ್ಷಕರಾಗಿರುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಬಲ್ಲವರಾಗಿದ್ದು, ಅದು ಹೇಗಿರಬೇಕೆಂಬ ಮಾರ್ಗಸೂಚಿಯನ್ನು ಸಹಾ ಅಲ್ಲಲ್ಲಿ ನೀಡುತ್ತಾ ಹೋಗುತ್ತಾರೆ. ಉದಾಹರಣೆಗೆ: *ಅವರು ಹೇಳುತ್ತಾರೆ, ‘ ಪ್ರಾಥಮಿಕ ಹಂತವೆಂಬುದು ಮಕ್ಕಳನ್ನು ತೂಕಕ್ಕೆ ಹಾಕುವ ಗುಜರಿ ಅಂಗಡಿಯಲ್ಲ, ತೀರ್ಪು ನೀಡುವ ಪಂಚಾಯಿತಿ ಕಟ್ಟೆಯೂ ಅಲ್ಲ. ಅದು ಮಾದರಿಗಳನ್ನು ರೂಢಿಗೊಳಿಸಬೇಕಾದ ಸಮಯ’ .. ಎಷ್ಟು ಸತ್ಯವಾದ ವಿಚಾರವಲ್ಲವೇ? * ‘ ನಮ್ಮ ಬಾಲ್ಯದ ಒಂದು ಪುಟ್ಟ ಭಾಗವಾಗಿ ಶಾಲೆಯಿತ್ತೇ ಹೊರತು , ಈಗಿನಂತೆ ಬಾಲ್ಯವೆಲ್ಲವೂ ಶಾಲೆಯಾಗಿರಲಿಲ್ಲ’.. ಚಿಂತಿಸಬೇಕಾದ ಬದಲಾವಣೆ ಅಲ್ಲವೇ? ‘ಅಕ್ಕಡಿ’ ಯ ಇನ್ನೊಂದು ವಿಶೇಷವೆಂದರೆ ಭಾಷಾಪ್ರಯೋಗ. ಭಾಷೆಯನ್ನು ಪ್ರಬುದ್ಧವಾಗಿ ಮನ ಮುಟ್ಟುವಂತೆ ಪ್ರಯೋಗಿಸುವುದು ಒಂದು ಕಲೆ. ವಿಷಯವನ್ನು ವಿಶಿಷ್ಟವಾಗಿ ಪ್ರಸ್ತುತ ಪಡಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಅಣ್ಣಪ್ಪ ಮೇಷ್ಟ್ರು ಅದೆಷ್ಟು ಸಶಕ್ತ ಪದಪ್ರಯೋಗಗಳಿಂದ, ವಾಹ್! ಎಂದು ಉದ್ಗರಿಸುವಂತಹ ರೂಪಕ/ ಉಪಮೆಗಳಿಂದ ಬರೆಹವನ್ನು ಅಲಂಕರಿಸಿದ್ದಾರೆಂದರೆ, ಪುಸ್ತಕದ ತುಂಬಾ ಪೆನ್ಸಿಲ್ ನಲ್ಲಿ ಗುರುತಿಸಿಟ್ಟುಕೊಂಡಿದ್ದೇನೆ. ಇದೇ ಇವರ ಬರಹದ ಹೆಗ್ಗಳಿಕೆ. ‘ಉಲ್ಲೇಖ’ ಗಳ ರೀತಿಯಲ್ಲಿ ಸಂಗ್ರಹಿಸಿ ಇಡಬಹುದಾದಂತಹ ಬರೆಹ. ಅದರಲ್ಲಿ ಕೆಲವನ್ನು ಇಲ್ಲಿ ಹೇಳುವುದಾದರೆ... *’ಬಡತನಕ್ಕಿಂತ ಸ್ವಾಭಿಮಾನದ ರತ್ನಗಂಬಳಿಯೇ ನಮಗೆ ಬಳುವಳಿಯಾಗಿ ಬಂದು ಬಿಟ್ಟಿತ್ತು’. *ನಮ್ಮ ಮನೆಗಳ ಒಲೆಯ ಮುಂದೆ ನಾವೇ ಉರುವಲಾಗಿ ಹೋದದ್ದೇ ಹೆಚ್ಚು. * ಊಟಕ್ಕೆ ಮಾತ್ರ ವೀಳ್ಯದೆಲೆಯ ಮೇಲಿಟ್ಟ ಫಲಾರ. * ಬಾಲ್ಯದಲ್ಲಿ ಬಡತನದ ಅರಿವಿರುತ್ತಿರಲಿಲ್ಲ. ಈಗ ಅದೇ ನಿಜವಾದ ಸಿರಿತನವೆಂಬ ಭಾವ. * ಮಣ್ಣೇ ಗಂಧ ! ಗುದ್ದಾಡಿ ಹೊಲಸಾದವರಿಲ್ಲ! ಸೋತವರೂ ಇಲ್ಲ! * ಬಡತನಕ್ಕೆ ಯಾವ ಬೇಲಿ ? ಭೂಮಿ ತಾಯಿ ನಮ್ಮಂತೆಯೇ ಬಡವಿ . * ಬಯಲು ಸೀಮೆಯಲ್ಲಿ ಮಳೆ ಎನ್ನುವುದು ಈ ಮಲೆನಾಡಿನಂತೆ ಹೇಳದೆ ಕೇಳದೆ ಬರುವ ಅತಿಥಿಯಂತೂ ಅಲ್ಲ. ನಮ್ಮಲ್ಲಿಯ ಮಳೆ, ಬೆಳಗಿನಿಂದಲೇ ಸಿಂಗರಿಸಿಕೊಂಡು ಮಧ್ಯಾಹ್ನದ ಸಮಯಕೆ ಕೈ ಕಡಗಗಳನ್ನು ಗುಡುಗಿಸಿ ಸಂಜೆಯ ಸಮಯಕೆ ಮಿರಿಮಿರಿ ಜುಬ್ಬವನು ಮೆರೆಸುತ ಬರುವ ಮದುಮಗನಂತೆ ಬರುವುದು. * ಕಣ್ಣೀರು ಸೋಲಲ್ಲ, ನಮ್ಮ ನಿಜ ಸ್ನಾನವದು.. ಅಂತರಂಗದ ಸ್ನಾನ. ಅದು ಎಂದಿಗೂ ಕಳಪೆಯಾಗಿರಲು ಸಾಧ್ಯವಿಲ್ಲ. * ಬಡತನವನ್ನೇ ಹಾಸು ಹೊದ್ದ ನಮಗೆ ಸ್ವಾಭಿಮಾನವೇ ಕಿರೀಟವಾಗಿತ್ತು. * ಯಾವ ಮಹಾಪುರುಷರನ್ನೂ, ಯಾವ ಕ್ರಾಂತಿಯನ್ನೂ, ವರ್ತಮಾನ ಗೌರವಿಸಿದ್ದು ಇತಿಹಾಸದಲ್ಲಿಲ್ಲ. * ನಡೆಯುವವನಿಗಷ್ಟೇ ಗೊತ್ತು ನೆರಳಿನ ಬೆಲೆ, ಗಾಳಿಯ ಮಾತು. * ನಿಜದ ಗುಣಗ್ರಾಹಿಯಾಗಲು ನಿಮ್ಮನ್ನು ನೀವು ಮೊದಲು ತೆರೆದುಕೊಳ್ಳಬೇಕು. ಹೀಗೆ ಪುಸ್ತಕದುದ್ದಕ್ಕೂ ರಸಗವಳವೇ! ಇನ್ನು ಇಂದಿನ ಸಾಹಿತ್ಯ, ಲೇಖಕರ ಬಗ್ಗೆ ಅವರು ಹೇಳುವ ಎಲ್ಲ ಮಾತುಗಳೂ ನನ್ನದೇ ಅನ್ನಿಸುವಷ್ಟು ಇಷ್ಟವಾಯಿತು. ಪ್ರಾಥಮಿಕ ಭಾಷಾ ಪರಿಜ್ಞಾನವೂ ಇಲ್ಲದ ಹಲವು ಟೊಳ್ಳುಗಳು ಹಣಬಲ, ಜನಬಲ, ವಶೀಲಿಯಿಂದ ಬೂಟು ನೆಕ್ಕಿ ಪುಸ್ತಕ, ಪ್ರಕಟಣೆ ಎಂದು ತಮಟೆ ಹೊಡೆಯುವ ಈ ಹೊತ್ತಿನಲ್ಲಿ ಲೇಖಕರು ಹೇಳುವಂತೆ, ಪ್ರಶಂಸೆ ಪ್ರಶಸ್ತಿ ಎಲ್ಲ ಪರಸ್ಪರ ಕಡ, ಮುಯ್ಯಿಗಳಾಗಲು ಶುರುವಾಗಿ ಬಿಟ್ಟಿವೆ. ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದ ಹಲವು ಬರಹಗಾರರನ್ನು ನಾವು ಓದಿ, ಪ್ರೋತ್ಸಾಹಿಸಿ ಮುಖ್ಯ ಸೆಲೆಗೆ ತಂದುಕೊಂಡಲ್ಲಿ ನಮ್ಮ ಸಾಹಿತ್ಯ ನಿಜಾರ್ಥದಲ್ಲಿ ಶ್ರೀಮಂತವಾಗುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಅಭಿಮತವೂ ಸಹ. ಅವರು ಹೆಸರಿಸಿರುವ ಬರಹಗಾರರಾದ ಅಭಿನಂದನ್ ಮೃಗವಧೆ, ಪ್ರಬಂಧ ಅಂಬುತೀರ್ಥ, ಮೇದಿನಿ ಕೆಸುವಿಮನೆ .. ಇವರೆಲ್ಲರ ಬರೆಹಗಳನ್ನು ನಾನೂ ಓದಿರುವೆ. ಆಗ ನನಗೂ ಹೀಗೆಯೇ ಅನ್ನಿಸಿತ್ತು. ಸೊಗಸಾಗಿ ಬರೆಯುವ ಇಂತಹ ಬರೆಹಗಾರರು ಹೆಚ್ಚು ಹೆಚ್ಚು ಜನರನ್ನು ತಲುಪುವಂತಾಗಬೇಕು. ಸಾಹಿತ್ಯಿಕ ಪ್ರಶಸ್ತಿ, ಪ್ರಶಂಸೆಗಳು ವ್ಯಕ್ತಿಗಳನ್ನು ಮೀರಿ ಬರೆಹಕ್ಕೆ ದಕ್ಕಬೇಕು ಎಂಬುದೇ ನನ್ನ ಆಶಯ ಕೂಡ. ಇದೆಲ್ಲವನ್ನು ಗಮನಿಸಬೇಕಾದದ್ದು ಇಂದಿನ ಓದುಗರು! ಹೀಗೆ ಓದುಗರನ್ನು ಸ್ವಯಂ ವಿಮರ್ಶೆಗೆ ಹಚ್ಚಿ, ಚಿಂತನೆಗೆ ಒಡ್ಡಿ , ತನ್ಮೂಲಕ ಕಿಂಚಿತ್ತಾದರೂ ಬದಲಾವಣೆ ತರುವುದರಲ್ಲಿಯೇ ಬರೆಹದ ಸಾರ್ಥಕ್ಯವಿರುವುದು. ಈ ನಿಟ್ಟಿನಲ್ಲಿ ‘ ಅಕ್ಕಡಿ’ ಎಲ್ಲರ ಓದಿಗೆ ಸಿಗಲೇಬೇಕಾದ ಪುಸ್ತಕ. ಬಿಡಿ ಬಿಡಿ ಬರೆಹಗಳ ಸಂಗ್ರಹವಾದ್ದರಿಂದ, ಹಲವಾರು ಕಡೆ ಒಂದೇ ವಿಷಯ ಪುನರಾವರ್ತನೆ ಆಗಿರುವುದು ಬಿಟ್ಟರೆ, ಇದೊಂದು ಸಂಗ್ರಹ ಯೋಗ್ಯ ಪುಸ್ತಕ. ಯಾವುದೇ ವ್ಯಕ್ತಿ ‘ಅಯ್ಯೋ ನನಗೆ ಯಾಕೆ ಇಷ್ಟು ಕಷ್ಟ? ಎಂದರೆ , ಈ ‘ ಅಕ್ಕಡಿ’ ಅವರ ಕೈಯಲ್ಲಿಡಿ. ತಾನೆಷ್ಟು ಸುಖಿ ಎಂದು ಅವನು ಕುಣಿದಾಡುವಂತೆ ಮಾಡದಿದ್ದರೆ ಕೇಳಿ ಈ ‘ ಅಕ್ಕಡಿ’. ಕೊಂಡು ಓದಿ ನೀವೆಷ್ಟು ಸುಖಿಗಳು ಎಂಬುದನ್ನು ಅರಿಯಿರಿ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

8
Votes
93
Views
5 Months
Since posted

Voting Closed!

Scroll to Top