Submission 1730

ಪುಸ್ತಕದ ಶೀರ್ಷಿಕೆ: ಗೆದ್ದಳು ಕಾವೇರಿ

ಪುಸ್ತಕದ ಲೇಖಕರು: ಡಾ|| ಸಬಿತಾ ಮರಕಿಣಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲತಾ ಧನು ಆಚಾರ್ಯ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಒಂದು ಕಥೆಯನ್ನು ವಿವಿಧ ಹಂತಗಳಲ್ಲಿ ಮನಮುಟ್ಟುವಂತೆ ಬರೆಯುವುದೇ ಕಾದಂಬರಿ. ಇದನ್ನೇ ಧಾರಾವಾಹಿಯ ವಿಸ್ತೃತ ರೂಪ ಎಂದೂ ಹೇಳಬಹುದು. ಒಂದು ಕಥಾವಸ್ತುವಿನ ಆರಂಭ ಹೇಗೆ ಅಂತ್ಯ ಹೇಗೆ ಎಂಬುದನ್ನು ಬರಹಗಾರರೇ ನಿರ್ಧರಿಸಿರುತ್ತಾರೆ. ಕೆಲವೊಮ್ಮೆ ಅದನ್ನು ಓದುಗರಿಗೂ ಊಹಿಸಲು ಸಾಧ್ಯವಿದೆ. ಕಥೆಯೊಳಗಿನ ಪಾತ್ರವೇ ತಾವೆಂದು ಓದಿಕೊಂಡಾಗ ಅಥವಾ ನಮಗೆ ನಾವೇ ನಮ್ಮನ್ನು ಪಾತ್ರದೊಂದಿಗೆ ಹೋಲಿಸಿಕೊಂಡಾಗಲಂತೂ ಕಥೆ ಇನ್ನೂ ಹೆಚ್ಚು ಪ್ರಿಯವಾಗುತ್ತದೆ. ಕಥೆ ಅಪೂರ್ಣವಾದರೆ ಓದುಗರಿಗೆ ಅದು ಅಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ವೈಧವ್ಯ ಎನ್ನುವುದು ಶಾಪವಲ್ಲ. ಯಾರಿಗೆ ಹೇಗೆ ಮರಣ ಎಂಬುದನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಕೆಲವರು ಮುತ್ತೈದೆಯಾಗಿ ಬದುಕನ್ನು ಜೀವನ ಪರ್ಯಂತ ಅನುಭವಿಸಿದರೆ ಇನ್ನೂ ಕೆಲವರು ವಿಧವೆಯಾಗಿ ಜೀವನ ಎದುರಿಸಬೇಕಾಗಬಹುದು. ವಿಧವೆ ಎನ್ನುವ ಪಟ್ಟ ಒಂದು ಬಿಟ್ಟರೆ ಆಕೆಯೂ ಹೆಣ್ಣು ಎಂಬುದನ್ನು ಸಮಾಜ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿ ಕಾದಂಬರಿಯಲ್ಲಿ ಕಾವೇರಿ ಎನ್ನುವ ಕಥಾನಾಯಕಿ ವೈವಿಧ್ಯವನ್ನು ಎದುರಿಸಿದ್ದು, ವಿಧವೆಯರಿಗೂ ಒಂದು ಬದುಕು ಇದೆ ಎಂಬುದನ್ನು ಎತ್ತಿ ತೋರಿಸಲಾಗಿದೆ. ಕಾವೇರಿ ಹರಿಯುವ ನದಿಯಾದಳೇ ವಿನಃ ನಿಂತ ನೀರಾಗಲಿಲ್ಲ. ಪೂರ್ತಿ ಕಾದಂಬರಿ ಹವ್ಯಕ ಕನ್ನಡದಲ್ಲಿ ರಚಿಸಲ್ಪಟ್ಟಿದ್ದು ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತಿದೆ. 2007ರಲ್ಲಿ ಪ್ರಕಟಗೊಂಡ ಕಾದಂಬರಿಯು ನಾಲ್ಕು ಹೆಣ್ಣುಮಕ್ಕಳ ಒಂದು ಬಡಕುಟುಂಬದ ಸುತ್ತ ಹೆಣೆಯಲ್ಪಟ್ಟಿದೆ. ಅದರಲ್ಲೂ ವಿಶೇಷವಾಗಿ ವಿಧವೆಯೆನ್ನುವ ಪಟ್ಟ ಹೊತ್ತುಕೊಂಡು ಪಡಬಾರದ ಕಷ್ಟ ಪಟ್ಟು ಕೊನೆಗೆ ಗೆಲುವನ್ನು ಸಾಧಿಸುವಲ್ಲಿ ಕ್ರಿಯಾಶೀಲೆಯಾಗಿ ಪ್ರಯತ್ನಶೀಲೆಯಾಗಿ ಬದುಕಿನ ಜಂಜಾಟಗಳೊಂದಿಗೆ ಹೋರಾಡಿದ ಕಥಾನಾಯಕಿ ‘ಕಾವೇರಿ’ ನಿಜಕ್ಕೂ ಇಲ್ಲಿ ಧೀರ ವನಿತೆಯಾಗಿ ಕಾಣಲ್ಪಡುತ್ತಾಳೆ. ಸಮಾಜದ ಅನಿಷ್ಟ ಪದ್ಧತಿಯೋ ಎಂಬ ಹಾಗೆ ಪತಿಯನ್ನು ಕಳೆದುಕೊಂಡ ಪತ್ನಿಯೊಬ್ಬಳು ತನ್ನ ಜೀವನದಲ್ಲಿ ಅನುಭವಿಸುವ ನೋವು, ಅಪಮಾನಗಳೇ ಅವಳನ್ನು ತಲೆ ಎತ್ತದಂತೆ ಮಾಡುತ್ತದೆ. ಆದರೆ ಈ ಕಾದಂಬರಿಯಲ್ಲಿ ‘ಕಾವೇರಿ’ ಎನ್ನುವ ಬಾಲ ವಿಧವೆಯೊಬ್ಬಳು ತನ್ನಿಂದಾಗಿ ಎಲ್ಲಿ ತನ್ನ ಮೂವರು ತಂಗಿಯರ ಬಾಳ್ವೆ ಕೆಟ್ಟುಹೋಗುವುದೋ ಎಂಬ ಅಂಜಿಕೆಯಿಂದಲೋ ಸುತ್ತಮುತ್ತಲಿನ ಜನರ ಕಟು ಮಾತುಗಳಿಗೆ ಬೇಸತ್ತೋ ಮೂವರಿಗೂ ಮದುವೆಯಾಗುವ ತನಕ ತನ್ನೆಲ್ಲಾ ನೋವುಗಳನ್ನು ನುಂಗಿ ನೀರು ಕುಡಿದಂತೆ ತವರಿನಲ್ಲಿಯೇ ದಿನಗಳನ್ನು ಕಳೆದದ್ದು ದುರದೃಷ್ಟಕರವೆಂದೇ ಹೇಳಬಹುದು. ಹಾಗೆ ನೋಡಿದರೆ ಕಾವೇರಿ ವಿಧವೆ ಎಂಬುದೇನೋ ನಿಜ. ಆದರೆ ಪತಿಯಾದವನೊಂದಿಗೆ ಸಂಸಾರವೆನ್ನುವ ಬಂಧ ಬೆಸೆದುಕೊಂಡಮೇಲೆ ಅವಳು ವಿಧವೆಯಾದದ್ದಲ್ಲ. ಕೆನ್ನೆಗೆ ಕೈಗಳಿಗೆ ಹಚ್ಚಿದ ಅರಶಿನ, ಮದರಂಗಿಯ ಬಣ್ಣ ಮಾಸುವ ಮೊದಲೇ ವಿಧವೆಯಾದವಳು ಅವಳು. ಮದುವೆಯಾದ ಎರಡೇ ದಿನದಲ್ಲಿ ಗಂಡನೆನಿಸಿಕೊಂಡವನು ಆಕಸ್ಮಿಕವಾಗಿ ಮಸಣ ಸೇರುವಂತಾಗಿದ್ದು ವಿಧಿಯ ಲೀಲೆಯೇ ಸರಿ. ತನಗಿಂತಲೂ ಮೂವತ್ತೋ ನಲುವತ್ತೋ ವರ್ಷ ಹೆಚ್ಚು ಪ್ರಾಯವುಳ್ಳ ಮನುಷ್ಯನೊಂದಿಗೆ ಮದುವೆಯಾದ ಕಾವೇರಿ ಹದಿನಾರನೇ ಎಳೆಯ ಪ್ರಾಯದಲ್ಲಿ ವಿಧವೆಯಾಗಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಅನುಭವಿಸಬೇಕೆಂದುಕೊಂಡವಳಿಗೆ ಅವಳ ಧೈರ್ಯವೇ ಅವಳನ್ನು ಜೀವನದಲ್ಲಿ ಸೋಲದಂತೆ ಮಾರ್ಪಡಿಸಿ ಗೆಲುವನ್ನು ತಂದುಕೊಟ್ಟಿತ್ತು.ವಿಧವೆಯರಿಗೂ ಒಂದು ಸುಂದರ ಜೀವನ ಮಾಡಲು ಸಾಧ್ಯವಿದೆ ಎನ್ನುವುದು ಈ ಕಾದಂಬರಿಯಿಂದ ನಾವು ತಿಳಿದುಕೊಳ್ಳಬಹುದು. ಸಮಾಜವನ್ನು ಎದುರಿಸಿ ಕಾವೇರಿ ಹೇಗೆ ಗೆದ್ದಳು? ಅವಳು ಇನ್ನೊಂದು ಮದುವೆಯಾದಳೇ? ತನ್ನ ಬದುಕಿನಲ್ಲಿ ಅವಳು ಏನೆಲ್ಲಾ ಕಷ್ಟಗಳನ್ನು ಅನುಭವಿಸಿದಳು? ಅವಳಿಂದಾಗಿ ಇನ್ಯಾರಿಗಾದರೂ ತೊಂದರೆ ಆಗಿತ್ತೇ? ಆಗಿದ್ದರೆ ಅದು ಹೇಗೆ? ಅವುಗಳಿಗೆಲ್ಲ ಅವಳು ಹೇಗೆ ಮುಕ್ತಿ ತೋರಿಸಿದಳು ಎಂಬುದನ್ನು ಕಾದಂಬರಿ ಓದಿಯೇ ಅರ್ಥಮಾಡಿಕೊಳ್ಳಬೇಕು. “ವೃತ್ತಿಯಿಂದ ವೈದ್ಯೆಯಾಗಿರುವ ಡಾ|| ಸಬಿತಾ ಮರಕಿಣಿಯವರು ಐದು ದಶಕಗಳಿಗೂ ಹೆಚ್ಚು ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯಸೇವೆ ಮತ್ತು ಸಮಾಜ ಸೇವೆ ಸಲ್ಲಿಸಿದ್ದಾರೆ. ಹವಿಗನ್ನಡದ ಪ್ರಪ್ರಥಮ ಕಾದಂಬರಿಗಾರ್ತಿ ಎನ್ನುವ ಹೆಗ್ಗಳಿಗೆ ಇವರದು. ಪ್ರಸ್ತುತ ಕಾದಂಬರಿಯು ಇವರ ಹವಿಗನ್ನಡದ ಮೂರನೇ ಕಾದಂಬರಿಯಾಗಿದೆ” ಎಂಬುದು ಪುಸ್ತಕದಲ್ಲಿ ಅಚ್ಚಾದ ವಿಷಯ. ಒಟ್ಟಿನಲ್ಲಿ ಹವಿಗನ್ನಡದ ಭಾಷಾ ಶುದ್ಧತೆಯೊಂದಿಗೆ ಪೋಣಿಸಲ್ಪಟ್ಟ ಪದಪುಂಜಗಳು ಒಂದು ಕಾದಂಬರಿಯಾಗಿ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೆಲವೊಂದು ಶಬ್ದಗಳನ್ನು ವೈಯಕ್ತಿಕವಾಗಿ ನಾನು ಓದಿ ತಿಳಿದುಕೊಂಡಿರುವೆ. ಒಂದು ಸುಂದರ ಕೌಟುಂಬಿಕ ಕಾದಂಬರಿಯನ್ನು ಓದಿದ ಖುಷಿ ನನ್ನದು. ಲೇಖಕರಿಗೆ ಧನ್ಯವಾದಗಳು. ✍️ಲತಾ ಧನು ಸೀತಾಂಗೋಳಿ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

12
Votes
149
Views
8 Months
Since posted

Voting Closed!

Scroll to Top