Submission 2023

ಪುಸ್ತಕದ ಶೀರ್ಷಿಕೆ: ತುಳುನಾಡಿನ ಜೈನ ಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ

ಪುಸ್ತಕದ ಲೇಖಕರು: ಡಾ. ಎಸ್. ಡಿ. ಶೆಟ್ಟಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ನಿರಂಜನ್ ಜೈನ್ ಕುದ್ಯಾಡಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಜಗತ್ತಿನ ಅತ್ಯಂತ ಪುರಾತನ ಧರ್ಮವೆಂದರೆ ಅದು ಜೈನ ಧರ್ಮ. ಒಂದು ಕಾಲದಲ್ಲಿ ಭಾರತದಲ್ಲಿ ಬಹುಸಂಖ್ಯಾತರನ್ನು ಹೊಂದಿದ ಜೈನ ಧರ್ಮ ಕ್ಷೀಣಗೊಳ್ಳುತ್ತಾ ಇಂದು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತ ಧರ್ಮವಾಗಿದೆ. ಕರ್ನಾಟಕದ ಕರಾವಳಿ ತೀರದಲ್ಲಿ ಜೈನ ಧರ್ಮ ರಾಜಧರ್ಮವಾಗಿ ವೈಭವವನ್ನು ಪಡೆದಿತ್ತು. ಈ ಬೃಹತ್ತ್ ಗ್ರಂಥವು ಒಂಬತ್ತು ಅಧ್ಯಾಯಗಳನ್ನು ಒಳಗೊಂಡಿದೆ. 1. ಒಂದನೇ ಅಧ್ಯಾಯದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜೈನ ಧರ್ಮದ ಬಗ್ಗೆ ವಿವರಿಸಲಾಗಿದೆ. ಒಟ್ಟು ಭಾರತ ಸಂಸ್ಕೃತಿಯ ಹಿನ್ನಲೆಯಿಂದ ಪ್ರಾರಂಭಿಸಲಾಗಿದೆ. ಹಿಂದೂ ಮಹಾಸಾಗರದಿಂದ ಉತ್ತರದಿಂದ ಹಿಮಾಲಯಕ್ಕೆ ದಕ್ಷಿಣಕ್ಕೆ ಹರಡಿಕೊಂಡಿರುವ ಭೂಭಾಗವೇ ಭರತವರ್ಷವೆಂದು ಹೇಳಲಾಗಿದೆ. ಜೈನ ಧರ್ಮದ 24 ತೀರ್ಥಂಕರರಲ್ಲಿ ಪ್ರಥಮ ತೀರ್ಥಂಕರ ಆದಿನಾಥರ ಪುತ್ರನೇ ಭರತ. ಈತ ಪ್ರಥಮ ಚಕ್ರವರ್ತಿಯಾಗಿದ್ದ. ಹೀಗಾಗಿಯೇ ಈತನ ಹೆಸರು ಈ ದೇಶಕ್ಕೆ ಭಾರತ ಎಂಬ ಹೆಸರು ಬಂದಿದೆಯೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಭಾರತ ದೇಶದ ಭೂಮಿಯ ಲಕ್ಷಣಗಳು, ಪರ್ವತಗಳ ಹೆಸರು, ನದಿಗಳ ಹೆಸರು, ಪ್ರಾಕೃತಿಕ ಚಲನವಲನಗಳು ಇತ್ಯಾದಿಗಳನ್ನು ಲೇಖಕರು ಚೆನ್ನಾಗಿ ವಿವರಿಸಿದ್ದಾರೆ.‌ ವಿವಿಧ ಮತಪಂಗಡಗಳು, ವಿವಿಧ ಭಾಷೆಗಳು, ಸಸ್ಯಾಹಾರ ಮಾಂಸಾಹಾರ ವೈರುಧ್ಯಗಳ ನಡುವೆಯೂ ಭಾರತದ ಏಕತೆಯನ್ನು ಹಾಡಿಕೊಂಡಾಡಿದ್ದಾರೆ. ಸಾಹಿತ್ಯ, ಶಾಸ್ತ್ರ, ಕಲೆ, ಜಾನಪದ ಅನೇಕ ವೈವಿಧ್ಯತೆಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸಂಸ್ಕೃತಿಯ ಹಿನ್ನಲೆ, ಸಿಂಧೂ ಹರಪ್ಪಾ ಸಂಸ್ಕೃತಿ, ಆರ್ಯ ಸಂಸ್ಕೃತಿ, ಉತ್ತರ ವೈದಿಕ ಕಾಲದ ಸಂಸ್ಕೃತಿ, ಅವೈದಿಕ ಪಂಥಗಳು, ಜೈನ ಧರ್ಮದ ಅಹಿಂಸಾದಿ ವಿಚಾರಗಳು, ಜೈನ ಧರ್ಮದ ಪ್ರಾಚೀನತೆ, ಜೈನ ಧರ್ಮದ ಪ್ರಕಾರ ಕಾಲದ ಪರಿಕಲ್ಪನೆ ಮತ್ತು 24 ತೀರ್ಥಂಕರರು, ಮನುಗಳು ಮತ್ತು ಪ್ರಥಮ ತೀರ್ಥಂಕರರಿಂದ ಹಿಡಿದು 24 ನೆಯ ತೀರ್ಥಂಕರ ಮಹಾವೀರರ ವರೆಗಿನ ವಿಚಾರಗಳು , ಜೈನ ಧರ್ಮದ ಕರ್ಮಸಿದ್ಧಾಂತ, ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆಯನ್ನು ಲೇಖಕರು ವಿಸ್ತಾರವಾಗಿ ವರ್ಣಿಸಿದ್ದಾರೆ. ಒಂದನೇ ಶತಮಾನದಲ್ಲಿ ದೊರಕುವ ಪ್ರಾಕೃತ ಭಾಷೆಯ ಜೈನಗ್ರಂಥಗಳು ( ಷಟ್ಖಾಂಡಾಗಮ ) ನಂತರವೂ ಜೈನ ಮುನಿಗಳು ಪ್ರಾಕೃತ ಭಾಷೆಯಲ್ಲಿ ರಚನೆಗೊಂಡ ಗ್ರಂಥಗಳು, ನಂತರ ಪ್ರವರ್ಧಮಾನಕ್ಕೆ ಬಂದ ಸಂಸ್ಕೃತದಲ್ಲಿ ರಚನೆಯಾದ ಸಾವಿರಾರು ಗ್ರಂಥಗಳು, ಜೈನರ ರಾಮಾಯಣ, ಮಹಾಭಾರತ ಇತ್ಯಾದಿ ಗ್ರಂಥಗಳು ಜೈನ ಧರ್ಮದ ಹಿರಿಮೆಗರಿಮೆಯನ್ನು ಸಾರುತ್ತಿವೆ. ಶಿಲ್ಪಕಲೆ, ಚಿತ್ರಕಲೆ , ಸಾವಿರಾರು ಜಿನಾಲಯಗಳು , ನಿರ್ಗ್ರಂಥ ಮುನಿಗಳ ಅಹಿಂಸಾದಿ ಕಠೋರ ತಪಸ್ಸಿನ ವಿಚಾರಗಳು, ಗಗನ ಚುಂಬಿತ ಪರ್ವತ ಶ್ರೇಣಿಗಳಲ್ಲಿ ಜೈನರ ದೇವಾಲಯಗಳು, ವಿದೇಶಿ ಪ್ರವಾಸಿಗರು ಜೈನ ಧರ್ಮದ ಬಗೆಗಿನ ಪ್ರವಾಸ ಕಥಗಳ ಉಲ್ಲೇಖವನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.‌ 2. ಎರಡನೇ ಅಧ್ಯಾಯದಲ್ಲಿ ಕರ್ನಾಟಕ ಸಂಸ್ಕೃತಿ ಮತ್ತು ಜೈನ ಧರ್ಮದ ಬಗೆಗಿನ ವಿಚಾರವನ್ನು ತಿಳಿಯಪಡಿಸಲಾಗಿದೆ. ಕರ್ನಾಟಕಕ್ಕೆ ಜೈನ ಧರ್ಮದ ಕೊಡುಗೆ, ಕರ್ನಾಟಕದಲ್ಲಿ ಜೈನ ಧರ್ಮದ ಬೆಳವಣಿಗೆ, ಕರ್ನಾಟಕದ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ, ಕರ್ನಾಟಕದಲ್ಲಿ ಜೈನಧರ್ಮದ ಇಳಿಮುಖದ ಬಗೆಗೆ ಲೇಖಕರು ವಿವರಿಸಿದ್ದಾರೆ. ಜೈನ ಕವಿಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ, ಬೆಳಗೊಳ ಕಾರ್ಕಳ, ವೇಣೂರು ಬಾಹುಬಲಿ ಶಿಲ್ಪಗಳು, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಮತ್ತು ರಾಜ್ಯದ ನೂರಾರು ಅಪರೂಪದ ಶಿಲಾಮಯ ಬಸದಿಗಳು, ಜೈನ ರಾಜರುಗಳು ಕರ್ನಾಟಕಕ್ಕೆ ನೀಡಿದ ಅಭೂತಪೂರ್ವ ಆಡಳಿತ, ಜೈನ ರಾಜರು ತೋರಿದ ಸರ್ವಧರ್ಮ ಸಮನ್ವಯತೆ, ಹುಂಚ ಸಿಂಹನಗದ್ಧೆ, ಮಲೆಯೂರು, ವರಂಗ, ಮೂಡುಬಿದಿರೆ ಮುಂತಾದ ಜೈನ ತೀರ್ಥಕ್ಷೇತ್ರಗಳ ವೈಭವತೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅನ್ಯ ಮತಪಂಗಡಗಳಿಂದ ಜೈನ ಧರ್ಮದ ಮೇಲಾದ ದಾಳಿ, ತಾತ್ವಿಕ ನೆಲೆಯಲ್ಲಿ ಎದುರಾದ ಸಮಸ್ಯೆಗಳಿಂದ ಜೈನ ಧರ್ಮದ ಮೇಲಾದ ಪರಿಣಾಮ, ಸಂಖ್ಯೆಯಲ್ಲಿ ಇಳಿಮುಖದ ಬಗ್ಗೆ ಅವಲೋಕನವಾಗಿದೆ. 3. ಮೂರನೇ ಅಧ್ಯಾಯದಲ್ಲಿ ತುಳುನಾಡು ಮತ್ತು ಜೈನ ಧರ್ಮದ ಬಗ್ಗೆ ವಿವರಿಸಲಾಗಿದೆ. ತುಳುನಾಡಿನ ಹಿನ್ನಲೆ, ತುಳುನಾಡಿನ ವ್ಯಾಪ್ತಿ, ತುಳುನಾಡಿಗೆ ಜೈನ ಧರ್ಮದ ಆಗಮನ, ಅಳುಪರ ಕಾಲದಲ್ಲಿ ಜೈನಧರ್ಮದ ಬೆಳವಣಿಗೆ, ವಿಜಯನಗರ ಕಾಲದಲ್ಲಿ ಜೈನಧರ್ಮ ಉಚ್ಛ್ರಾಯ ಸ್ಥಿತಿ, ಕೆಳದಿ ಅರಸರ ಕಾಲದಲ್ಲಿ ಜೈನ ಧರ್ಮದ ಮೇಲೆ ಮರ್ಮಾಘಾತವನ್ನು ಲೇಖಕರು ವಿವರಿಸಿದ್ದಾರೆ. ಕರ್ನಾಟಕ ರಾಜ್ಯದ ದಕ್ಷಿಣದ ಭಾಗವೇ ದಕ್ಷಿಣಕನ್ನಡ ಅಥವಾ ತುಳುನಾಡು ಎಂದಾಗಿದೆ. ತುಳು ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಪರಶುರಾಮನ ಕೊಡಲಿ ಎಸೆತದಿಂದಾಗಿ ತುಳುನಾಡು ಸೃಷ್ಟಿಯಾಯಿತು ಎಂದು ತುಳುವರ ನಂಬಿಕೆಯಾಗಿದೆ. ಅಂದು ತುಳುನಾಡು ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ ಕೆಲ ಭಾಗಗಳನ್ನು ಒಳಗೊಂಡಿತ್ತು ಎನ್ನಲಾಗುತ್ತಿದೆ. ಶ್ರವಣಬೆಳಗೊಳಕ್ಕೆ ಭದ್ರಬಾಹು ಮುನಿಗಳ ಪ್ರವೇಶದೊಂದಿಗೆ ತುಳುನಾಡಿಗೆ ಎರಡನೆಯ ಶತಮಾನದಲ್ಲಿ ಪ್ರವೇಶವಾಯಿತು ಎನ್ನಲಾಗಿದೆ. ಕ್ರಿ.ಶ. 707 ರ ಶಿಗ್ಗಾಂವಿಯ ಶಾಸನದಲ್ಲಿ‌ ತುಳುನಾಡಿನಲ್ಲಿ ಜೈನ ಧರ್ಮ ಇರುವ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗುತ್ತಿದೆ. ಹಾಗೆಯೇ ತುಳುನಾಡಿನ ಅನೇಕ ಜೈನ ದೇವಾಲಯಗಳಲ್ಲಿ ಜೈನ ಧರ್ಮದ ಅಸ್ತಿತ್ವವನ್ನು ಶಿಲಾ ಶಾಸನ ತಿಳಿಸುತ್ತದೆ. ಅಳುಪರು ಮೂಡುಬಿದಿರೆಯನ್ನು ರಾಜಧಾನಿಯಾಗಿಸಿಕೊಂಡು ತುಳುನಾಡನ್ನು ಆಳುತ್ತಿದ್ದಾಗ ಜೈನ ಧರ್ಮ ಉತ್ತುಂಗದಲ್ಲಿತ್ತು. ಅಳುಪರಸರು ಜೈನ ರಾಜರಾಗಿದ್ದು ಸರ್ವಧರ್ಮಗಳನ್ನು ಪ್ರೀತಿಸುತ್ತಿದ್ದರು. ಅಳುಪರು ಜೈನ ಧರ್ಮಕ್ಕೆ ನೀಡಿದ ಕೊಡುಗೆಯ ವಿವರ ಶಿಲಾಶಾಸನಗಳಿಂದ ತಿಳಿದುಬರುತ್ತದೆ. ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕಾಲದಲ್ಲೂ ಜೈನ ಧರ್ಮ ಉತ್ತುಂಗಕ್ಕೆ ಏರಿತ್ತು. ಇವರ ಕಾಲದಲ್ಲಿ ಸಾಮಂತ ರಾಜರಾಗಿ ತುಳುನಾಡಿನಲ್ಲಿ ಜೈನರೇ ಇರುತ್ತಿದ್ದರು. ಕೆಳದಿ ಅರಸರ ಕಾಲದಲ್ಲಿ ಜೈನ ಧರ್ಮದ ಪ್ರಭಾವ ಗಣನೀಯವಾಗಿ ಇಳಿಮುಖವಾಗತೊಡಗಿತು. 4. ನಾಲ್ಕನೇ ಅಧ್ಯಾಯದಲ್ಲಿ ತುಳುನಾಡಿನಲ್ಲಿ ತುಂಡರಸರೇ ರಾಜ್ಯಭಾರ ನಡೆಸಿದವರಾಗಿದ್ದಾರೆ. ಗೇರುಸೊಪ್ಪೆಯ ಸಾಳುವರು, ಹಾಡುವಳ್ಳಿಯ ಸಾಳುವರು, ಕಾರ್ಕಳದ ಭೈರವರಸರು, ಮೂಲ್ಕಿಯ ಸಾಮಂತರು, ಬಂಗವಾಡಿಯ ಬಂಗಸರು, ಬೈಲಂಗಡಿಯ ಮೂಲರು, ಸುರಾಲಿನ ತೋಳಹರು, ವೇಣೂರಿನ ಅಜಿಲರು, ಹೆಗ್ಗಡೆ ಬಲ್ಲಾಳರುಗಳು ಆಳಿದ ರಣರೋಚಕ ಇತಿಹಾಸವನ್ನು ಲೇಖಕರು ಸಾಕ್ಷೀ ಸಮೇತ ಚಿತ್ರಿಸಿದ್ದಾರೆ. ಅಳುಪರು ಆಳಿದ ಪರಿಯನ್ನು ನೋಡಿದರೆ ಅದು ಕದಂಬ, ಚಾಳುಕ್ಯ, ರಾಷ್ಟ್ರಕೂಟ, ಹೊಯ್ಸಳರ ರೀತಿಯಂತೆ ವೈಭವವಾಗಿ ಇತ್ತು ಎನ್ನಲಾಗಿದೆ. ವಿಜಯನಗರ ಕಾಲದ ಆಡಳಿತ ಪದ್ಧತಿ ತುಳುನಾಡಿನಲ್ಲೂ ಇತ್ತು ಎನ್ನಲಾಗುತ್ತಿದೆ. ಅಲ್ಲಲ್ಲಿ ತುಂಡರಸು ಬಹಳ ಚೆನ್ನಾಗಿ ಆಡಳಿತ ನಡೆಸುತ್ತಿದ್ದರು. ಸೈನ್ಯಗಳು, ರಾಜಕೀಯ ಒಪ್ಪಂದಗಳು, ಅರಸರ ಆದರ್ಶ ಕರ್ತವ್ಯಗಳು, ರಾಣಿಯರ ಭವ್ಯ ಇತಿಹಾಸ, ನ್ಯಾಯ ಪರಿಪಾಲನೆ ಮುಂತಾದವುಗಳ ವೈಭವತೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ನಾಲ್ಕನೇ ಅಧ್ಯಾಯದಲ್ಲಿ ರಾಜಕೀಯ ವಿಶ್ಲೇಷಣೆಯನ್ನು ಮಾಡಲಾಗಿದೆ. 5. ಅಧ್ಯಾಯ ಐದರಲ್ಲಿ ಮೊದಲಿಗೆ ಧಾರ್ಮಿಕ ವಿಶ್ಲೇಷಣೆಯಲ್ಲಿ ತುಳುನಾಡಿನಲ್ಲಿ ವೈಭವದಿಂದ ಇದ್ದ ಜೈನ ಧರ್ಮದ ಸ್ವರೂಪವನ್ನು ವಿವರಿಸಲಾಗಿದೆ. ದಿಗಂಬರ ಜೈನರ ಆಚಾರವಿಚಾರಗಳನ್ನು ಮೇರು ಧಾರ್ಮಿಕ ಪರಂಪರೆಯನ್ನು ವಿವರಿಸಲಾಗಿದೆ. ಮುನಿಧರ್ಮ, ಅದರಲ್ಲೂ ತುಳುನಾಡಿನಲ್ಲಿ ನಿರ್ಗ್ರಂಥ ಮುನಿಗಳ ಪರಮೋಚ್ಛ ಆಚಾರ ವಿಚಾರಗಳು, ಸಲ್ಲೇಖನ ಅಥವಾ ಸಮಾಧಿ ಮರಣದ ವೈಭವತೆ, ಜೈನರ ಒಳಪಂಗಡಗಳು , ಜೈನರ ಉಪನಾಮಗಳಾದ ಅಜಿಲ, ಆಳ್ವ, ಬಲ್ಲಾಳ , ಬಂಗ ಇತ್ಯಾದಿ, ಬಳಿಗಳಾದ ಬಾಗ್ಯೆಟ್ಟನ್ನಾಯ, ಬಂಗರನ್ನಾಯ, ಇತ್ಯಾದಿ, ಮಾತೃಪ್ರಧಾನ ಕುಟುಂಬ ಪದ್ಧತಿ, ಭೂತಾರಾಧನೆಗಳು , ಜೈನ ಶೆಟ್ಟಿಗಳು, ಜೈನ ಬಂಟರ ಬಗ್ಗೆ ಮಾಹಿತಿ, ಇಂದ್ರರು, ವರ್ಣವ್ಯವಸ್ಥೆ, ವಂಶ, ಗೋತ್ರ, ಶಾಖೆಗಳನ್ನು ವಿವರಿಸಲಾಗಿದೆ. ಷೋಡಶ ಕ್ರಿಯೆಗಳು, ಗರ್ಭದಾನ, ಪ್ರಮೋದ, ಸೀಮಂತ, ಮಗುವಿನ ಜನನದ ನಂತರ ಜಾತಕರ್ಮ, ನಾಮಕರ್ಮ, ಉಪದೇಶ, ಅನ್ನಪ್ರಾಶನ, ಅಕ್ಷರಾಭ್ಯಾಸ, ಉಪನಯನ , ವಿವಾಹ ಮುಂತಾದವುಗಳು ತುಳುನಾಡಿನ ಜೈನರಲ್ಲಿ ವಿಶೇಷ ರೀತಿಯಲ್ಲಿ ಇತ್ತು ಎನ್ನಲಾಗಿದೆ. ಜೈನರ ದಾನ ಪರಂಪರೆ, ಅರಸರ ದಾನಗಳು, ಅರಸಿಯರ ದಾನಗಳು, ಅಧಿಕಾರಿಗಳ ದಾನಗಳು, ಜನಸಾಮಾನ್ಯರ ದಾನಗಳು ಮುಂತಾದವುಗಳನ್ನು ವಿವರಿಸಲಾಗಿದೆ. ಜೈನರ ಆರಾಧನೆಗಳು , ಮಹಾಭಿಷೇಕ, ಇಂದ್ರಧ್ವಜ ಮುಂತಾದಪೂಜೆಗಳು, ಅಭಿಷೇಕಗಳು, ಸಾಂಪ್ರಾದಾಯಿಕ ಪರ್ವಗಳು, ಹಬ್ಬಗಳು, ಸಾಂದರ್ಭಿಕ ಆಚರಣೆಗಳು, ಪಂಚಕಲ್ಯಾಣಗಳು, ಮಹಾಮಸ್ತಕಾಭಿಷೇಕಗಳು, ನೋಂಪಿಗಳು, ಪ್ರಾದೇಶಿಕ ಆಚರಣೆಗಳಾದ ಭೂತಾರಾಧನೆ, ನಾಗಾರಾಧನೆ, ಪಿತೃಗಳ ಆರಾಧನೆ, ದೇವತೆಗಳ ಆರಾಧನೆ, ರಥೋತ್ಸವಗಳು, ಇತ್ಯಾದಿಗಳ ವಿವರಣೆ ತನ್ನದೇ ವೈಶಿಷ್ಟ್ಯಗಳನ್ನು ತೋರಿಸುತ್ತದೆ. 6. ಆರನೇ ಅಧ್ಯಾಯದಲ್ಲಿ ಸಾಮಾಜಿಕ ವಿಶ್ಲೇಷಣೆಯನ್ನು ಮಾಡಲಾಗಿದೆ. ಅಂದಿನ ಕಾಲದಲ್ಲಿ ತುಳುನಾಡಿನಲ್ಲಿ ಜೈನರ ಸಂಖ್ಯೆ, ವರ್ಣಾಶ್ರಮ ಪದ್ಧತಿ, ಜಾತಿ ಪದ್ಧತಿ, ಕೌಟುಂಬಿಕ ವ್ಯವಸ್ಥೆ, ಜೈನರ ಆಹಾರ ಕ್ರಮ, ಮುನಿಗಳ ತ್ಯಾಗಿಗಳ ಆಹಾರ ಪದ್ಧತಿ, ಉಡುಗೆ ತೊಡುಗೆಗಳು, ಅಳಿಯಸಂತಾನ ಪದ್ಧತಿ, ಸೂತಕಗಳು, ಶವಸಂಸ್ಕಾರ, ನಂಬಿಕೆಗಳು ಮುಂತಾದವುಗಳನ್ನು ವಿವರಿಸಲಾಗಿದೆ. ಕುಟುಂಬದಲ್ಲಿ ಹೆಣ್ಣಿಗೆ ಪ್ರಾಧಾನ್ಯತೆ , ಸಹೋದರಿಯ ಮಗನೇ ಉತ್ತರಾಧಿಕಾರಿಯಾಗುವುದು ಇತ್ಯಾದಿಗಳ ಜೈನ ಕುಟುಂಬಗಳ ವೈಶಿಷ್ಟ್ಯವನ್ನು ವಿವರಿಸಲಾಗಿದೆ. ಜೈನರ ವಿದ್ಯಾಭ್ಯಾಸ, ಮಠಗಳಲ್ಲಿ ಶಿಕ್ಷಣ, ಸ್ತ್ರೀಯರ ವಿದ್ಯಾಭ್ಯಾಸ, ಜೈನರ ಉದ್ಯೋಗಗಳು, ವ್ಯಾಪಾರಗಳನ್ನು ವಿವರಿಸಲಾಗಿದೆ. ಸಾಮಾಜಿಕ ಕೇಂದ್ರಗಳಾದ ಬಸದಿ, ಮಠಗಳು, ಕಾರ್ಕಳ ಜೈನಮಠದ ಇತಿಹಾಸ, ವರಾಂಗ ಮಠದ ಇತಿಹಾಸ, ಹಾಡುವಳ್ಳಿಯ ಅಕಲಂಕ ಮಠ, ಗೇರುಸೊಪ್ಪೆಯ ಸಮಂತಭದ್ರ ಮಠ, ಕಂಬಳ ಕ್ರೀಡೆಗಳ ವೈಭವವನ್ನು ಚಿತ್ರಿಸಲಾಗಿದೆ. 7. ಅಧ್ಯಾಯ ಏಳರಲ್ಲಿ ಜೈನ ಧರ್ಮೀಯರ ಸಾಹಿತ್ಯ, ಶಾಸನ ಸಾಹಿತ್ಯ, ಶಾಸನ ಕವಿಗಳು, ಅನೇಕ ಚರಿತೆಗಳು, ಕಾವ್ಯಗಳು, ಸ್ವಾಧ್ಯಾಯ ಗ್ರಂಥಗಳು, ರತ್ನಾಕರ ಕವಿಯ ಸಾಹಿತ್ಯದ ವೈಭವ, ಜೈನ ರಾಜರ ಜೀವನ ಕತೆ, ಅರಮನೆಗಳ ಇತಿಹಾಸ, ಬೀಡುಗಳ ಇತಿಹಾಸ, ತೀರ್ಥಂಕರರ ಚರಿತ್ರೆ, ಸ್ಥಳ ಐತಿಹ್ಯದ ಕಥೆಗಳು, ವ್ಯಕ್ತಿ ಐತಿಹ್ಯದ ಕಥೆಗಳು, ಧವಳಾ ಗ್ರಂಥಗಳು, ತುಳುನಾಡಿನ ಅನೇಕ ಜೈನ ಕವಿಗಳ ವಿವರಗಳ ಭಂಡಾರವೇ ಏಳನೇ ಅಧ್ಯಾಯದಲ್ಲಿ ಅಡಕವಾಗಿದೆ. 8. ಎಂಟನೇ ಅಧ್ಯಾಯದಲ್ಲಿ ಜೈನ ವಾಸ್ತು ಮತ್ತು ಮೂರ್ತಿ ಶಿಲ್ಪಗಳು, ವರ್ಣಚಿತ್ರಕಲೆಗಳ ಮಾಹಿತಿ ಇದೆ. ಜೈನ ವಾಸ್ತು ಶಿಲ್ಪ ಪ್ರಪಂಚದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ತ್ರಿಭುವನ ತಿಲಕ ಚೂಡಾಮಣಿ ಬಸದಿ ( ಕ್ರಿ.ಶ. 1430 ರಲ್ಲಿ ನಿರ್ಮಾಣ ) , ಮೂಡುಬಿದಿರೆಯ ಗುರುಬಸದಿ ಸಹಿತ 18 ಬಸದಿಗಳ ನಿರ್ಮಾಣದ ಕಾಲ, ಯಾವ ದೇವರು, ನಿರ್ಮಾಣ ಯಾರಿ ಎಂಬಿತ್ಯಾದಿಗಳ ವಿವರಣೆ ಇದೆ. ಸ್ತಂಭಶಿಲ್ಪಗಳು, ಬ್ರಹ್ಮಸ್ತಂಭಗಳು, ನಿಧಿಸ್ತಂಭ, ವೀರಗಂಭಗಳು, ಕಾಷ್ಠ ವಾಸ್ತುಶಿಲ್ಪಗಳು, ಚೌಟರ ಅರಮನೆ, ಸೂರಾಲಿನ ಅರಮನೆ, ಜೈನ ಮೂರ್ತಿ ಶಿಲ್ಪಗಳು, ತೀರ್ಥಂಕರರ ಶಿಲ್ಪ ವೈಶಿಷ್ಟ್ಯಗಳು, ಶಿಲೆಯ ವಿಗ್ರಹಗಳು, ಲೋಹದ ವಿಗ್ರಹಗಳು, ಲೆಪ್ಪದ ವಿಗ್ರಹಗಳು, ಕಾಷ್ಠ ವಿಗ್ರಹಗಳು, ನವರತ್ನಗಳ ವಿಗ್ರಹಗಳು, ಬಾಹುಬಲಿ ವಿಗ್ರಹಗಳು, ನವದೇವತೆಗಳ ಶಿಲ್ಪಗಳು, ಚಿತ್ರಕಲೆ, ವರ್ಣಚಿತ್ರಗಳು, ಭಿತ್ತಿ ಚಿತ್ರಗಳು, ತಾಳೆಗರಿ ಗ್ರಂಥಗಳ ವಿವರಗಳು ಬಹಳ ಸೊಗಸಾಗಿ ಮೂಡಿಬಂದಿದೆ. 9. ತುಳುನಾಡಿಗೆ ಜೈನಧರ್ಮದ ಕೊಡುಗೆಯನ್ನು ವಿವರಿಸಲಾಗಿದೆ. ಸಾಮಾಜಿಕ ಸಾಮರಸ್ಯ, ಸರ್ವಧರ್ಮ ಸಮನ್ವಯತೆ, ಧಾರ್ಮಿಕ ಐಕ್ಯತೆ, ರಾಜಧರ್ಮವಾಗಿ ಜೈನಧರ್ಮ ತೋರಿದ ಪ್ರಬುದ್ಧತೆ, ರಾಜರ ಕೊಡುಗೆಗಳು, ಹಿಂದೂ ದೇವಸ್ಥಾನಗಳ ನಿರ್ಮಾಣ, ಮಸೀದಿ ಚರ್ಚುಗಳು ನಿರ್ಮಾಣಕ್ಕೆ ಸಹಕಾರ, ಜೈನೇತರರಿಗೆ ಅಧಿಕಾರ ಹಂಚಿಕೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಆಶ್ರಯ, ದೈವಗಳ ಕೋಲ ನೇಮಗಳಿಗೆ ದಾನಗಳು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ, ಊರಿನ ಅಭಿವೃದ್ಧಿಗೆ ಕಂಕಣ, ವಿದೇಶಿ ಶಕ್ತಿಗಳ ವಿರುದ್ಧ ಹೋರಾಟ , ಧರ್ಮ ಸಂಸ್ಕೃತಿ ಜಾನಪದಕ್ಕೆ ಜೈನರಸರು ಅಭೂತಪೂರ್ವ ಕಾಣಿಕೆ ನೀಡಿದ್ದಾರೆ. ತುಳುನಾಡಿನ ಜೈನಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಗ್ರಂಥದ ರಚನೆಯಲ್ಲಿ ಎಸ್ ಡಿ ಶೆಟ್ಟರು ಅಮೂಲ್ಯವಾದ ಕೃತಿಯನ್ನು ನಾಡಿಗೆ ಸಮರ್ಪಿಸಿದ್ದಾರೆ. ಈ ಗ್ರಂಥದ ರಚನೆಗೆ ಲೇಖಕರು ಆಧಾರವಾಗಿ ತೆಗೆದುಕೊಂಡ ಗ್ರಂಥದ ಆಧಾರವನ್ನು ತೆಗೆದುಕೊಂಡದ್ದನ್ನು ಮುಕ್ತವಾಗಿ ಹಂಚಿಕೊಂಡಿರುವುದು ಲೇಖಕರ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಈ ಗ್ರಂಥವು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಇವರ ಪ್ರಕಾಶನವಿದೆ. ಇದರ ಬೆಲೆ ರೂಪಾಯಿ 450 ಆಗಿರುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಇತಿಹಾಸ ಆಸಕ್ತರಿಗೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

18
Votes
443
Views
6 Months
Since posted

Voting Closed!

Scroll to Top