Submission 1987

ಪುಸ್ತಕದ ಶೀರ್ಷಿಕೆ: ಕಸೂತಿಯಾದ ನೆನಪು

ಪುಸ್ತಕದ ಲೇಖಕರು: ಎಂ.ಆರ್. ಕಮಲ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶೋಭಾ ಮೂರ್ತಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸುಂದರವಾದ ಮುಖಪುಟ, ಅದಕ್ಕಿಂತ ಸುಂದರವಾದ‌ ತುಂಬುನಗೆ ಚೆಲ್ಲುವ ಕಮಲಾ ಮೇಡಂ ಫೋಟೊ ಇರುವ ಹಿಂಪುಟ, ಒಳಪುಟಗಳಲ್ಲಿ ಅಡಕವಾಗಿರುವ ಸವಿನೆನಪಿನ ಎಳೆಗಳಿಂದ ನೇಯ್ದ ಕಸೂತಿಯ ಚಿತ್ತಾರ! ನನಗೊಂದು ಅಭ್ಯಾಸವಿದೆ....ಊಟ ಮಾಡುವಾಗ ಅತಿ ರುಚಿ ಎನಿಸಿದ್ದನ್ನು ಕಡೆಯಲ್ಲಿ ತಿನ್ನಲು ಇಟ್ಟುಕೊಳ್ಳುವುದು. ನಾನೋದುವ ಪುಸ್ತಕದ ಗುರುತಿಗಾಗಿ ಪುಟದ ತುದಿಯನ್ನು ಮಡಚುವುದಾಗಲಿ, ಇಷ್ಟವಾದ ಓದನ್ನು ಅಂಡರ್‌ಲೈನ್ ಮಾಡುವುದಾಗಲಿ ಎಂದೂ ಮಾಡುವುದಿಲ್ಲ. ಅಂತಹ ವಾಕ್ಯಗಳನ್ನು ಮತ್ತೆ ಮತ್ತೆ ಓದಲೆಂದು ಪುಟ ಸಂಖ್ಯೆಯೊಡನೆ ಟಿಪ್ಪಣಿ ಮಾಡಿಕೊಳ್ಳುತ್ತೇನೆ. ಆದರೆ ಮೊದಲಸಲ ಈ ಪುಸ್ತಕದ ಪುಟಗಳಲ್ಲಿ ಅಂಡರ್‌ಲೈನ್ ಮಾಡಿದೆ. ಪೂರ್ತಿ ಓದಿಯಾದಮೇಲೆ ಪುಟಗಳನ್ನು ತಿರುಗಿಸಿ ನೋಡುತ್ತೇನೆ...ಅಂಡರ್‌ಲೈನ್ ಮಾಡದ ಪುಟವೇ ಇಲ್ಲ! ಬಾಲ್ಯದ ನೆನಪುಗಳನ್ನು ಹೆಕ್ಕಿ ಬರೆದ ಪ್ರಬಂಧ ಅಥವಾ ಲಲಿತ ಪ್ರಬಂಧಗಳ ಸಂಕಲನಗಳು ಒಂದು ಸಾಹಿತ್ಯಪ್ರಕಾರವೇ ಆಗಿದೆ. ಇದು ಅಂತಹದ್ದಲ್ಲ, ಕಳೆದುಹೋದ ಬಾಲ್ಯದ ದಿನಗಳನ್ನು ನೆನೆಯುವ ಲೊಚಗುಟ್ಟುವಿಕೆ ಇಲ್ಲಿಲ್ಲ. ಬದಲಿಗೆ ಲೇಖಕಿಯ ಅರವತ್ತು ವರ್ಷಗಳ ಸುದೀರ್ಘ ಬದುಕಿನ ಹಿನ್ನೋಟವಿದೆ. ಅವರ ಬಾಲ್ಯ, ಶೈಕ್ಷಣಿಕ, ವೃತ್ತಿ ಬದುಕಿನ ನೆನಪುಗಳು ಬಣ್ಣದ ದಾರಗಳ ಎಳೆಗಳಾಗಿವೆ. ಜೀವನವಿರುವುದು ಜೀವಿಸಲು ಎನ್ನುವ ಲೇಖಕಿ, ಅರ್ಥಹೀನ ನಿಯಮಗಳ ಸರಪಳಿಯಿಂದ ತಮ್ಮನ್ನು ಬಂಧಿಸಿಕೊಂಡು ಮಿಡುಕುವ ಮಹಿಳೆಯರಿಗೆ ಧ್ವನಿಯಾಗುತ್ತಾರೆ. ಅವರ ಗಾಢ ಅನುಭವಗಳನ್ನು ಓದುತ್ತಾ 'ನಾನೂ ಹೀಗೆಯೇ ಯೋಚಿಸಿದ್ದೆ, ಇಂತಹ ಅನುಭವ ನನಗೂ ಆಗಿದೆ, ನನ್ನ ಆ ದಿನಗಳು ಹೀಗೆಯೇ ಇದ್ದವು' ಎನ್ನಿಸುತ್ತಾ ಹೋಗುತ್ತದೆ. ಚಂದದ ಕಸೂತಿಯ ನಡುವೆ ರೇಷ್ಮೆಯ ಝರಿಯ ನೇಯ್ಗೆಯಿಂದ ಸುಂದರವಾಗಿಸಿದ ಚಿತ್ತಾರದಂತೆ ಕಾಣುತ್ತದೆ. ಕವಿವಾಣಿಗಳು, ವಚನಗಳಿಂದ ಕೃತಿಯನ್ನು ಚಪ್ಪರಿಸಿ ಓದುವಂತೆ ಮಾಡಿದ್ದಾರೆ. ಓದಿನ ನಡುವೆ ಆಗಾಗ ತುಟಿಯರಳದೇ ಇರುವುದಿಲ್ಲ. ಖುಷಿಪಡಲು ವಯಸ್ಸಿನ ಮಿತಿಯೇಕೆ ಎನ್ನುವ ಲೇಖಕಿ ಬದುಕನ್ನು ಇಡಿಯಾಗಿ ಅನುಭವಿಸುವ ಆನಂದದಿಂದ ವಂಚಿತರಾಗುವ ಮಹಿಳೆಯರಿಗೆ ಸ್ಪೂರ್ತಿ ತುಂಬುತ್ತಾರೆ. ನೀರೆಗೆ ಸೀರೆಯ ಮೇಲಿರುವ ವ್ಯಾಮೋಹ ಇಂದು ನಿನ್ನೆಯದಲ್ಲ. ಬಹುಶಃ ಇದು ಭಾರತೀಯ ಮಹಿಳೆಯ ವಂಶವಾಹಿನಿಯಲ್ಲೇ ಇರಬಹುದೇನೊ. ಅದೆಷ್ಟು ವೆರೈಟಿ ಸೀರೆಗಳನ್ನು ಹೆಸರಿಸಿದ್ದಾರೆಂದರೆ... ಮರೆತಿದ್ದ ಹೆಸರುಗಳೆಲ್ಲ ಮರುಕಳಿಸಿದವು. ಸಾಮಾಜಿಕ ಕಳಕಳಿ, ಪರಿಸರಪ್ರಜ್ಞೆ, ಜೀವನಪ್ರೀತಿ, ಮಾನವೀಯ ಮೌಲ್ಯಗಳು, ನಿಸರ್ಗಪ್ರೇಮ ಎಲ್ಲವೂ ಇರುವ ಲೇಖನಗಳ ಗುಚ್ಛವು ನುರಿತ ಬಾಣಸಿಗನಿಂದ ತಯಾರಾದ ರಸಪಾಕದಂತಿದೆ. ನೇರವಂತಿಕೆ,ಪ್ರಾಮಾಣಿಕತೆ ಇರುವಲ್ಲಿ ಹಿಂಜರಿಕೆ ಇರುವುದಿಲ್ಲ ಎನ್ನುವ ಮಾತಂತೂ ಸತ್ಯವಾಗಿದೆ. ತೆರೆದ ಮನದವರಿಗೆ ಜೀವನದಲ್ಲಿ ಸೋಲಿರುವುದಿಲ್ಲ ಎನ್ನುತ್ತಾ ಪ್ರವಾಹದ ಜೊತೆ ಈಜಿದರೆ ಹಗುರಾಗುವ ಸುಖವಿದೆ ಎನ್ನುತ್ತಾರೆ. ಪ್ರತಿ ಪ್ರಬಂಧಕ್ಕೂ ಕೊಟ್ಟಿರುವ ಶೀರ್ಷಿಕೆ ಸುಂದರ ಮತ್ತು ಅರ್ಥಪೂರ್ಣವಾಗಿದೆ. ಕವಿಹೃದಯದ ಕವಿಯಿತ್ರಿ ರಚಿತ ಈ ಕೃತಿ ಗದ್ಯಕಾವ್ಯದಂತಿದೆ! ಕೊನೆಯ ಪುಟವನ್ನು ಮುಚ್ಚಿದಮೇಲೂ ಪುಸ್ತಕ ಮೂಡಿಸಿದ ಭಾವಲಹರಿಯಲ್ಲಿ ಬಹಳ ಹೊತ್ತು ತೇಲುತ್ತಲೇ ಇರುತ್ತೇವೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲೇಖಕಿಯ ಬಾಲ್ಯದ ನೆನಪುಗಳು, ವೃತ್ತಿಜೀವನದ ಸಿಹಿ ಕಹಿ ಘಟನೆಗಳು. ಆನೇಕಲ್ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿ ಲೇಖಕಿ ನೇಮಕಗೊಳ್ಳುತ್ತಾರೆ. ಪರೀಕ್ಷೆಯಲ್ಲಿ ಕಾಪಿ ಹೊಡೆಯುವವರನ್ನು ಹಿಡಿದು ಅವರಲ್ಲಿದ್ದ ಚೀಟಿಗಳನ್ನು ಕಸಿದುಕೊಳ್ಳುವ ಅವರ ಮೇಲೆ ಬಸ್ ಸ್ಟಾಪ್ ನಲ್ಲಿ ಕಲ್ಲುಗಳು ಬೀಳಲಾರಂಭಿಸುತ್ತವೆ. ಅಷ್ಟರಲ್ಲಿ ಬಂದ ಬಸ್ ಹತ್ತಿದ ಲೇಖಕಿ ವಿಷಮ ಪರಿಸ್ಥಿತಿಯಿಂದ ಪಾರಾಗುತ್ತಾರೆ. ಅವರ ಉತ್ತಮ ನಡೆಯಿಂದ ಮುಂದೆ ಅದೇ ಹುಡುಗರು ಅವರ ಪ್ರೀತಿಯ ಶಿಷ್ಯರಾಗುತ್ತಾರೆ!

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಪುಸ್ತಕವು ಬದುಕಿನ ಅನುಭವಗಳ ಮಹಾ ಸಂಗ್ರಹ. ಸುಂದರ ಶೀರ್ಷಿಕೆಯುಳ್ಳ ಲೇಖನಗಳಲ್ಲಿ ಇರುವ ಕವಿವಾಣಿಗಳು, ನುಡಿಗಟ್ಟುಗಳು, ಸೂಕ್ತಿಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಕೃತಿಕಾರರ ಆಳವಾದ ಅಧ್ಯಯನ, ವಿಸ್ತಾರವಾದ ಜೀವನಾನುಭವಗಳ ಮೊತ್ತವಾಗಿದೆ ಈ ಪುಸ್ತಕ. ಇದನ್ನು ಎಲ್ಲ ವಯೋಮಾನದವರು, ವಿದ್ಯಾರ್ಥಿಗಳು, ಹವ್ಯಾಸಿ ಬರಹಗಾರರು ಎಲ್ಲರೂ ಓದಬಹುದು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

6
Votes
188
Views
4 Months
Since posted

Voting Closed!

Scroll to Top