ಪುಸ್ತಕದ ಶೀರ್ಷಿಕೆ: ಬೆಳಗಿನೊಳಗು ಮಹಾದೇವಿಯಕ್ಕ
ಪುಸ್ತಕದ ಲೇಖಕರು: ಡಾ. ಎಚ್. ಎಸ್. ಅನುಪಮ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಭದ್ರ ಹೆಗಡೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
*ಬೆಳಗಿನೊಳಗು ಮಹಾದೇವಿಯಕ್ಕ* ಡಾ|ಎಚ್.ಎಸ್. ಅನುಪಮಾ ಅವರ 'ಬೆಳಗಿನೊಳಗು ಮಹಾದೇವಿಯಕ್ಕ' ಕಾದಂಬರಿ ಅತ್ಯಂತ ಉತ್ತಮ ಕೃತಿಯಾಗಿದೆ. ೧೨ನೇ ಶತಮಾನದ ಮಹಾನ್ ಶಿವಶರಣೆ, ವಚನಗಾರ್ತಿ ಮಹಾದೇವಿಯಕ್ಕನ ಕುರಿತಾಗಿ ಬರೆದ ಕೃತಿ. ಅನುಪಮ ಅವರ ಈ ಕೃತಿಯ ಮಹಾದೇವಿ ತನ್ನೊಳಗನ್ನು ಶೋಧಿಸುತ್ತಾ, ತನ್ನ ಪರಿಮಿತಿಯನ್ನು ವಿಸ್ತರಿಸುತ್ತಾ ಎತ್ತರೆತ್ತರಕ್ಕೆ ಏರುತ್ತಾ ಬೆಳಕಾಗಿ, ಲೋಕವೇ ಮೆಚ್ಚುವ ಅಕ್ಕನಾಗಿ ಬೆಳೆಯುವ ರೀತಿಯನ್ನು ಅತ್ಯಂತ ಸೂಕ್ಷ್ಮವಾಗಿ, ಸುಂದರವಾಗಿ ಲೇಖಕಿ ಇಲ್ಲಿ ಮನೋಜ್ನವಾಗಿ ಚಿತ್ರಿಸಿದ್ದಾರೆ. ೧೨ನೇ ಶತಮಾನದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸ್ಥಿತಿ-ಗತಿಗಳನ್ನು ಸ್ತಿತ್ಯಂತರಗಳನ್ನು ಇಲ್ಲಿ ವಿವರಿಸಿದ್ದಾರೆ. ಆ ಕಾಲಘಟ್ಟದಲ್ಲಿ ನಿಂತು ನೋಡಿರುವ ಘಟನೆಗಳೇನೋ ಅನ್ನಿಸುವಷ್ಟು ನೈಜ ನಿರೂಪಣೆ, ಸನ್ನಿವೇಶಗಳ ಜೋಡಣೆ, ನಿರ್ವಹಣೆ ಎಲ್ಲವೂ ಅನೂಹ್ಯವಾಗಿದೆ. ಅಕ್ಕನ ಬಾಲ್ಯ, ಯೌವ್ವನ, ಅವಳಲ್ಲಿ ಹುದುಗಿರುವ ಧೈರ್ಯ, ಸ್ಥೈರ್ಯ, ಮುಖ್ಯವಾಗಿ ಏಕೆ? ಏನು? ಎನ್ನುವ ಕುತೂಹಲಕ್ಕೆ ಉತ್ತರ ಹುಡುಕುವ ರೀತಿ ವಿಭಿನ್ನವಾಗಿದೆ. ಈ ಕಾದಂಬರಿಯಲ್ಲಿ ಬರುವ ಶರಣ-ಶರಣೆಯರ ಬದುಕು ಸಾಮಾಜಿಕ ಕಟ್ಟು-ಕಟ್ಟಳೆಗಳನ್ನು ದಾಟಿ ಬರುವ ರೀತಿ, ಅವುಗಳನ್ನು ಬೆಳೆದು ನಿಲ್ಲುವ ಪ್ರಬುದ್ಧತೆ ಪ್ರಸಂಗಗಳೆಲ್ಲವೂ ಒಂದಕ್ಕೊಂದು ಪೋಣಿಸಿದಂತೆ ಇದ್ದು, ಎಲ್ಲಿಯೂ ಅತಿಶಯೋಕ್ತಿಯಿಲ್ಲ. ಅಕ್ಕ ಮಹಾದೇವಿ ರಾಜನನ್ನು, ರಾಜ್ಯವನ್ನು, ತಂದೆ-ತಾಯಿಯನ್ನು, ತನ್ನವರೆಲ್ಲರನ್ನೂ ತೊರೆದು ಲೌಕಿಕವನ್ನು ಮೀರಿ ತರ್ಕಕ್ಕೆ ನಿಲುಕದ ಅಲೌಕಿಕವನ್ನು ಕಾಣಲು, ಎಡರು-ತೊಡರುಗಳನ್ನು ಎದುರಿಸುತ್ತಾ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ನೆಲೆಯಾದ ಶ್ರೀಶೈಲದತ್ತ ಹೋಗುವಾಗಿನ ದೃಶ್ಯಾವಳಿಗಳು ಕಣ್ಣಿಗೆ ಕಟ್ಟುವಂತೆ, ಅಕ್ಕನೇ ಎದುರಿಗೆ ನಿಂತಂತೆ ಭಾಸವಾಗುತ್ತದೆ. ಜೀವಂತಿಕೆ, ಲವಲವಿಕೆ, ಭಾಷೆಯ ಸೊಗಡು ಪ್ರತೀ ಪಾತ್ರಗಳಲ್ಲಿ ಎದ್ದು ಕಾಣುವಂತಿದೆ. ಅಕ್ಕನ ಮನದಾಳದ ಮಾತುಗಳಿಗೆ ಅಕ್ಷರ ರೂಪವನ್ನು ನೀಡಿ ಡಾ|ಅನುಪಮಾ ಅವರು ಇದನ್ನು ಹೆಣೆದಿರುವುದು ಸೋಜಿಗವೇ ಸರಿ. ಲೇಖಕಿಯವರಲ್ಲಿ ಇರುವ ವಿಸ್ತಾರವಾದ ಓದು, ಆಳವಾದ ಜ್ನಾನ, ಓದಿನ ಜೊತೆಗಿನ ಚಿಂತನೆ, ಗತಕಾಲದ ವ್ಯಕ್ತಿಗಳನ್ನು ವರ್ತಮಾನಕ್ಕೆ ತಂದು ಮರುಸೃಷ್ಟಿಸುವ ಕಲೆಗಾರಿಕೆ, ಸೃಜನಶೀಲತೆ ಅದ್ಭುತ. ಅಕ್ಕನ ವಚನಗಳನ್ನು ಉದಾರಿಸುತ್ತ, ಆ ಘಟನೆಗಳಿಗೆ ಪೂರಕವಾಗುವಂತೆ ಕತೆಗಳನ್ನು ಹೇಳುವುದು ಈ ಕೃತಿಯ ಮತ್ತೊಂದು ವಿಶೇಷತೆ. ರಾಜ ಮನೆತನದ ರೀತಿ-ರಿವಾಜುಗಳನ್ನು ಸ್ವತಂತ್ರ ಮನೋಭಾವದ ಅಕ್ಕನಿಗೆ ಸಹಿಸುವುದು ಸಹಜವಾಗಿಯೇ ಕಷ್ಟವಾಗಿ, ಆ ರಾಜ ವೈಭೋಗವನ್ನೆಲ್ಲ ಧಿಕ್ಕರಿಸಿ ಹೊರ ನಡೆಯುತ್ತಾಳೆ. ಅಲ್ಲಿಂದ ಅಕ್ಕನ ಅಪರಿಮಿತ ಹುಡುಕಾಟ ನಿರಂತರವಾಗಿ ಸಾಗುತ್ತದೆ. ಒಂಟಿ ಹೆಣ್ಣು ಅರೆವಸ್ತ್ರ ಧರಿಸಿ ನಡೆವ ದಾರಿಯಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೀರೋದ್ಧಾತ ಮನಸ್ಸುಳ್ಳ ಛಲಗಾತಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅದ್ಭುತವಾಗಿ ಕೆತ್ತಿದ್ದಾರೆ ಲೇಖಕಿಯವರು. ಅಕ್ಕನ ವ್ಯಕ್ತಿತ್ವದ ಅನಾವರಣವಾದ ರೀತಿ ಅಸದೃಶ್ಯವಾಗಿದೆ. ಕಾಲಗರ್ಭದಲ್ಲಿ ಅಡಗಿ ಹೋದ ಮಹಾನ್ ವ್ಯಕ್ತಿಗಳನ್ನು, ಸನ್ನಿವೇಶ, ಘಟನೆಗಳನ್ನು, ಜೀವ ತಳೆದು ನಿಲ್ಲುವಂತೆ ಮಾಡುವುದು ಈ ಕಾದಂಬರಿಯ ಹೆಗ್ಗಳಿಕೆ. ಆ ತಾಕತ್ತು ಲೇಖಕಿಯವರಲ್ಲಿ ಅಡಗಿದೆ. ಅರಿವಿನ ವಿಸ್ತಾರ ಪಥವನ್ನು ತೋರಿಸುವ ಅಕ್ಕ ಸರ್ವಕಾಲಕ್ಕೂ ಸ್ತುತ್ಯಾರ್ಹಳು. ಡಾ| ಅನುಪಮಾ ಅವರಲ್ಲಿ ಅಡಗಿರುವ ಪ್ರತಿಭೆ, ಸರಳತೆ, ಮಾನವ ಪ್ರೀತಿ, ಹೃದಯವಂತಿಕೆ, ಅವರಲ್ಲಿ ಇರುವ ಅರಿವಿನ ಬೆಳಕು ಕೂಡ ಮಹಾನ್ ಬೆಳಕಾಗಿರುವ ಅಕ್ಕನ ವ್ಯಕ್ತಿತ್ವವನ್ನು ಸಶಕ್ತವಾಗಿ ಕಡೆದಿಡಲು ಸಾಧ್ಯವಾಯಿತು. ಮತ್ತೆ ಮತ್ತೆ ಓದಿಸಿಕೊಂಡು ಹೋಗಬಹುದಾದ ಈ ಕಾದಂಬರಿ, ಕನ್ನಡ ಸಾರಸ್ವತ ಲೋಕಕ್ಕೆ ಶ್ರೀಮತಿ ಎಚ್.ಎಸ್. ಅನುಪಮಾ ಅವರು ನೀಡಿರುವ ದೊಡ್ಡ ಕೊಡುಗೆ ಅಂತಲೇ ಹೇಳಬಹುದು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಬೆಳಗಿನೊಳಗು ಮಹಾದೇವಿಯಕ್ಕ ಕಾದಂಬರಿಯಲ್ಲಿ ಅಕ್ಕನ ಪಾತ್ರ ನನ್ನ ಮೆಚ್ಚಿನ ಪಾತ್ರವಾಗಿದೆ. ಎಲ್ಲ ಶರಣರು ಶರಣೆಯರ ನಡುವೆ ಮಿಂಚಿನಂತೆ ಮನಸೆಳೆವ ,ಅಕ್ಕನ ಧೀರ ನಡೆ ನುಡಿಗಳು ಗಾಂಭೀರ್ಯ ದಿಟ್ಟತನದಿಂದ ಬದುಕನ್ನು ಎದುರಿಸುವ ತಾಕತ್ತು ಮನಸ್ಸನ್ನು ಅಕ್ಕನೆಡೆಗೆ ವಾಲುವಂತೆ ಮಾಡುತ್ತದೆ. ಸಾಮಾಜಿಕ ಕಟ್ಟುಪಾಡುಗಳನ್ನು ಕಿತ್ತು ಎಸೆದು ಸ್ವತಂತ್ರವಾಗಿ ನಿರ್ಭಯವಾಗಿ ನಿಲ್ಲುವ ರೀತಿ ಅಪ್ಯಾಯಮಾನ. ಸವಾಲುಗನ್ನು ಸಮಚಿತ್ತದಿಂದ ನೋಡುತ್ತ ನಡೆದು ಗುರಿ ಮುಟ್ಟುವ ಅಕ್ಕ ಮಹಾದೇವಿ ಸದಾ ನೆನಪಿನಲ್ಲಿ ಉಳಿಯುವ.ಸ್ಪೂರ್ತಿಯನ್ನು ನೀಡುವ ಪಾತ್ರ ಮಹಾಶರಣೆ ಮಹಾದೇವಿ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕರ್ನಾಟಕದ ಇತಿಹಾಸವನ್ನು ಇಷ್ಟಪಡುವವರು, ವಚನಗಳ ಬಗ್ಗೆ ಆಸಕ್ತಿ ಉಳ್ಳವರು, ನಿಜವಾದ ಸ್ತ್ರೀವಾದವನ್ನು ಅರ್ಥ ಮಾಡಿಕೊಳ್ಳಲು ಬಯಸುವವರು ಈ ಪುಸ್ತಕವನ್ನು ಓದಲೇ ಬೇಕು.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.