ಪುಸ್ತಕದ ಶೀರ್ಷಿಕೆ: ಸಾರ್ಥ
ಪುಸ್ತಕದ ಲೇಖಕರು: ಡಾ. ಎಸ್. ಎಲ್. ಭೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಂತೋಷ್ ಕುಮಾರ್ ಎಸ್ ಎನ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಈ ಕಾದಂಬರಿಯ ಕುರಿತು ನಾನು ವಿಮರ್ಶೆ ಮಾಡಲು ಮುಖ್ಯ ಕಾರಣ ಲೇಖಕರು ಆಯ್ದುಕೊಂಡ ಕಾಲಘಟ್ಟ.ಕಾದಂಬರಿಯ ಕಥಾವಸ್ತು ಸಾಗುವುದು ಒಂಭತ್ತನೇ ಶತಮಾನದಲ್ಲಿ. ಈಗಿನ ವಿದ್ಯಮಾನಗಳನ್ನು ಬಳಸಿಕೊಂಡೇ ಕಥೆ ಹೆಣೆಯುವುದು ಕಷ್ಟವಿರುವಾಗ ಸಾವಿರ ವರ್ಷಕ್ಕೂ ಹಿಂದಿನ ಚಿತ್ರಣವನ್ನು ಸಹಜವಾಗಿಯೂ, ಪರಿಣಾಮಕಾರಿಯಾಗಿಯೂ ತೋರಿಸುವುದು ಸುಲಭವಲ್ಲ. ಈ ಕಾದಂಬರಿಯನ್ನು ಓದಿದ ಯಾರಿಗೇ ಆಗಲಿ ಲೇಖಕರು ಕೈಗೊಂಡ, ಆಳವೂ ಮತ್ತು ವಿಸ್ತಾರವೂ ಆದ ಇತಿಹಾಸ ಅಧ್ಯಯನದ ಪರಿಚಯ ಆಗದೇ ಇರದು.ನಾಗಭಟ್ಟ ಎಂಬ ಮಂತ್ರಿಯ ಪಾತ್ರದ ಸ್ವಗತವಾಗಿರುವ ಈ ಕಥೆ ಆರಂಭದಿಂದ ಅಂತ್ಯದವರೆಗೂ ಓದುಗರ ಆಸಕ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜ್ಯದಿಂದ ರಾಜ್ಯಕ್ಕೆ ನಾನಾ ವಿಧದ ವಸ್ತುಗಳನ್ನು ಮಾರಾಟಕ್ಕೋಸ್ಕರ ಕುದುರೆ, ಆನೆಗಳ ಗಾಡಿಗಳ ಮೇಲೆ ಹೊತ್ತುಕೊಂಡು ಸಾಗುವ ಮೆರವಣಿಗೆಯೇ ಸಾರ್ಥ. ರಾಜಾಜ್ಞೆಯಂತೆ ಸಾರ್ಥದ ಕಾರ್ಯವಿಧಾನಗಳನ್ನು ತಿಳಿಯುವ ಸಲುವಾಗಿ ಊರಿನಿಂದ ಹೊರಟ ನಾಗಭಟ್ಟನ ಜೀವನ ಹತ್ತಾರು ತಿರುವುಗಳನ್ನು ಪಡೆಯುತ್ತದೆ.ಈ ತಿರುವುಗಳಲ್ಲಿ ಅತಿ ಪ್ರಮುಖವಾದುದು ಅವನು ಕಂಡ ಅಘೋರಿಗಳ ಪ್ರಪಂಚ ; ಸಾಮಾನ್ಯ ಮನುಷ್ಯರು ಊಹಿಸಲು ಸಾಧ್ಯವಾಗದಂತಹ ಅತಿರೇಕದ ಜೀವನ ವಿಧಾನ, ಕಠಿಣ ಸಾಧನೆಗಳು ಮತ್ತು ಆ ದಾರಿಯಲ್ಲಿ ಅವನು ಸಾಗುವ ಪ್ರಯತ್ನ ಓದುಗರಲ್ಲಿ ಆಶ್ಚರ್ಯವನ್ನು ಹುಟ್ಟಿಸುತ್ತದೆ. ಅದು ವೈದಿಕ ಧರ್ಮ ಮತ್ತು ಬೌದ್ಧ ಧರ್ಮಗಳ ನಡುವಿನ ಸಂಘರ್ಷದ ಉತ್ತುಂಗ ಕಾಲ.ಆ ಸಮಯದಲ್ಲಿ ಶಂಕರಾಚಾರ್ಯರ ಆಗಮನ, ಮಂಡನಮಿಶ್ರರೊಡನೆ ವಾದ, ಕರ್ಮಯೋಗಕ್ಕಿಂತ ಜ್ಞಾನಯೋಗವೇ ಶ್ರೇಷ್ಠ ಎಂದು ಪ್ರತಿಪಾದಿಸಿ ಗೆದ್ದ ರೀತಿ, ಮಂಡನರ ಪತ್ನಿ ಕೇಳಿದ ತಾರ್ಕಿಕ ಪ್ರಶ್ನೆಗೆ ಉತ್ತರಿಸಲು ಪರಕಾಯ ಪ್ರವೇಶ ಮಾಡಿ ರಹಸ್ಯ ಬೇಧಿಸಿದುದು, ನಂತರ ಮಂಡನರು ಆಚಾರ್ಯರಿಗೆ ಶರಣಾದುದು; ಎಲ್ಲದಕ್ಕೂ ನಾಗಭಟ್ಟ ಸಾಕ್ಷಿಯಾಗುತ್ತಾನೆ.ಯೋಗಸಾಧನೆಯ ಮತ್ತು ಪಾರಮಾರ್ಥಿಕ ಸಿದ್ಧಾಂತದಂತಹ ಗಹನವಾದ ವಿಷಯಗಳನ್ನು ಸಾಮಾನ್ಯ ಜನರೂ ಅರ್ಥ ಮಾಡಿಕೊಳ್ಳುವಂತೆ ಲೇಖಕರು ವಿವರಿಸಿರುವುದು ಅನನ್ಯವಾಗಿದೆ. ನಾಗಭಟ್ಟನ ಕಲಾಸೇವೆಯ, ಹಟಯೋಗದ, ಸಾಮಾಜಿಕ ಹೋರಾಟದ ಜೀವನ ಘಟ್ಟಗಳಲ್ಲಿ ಚಂದ್ರಿಕೆಯಿಂದ ದೊರೆಯುವ ಸ್ನೇಹ,ಸಹಾಯ, ಸಹಕಾರ ಮನಮಿಡಿಯುವಂತೆ ಚಿತ್ರಿತವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಸಾವಿರ ವರ್ಷಗಳ ಹಿಂದಿನ ಸಾಮಾಜಿಕ, ಧಾರ್ಮಿಕ, ರಾಜತಾಂತ್ರಿಕ ಹಾಗು ವ್ಯಾವಹಾರಿಕ ವ್ಯವಸ್ಥೆಗಳನ್ನು ಒಂದು ಸುಂದರವಾದ ಕಥೆಯ ರೂಪದಲ್ಲಿ ಲೇಖಕರು ಓದುಗರ ಮುಂದೆ ಇಟ್ಟಿರುವುದು ಅಭಿನಂದನಾರ್ಹವಾಗಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.