ಪುಸ್ತಕದ ಶೀರ್ಷಿಕೆ: ಉತ್ತರಕಾಂಡ
ಪುಸ್ತಕದ ಲೇಖಕರು: ಎಸ್.ಎಲ್. ಭೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕಾವ್ಯ ರಾಘವೇಂದ್ರ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಉತ್ತರಕಾಂಡ; ರಾಮಾಯಣದ ಸಪ್ತ ಕಾಂಡಗಳಲ್ಲಿ ಕಡೆಯದು. "ಸಪ್ತ" ಎಂಬ ಸಂಖ್ಯೆಗೆ ಸಾಕಷ್ಟು ವಿಶೇಷತೆಗಳಿವೆ. ಹಾಗೆಯೇ, ಸಪ್ತಮ ಕಾಂಡವಾದ ಉತ್ತರಕಾಂಡವೂ ರಾಮಾಯಣದ ಮುಖ್ಯ ಮತ್ತು ವಿಭಿನ್ನ ಅಧ್ಯಾಯ. ಇದು ಸೀತಾ ರಾಮರ ಅಂತಿಮ ಪುಟಗಳು. ಸೀತಾರಾಮರು ನಮ್ಮ ನಿಮ್ಮಂತೆ ಯಾವುದೇ ಪ್ರಬಲ ದೈವೀ ಶಕ್ತಿ ಇಲ್ಲದ ಸಾಮಾನ್ಯ ಮನುಷ್ಯರಾಗಿದ್ದರೇ, ಯಾವುದೇ ಗುಣಾತೀತ ಸ್ಥಿತಿಯನ್ನೂ ತಲುಪದ ನರಜೀವಿಗಳಾಗಿದ್ದರೇ, ರಾಮಯಣದ ಕಥೆ ಹೇಗಿರುತ್ತಿತ್ತು ಎಂಬುದನ್ನು ಎಸ್ ಎಲ್ ಭೈರಪ್ಪನವರು ಸೀತೆಯ ಅಂತರಾಳದ ಮುಖಾಂತರ ವರ್ಣಿಸಿದ್ದಾರೆ. ಪುಸ್ತಕದ ಮುಖ ಪುಟವನ್ನು ತಿರುವಿದಾಗ ಪ್ರಪ್ರಥಮವಾಗಿ ಹೇಗೆ ವಾಲ್ಮೀಕಿ ಮಹರ್ಷಿಯು ಬೇಡನ ಸ್ವಾರ್ಥಕ್ಕೆ ಅಗಲಿ ವಿರಹವನ್ನು ಅನುಭವಿಸುವ ಜೋಡಿ ಹಕ್ಕಿಗಳ ನೋವಿನ ಭಾವನೆಯನ್ನು ವ್ಯಕ್ತ ಪಡಿಸಲು ರಾಮ ಸೀತೆಯರ ಕಥೆಯನ್ನು ಆರಿಸಿದರು ಎಂಬುದರ ಸಾರಾಂಶವಿದೆ. ರಾಮ ಸೀತೆಯರ ಕಥೆಯನ್ನು ಸುಖಾಂತ್ಯಗೊಳಿಸಲು ಯತ್ನಿಸಿದರೂ ವಿಫಲವಾದ ಮಹರ್ಷಿಯು "ಕವಿ ಏನನ್ನು ತಾನೇ ಮಾಡಬಲ್ಲ" ಎಂದು ವಿಧಿಯಾಟದ ಮುಂದೆ ಕವಿಯ ಅಸಹಾಯಕತೆಯನ್ನು ವ್ಯಕ್ತ ಪಡಿಸುವುದರ ಮೂಲಕ ಭೈರಪ್ಪನವರು ಕಥೆಯನ್ನು ಪ್ರಾರಂಭಿಸುತ್ತಾರೆ. ಹೀಗೆ ಕವಿತೆಗಳ ಕೊಂಬೆಯ ಮೇಲೆ ಕುಳಿತು ರಾಮಾಕ್ಷರವನ್ನು ಮಧುರವಾಗಿ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಯ ಸ್ಮರಣೆಯ ಮೂಲಕ ಸೀತೆಯ ಅಂತರಂಗವನ್ನು ಬಿಡಿಸಿಡುವ ಕಾರ್ಯವನ್ನು ಭೈರಪ್ಪನವರು ಸುಂದರವಾದ ವದನದಲ್ಲಿ ಲಲಾಟ ಮಧ್ಯೆ ಊರ್ಧ್ವ ಪುಂಡ್ರವನ್ನಿಟ್ಟಂತೆ ಅಲಂಕರಿಸಿದ್ದಾರೆ. ಕಥೆಯನ್ನು ಅವಳಿ ಜವಳಿ ಮಕ್ಕಳ ಅಳುವನ್ನು ಸುಧಾರಿಸುವಲ್ಲಿ ಸೀತೆಯು ಪಡುವ ವ್ಯಥೆ, ಎಲ್ಲಾ ಸಾಮಾನ್ಯ ತಾಯಿಯರಂತೆ ರಂಪಾಟ ನಿಲ್ಲಿಸದ ಮಕ್ಕಳ ಮೇಲೆ ಅವಳಿಗೂ ಮೂಡುವ ಮಾತೃ ಕೋಪದ ಮೂಲಕ ಪ್ರಾರಂಭಿಸುವ ಕವಿಶ್ರೇಷ್ಠರು, ಸೀತೆಯು ಈ ಕಥೆಯಲ್ಲಿ ಎಷ್ಟು ಸಾಮಾನ್ಯಳು ಎಂಬುವುದರ ಅರಿವನ್ನು ಪ್ರಾರಂಭದ ಮೊದಲ ಸಾಲುಗಳಲ್ಲೇ ಓದುಗರಿಗೆ ನೀಡಿದ್ದಾರೆ. ರಾಮನು ಕೂಡ ಇಲ್ಲಿ ಸಾಮಾನ್ಯನೇ. ಸೀತೆಯ ಮೇಲೆ ಅವನಿಗೆ ಅಗಾಧ ಪ್ರೇಮ. ಆದರೂ ಜನರ ಮಾತಿನ ಜಾಲಕ್ಕೆ ಸಮುದ್ರದ ಮೀನಿನಂತೆ ಸಿಲುಕಿ, ಸೀತೆಯನ್ನು ವಿಧಿ ಲಿಖಿತದಂತೆ ತ್ಯಜಿಸುವ ಸನ್ನಿವೇಶ ಒದಗಿದಾಗ, ಆತನಿಗೂ ಗರ್ಭವತಿಯಾದ ಭಾರ್ಯಳನ್ನು, ಆಕೆಯ ಗರ್ಭದಲ್ಲಿರುವ ತನ್ನ ಮಕ್ಕಳನ್ನೂ ಅನಾಥರನ್ನಾಗಿಸುವ ಕಟು ಮನೋಭಾವನೆಗೆ ಕಣ್ಣೀರು ಸಹಿಸಲಸಾಧ್ಯವಾಗುತ್ತದೆ. ಇತರ ರಾಮಾಯಣಗಳಲ್ಲಿ ರಾಮನ ಮನಸ್ಸು ಚರವೇ ಇಲ್ಲದ ಸ್ಥಗಿತ ಕೆರೆಯ ನೀರಿನಂತೆ ವ್ಯಕ್ತವಾಗಿದ್ದರೆ, ಭೈರಪ್ಪನವರ ರಾಮಾಯಣದಲ್ಲಿ ರಾಮನ ಮನಸ್ಸಿನಲ್ಲೂ ಎಲ್ಲಾ ಭಾವನೆಗಳು ಕಡಲಿನ ತರಂಗಗಳಂತೆ ಮೂಡಿವೆ. ಇದು ಸೀತೆಯ ದೃಷ್ಟಿಕೋನದ ಕಥೆಯಾದರೂ, ಇಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಅಪ್ರಮೇಯ ಭ್ರಾತೃತ್ವವು ಸುಂದರವಾಗಿ ಚಿತ್ರಿತವಾಗಿದೆ. ಲಕ್ಷ್ಮಣನಿಗೆ ತನ್ನ ಅಣ್ಣನ ಮೇಲೆ ಎಷ್ಟೇ ಗೌರವವಿದ್ದರೂ, ಜನರ ಮಾತಿಗೆ ಆತನು ಗರ್ಭಿಣಿಯಾದ ಅತ್ತಿಗೆಯನ್ನು ಕಾಡಿನಲ್ಲಿ ಬಿಟ್ಟು ಬರಲು ಆದೇಶಿಸಿದಾಗ, ಅಣ್ಣನ ಮೇಲೆ ಆತನಿಗೆ ಉದ್ಭವವಾಗುವ ಕ್ರೋಧವು, ಲಕ್ಷ್ಮಣ ಈ ಕಥೆಯಲ್ಲಿ ವಿಷ್ಣುವಿನ ಆದಿಶೇಷನಲ್ಲ ಬದಲಿಗೆ ಸಹಜ ಸಾಮಾನ್ಯನಾದ ಸರಿ ತಪ್ಪುಗಳನ್ನು ಅರಿತಿರುವ ಮನುಷ್ಯ ಎಂಬುದನ್ನು ತಿಳಿಸುತ್ತದೆ. ಭರತ; ಆತನೂ ಎಂತಹ ಕಡು ಯೋಗಿ ಅಲ್ಲವೇ? ಈ ಪುಸ್ತಕವನ್ನು ಓದುವಾಗ ಭರತನು ಕಡಿಮೆ ಮೆಚ್ಚುಗೆ ಸಿಕ್ಕ ಅಲ್ಪ ಪ್ರಶಂಸಿತನಂತೆ ಭಾಸವಾಗುತ್ತಾನೆ. ಭೈರಪ್ಪನವರು ಆತನಿಗೂ ಇಲ್ಲಿ ಶ್ರೇಷ್ಠ ಸ್ಥಾನವನ್ನು ಒದಗಿಸಿದ್ದಾರೆ. ಉರ್ಮಿಳಾ ಸೀತೆಯರು ಇಲ್ಲಿ ಎಲ್ಲಾ ಹೆಂಗಸರಂತೆ ಹರಟೆ, ಗಪಶಪ ಮಾಡುವ ಸ್ನೇಹಿತೆಯರಂತೆ ಆತ್ಮೀಯತೆ ಇರುವ ಭಗಿನಿಯರು. ಸೀತೆಯು ಭೂತಾಯಿಯ ಕಂದಮ್ಮ. ಇದನ್ನು ಭೈರಪ್ಪನವರು ಎಲ್ಲಿಯೂ ನೇರವಾಗಿ ಹೇಳಿ ಸೀತೆಗೆ ದೈವೀ ಸ್ವರೂಪ ಕೊಡದಿದ್ದರೂ, ಅಪರೋಕ್ಷವಾಗಿ ಈ ಕಥೆಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅವಳು ಮಕ್ಕಳೇ ಇಲ್ಲದ ಜನಕನಿಗೆ ಪ್ರಸಾದ ರೂಪದಂತೆ ದೊರಕ್ಕಿದ್ದು ಯಾವುದೋ ಒಂದು ಹೊಲದಲ್ಲೇ. ರಾಮನು ಅವಳನ್ನು ತ್ಯಜಿಸಿದಾಗ ಆಶ್ರಮದ ಆಶ್ರಯದಲ್ಲಿ ಋಣ ಭರಿತವಾಗಿ ಜೀವಿಸಲು ಅವಳ ಸ್ವಾಭಿಮಾನ ಒಪ್ಪದಿದ್ದಾಗ, ಜನಕ ರಾಜನ ಕುಮಾರಿಯು ನೇಗಿಲನ್ನು ಹಿಡಿದು ಉಳುಮೆಯನ್ನು ಮಾಡಿ ತನ್ನ ಅವಳಿ ಮಕ್ಕಳನ್ನು ಸಾಕುತ್ತಾಳೆ. ಇಲ್ಲೂ ವೈದೇಹಿ ಭೂದೇವಿಯರ ನಂಟನ್ನು ಕವಿಯು ಬಣ್ಣಿಸಿದ್ದಾರೆ. ಮಧ್ಯೆ ಮಧ್ಯೆ ಸೀತೆಯು ಬಾಲ್ಯಕಾಲದಲ್ಲಿ ಕಲಿತ ಉಪನಿಷದ್ದಿನ ಪಾಠವನ್ನು ಮೆಲುಕು ಹಾಕುವ ಸಂದರ್ಭಗಳಿವೆ. ಅವುಗಳಲ್ಲಿ ಒಮ್ಮೆ ಆಕೆಯು ಬೃಹದಾರಣ್ಯಕದ "ನ ವಾ ಅರೆ ಪತ್ಯುಃ ಕಾಮಾಯ ಪತಿಃ ಪ್ರಿಯೊ ಭವತಿ, ಆತ್ಮನಸ್ತು ಕಾಮಾಯ ಪತಿಃ ಪ್ರಿಯೊ ಭವತಿ" ಎಂಬ ಸಾಲನ್ನು ನೆನಪಿಸಿಕೊಳ್ಳುತ್ತಾಳೆ. ಒಬ್ಬ ಗಂಡನು ಅವನ ಕಾರಣದಿಂದ ಪತ್ನಿಗೆ ಪ್ರಿಯನಲ್ಲ. ಪತ್ನಿಯ ಸ್ವಪ್ರೀತಿಯೇ ಅವನ ಮೇಲೆ ಪತ್ನಿಗಿರುವ ಪ್ರೇಮಕ್ಕೆ ಕಾರಣ. ಹೀಗೇ ಎಲ್ಲಾ ಪ್ರೀತಿಯೂ ಸ್ವಪ್ರೀತಿಯ ವೇಷಾಂತರ ಎಂಬ ಮುಂತಾದ ತತ್ವದರ್ಶನಗಳನ್ನೂ ಈ ಕೃತಿಯು ಸಾರುತ್ತದೆ. ಭೈರಪ್ಪನವರ ಕೃತಿಗಳು ಬಹಳ ಅದ್ವಿತೀಯ ರಚನೆಗಳು. ಎಲ್ಲರೂ ಈ ರೀತಿಯ ಕೃತಿಗಳನ್ನು ಒಪ್ಪುವುದಿಲ್ಲ. ರಾಮ ಸೀತೆಯರನ್ನು ಸಾಮಾನ್ಯರಂತೆ ವರ್ಣಿಸುವುದನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಆಲಂಘಿಸುವುದಿಲ್ಲ. ಆದರೆ ಈ ಕೃತಿಯ ಶ್ರೇಷ್ಠತೆಯೊ ಅಥವಾ ಸೀತೆಯ ಶ್ರೇಷ್ಠತೆಯೊ ತಿಳಿಯದು; ಸೀತೆಗೂ ಕೋಪ ಉದ್ವೇಗಳು ಇತ್ತೇನೋ, ಆದರೂ, ಹೇಗೇ ಇದ್ದರೂ ಅವಳು ಸೀತೆಯೇ ಸರಿ ಎಂಬ ಭಾವನೆ ಮೂಡಿಸುತ್ತದೆ. ಅಂತಿಮ ಘಟ್ಟದಲ್ಲಿ ಸೀತೆಯು ತಾನು ಊಳಿ, ಬಿತ್ತಿ, ಬೆಳೆದ, ಸ್ವಾಭಿಮಾನದ ಜೀವನಕ್ಕೆ ನೆರವಾದ ನೆಲದಲ್ಲೇ ರಾಮ ಸ್ಮರಣೆ ಮಾಡುತ್ತಾ ಐಕ್ಯಳಾಗುತ್ತಾಳೆ. ಆಗ ವಾಲ್ಮೀಕಿಯರ "ಈ ಮಗಳು ದೊರೆತದ್ದು ಭೂಮಿಯಲ್ಲಿ, ಇಚ್ಛೆಯಿಂದ ಹೊಕ್ಕದ್ದು ಭೂಮಿಯನ್ನೇ" ಎಂಬ ಸಾಲು, ಮತ್ತೊಮ್ಮೆ ಸೀತೆಯ, ಭೂತಾಯಿಯ ಅಂಬಾ- ಆತ್ಮಜಾ ಸಂಬಂಧದ ಸ್ವಾಧವನ್ನು ನೀಡುತ್ತದೆ. ಸೀತೆಯು ತನ್ನ ಆತ್ಮಕಥೆಯನ್ನು ಬರೆದಿದ್ದರೆ, ಈ ಕೃತಿಯಂತೇ ಇರುತ್ತಿತ್ತೇನೋ. "ಉತ್ತರ" ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವೂ ಇದೆ. ಭೈರಪ್ಪನವರ ಉತ್ತರಕಾಂಡವು ಸಾಮಾನ್ಯಳಾದ ಜಾನಕಿಯ ಶ್ರೇಷ್ಠತೆಯ ಸಾರ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಇಡೀ ಪುಸ್ತಕವೇ ಒಂದು ವಿಶಿಷ್ಟ ರಚನೆ. ಆದರೆ, ಪ್ರತಿ ರಾತ್ರಿಯೂ ಚಂದ್ರನು ಚಂದವಾಗೇ ಕಂಡರೂ, ಅದರಲ್ಲಿ ಹುಣ್ಣಿಮೆಯ ಚಂದ್ರನ ಕೌಮುದಿಯೇ ಆಕರ್ಷಕವಾದರೂ, ಪ್ರತಿಪಾದದ ಅರ್ಧಚಂದ್ರನಂತೆ ನನ್ನನ್ನು ಸೆಳೆದ ಒಂದು ಸಣ್ಣ ಕಥೆಯು ಹೀಗಿದೆ. ವನವಾಸದ ಸಮಯ. ರಾಮ ಲಕ್ಷ್ಮಣ ಸೀತೆಯರು ಹಳ್ಳಿ ಜನರ ಸಂಗಡ ಸಾಮಾನ್ಯರಂತೆ ತಾತ್ಕಾಲಿಕವಾಗಿ ವಾಸಿಸುತಿದ್ದಾರೆ. ಆ ಸ್ಥಳದಲ್ಲಿ ನರಭಕ್ಷಕನಾದ ಒಬ್ಬ ವ್ಯಾಘ್ರ. ಆತನಿಂದ ಪಾರು ಮಾಡುವಂತೆ ಜನರು ರಾಮ ಲಕ್ಷ್ಮಣರಿಗೆ ಬೇಡಿದಾಗ, ಅವರು ಆ ಭಕ್ಷಕನನ್ನು ಸಂಹರಿಸಿ ಶವವನ್ನು ತರುತ್ತಾರೆ. ಹಳ್ಳಿಯ ಜನರೆಲ್ಲಾ ತಮ್ಮ ಕಷ್ಟ ಪರಿಹಾರ ಮಾಡಿದ ಅಣ್ಣ ತಮ್ಮಂದಿರಿಗೆ ಕೃತಜ್ಞರಾಗಿ, ತಮಗೆ ತಿಳಿದ ಶಾಸ್ತ್ರದ ನಿಯಮದಂತೆ ವ್ಯಾಘ್ರನ ಅಂತ್ಯ ಸಂಸ್ಕಾರ ಮಾಡುವುದನ್ನು ಕಂಡ ರಾಮನು " ಇಷ್ಟೊಂದು ಜನರ ಪ್ರಾಣ ತೆಗೆದ ವ್ಯಾಘ್ರನಿಗೆ ನೀವೇಕೆ ಅಂತ್ಯಸಂಸ್ಕಾರವನ್ನು ಮಾಡಿದಿರಿ?" ಎಂದು ಕೇಳಿದಾಗ, ಅವರು "ಆ ಜೀವಿ ಜೀವವಿರುವವರೆಗು ಮಾತ್ರ ನಮ್ಮನ್ನು ಪೀಡಿಸಿತು. ಭಗವಂತನೇ ಅದಕ್ಕೆ ಮಾಂಸ ಭಕ್ಷಣೆಯಿಂದ ಜೀವಿಸುವಂತೆ ಹಣೆ ಬರಹದಲ್ಲಿ ಬರೆದಿರುವಾಗ, ಆ ಮೂಕ ಪ್ರಾಣಿ ತಾನೆ ಏನು ಮಾಡಲು ಸಾಧ್ಯ? ಸತ್ತ ಮೇಲೇಕೆ ಅದರ ಮೇಲೆ ಕೋಪ, ಆವೇಶ?" ಎಂದು ಹೇಳುತ್ತಾರೆ. ಈ ಹನಿಗಥೆಯು ಯಾವ ಶಾಲೆಗಾಗಲಿ ಗುರುಕುಲಕ್ಕಾಗಲಿ ಹೋಗದ ಹಳ್ಳಿ ಜನರ ಅಗಾಧ ಸಿದ್ಧಾಂತ ಜ್ಞಾನವನ್ನು ತೋರಿಸುತ್ತದೆ. ರಾಮಾಯಣದಲ್ಲಿ ಕೇವಲ ರಾಮ ಸೀತೆಯರಷ್ಟೇ ಅಲ್ಲ, ಪ್ರತಿಯೊಂದು ಸಣ್ಣ ಸಾಮಾನ್ಯ ಪಾತ್ರಗಳಲ್ಲೂ ಕಲಿಯುವಂತಹ ಜೀವನ ಪಾಠಗಳಿವೆ ಎಂದು ಭೈರಪ್ಪನವರು ಈ ತುಣುಕಿನಲ್ಲಿ ಅಭಿಮೂಡಿಸಿದ್ದಾರೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.