Submission 1738

ಪುಸ್ತಕದ ಶೀರ್ಷಿಕೆ: ಒಡಲಾಳ

ಪುಸ್ತಕದ ಲೇಖಕರು: ದೇವನೂರು ಮಹಾದೇವ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಧಾ ಏ ಕೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕವಿ ಪರಿಚಯ- ದೇವನೂರ ಮಹಾದೇವ ಅವರು. ವಿಮರ್ಶೆ ಮಾಡುತ್ತಿರುವ ಕೃತಿ- ದೇವನೂರು ಮಹಾದೇವ ಅವರ "ಒಡಲಾಳ" ಕಾದಂಬರಿ. ಕವಿ ಪರಿಚಯ- ದೇವನೂರು ಮಹಾದೇವ ಅವರು ಜನನ- 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ವಿದ್ಯಾಭ್ಯಾಸ- ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡೆದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದಿದ್ದಾರೆ. ವೃತ್ತಿ- ಮೈಸೂರಿನಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದರು. ಪ್ರಸ್ತುತ ಸಾಹಿತಿಯಾಗಿದ್ದಾರೆ. ಪ್ರಶಸ್ತಿ ಪುರಸ್ಕಾರಗಳು- ಇವರ ‘ಒಡಲಾಳ ‘ ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ 1984ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. 1991ರಲ್ಲಿ ಇವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿತು. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ದೇವನೂರ ಮಹಾದೇವ 1989ರಲ್ಲಿ ಅಮೆರಿಕಾದಲ್ಲಿ ನಡೆದ ‘ಇಂಟರ್‌ನ್ಯಾಶನಲ್ ರೈಟಿಂಗ್ ಪ್ರೋಗ್ರಾಂ’ನಲ್ಲಿ ಭಾಗವಹಿಸಿದ್ದರು. ದೇವನೂರು ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತು. ಇವರ ಪ್ರಮುಖ ಕೃತಿಗಳು ‘ಒಡಲಾಳ’ ಮತ್ತು ‘ಕುಸುಮಬಾಲೆ’. ವಿಮರ್ಶೆ ಮಾಡುತ್ತಿರುವ ಕೃತಿ- ದೇವನೂರು ಮಹಾದೇವ ಅವರ "ಒಡಲಾಳ" ಕಾದಂಬರಿ. ದೇವನೂರ ಮಹಾದೇವ ಅವರು “ಒಡಲಾಳ” ವನ್ನು ಬರೆದದ್ದು 1979ರಲ್ಲಿ. ದೇವನೂರು ಮಹಾದೇವ ಅವರ "ಒಡಲಾಳ" ಕಾದಂಬರಿಯು ದಲಿತ ಬದುಕನ್ನು ಚಿತ್ರಿಸುವಾಗ ದಲಿತರನ್ನು ಕೇವಲ ಪಾಪದ ಪ್ರಾಣಿಗಳೆಂಬಂತೆ ಚಿತ್ರಿಸದೆ ಅವರ ಬದುಕಿನ ವಿವಿಧ ಸಾಧ್ಯತೆ ಮತ್ತು ಅಗತ್ಯತೆಗಳನ್ನು ಪರಿಶೀಲಿಸುತ್ತ ಹೋಗುತ್ತಾರೆ ಇವರು. ಇವರ ಬರವಣಿಗೆಯಲ್ಲಿ ಪಾತ್ರಗಳು ಕೇವಲ ಪಾತ್ರಗಳೆಂಬಂತೆ ಮಾತ್ರ ಬಿಂಬಿತವಾಗದೆ ಆ ಪಾತ್ರಗಳ ನೈಜತೆಯ ದೈನಂದಿನ ಚಟುವಟಿಕೆಗಳು ಆ ಜನಾಂಗದ ಒಟ್ಟು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳಾಗುತ್ತವೆ. ಇವುಗಳನ್ನು ಕುರಿತು ಬರೆಯುವಾಗ ದೇವನೂರರು ತೋರುವ ಸಂಯಮ, ಕಾಳಜಿ, ಅವರ ಕಿಚ್ಚು, ವಾಸ್ತವ ಸ್ಥಿತಿ.. ಹೀಗೆ ಯಾವ ವಿವರಗಳನ್ನು ಎಲ್ಲಿ ಇಡಬೇಕೆಂಬ ಸ್ಪಷ್ಟನೆ ಮತ್ತು ಅವುಗಳ ಹಿಂದಿನ ಮಾರ್ಧನಿ ಯಾವಾಗ ಸಿಡಿಯುವುದೋ ಎಂದು ಹೇಳಲಾಗದ ಮೂಕ ಸಿಟ್ಟು, ಗುಪ್ತವಾಗಿ ಹುಟ್ಟಿ ಬೆಳೆದು ಬಿಡುವ ಬಂಡಾಯ, ಇವು ಯಾವುಗಳನ್ನು ಹಸ್ತಕ್ಷೇಪಿಸದೆ ತಿಳಿ ಹಾಸ್ಯಗಳಿಂದ ಕಾಪಾಡಿಕೊಂಡಿರುವ ಸುಪ್ತತೆ. ಇವುಗಳಿಂದಾಗಿ ದೇವನೂರರ ಸಾಹಿತ್ಯ ಸಂಕೀರ್ಣವೂ, ಪ್ರಬುದ್ಧವೂ, ದಲಿತರ ದನಿಯು ಆಗಿದೆ. ದಲಿತ ಸಂಘರ್ಷ ಸಮಿತಿಯ ಸಕ್ರಿಯ ಕಾರ್ಯಕರ್ತರೂ ಆಗಿರುವ ಹಾಗೆ ತಮ್ಮ ಅಂತರಂಗದ ಅನುಭವದ ಇದರೊಳಗೆ ಅತ್ಯಂತ ಏಕಾಗ್ರತೆಯಿಂದ ರಚನೆಯಲ್ಲಿ ತೊಡಗಿಕೊಳ್ಳುವವರು. ಅಂದರೆ ಬಹಿರಂಗದ ಅನುಭವ ಅಂತರಂಗದ ಸೃಷ್ಟಿಯ ಪ್ರೇರಣೆಯಾಗುವಂತೆ ಅಂತರಂಗದ ಚಿಂತನೆ ಬಹಿರಂಗದ ಚಟುವಟಿಕೆಗೆ ಅಗತ್ಯವಾದ ತಾದ್ಯತ್ಮತೆಯನ್ನು ಕೊಡುತ್ತದೆ. ಆದ್ದರಿಂದಲೇ ಬಂಡಾಯ ಮತ್ತು ಯೋಗ ಚಿತ್ತತೆ ಎರಡೂ ಮಹಾದೇವರಿಗೆ ಒಟ್ಟೊಟ್ಟಿಗೇ ಸಾಧ್ಯವಾಗಿವೆ. ಹಾಗಾಗಿ ಮಹಾದೇವ ಅವರು ದಲಿತ ಬದುಕಿನ ವಿವರಗಳನ್ನು ಕೇವಲ ಬಡ ವರ್ಗದ ಓದುಗರನ್ನು ಮಾತ್ರ ಸೆಳೆಯುವಂತಹ ಮಾರಾಟದ ವಸ್ತುಗಳನ್ನಾಗಿಸದೆ ಕೃತಿಯಿಂದ ಕೃತಿಗೆ ಹೊಳಪಿಸಿ, ಕಿರಣವ ಸೂಸುತ್ತಾ ಬೆಳಕಾಗಿ ಹೊಮ್ಮಿದ್ದಾರೆ. 'ದ್ಯಾವನೂರು' ಕಥೆಯಲ್ಲಿ ದಲಿತರ ಕುರಿತ ವರ್ಣನೆಗಳಿಗೆ ಹೆಚ್ಚಿನ ಪ್ರಾಮುಖ್ಯವಿದ್ದರೆ, “ಒಡಲಾಳ” ಕೃತಿಯಲ್ಲಿ ಸಾಧ್ಯತೆಗಳ ಸೂಚನೆಗಳು ಇವೆ. ಈ ಸಾಧ್ಯತೆಗಳು ಸಾಕವ್ವನ ಇರುವಿಕೆಯ ಸಾಮರ್ಥ್ಯದಲ್ಲಿ ಒಂದು ನಿಟ್ಟಿನಲ್ಲಿಯೂ, ಪುಟ್ಟಗೌರಿ ನವಿಲುಗಳ ಪ್ರಪಂಚದಲ್ಲಿ ಇನ್ನೊಂದು ಬಗೆಯಲ್ಲಿಯೂ ಬಿಂಬಿತವಾಗುತ್ತಾಳೆ. ಶಿವು ವಿಧ್ಯಾಭ್ಯಾಸದಲ್ಲೂ, ಗುರುಸಿದ್ದನ ಪ್ರತಿಭಟನೆಯ ರಾಜಕೀಯದಲ್ಲೂ ಇವು ಇನ್ನಷ್ಟು ನಿಚ್ಚಳವಾಗಿ ತೋರುತ್ತವೆ. ಇವು ದಲಿತರ ವಿಮೋಚನೆಯ ಎರಡು ಮಾರ್ಗಗಳು ಎಂಬುದಾಗಿ ಯೋಚಿಸಬಹುದಾಗಿದೆ. 'ಒಡಲಾಳ'ಕ್ಕೆ ಇತಿಹಾಸದ ಆಯಾಮವೂ ದೊರಕಿದೆ. 'ಒಡಲಾಳ ಕೃತಿಯ ಪ್ರಕಟಣೆಯ ನಂತರ ಕನ್ನಡ ಸಾಹಿತ್ಯದಲ್ಲಿ ಮಹಾದೇವರ ಸ್ಥಾನ ಭದ್ರವಾಯಿತು ಎಂಬುವುದಂತೂ ನಿಜ. ಇಲ್ಲಿ ಅವರು ದಲಿತ ಪ್ರಪಂಚವನ್ನು ಚಿತ್ರಿಸಿರುವ ರೀತಿ ಆಧುನಿಕ ಭಾರತೀಯ ಸಾಹಿತ್ಯ ಸಂದರ್ಭದಲ್ಲೇ ಅಮೋಘವಾದದ್ದು ಎಂಬ ಆದ್ಯತೆಯನ್ನು ಪಡೆಯಿತು. ಒಂದು ಕೌಟುಂಬಿಕ ಆವರಣದ ಪುಟ್ಟ ಎಲ್ಲೆಯಲ್ಲಿಯೇ ದಲಿತರ ಸ್ಥಿತಿಗಳನ್ನು ಈ ಕೃತಿ ಗಟ್ಟಿಯಾಗಿ ಹೇಳುತ್ತದೆ. ಒಂದು ದಲಿತ ಕುಟುಂಬದ ದೈನಂದಿನ ಬದುಕಿನ ಸಣ್ಣ ಸಣ್ಣ ವಿವರಗಳಲ್ಲೇ ಅವರಲ್ಲಿ ಅಂತರ್ಗತವಾಗಿರುವ ಅಪಾರ ಶಕ್ತಿಯನ್ನೂ, ಪ್ರತಿಭೆಯನ್ನೂ ಒಡಲಾಳ ನಮಗೆ ನೀಡುತ್ತದೆ. ಈ ಶಕ್ತಿ ಮತ್ತು ಪ್ರತಿಭೆಗಳು ಅವರ ಇರುವಿಕೆಗೆ ಒದಗಿ ಬರುತ್ತವೆ; ಎಂಥ ಕಷ್ಟ ಕೋಟಲೆಗಳೂ ಎದುರಾದರೂ ಅವುಗಳಲ್ಲಿ ಅವರು ಹಾರಿ ಹೋಗದಂತೆ ತಡೆದು ನಿಲ್ಲಿಸುತ್ತದೆ. ತಮ್ಮ ವರ್ಣ ಮತ್ತು ವರ್ಗ ಸ್ಥಿತಿಗಳ ಎಲ್ಲ ಅನಾನುಕೂಲತೆಗಳನ್ನು ಅವರ ತಲೆಗೆ ಹೇರಿಕೊಂಡು ಸಾಗುತ್ತಿದ್ದರೂ ಈ ಜನಾಂಗ ಇನ್ನೂ ಚೇತನದಾಯಕವಾಗಿ ಬಾಳುತ್ತಾ ಉಳಿದಿರುವುದೇ ಅವರ ಸ್ಥೈರ್ಯಕ್ಕೆ ಸಾಕ್ಷಿಯಾಗಿದೆ. ಒಡಲಾಳದಲ್ಲಿ ದಲಿತರ ಬೇಕು-ಬೇಡಗಳನ್ನು ದೇವನೂರರು ಹಲವು ನಿಟ್ಟಿನಲ್ಲಿ ಬಿಂಬಿಸುತ್ತಾರೆ. ದಲಿತರ ಬವಣೆಯ ಚಿತ್ರಣಗಳ ಹಿಂದಿನ ಮಾದರಿಗಳಿಗಿಂತ ಮಹಾದೇವರ ಮಾದರಿ ಗುರುತರ ಮತ್ತು ಸುಭದ್ರವಾಗಿ ತೋರಿಸಲ್ಪಡುವುದು ಕಾಣಿಸುತ್ತದೆ. ಒಡಳಾಳದಲ್ಲಿನ ಸಾಕವ್ವ ಇಡೀ ಕಾದಂಬರಿಯ ಪ್ರತಿಬಿಂಬವಾಗಿದ್ದಾಳೆ. ಮೊದಲಿಗೆ ಅವಳು ಕಳೆದುಹೋದ ಕೋಳಿಯನ್ನು ಹುಡುಕುವ ಪರಿ, ಮನೆಗೆ ಬಂದಾಗ ಮಕ್ಕಳು ಮತ್ತು ಸೊಸೆಯರನ್ನು ನಡೆಸಿಕೊಳ್ಳುವ ರೀತಿ ಗ್ರಾಮೀಣ ಮುದಿ ಹೆಂಗಸಿನ ಸೂಚಕವಾಗಿದೆ. ಕುಟುಂಬದ ಯಜಮಾನಿಯಾಗಿ ಸಾಕವ್ವನ ಸ್ವಭಾವವನ್ನು ಸೂಚಿಸುವ ಇನ್ನೊಂದು ಸ್ವಾರಸ್ಯಕರ ವಿವರವನ್ನೂ ಗಮನಿಸಬಹುದು: ಮನೆ ಮಂದಿಯೆಲ್ಲ ಒಟ್ಟಿಗೆ ಕೂತು ಕಡಲೇಕಾಯಿಯಯನ್ನು ತಿನ್ನುತ್ತಿದ್ದಾಗ ಪಕ್ಕದ ಮನೆಯಾಕೆ "ಏನಾದ್ರು ಒಂದಷ್ಟು ಕೊಡ್ತಿರಾ" ಎಂದು ಕೇಳಿದಾಗ ಸಾಕವ್ವನ ಹಿರಿ ಸೊಸೆ ಹೆಚ್ಚು ಕೊಡಲು ಹೋದಾಗ ಸಾಕವ್ವ ಒಂದು ಬೊಗಸೆ ತೆಗೆದು ಹಾಕಿದಳು. ಸಾಕವ್ವನ ಮೊಮ್ಮಗ ಶಿವು ಶಾಲೆಗೆ ಹೋಗಲಾರಂಭಿಸಿದ್ದಾನೆ. ಆಧುನಿಕ ವಿದ್ಯಾಭ್ಯಾಸದ ಮೂಲಕ ದಲಿತರ ಭವಿಷ್ಯದ ಒಂದು ಮುಖ್ಯ ಗಣನೆ ಇಲ್ಲಿ ಗೋಚರವಾಗುತ್ತದೆ. ಈ ಸಾಧ್ಯತೆ ಸಾಕವ್ವನ ಕನಸಿನಲ್ಲಿ ಇನ್ನಷ್ಟು ಪ್ರಕಾಶಿತವಾಗುತ್ತದೆ. ಕಡಲೇಕಾಯಿಯನ್ನು ಸಾಕವ್ವನ ಮಗ ಕದ್ದು ತಂದಿರುತ್ತಾನೆ. ಈ ವಿಷಯವನ್ನು ಪೋಲಿಸರಿಗೆ ಆ ಯಜಮಾನ ಹೇಳಿದಾಗ ಪೋಲಿಸರು ಜಾಡು ಹಿಡಿದು ಸಾಕವ್ವನ ಮನೆಗೆ ಬಂದು ವಿಚಾರಿಸಿದಾಗ ಕೊನೆಯಲ್ಲಿ ಏನೂ ಸಾಕ್ಷಿ ಸಿಗದೇ ಅವರು ವಾಪಸ್ಸು ಹೋಗುತ್ತಾರೆ. ಸಹಿಷ್ಣುತೆ ಮಾತ್ರ ದಲಿತರ ಏಕ ಮಾತ್ರ ಶಕ್ತಿಯಲ್ಲ. ಅವರ ಸಿಡಿಯಬಲ್ಲ ಶಕ್ತಿಯನ್ನೂ ಕಥೆ ಕಾಣಿಸುತ್ತಿದೆ. ನಮ್ಮ ಸ್ವಾತಂತ್ರ್ಯೋತ್ತರ ಭಾರತವು ಕಟ್ಟಿಕೊಂಡಿರುವ ಸಾಂವಿಧಾನಿಕ ವ್ಯವಸ್ಥೆಯೂ ದಲಿತರ ಹೊಸ ಭರವಸೆ, ಆತ್ಮವಿಶ್ವಾಸಗಳಿಗೆ ಪ್ರೇರಣೆಯಾಗಿರಬಹುದು ಎಂಬ ಸೂಚನೆಯೂ ಇಲ್ಲಿದೆ. ಹಳೆಯ ವ್ಯವಸ್ಥೆಯ ಕ್ರೌರ್ಯದ ನೇರ ಅನುಭವ ಇರುವ ಜನಾಂಗವೊಂದು ಹೊಸ ವ್ಯವಸ್ಥೆ ಯತ್ತ ನಿರೀಕ್ಷೆಯ ನೋಟ ಇಟ್ಟುಕೊಂಡಿದ್ದರೆ ಅದು ಸಹಜವೇ ಆಗಿದೆ. ಆದರೆ “ಒಡಲಾಳ” ಈ ಅಂಶವನ್ನು ಉತ್ಪ್ರೇಕ್ಷಿಸುವುದಿಲ್ಲ. ಪೊಲೀಸು ವ್ಯವಸ್ಥೆಯ ಕ್ರೌರ್ಯವನ್ನೂ ಅದು ದಟ್ಟವಾಗಿ ಚಿತ್ರಿಸಿದೆ. ಅಷ್ಟೇ ಅಲ್ಲ; ಪೊಲೀಸು ದಬ್ಬಾಳಿಕೆಯನ್ನೂ ಎಚ್ಚೆತ್ತ ದಲಿತ ಸಹಿಸುವುದಿಲ್ಲ ಎಂಬ ಸೂಚನೆಯೂ ಕಥೆಯಲ್ಲಿ ಸ್ಪಷ್ಟವಾಗಿದೆ. ಸಾಕವ್ವನ ಪಾಲಕ ಶಕ್ತಿ ಮತ್ತು ಕನಸು ಶಿವುವಿನ ವಿದ್ಯಾಭಾಸ, ಗುರುಸಿದ್ದುನ ಪ್ರತಿಭಟನೆಗಳ ನೆಲೆಗಳಂತೆ ಪುಟ್ಟಗೌರಿ ಹಟ್ಟಿಯ ಗೋಡೆಯ ಮೇಲೇ ಬಿಡಿಸುವ ನವಿಲಿನ ಚಿತ್ರವೂ ದಲಿತ ಬದುಕಿನ ಮತ್ತೂ ಒಂದು ಸಾಧ್ಯತೆಯನ್ನು ತೋರುವಂತಿದೆ. ಈ ಸಾಧ್ಯತೆಯನ್ನು ಕಥೆ ಬೇಕೆಂದೇ ವಾಚ್ಯಗೊಳಿಸುವುದಿಲ್ಲ. ಕಡಲೇಕಾಯಿ ಕಳ್ಳರನ್ನು ಹಿಡಿಯಲು ಪೊಲೀಸರು ಸಾಕವ್ವನ ಹಟ್ಟಿಗೆ ನುಗ್ಗಿ ಹಲ್ಲೆ ಮಾಡುತ್ತರಷ್ಟೆ.. ಎಂದು ತೋರಿಸಿ ದಲಿತರ ಶಕ್ತಿ, ತಾಳ್ಮೆ ಮತ್ತು ಬದುಕಿನ ಚಿತ್ರಣವನ್ನು ತೋರಿಸಿದೆ. ಒಟ್ಟಾರೆ ಇಡೀ ಕಥೆ ಗ್ರಾಮೀಣ ದಲಿತರ ಸುತ್ತಿ ಒಂದು ಕುಟುಂಬವನ್ನು ಇಡೀ ದೇಶದ ಸ್ಥಿತಿಯ ದಲಿತರಿಗಾಗಿ ಈ ಕೃತಿ ಆಳದ ಗಟ್ಟಿತನದಿಂದ ತೋರಿಸಿ, ಒಡಲ ಕಿಚ್ಚು ಅಂತರಾಳದಿಂದೀಚೆಯು ಸಹ ಪ್ರತಿವ್ಯಕ್ತವಾಗುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕಾದಂಬರಿಯಲ್ಲಿ ಸಾಕವ್ವನ ಪಾತ್ರ ತುಂಬಾ ಇಷ್ಟವಾಯಿತು. ತನ್ನೆಲ್ಲಾ ಮಕ್ಕಳನ್ನು ಎಷ್ಟೇ ಕಷ್ಟ ಬಂದರೂ ಎಡಬಿಡದೆ ಆಕೆ ಸಾಕುತ್ತಾಳೆ. ಹಾಗೆಯೇ ಇಲ್ಲಿ ಒಂದು ಕೋಳಿಗಾಗಿ ಆಕೆ ಪರಿತಪಿಸುವ ರೀತಿ ಎಲ್ಲರ ಮನವನ್ನು ಮುಟ್ಟುತ್ತದೆ. ಹಾಗೆಯೇ ಬಡತನ ಎಷ್ಟರಮಟ್ಟಿಗೆ ಬೇರೂರಿದೆ ನಮ್ಮಲ್ಲಿ ಎಂಬುದು ಈ ಒಂದು ಕಾದಂಬರಿಯಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ರಾತ್ರಿ ಹೊತ್ತು ಕಡಲೆಕಾಯಿಯನ್ನು ತಂದು ಅವರು ತಿನ್ನುವ ಪರಿ ಅವರ ಬದುಕಿನ ಚಿತ್ರಣವನ್ನು ಎತ್ತಿ ತೋರಿಸುತ್ತದೆ. ಆ ಸನ್ನಿವೇಶ ಓದುಗರ ಮನ ಕಲಕುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಸಾಮಾಜಿಕ ಕಳಕಳಿ ಉಳ್ಳವರಿಗಾಗಿ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

6
Votes
102
Views
7 Months
Since posted

Voting Closed!

Scroll to Top