Submission 1662

ಪುಸ್ತಕದ ಶೀರ್ಷಿಕೆ: ಲೀಲಾ ಲಾಸ್ಯ

ಪುಸ್ತಕದ ಲೇಖಕರು: ಮಳೆಬಲ್ಲು ಡಾಕ್ಟರ್ಲಾ ಲೀಲಾ ಗುರುರಾಜ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಎ. ಹರೀಶ ಡೋಂಗ್ರೆ, ಅಲ್ಲೆತ್ತಿಮಾರು, ಮಾಳ (ವಾಸ ಬೆಂಗಳೂರು)

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸುಂದರ ಮುಖಪುಟ ಹೊತ್ತು ಮೂಡಿಬಂದ ಈ ಕವನ ಸಂಕಲನ ಲೇಖಕಿಯು ತಮ್ಮ ಜೀವನಾನುಭವವನ್ನು ಇತರರಿಗೆ ಕವನಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. "ವಿಶ್ವ ಸೈಕಲ್ ದಿನ" ಕವನದಲ್ಲಿ, ಸೈಕಲ್ ತುಳಿದಾಗ ಬಿದ್ದದ್ದು, ಕೈ ಕಾಲಿಗೆ ಗಾಯವಾಗಿದ್ದದ್ದು, ಅಮ್ಮನಿಂದ ಬಯಸಿಕೊಂಡದ್ದು, ಗಂಡುಬೀರಿ ಅನಿಸಿಕೊಂಡದ್ದು ಈ ಸಾಲುಗಳು ನೈಜತೆಯ ಚೌಕಟ್ಟಿನೊಳಗಿವೆ. ಕೆಲ ಹುಡುಗಿಯರಿಗೆ ಇವೆಲ್ಲ ಸಾಧ್ಯವಾದರೆ ಇನ್ನು ಕೆಲವರಿಗೆ ಈ ರೀತಿ ಸೈಕಲ್ ತುಳಿಯಬೇಕು ಸಾಧಿಸಬೇಕು ಗಂಡು ಬೀರಿ ಅನಿಸಿಕೊಳ್ಳಬೇಕು ಇವೆಲ್ಲ ಈಗಿನವರೆಗೆ ಕನಸಾಗಿಯೇ ಉಳಿಯುತ್ತದೆ. ಜಗದ ನಿಯಮಗಳು ಹೆಣ್ಣನ್ನು ತನ್ನದೇ ಆದ ಕಟ್ಟಳೆಯಲ್ಲಿ ಬಂಧಿಸಿ ತಮಗೆ ಬೇಕಾದಂತೆ ನೋಡುವ ಮತ್ತು ಅದನ್ನು ಖಂಡಿಸುವ ವಿಡಂಬನಾತ್ಮಕ ಶೈಲಿಯನ್ನು ಹೊಂದಿದೆ. ಮನಸ್ಸಿನ ಭಾವನೆಗಳನ್ನು ಹತ್ತಿಕ್ಕುವ ವಿಫಲ ಪ್ರಯತ್ನ ಮತ್ತು ಅದನ್ನು ಪದ್ಯದ ಮೂಲಕ ತಿಳಿಸುವ ಪ್ರಯತ್ನ ಕೆಲ ಕವನಗಳಲ್ಲಿ ವ್ಯಕ್ತವಾಗಿದೆ. ಮಂಜು ಮುಸುಕಿದ ತೆರೆ ಸರಿದಂತೆ ವಸಂತನ ಆಗಮನವಾದಂತೆ ಭೂರಮೆ ಸಿಂಗರಿಸಿದಂತೆ ಪ್ರಕೃತಿಯ ಸುಂದರ ಸಹಜ ವರ್ಣನೆ ಶಿವನಿಗೆ ಸಮರ್ಪಣೆಯಾಯ್ತು. ಸುಗ್ಗಿ ಸಮಯದಲ್ಲಿ ಅವರೆಕಾಯಿಯ ಉಪ್ಪಿಟ್ಟು ವಿವಿಧ ತಿಂಡಿಗಳು, ತಿಂದ ನಂತರದ ಡರ್ ಪುರ್ ಶಬ್ದಗಳು ಸಹಜವಾಗಿ ಇರುವಂತೆ ಮುಜುಗರವಾಗದಂತೆ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯನ ಸುತ್ತ, ಹೊನ್ನಿನ ಕಿರಣದಿ ಇವೆರಡೂ ಕವನಗಳಲ್ಲಿ ನೇಸರನ ಆಲಿಂಗನಲ್ಲಿ ಧರೆ ನಲಿದಾಗ ಹೊನ್ನಿನ ಕಿರಣದಿಂದ ಚಳಿ ಕೊಡವಿದಾಗ ಬೆಳದಿಂಗಳ ರಾತ್ರಿಯ ನಲ್ಲ ನಲ್ಲೆಯರ ಪ್ರೀತಿಯ ಆಟದ, ನಲ್ಲೆಯ ತೋಳಲಿ ಬಂಧಿಸಿ ಬಿಸಿ ಉಸಿರಲಿ ಮೀಯಿಸಿ ಸುಖಿಸುವ ಚಂದದ ಪ್ರೇಮಿಗಳ ಸಾಲುಗಳು ಕವಯಿತ್ರಿಯ ಭಾಷೆಯ ಶ್ರೀಮಂತಿಕೆಯನ್ನು ತೋರಿಸುತ್ತವೆ. ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ದ್ರೌಪದಿಯ ನಗು ಕುರುಕ್ಷೇತ್ರಕ್ಕೆ ಮುನ್ನುಡಿ ಅಂತೆಯೇ ದಮಯಂತಿಯ ನಗೆಗೆ ಶರಣಾದ ನಳ ಅರ್ಥವಿಲ್ಲದ ನಗೆ ಹುಚ್ಚೆಂಬ ಪಟ್ಟವನು ನೀಡುವುದು ಎಂದು ಮಾರ್ಮಿಕವಾಗಿ ವಿಡಂಬನೆಯ ಮೂಲಕ ಹೇಳುವಲ್ಲಿ ಕೊಂಚವೂ ಬೇಸರಿಸಲಿಲ್ಲ. ರೈತ ದೇಶದ ಬೆನ್ನೆಲುಬು ಶ್ರಮವಹಿಸಿ ಬೆಳೆದ ಬೆಳೆಯನ್ನು ಹೊಟ್ಟೆಪಾಡಿಗೆ ಮಾರುವವನು, ನಾಡಿಗೆ ನೀಡುತ್ತಾ ಖುಷಿ ಪಡುವನು ಎಂದು ಬರೆದ ಸಾಲುಗಳು ಅನ್ನದಾತನನ್ನು ದೇವರೆಂಬಂತೆ ಕಾಣುವಲ್ಲಿ ಆನಂದವನ್ನು ಕವಯಿತ್ರಿ ಹೊಂದಿದ್ದಾಳೆ. ಹೊಸ ವರ್ಷದ ಹಾದಿಗೆ ಮುನ್ನುಡಿ ಎಂಬ ಕವನದಲ್ಲಿ ಹಿಂದಿನ ವರ್ಷ ಅನುಭವಿಸಿದ ನೋವುಗಳು ಮರೆಯಾಗಿ ಮುಂದೆ ಸುಂದರ ನಲಿವುಗಳು ಬರಲಿ ಹಿಂದಿನ ತಪ್ಪುಗಳನ್ನು ಮನ್ನಿಸಿ ಮುಂದೆ ಎಲ್ಲರಿಗೂ ಒಳ್ಳೆಯದನ್ನು ಬಯಸೋಣ ಎಂಬುದು ಲೇಖಕಿಯ ಮನದಾಳದ ಮಾತು ಪಲ್ಲಕ್ಕಿ ಎಂಬ ಕವನ ಊರ ಜಾತ್ರೆಯ ಸೊಬಗನ್ನು ಬೆಂಡು ಬತ್ತಾಸು ಕೊಳ್ಳುವ ಮಕ್ಕಳ ಖುಷಿಯನ್ನು ಬಣ್ಣದ ಕನ್ನಡಕ ಹಾಕಿಕೊಂಡು ಪೀಪಿ ಊದುವ ಮಕ್ಕಳ ಆಟ ದೊಡ್ಡವರ ಕೊಳ್ಳುಬಾಕತನವನ್ನು ವಿಡಂಬನೆಗೆ ಒಡ್ದುವ ಭಾವ. ಶಿಕ್ಷಣದ ಮಹತ್ವಿಕೆಯನ್ನು ಸಾರುವ ಶಿಕ್ಷಣ ಎಂಬ ಕವನ ಇತ್ತೀಚಿನ ಶಾಲಾ-ಕಾಲೇಜುಗಳ ಹಣ ಮಾಡುವ ಸಂಸ್ಕೃತಿಯನ್ನು ವಿಶ್ಲೇಷಣೆಗೆ ಒಳಪಡಿಸಿ ಇನ್ನೊಂದು ದೃಷ್ಟಿಯಿಂದ ಶಿಕ್ಷಣದ ಅಗತ್ಯತೆಯನ್ನು ತಿಳಿಸುವಲ್ಲಿ ಶ್ರಮಿಸುತ್ತದೆ. ಹೆಣ್ಣು ಮಕ್ಕಳ ಬವಣೆಯನ್ನು ಕವನದ ಮೂಲಕ ಹೇಳುವಲ್ಲಿ ಮನಸ್ಸಿನ ಮಾತನ್ನು ಮನಸ್ಸು ಮರ್ಕಟದಂತೆ ಚಂಚಲ ಎನ್ನುವಲ್ಲಿ ಯಾವುದೇ ಸಂಕೋಚ ಪಡಲಿಲ್ಲ. ಬೆಳಿಗ್ಗೆ ಎದ್ದು ಕುಡಿಯುವ ಒಂದು ಕಪ್ ಚಹಾದಿಂದ ಮನಸ್ಸಿಗಾಗುವ ಆಹ್ಲಾದತೆಯನ್ನು ವರ್ಣಿಸುತ್ತಾ ತನ್ನ ಚಹಾ ಪ್ರೇಮವನ್ನು ತೆರೆದಿಟ್ಟಿದ್ದಾರೆ. ಮಹಾ ನಟಿ ಎಂಬ ಕವನದಲ್ಲಿ ಒಂದು ಹೆಣ್ಣಿಗೆ ಸಿಗುವ ಸಣ್ಣಪುಟ್ಟ ಪಾತ್ರಗಳು ಹಾಗೆಯೇ ಕೆಲ ಉತ್ತಮ ಪಾತ್ರಗಳು ನಂತರ ಚಿತ್ರರಂಗದಲ್ಲಿ ಅವಕಾಶಗಳು ಹೀಗೆ ಸುಪ್ತ ಮನಸ್ಸಿನ ಆಸೆಗಳನ್ನು ಕವನದ ಮೂಲಕ ಹೊರಗೆಡಹಿದ್ದಾರೆ. ಹಗಲಿಲ್ಲದ ಇರುಳು, ತ್ರಿವಿಧ ದಾಸೋಹ, ಕೃಷ್ಣವರ್ಣದ ಕನ್ಯೆ, ಮಹಾಮಾರಿ ಕೋವಿಡ್ ಮುಂತಾದ ಕವಿತೆಗಳು ಜನಮಾನಸದಲ್ಲಿ ಪ್ರಸ್ತುತ ಅನುಭವದ ಸಾರವನ್ನು ಎತ್ತಿ ತೋರಿಸುವ ಸಾಹಸವನ್ನು ತೋರಿದ್ದಾರೆ ಮುಂಗಾರಿನ ಆರ್ಭಟದ ಮಳೆಯ ಸಂಭ್ರಮ ಅನುಭವಿಸುವ ಮನಸ್ಸಿದ್ದರೂ ಹೋಗಲು ಸಾಧ್ಯವಾಗದೆ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವ ಹಾಗೆಯೇ ಹೆತ್ತವರ ಮನಸ್ಸನ್ನು ನೋಯಿಸದಿರಿ ಮಕ್ಕಳೇ ಎಂದು ತಿಳಿ ಹೇಳುವ ಪ್ರಭುದ್ಧತೆ ಹೊಂದಿದ ಲೇಖಕಿ ಕಾಣಸಿಗುತ್ತಾರೆ. ಲೇಖಕಿಯ ಈ ಕವನ ಸಂಕಲನ ಅವರ ಜೀವನದ ಅನುಭವಗಳ ಸಾರವನ್ನು ಮತ್ತು ಲೋಕದ ಕೆಲ ಮುಜುಗರಗಳನ್ನು ವಿಡಂಬನಾತ್ಮಕವಾಗಿ ಓದುಗರಿಗೆ ತಿಳಿಸುವಲ್ಲಿ ಗೆದ್ದಿದೆ. ಒಂದು ಬಾರಿ ಪುಸ್ತಕವನ್ನು ಕೈಗೆ ತೆಗೆದುಕೊಂಡಾಗ ಸುಲಲಿತವಾಗಿ ಒಂದಾದ ಮೇಲೊಂದು ಕವನಗಳನ್ನು ಓದಿಸಿಕೊಂಡು ಹೋಗುವ ಸ್ವಚ್ಛ ತಪ್ಪಿಲ್ಲದ ಸುಲಭ ಕನ್ನಡ ಶಬ್ದಗಳನ್ನು ಉಪಯೋಗಿಸಿ ಹೆಣೆದ ಸುಂದರ ಕವನ ಸಂಕಲನ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಜೀವನದ ಅನುಭವ ಕವನಗಳ ಮೂಲಕ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ. ಮನಸ್ಸಿನ ನವಿರಾದ ಭಾವನೆಗಳು ಅಕ್ಷರ ಪದಗಳ ಸಾಲುಗಳಲ್ಲಿ ವೇದ್ಯವಾಗಿದೆ. ಜೀವನದಲ್ಲಿ ನಡೆದ ಸಣ್ಣ ಸಣ್ಣ ವಿಷಯಗಳನ್ನೇ ಹೂವುಗಳಂತೆ ಪೋಣಿಸಿ ಮಾಲೆಯನ್ನಾಗಿ ಮಾಡಿ ಉಣಬಡಿಸಿದ್ದಾರೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಒಬ್ಬ ಸಾಮಾನ್ಯ ಮನುಷ್ಯನಿಂದ ಹಿಡಿದು ಪ್ರತಿಯೊಬ್ಬ ನಾಗರಿಕ ಯಾರು ಕವನಗಳನ್ನು ಓದಲು ಇಷ್ಟಪಡುತ್ತಾರೆ ಅವರೆಲ್ಲರಿಗೂ ಈ ಪುಸ್ತಕ ಖುಷಿಯನ್ನು ಕೊಡುತ್ತದೆ. ತಮ್ಮ ತಮ್ಮ ಜೀವನದಲ್ಲಿ ನಡೆದ ಸಣ್ಣ ಸಂಗತಿಗಳನ್ನು ಬಾಲ್ಯದ ಮತ್ತು ಅನುಭವಿಸಿದ ಕ್ಷಣಗಳನ್ನು ನೆನಪು ತರುವಲ್ಲಿ ಈ ಕವನ ಸಂಕಲನ ಯಶಸ್ವಿಯಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

5
Votes
110
Views
5 Months
Since posted

Voting Closed!

Scroll to Top