Submission 1983

ಪುಸ್ತಕದ ಶೀರ್ಷಿಕೆ: ಕರ್ವಾಲೋ

ಪುಸ್ತಕದ ಲೇಖಕರು: ಪೂರ್ಣ ಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಯೂರ ಬಿ ಮಸೂತಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಅನೇಕ ದಿನಗಳಿಂದ ಓದುತ್ತಿದ್ದ ಪುಸ್ತಕವೊಂದನ್ನು ಇಂದು ಓದಿ ಮುಗಿಸಿದೆ.ಬಾಲ್ಯದಿಂದಲೂ ವೈಜ್ಞಾನಿಕ ವಿಷಯಗಳಲ್ಲಿ ಎಲ್ಲಿಲ್ಲದ ಕುತೂಹಲ ಮತ್ತು ಆಸಕ್ತಿ ನನಗೆ. ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಓದಿ ಮುಗಿಸಿದ ನಂತರ ಇದೊಂದು ಮಾಸ್ಟರ್ ಪೀಸ್ ಪುಸ್ತಕವೆನಿಸಿತು. ಓದುಗನಿಗೆ ಪೂಚಂತೇ ಅವರು ವೈಜ್ಞಾನಿಕ ವಿಷಯಗಳನ್ನು ತಿಳಿಸುವ ಶೈಲಿ ಬಹಳ ಇಷ್ಟವಾಯಿತು. ಇತ್ತ ಸಂಪೂರ್ಣ ವೈಜ್ಞಾನಿಕವು ಅಲ್ಲದ ಹಾಗೆ ಸಾಹಿತ್ಯಿಕವೂ ಅಲ್ಲದೆ ತಾವು ಹೇಳುವ ಕತೆಯನ್ನು ಹೇಳುತ್ತಾ ಓದುಗನನ್ನು ತಮ್ಮ ವಿಸ್ಮಯಕಾರಿ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ ಲೇಖಕರು.ಓದುಗನಿಗೆ ಅವಶ್ಯಕತೆಯಿರುವಷ್ಟೇ ವಿಷಯವನ್ನು ಉಣ ಬಡಿಸುತ್ತಾರೆ. ಜೇನುಗಳು,ಜೇನು ತುಪ್ಪ,ಕೃಷಿ ಹಾಗೆ ಅವುಗಳ ಜೀವನ ಕ್ರಮದ ಬಗ್ಗೆ ಲೇಖಕರಿಗೆ ಇರುವ ಕುತೂಹಲದಿಂದ ತೆರೆದುಕೊಳ್ಳುವ ಕಥೆ ನಿಧಾನವಾಗಿ ಜೀವಜಗತ್ತಿನ ರಹಸ್ಯವನ್ನು ಭೇದಿಸುವ ಪ್ರಯತ್ನದ ಕಡೆ ಸಾಗುತ್ತದೆ. ಇಲ್ಲಿ ಪೂಚಂತೆಯವರು ಜೀವ ಜಗತ್ತನ್ನ ಕುರಿತು ಬರೆದಿದ್ದರು ಸಹ ನನ್ನ ಪ್ರಕಾರ ಜೀವಶಾಸ್ತ್ಞ ಪ್ರೊ.ಕರ್ವಾಲೋ ಅವರು ಕಥೆಯ ಕೇಂದ್ರಬಿಂದು. ಇನ್ನು ಪಾತ್ರಗಳ ಕುರಿತಾಗಿ ಮಾತನಾಡುವುದಾದರೆ ಅದ್ಬುತ ಎಂದು ಹೇಳುವುದಕ್ಕಿಂತ ನೆನಪಿನಲ್ಲಿ ಉಳಿದುಕೊಳ್ಳುವ ಪಾತ್ರಗಳು. ಮಂದಣ್ಣ, ಕರಿಯಪ್ಪ, ಪ್ಯಾರಾ,ಎಂಗ್ಗ್ಟಾ ಮತ್ತು ನಾಯಿ ಕಿವಿ ಪಾತ್ರಗಳು ಓದುಗನನ್ನು ಎಲ್ಲೂ ಕದಲಲು ಬಿಡದೆ ಹಿಡಿದಿಡುತ್ತವೆ.ನನಗೆ ಬಹಳ ಮೆಚ್ಚುಗೆಯಾದ ಪಾತ್ರವೆಂದರೆ ಮಂದಣ್ಣನ ಪಾತ್ರ. ಎಲ್ಲಾ ವರ್ಗದ ಓದುಗರಿಗೂ ತಿಳಿಯುವಂತೆ ಸಂಭಾಷಣೆ ತುಂಬ ನೈಜವಾಗಿ ಹಾಗೆ ಸರಳ ಭಾಷೆಯಲ್ಲಿ ಮೂಡಿಬಂದಿದೆ. ಕೆಲವು ಕಡೆ ಬರುವ ಹಾಸ್ಯ ಪ್ರಸಂಗಳು ಹಾಗೆ ಬೈಗುಳದ ಮಾತುಗಳು ಓದುಗನ ಓದಿಗೆ ಹಾಸ್ಯದ ಲೇಪನ ಹಾಗೆ ತೇಜಸ್ವಿಯವರ ನೇರ ನುಡಿಯ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ತೇಜಸ್ವಿಯವರಿಗೆ ಪ್ರಕೃತಿಯ ಕುರಿತಾಗಿ ಇರುವ ಸಂವೇದನೆ ಕಾಳಜಿ ಮತ್ತು ಕುತೂಹಲ ಅದ್ಬುತ. ಕಾಡಿನ ಯಾನದ ಪ್ರಸಂಗಗಳು ಕಾದಂಬರಿಯಲ್ಲಿ ತುಂಬಾ ರೋಚಕವಾಗಿ ಮೂಡಿ ಬಂದಿವೆ.ಅದರಲ್ಲಿಯೂ ಹಾರುವ ಓತಿಯನ್ನು ಬೆನ್ನಟ್ಟಿಹೋಗುವ ಸನ್ನಿವೇಶ ಹೈಲೈಟ್.ತೇಜಸ್ವಿಯವರು ಓತಿಯನ್ನು ಎಡೆಬಿಡದೆ ತದೇಕಚಿತ್ತದಿಂದ ವೀಕ್ಷಿಸುವ, ಹಾಗೆ ಅದರ ಚಲನವಲನಗಳ ಟಿಪ್ಪಣಿಯನ್ನು ಕರ್ವಾಲೋರವರಿಗೆ ನೀಡುವ ಸಂದರ್ಭವನ್ನು ಓದುವ ಸಮಯದಲ್ಲಿ ನನಗೆ ರೋಮಾಂಚನ ಆಗಿದ್ದಂತೂ ನಿಜ.ಕೊನೆಯಲ್ಲಿ ವಿಕಾಸವಾದ ಕುರಿತಾಗಿ ಪ್ರೊಫೆಸರ್ ಮತ್ತು ತೇಜಸ್ವಿಯವರ ನಡುವೆ ನಡೆವ ಸಂಭಾಷಣೆ ಸುಂದರವಾಗಿದೆ. ಒಟ್ಟಿನಲ್ಲಿ ಹೇಳಬೇಕಾದರೆ ತೇಜಸ್ವಿಯವರು ಓದುಗನನ್ನು ತಮ್ಮೊಂದಿಗೆ ಕರೆದುಕೊಂಡು ಮಲೆನಾಡಿನ ಕಾಡಿನಲ್ಲಿ ಸುತ್ತಾಡಿಸಿಬಿಡುತ್ತಾರೆ.ಪ್ರತಿಯೊಬ್ಬ ಪರಿಸರ ಪ್ರೇಮಿಯೂ ಓದಬೇಕಾದ ಒಂದು ಅದ್ಬುತ ಕಾದಂಬರಿ ಕರ್ವಾಲೋ ಎಂದು ಹೇಳಿದರೆ ತಪ್ಪಾಗದು. ನಾನು ಓದಿದ ಕರ್ವಾಲೋ ಪುಸ್ತಕ ೧೯೮೩ ಮುದ್ರಣಗೊಂಡದ್ದು ಹಾಗೆ ಇದರ ಬೆಲೆ ೨/- ರೂಪಾಯಿಗಳು ಮಾತ್ರ. ನನ್ನ ತಂದೆಯವರು ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾಗ ಪಾಠ ಮಾಡಲು ಇದು ಅವರ ನೆಚ್ಚಿನ ಪುಸ್ತಕವಂತೆ. ಈ ಪುಸ್ತಕನ್ನ ಪಠ್ಯವನ್ನಾಗಿ ಉಪಯೋಗಿಸಲಾಗಿತ್ತಂತೆ. ನನ್ನ ತಂದೆಯಿಂದ ಈ ಪುಸ್ತಕವನ್ನ ಎರವಲು ಪಡೆಯಬೇಕಾದರೆ ನನಗೆ ಸಾಕಷ್ಟು ಎಚ್ಚರಿಕೆಯ ಮಾತುಗಳು ಕೇಳಿಬಂದವು ಏಕೆಂದರೆ ಇದನ್ನ ಅವರು ತುಂಬಾ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಕರ್ವಾಲೋ ಪುಸ್ತಕವನ್ನು ಓದುವಾಗ ನಾನು ಅನೇಕ ಸ್ಮರಣೀಯ ಕ್ಷಣಗಳನ್ನು ಆನಂದಿಸಿದ್ದೇನೆ. ಹೇಳುತ್ತಾ ಹೋದರೆ ಇಲ್ಲಿ ಪುಸ್ತಕವನ್ನ ಮರು ಮುದ್ರಣ ಮಾಡಬೇಕಾಗುತ್ತದೆ ಏಕೆಂದರೆ ಈ ಪುಸ್ತಕ ತನ್ನದೇ ವಿಸ್ಮಯಕಾರಿ ಪ್ರಪಂಚದಲ್ಲಿ ಓದುಗನ್ನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ. ಬಾಲ್ಯದಿದಂದಲೂ ವೈಜ್ಞಾನಿಕ ವಿಷಯಗಳಲ್ಲಿ ಆಸ್ತೆ ಹೊಂದಿರುವುದರಿಂದ ಇದು ನನ್ನ ವೈಯಕ್ತಿಕ ಅಭಿಪ್ರಾಯ. ತೇಜಸ್ವಿಯವರು ತಮ್ಮ ಜೀಪಿನಲ್ಲಿ ಜೇನು ಎಣ್ಣೆ ಮಾರಾಟ ಮಾಡುವ ಉಗ್ರಾಣಕ್ಕೆ ಹೋಗುವುದು ಹಾಗೆ ಕಾಡಿನಲ್ಲಿ ಸುತ್ತಾಡುವ ಸಂದರ್ಭಗಳು ತುಂಬಾ ಸುಂದರವಾಗಿವೆ . ಪ್ರೊ . ಕರ್ವಾಲೋ ಮತ್ತು ತಂಡ ಹಾರುವ ಓತಿಯನ್ನು ಬೆನ್ನಟ್ಟಿಕೊಂಡು ಹೋಗುವ ಸನ್ನಿವೇಶ ರೋಮಾಂಚನವಾಗಿದೆ. ತೇಜಸ್ವಿಯವರು ಒಂದೇ ಸಮನೆ ಓತಿಯನ್ನು ನೋಡುತ್ತಾ ಕರ್ವಾಲೋರವರಿಗೆ ಅದರ ಅಂಗ ರಚನೆಯ ವಿವರಣೆ ನೀಡುವಾಗ ಓದುಗ ಖಂಡಿತ ಪುಳಕಗೊಳ್ಳುತ್ತಾನೆ. ಕೆಲವು ವರ್ಷಗಳ ಹಿಂದೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಬೆಳಗಾವಿಯ ಖಾನಾಪುರ ಕಾಡಿನಲ್ಲಿ ಕಂಡ ವಿಚಿತ್ರ ಪ್ರಾಣಿಗಳು ಎಂಬ ಲೇಖನವನ್ನು ಓದಿದ್ದೆ ಮತ್ತೆ ಅದರಲ್ಲಿ ಹಾರುವ ಓತಿಯ ಉಲ್ಲೇಖನವನ್ನು ಮಾಡಿದ್ದರು. ಅಂದಿನಿಂದ ಈ ಜೀವಿಯ ಬಗ್ಗೆ ಎಲ್ಲಿಲ್ಲದ ಕುತೂಹಲವಿದ್ದ ಕಾರಣದಿಂದ ನನಗೆ ಪುಸ್ತಕದಲ್ಲಿ ಈ ಹಾರುವ ಓತಿಯ ಬೆನ್ನತ್ತಿ ಹೋಗುವ ಸಂದರ್ಭ ತುಂಬಾ ವಿಶೇಷವೆನಿಸಿತು. ಇನ್ನು ಪುಸ್ತಕದಲ್ಲಿ ಬರುವ ಮಂದಣ್ಣನ ಪಾತ್ರ ನನಗೆ ಅಚ್ಚು ಮೆಚ್ಚು ಏಕೆಂದರೆ ಅವನನ್ನು ಇಲ್ಲಿ ಒಬ್ಬರ ದ್ರಷ್ಟಿ ಕೋನದಿಂದ ದಡ್ಡನನ್ನಾಗಿ ಬಿಂಬಿಸಿದರೆ ಇನ್ನೊಬ್ಬರೆ ದ್ರಷ್ಟಿಯಲ್ಲಿ ಕಾಡಿನ ಪ್ರಪಂಚದ ಅರಿವಿರುವ ಬುದ್ದಿವಂತ. ಇನ್ನು ಮಂದಣ್ಣ ಮದುವೆ ಮಾಡಿಕೊಳ್ಳಲು ಪಡುವ ಪಾಡು ಹಾಗೆ ಅವನು ಕಳ್ಳ ಭಟ್ಟಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದನೆಂಬ ಆರೋಪದಲ್ಲಿ ಸಿಕ್ಕಿಬಿದ್ದು ಕೋರ್ಟು ಕಚೇರಿಗೆ ಓಡಾಡುವ ಸಂದರ್ಭಗಳು ಹಾಸ್ಯದಿಂದ ಕೂಡಿವೆ.ತೇಜಸ್ವಿಯವರು ತಮ್ಮ ಮನೆ ಕೆಲಸದವ ಪ್ಯಾರನಿಗೆ ಮತ್ತು ಮಂದಣ್ಣನಿಗೆ ಬೈಯುವಾಗ ಓದುಗನ ಮುಖದ ಮೇಲೆ ಮಂದಹಾಸ ಮೂಡುತ್ತದೆ. ಪುಸ್ತಕದ ಕೊನೆಯಲ್ಲಿ ತೇಜಸ್ವಿ ಮತ್ತು ಕರ್ವಾಲೋರವರ ನಡುವಿನ ಜೀವ ವಿಕಾಸದ ಸನ್ನಿವೇಶ ಅದ್ಬುತ. ಅದರಲ್ಲಿಯೂ "ದೇಶ ಮತ್ತು ಕಾಲವನ್ನು ಮೀರಿದ್ದು" ಎಂದು ಸಂಭಾಷಣೆಯಲ್ಲಿ ಉಪಯೋಗಿಸುವ ಸಾಲು ಇಡೀ ಜೀವ ವಿಕಾಸದ ವಿಸ್ಮಯವನ್ನೇ ಒಂದು ಸಾಲಿನಲ್ಲಿ ಹಿಡಿದಿಟ್ಟಂತೆ ಅನಿಸುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಖಂಡಿತವಾಗಿಯೂ ಎಲ್ಲಾ ವರ್ಗದ ಓದುಗರು ಈ ಪುಸ್ತಕವನ್ನು ಓದಿ ಆನಂದಿಸಿಬಹುದು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

40
Votes
396
Views
7 Months
Since posted

Voting Closed!

Scroll to Top